ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡು ಆಟ ಆಡು

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನುಷ್ಯನ ಪ್ರವೃತ್ತಿಗಳಲ್ಲಿ ಕ್ರೀಡೆಗಳ ಪಾತ್ರ ಮುಖ್ಯವಾದುದು. ನಾಗರಿಕತೆ ಹುಟ್ಟಿಕೊಂಡಾಗಿನಿಂದಲೂ ಮಾನವರು ಆಟೋಟಗಳ ಜೊತೆ ತಮ್ಮ ಒಡನಾಟವನ್ನು ಇಟ್ಟುಕೊಂಡೇ ಬಂದಿದ್ದು, ಈಗೀಗ ಕ್ರೀಡೆಗಳಿಗೆ ಜಗತ್ತಿನಲ್ಲಿ ಎಲ್ಲಿಲ್ಲದ ಪ್ರಾಮುಖ್ಯ ಸಿಕ್ಕಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆಟ ಮೊದಮೊದಲಿಗೆ ಒಂದು ಕಲೆಯಾಗಿ ಆರಂಭಗೊಂಡು ನಂತರ ಕ್ರೀಡೆಯಾಗಿ ಬೆಳೆಯಿತು.

ಈಗಂತೂ ಅದು ಮನುಷ್ಯರ ಬದುಕಿನ ಅವಿಭಾಜ್ಯ ಅಂಗವೆನ್ನಿಸಿಕೊಂಡಿದೆ. ಕ್ರೀಡಾ ವಿಷಯಗಳನ್ನು ಒಳಗೊಂಡ ಚಲನಚಿತ್ರಗಳು ಕೂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ನೂರು ವರ್ಷಗಳನ್ನು ಕಂಡಿರುವ ಭಾರತೀಯ ಚಲನಚಿತ್ರ ಪರದೆಯಲ್ಲಿ ಮೊದಮೊದಲು ಬಿಲ್ಲು ವಿದ್ಯೆ, ಮಲ್ಲಯುದ್ಧ, ರಥ ಓಟ ಇತ್ಯಾದಿಗಳನ್ನು ಹೊಂದಿದ್ದ ಪೌರಾಣಿಕ ಹಾಗೂ ಐತಿಹಾಸಿಕ ಚಲನಚಿತ್ರಗಳು ಕಾಣಿಸಿಕೊಂಡವು. ಈಗೀಗ ಹಲವು ಆಟೋಟಗಳು ಚಿತ್ರಕಥೆಗಳಲ್ಲಿ ಸೇರ್ಪಡೆಗೊಂಡು ಪ್ರತ್ಯೇಕ ಕ್ರೀಡಾ ಚಿತ್ರಗಳಾಗಿ ತಯಾರಾಗುತ್ತಿವೆ. 

ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ಕಥೆಗಳನ್ನು ಆಧರಿಸಿದ ಚಿತ್ರಗಳಿಗೆ ಹೋಲಿಸಿದರೆ ಕ್ರೀಡೆಯ ಸಂಗತಿಗಳನ್ನು ಒಳಗೊಂಡ ಚಿತ್ರಗಳು ಹೆಚ್ಚೇನಿಲ್ಲ.  ನೂರು ವರ್ಷಗಳಲ್ಲಿ ಎಲ್ಲಾ ಭಾರತೀಯ ಭಾಷೆಗಳಲ್ಲಿ ಸುಮಾರು ನೂರು ಚಿತ್ರಗಳು ಮಾತ್ರ ಆಟೋಟಗಳನ್ನು ಆಧರಿಸಿವೆ. ಅಂತರರಾಷ್ಟ್ರೀಯ ಕ್ರೀಡಾ ಮೈದಾನದಲ್ಲಿ ಭಾರತಕ್ಕೆ ಮೊದಮೊದಲು ಪದಕಗಳನ್ನು ಗಳಿಸಿಕೊಟ್ಟ ಕ್ರೀಡೆ ಹಾಕಿ.

ಭಾರತೀಯರಲ್ಲಿ ಹಾಕಿ ಆಟ ಹುಟ್ಟುಹಾಕಿದ ಆಸಕ್ತಿ ಒಂದುನೂರು ವರ್ಷಕ್ಕೂ ಹೆಚ್ಚಿನದು. ಇಪ್ಪನೆಯ ಶತಮಾನದ ಆರಂಭದಿಂದಲೂ ಹಾಕಿ ಆಟವನ್ನು ತಮ್ಮದೇ ನೆಲದಲ್ಲಿ ಹುಟ್ಟಿದ ಕ್ರೀಡೆಯೆಂಬಂತೆ ಪೋಷಿಸುತ್ತಿದ್ದು, ನಂತರ ಭಾರತೀಯ ಹಾಕಿ ಕಂಡ ಏಳುಬೀಳುಗಳನ್ನು ಅನೇಕ ಚಿತ್ರಗಳಲ್ಲಿ ಸಂಕ್ಷಿಪ್ತವಾಗಿ ತೋರಿದರೂ ೨೦೦೭ರಲ್ಲಿ ಹಿಂದಿ ಭಾಷೆಯಲ್ಲಿ ತಯಾರಾದ ಕ್ರೀಡಾ ರೂಪಕ ಚಿತ್ರ ‘ಚಕ್ ದೇ ಇಂಡಿಯಾ’ ಬೀರಿದ ಪ್ರಭಾವ ಬಹು ದೊಡ್ಡದು. 

‘ಚಕ್ ದೇ ಇಂಡಿಯಾ’ ಭಾರತದ ಹಾಕಿ ವೈವಿಧ್ಯವನ್ನು ವಿವರಿಸುವುದರ ಜೊತೆಗೆ ಸ್ವಾತಂತ್ರ್ಯ ಪೂರ್ವ ಹಾಗೂ ನಂತರ ಹಾಕಿ ರಂಗದಲ್ಲಾದ ಬದಲಾವಣೆಗಳ ಸೂಕ್ಷ್ಮ ಒಳನೋಟಗಳನ್ನು ಚಿತ್ರಿಸಿದೆ. ಪ್ರಮುಖವಾಗಿ ೨೦೦೨ರ ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಭಾರತೀಯ ಮಹಿಳಾ ಹಾಕಿ ತಂಡ ಚಿನ್ನದ ಪದಕವನ್ನು ಪಡೆಯುವ ಘಟನೆಗಳನ್ನು ಆಧರಿಸಿ ಚಿತ್ರಕಥೆಯನ್ನು ಹೆಣೆಯಲಾಗಿದೆ. ಭಾರತ ವಿಭಜನೆ, ಪ್ರಾದೇಶಿಕ ಅಸಮಾನತೆ, ಜಾತಿಯ ತಾರತಮ್ಯ ಮೊದಲಾದ ಸಮಕಾಲೀನ ಸಂಗತಿಗಳನ್ನು ಚಿತ್ರಕಥೆ ಒಳಗೊಂಡಿದೆ. 

ಹಾಕಿ ಕ್ರೀಡಾಪಟುಗಳ ನೋವು-ನಲಿವು, ಕೋಚ್‌ಗಳ ವರ್ತನೆ– ಇವೆಲ್ಲವುಗಳ ಪರಿಣಾಮದಿಂದ ಪಂದ್ಯಗಳಲ್ಲಾಗುವ ಏರಿಳಿತಗಳು ಮುಂತಾದವುಗಳನ್ನು ಸವಿವರವಾಗಿ ಶಾಮಿತ್ ಅಮೀನಂದ್ ಚಿತ್ರದಲ್ಲಿ ನಿರ್ದೇಶಿಸಿದ್ದಾರೆ. ಜೈದೀಪ್ ಸೈಯಾನಿ ಅವರು ಬರೆದ ಚಿತ್ರಕಥೆಯನ್ನು ಒಳಗೊಂಡಿರುವ ‘ಚಕ್ ದೇ ಇಂಡಿಯಾ’ದಲ್ಲಿ ಜನಪ್ರಿಯ ನಟ ಶಾರೂಕ್ ಖಾನ್ ಭಾರತೀಯ ಹಾಕಿ ತಂಡದ ಮಾಜಿ ನಾಯಕ ಕಬೀರ್ ಖಾನ್ ಪಾತ್ರ ನಿರ್ವಹಿಸಿದ್ದಾರೆ.

ಅತ್ಯುತ್ತಮವಾದ ತಂಡವನ್ನು ಕಟ್ಟುವಲ್ಲಿ ಆಗುವ ತಾಪತ್ರಯಗಳನ್ನು ನಿವಾರಿಸಿಕೊಂಡು ಒಳ್ಳೆಯ ಪ್ರತಿಭಾವಂತ ಹಾಗೂ ಶಕ್ತಿ ಸಾಮರ್ಥ್ಯದ ಆಟಗಾರ್ತಿಯರನ್ನು ಸಿದ್ಧಗೊಳಿಸಿದ ಕೋಚ್ ತನಗೆ ಹಿಂದೆ ಆಗಿದ್ದ ಅಪಮಾನಗಳನ್ನು, ತಾರತಮ್ಯಗಳನ್ನು ನುಂಗಿಕೊಂಡು ತಾಯ್ನಾಡಿನ ತಂಡವನ್ನು ಜಾಗತಿಕ ಮಟ್ಟದಲ್ಲಿ ಅಗ್ರಸ್ಥಾನಕ್ಕೆ ತರುವ ಪಾತ್ರಧಾರಿಯಾಗಿ ಶಾರೂಕ್ ಮಿಂಚಿದ್ದಾರೆ.
 
ಹಿಂದಿ ಭಾಷೆಯ ಜೊತೆಗೆ ಹಲವಾರು ಪ್ರಾದೇಶಿಕ ಭಾಷೆಗಳಲ್ಲಿಯೂ ಕ್ರೀಡಾಪಟುಗಳು ಹಾಗೂ ಆಟೋಟಗಳನ್ನು ಆಧರಿಸಿದ ಹಲವಾರು ಚಿತ್ರಗಳು ತೆರೆಕಂಡಿವೆ. ಕನ್ನಡದಲ್ಲಿ ಟಿ.ಎಸ್. ನಾಗಾಭರಣ ನಿರ್ದೇಶಿಸಿದ ‘ಚಿನ್ನಾರಿ ಮುತ್ತ’, ತಮಿಳಿನ ‘ಚೆನೈ ೬೦೦೨೮’, ಬಂಗಾಲಿಯಲ್ಲಿ ‘ಬಂಥೂ’, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಬಿಡುಗಡೆಯಾದ ‘ದೋನಿ‘, ಮರಾಠಿಯ ‘ಸಾಕ್ಷ್ಯ ನಾಚ್ಯಾ ಆಯಿಛೇ’ ಇಂತಹ ಚಿತ್ರಗಳಲ್ಲಿ ಕೆಲವು. 

‘ಜೋ ಜೀತೆಗಾ ಓ ಸಿಖಂದರ್’ ಹಿಂದಿಯಲ್ಲಿ ತಯಾರಾಗಿ ನಾಲ್ಕಾರು ಭಾಷೆಗಳಲ್ಲಿ ತಯಾರಾದ ಇನ್ನೊಂದು ಜನಪ್ರಿಯ ಚಿತ್ರ. ಸೈಕಲ್ ರೇಸ್‌ನಲ್ಲಿ ಬಡ ಬಾಲಕನೊಬ್ಬ ಶ್ರೇಷ್ಟ ಸೈಕಲಿಸ್ಟ್ ಆಗಿ ಬೆಳೆದ ಕಥೆಯನ್ನು ಕಟ್ಟಿಕೊಡುವ ಈ ಚಿತ್ರದ ಸ್ಫೂರ್ತಿಯಿಂದ ಕ್ರೀಡೆಯನ್ನು ಆಧರಿಸಿದ ಅನೇಕ ಚಿತ್ರಗಳು ತೆರೆಗೆ ಬಂದವು. ‘ಜೋ ಜೀತೆಗಾ ’ಓ ಸಿಖಂದರ್’ ಚಿತ್ರದ ಮುಖ್ಯ ಪಾತ್ರಧಾರಿಯಾಗಿ ಅಮೀರ್ ಖಾನ್ ಅಭಿನಯಿಸಿದ್ದರು. 

‘ಪಾನ್‌ಸಿಂಗ್ ತೋಮಾರ್’ ಕ್ರೀಡೆಯ ಕಥೆಯನ್ನು ಒಳಗೊಂಡ ಇನ್ನೊಂದು ಜನಪ್ರಿಯ ಹಿಂದಿ ಚಿತ್ರ.  ಭಾರತೀಯ ಸೈನ್ಯದಲ್ಲಿದ್ದುಕೊಂಡು ನ್ಯಾಷನಲ್ ಗೇಮ್ಸ್‌ನ ಅಥ್್ಲೆಟಿಕ್ಸ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದ ಸೈನಿಕನೊಬ್ಬ ಪರಿಸ್ಥಿತಿಯ ಒತ್ತಡದಿಂದ ಡಕಾಯಿತನಾಗಿ ಮಾರ್ಪಟ್ಟ ಕಥೆಯ ಹಂದರವಿರುವ ಈ ಚಿತ್ರ ಗಲ್ಲಾಪೆಟ್ಟಿಗೆ ದೃಷ್ಟಿಯಿಂದಲೂ ಸಫಲವಾಯಿತು.

ಅನೇಕ ರಾಷ್ಟ್ರೀಯ, ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿತು. ತೋಮಾರ್ ಪಾತ್ರದಲ್ಲಿ ಇರ್ಫಾನ್ ಖಾನ್ ಕಾಣಿಸಿಕೊಂಡು ಶಿಸ್ತುಬದ್ಧ ಸೈನಿಕನಾಗಿ ನಿಪುಣ ಕ್ರೀಡಾಪಟುವಾಗಿ ನಂತರ ತನ್ನ ಕುಟುಂಬದ ಸದಸ್ಯರ ಸಂಕಷ್ಟಕ್ಕೆ ಕಾರಣರಾದವರ ಮೇಲೆ ಸೇಡು ತೀರಿಸಿಕೊಳ್ಳುವ ಚಂಬಲ್ ಕಣಿವೆಯ ಡಕಾಯಿತನಾಗಿ ಮನೋಜ್ಞ ಅಭಿನಯವನ್ನಿತ್ತರು.

ಭಾರತದ ಅಪ್ರತಿಮ ಓಟಗಾರ ಮಿಲ್ಕಾ ಸಿಂಗ್ ಬದುಕನ್ನು ಆಧರಿಸಿದ ‘ಭಾಗ್ ಮಿಲ್ಕಾ ಭಾಗ್’ ಭಾರತೀಯ ಕ್ರೀಡಾಚಿತ್ರಗಳಲ್ಲಿ ತನ್ನದೇ ಆದ ಛಾಪನ್ನು ಒತ್ತಿದೆ. ಚಿಕ್ಕಂದಿನಿಂದ ರೋಮ್ ಒಲಂಪಿಕ್ಸ್‌ನಲ್ಲಿ ಕೂದಲೆಳೆಯಿಂದ ಭಾರತಕ್ಕೆ ಅಥ್ಲೇಟಿಕ್ಸ್್್ನಲ್ಲಿ ಪದಕ ತಂದು ಕೊಡುವ ಅವಕಾಶದಿಂದ ವಂಚಿತನಾದ ಮಿಲ್ಕಾ ಸಿಂಗ್ ಕ್ರೀಡಾ ಬದುಕಿನಲ್ಲಾದ ಏರುಪೇರುಗಳನ್ನು ಸಮರ್ಥವಾಗಿ ಪ್ರತಿಬಿಂಬಿಸಿರುವ ‘ಭಾಗ್ ಮಿಲ್ಕಾ ಭಾಗ್’ ಕ್ರೀಡಾ ಪ್ರೇಮಿಗಳ ಮನಸ್ಸನ್ನು ಗೆದ್ದ ಚಿತ್ರ. 

ಕ್ರಿಕೆಟ್, ಬಾಕ್ಸಿಂಗ್‌ಗಳಲ್ಲದೇ ಅಪ್ಪಟ ಭಾರತೀಯ ಕ್ರೀಡೆಯಾದ ಕಬಡ್ಡಿ ಆಟದ ಸಂಗತಿಗಳನ್ನು ಒಳಗೊಂಡ ಚಲನಚಿತ್ರವು ತೆರೆಯ ಮೇಲೆ ಬಂದಿದೆ. ಉದಯೋನ್ಮುಖ ನಿರ್ದೇಶಕ ಸುಸೀಂದ್ರನ್ ತೆಲುಗು ಹಾಗು ತಮಿಳು ಭಾಷೆಗಳಲ್ಲಿ ‘ಕಬಡ್ಡಿ’ ಆಟವನ್ನು, ಅದರ ಒಳನೋಟಗಳನ್ನು ಕಟ್ಟಿಕೊಡುವ ಚಿತ್ರಗಳನ್ನು ನಿರ್ದೇಶಿಸಿದರು.

ತನ್ನ ತಂದೆ ಕಬಡ್ಡಿ ಆಟಗಾರನಾಗಿ ಅನುಭವಿಸಿದ ಒಳ್ಳೆಯ ಹಾಗೂ ಕಷ್ಟದ ದಿನಗಳನ್ನು ಅರ್ಥಪೂರ್ಣವಾಗಿ ನಿರೂಪಿಸಿರುವ ಈ ಚಿತ್ರದಲ್ಲಿ ಎಲ್ಲಾ ಹೊಸ ನಟನಟಿಯರೇ ಅಭಿನಯಿಸಿದ್ದರು. ತಮಿಳಿನಲ್ಲಿ ‘ವೆನ್ನೆಲಾ ಕಬಡಿ ಕುಳು’ (ಬೀಮಲೆ ಕಬಡಿ-ತೆಲುಗು) ಚಿತ್ರ ಆರ್ಥಿಕವಾಗಿ ಯಶ ಸಾಧಿಸದಿದ್ದರೂ, ದೇಸಿ ಕ್ರೀಡೆಯೊಂದರ ಅನಾವರಣವನ್ನು ಮಾಡಿತು.

ಸಮಕಾಲೀನ ವಿಷಯಗಳನ್ನು ತೆರೆಗೆ ನೀಡುವಲ್ಲಿ ಹೆಸರಾಗಿರುವ ಪ್ರಕಾಶ್ ಝಾ ತಮ್ಮ ಮೊದಲ ಚಿತ್ರದಲ್ಲಿ ಫುಟ್ಬಾಲ್ ಕ್ರೀಡೆಯ ಆವರಣವೊಂದನ್ನು ಕಟ್ಟಿಕೊಂಡು ಕಥೆಯೊಂದನ್ನು ತೆರೆಗಿತ್ತರು. ಪ್ರಸಿದ್ಧ ಬರಹಗಾರ ಗುಲ್ಜಾರ್ ಚಿತ್ರಕಥೆ ಬರೆದಿದ್ದ ‘ಹಿಪ್ ಹಿಪ್ ಹುರ್ರೆ’ (೧೯೮೪)– ಕಂಪ್ಯೂಟರ್ ಎಂಜಿನಿಯರ್ ತಾತ್ಕಾಲಿಕವಾಗಿ ಕ್ರೀಡಾ ತರಬೇತುಗಾರನಾಗಿ ಕೆಲಸ ಹಿಡಿದು ತಾನು ಕೆಲಸ ನಿರ್ವಹಿಸುತ್ತಿದ್ದ ಶಾಲಾ ತಂಡ ಫುಟ್ಬಾಲ್ ಕ್ರೀಡೆಯಲ್ಲಿ ಜಯ ಸಾಧಿಸುವಂತೆ ಮಾಡುವ ಕಥೆ ಈ ಚಿತ್ರದಲ್ಲಿತ್ತು. ದೀಪ್ತಿ ನಾವಲ್ ಚರಿತ್ರೆಯ ಅಧ್ಯಾಪಕಿಯಾಗಿ, ರಾಜ್ ಕಿರಣ್ ಕಂಪ್ಯೂಟರ್ ಎಂಜಿನಿಯರ್ ಆಗಿ ಈ ಚಿತ್ರದಲ್ಲಿ ಪಾತ್ರವಹಿಸಿದ್ದರು.

ಪ್ರಸಿದ್ಧ ನಟ, -ನಿರ್ದೇಶಕ ದೇವಾನಂದ್ ತಮ್ಮ ಇಳಿ ವಯಸ್ಸಿನಲ್ಲಿ ಯುವ ನಟ ಅಮೀರ್ ಖಾನ್ ಜೊತೆ ‘ಅವ್ವಲ್ ನಂಬರ್’ ಎಂಬ ಚಿತ್ರವನ್ನು ತಯಾರಿಸಿದರು. ಕ್ರಿಕೆಟ್ ಆಟದ ಸುತ್ತ ಹೆಣೆದಿದ್ದ ಈ ಚಿತ್ರದಲ್ಲಿ ನಂತರ ಭಯೋತ್ಪಾದಕರ ಪ್ರವೇಶವಾಗುತ್ತದೆ. ಅಂತಿಮವಾಗಿ ದೇಶಿ ತಂಡಕ್ಕೆ ಜಯ ಲಭಿಸುತ್ತದೆ. ಈ ನಡುವೆ ಕ್ರೀಡಾಂಗಣದಲ್ಲಿ ಅಲ್ಲೋಲ ಕಲ್ಲೋಲ ಮಾಡಬೇಕೆಂದು ಯೋಜನೆ ಹಾಕಿದ್ದ ಭಯೋತ್ಪಾದನಾ ತಂಡವನ್ನು ಸೆರೆಹಿಡಿಯಲಾಗುತ್ತದೆ.

ಕ್ರಿಕೆಟ್ ಆಟದ ಪರಿಧಿಯಲ್ಲಿ ತಯಾರಾದ ‘ಲಗಾನ್’ ಜನಮನ್ನಣೆ ಗಳಿಸಿದ್ದೇ ಅಲ್ಲದೇ ಆಸ್ಕರ್ ಪ್ರಶಸ್ತಿಗೂ ನಾಮಕರಣಗೊಂಡಿದ್ದು ಈಗ ಚರಿತ್ರೆಯ ಭಾಗ. ಕ್ರೀಡೆಯ ಸ್ಫೂರ್ತಿಯಿಂದ ಮಲೆಯಾಳಂನ ಮೋಹನ್‌ಲಾಲ್, ತೆಲುಗಿನ ಪವನ್ ಕಲ್ಯಾಣ್, ಕನ್ನಡದ ಪ್ರಕಾಶ್ ರೈ ಸೇರಿದಂತೆ ಹಲವಾರು ಪ್ರಮುಖ ನಟರು ಕ್ರೀಡೆಯ ಕಥೆಯುಳ್ಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 

ಕ್ರೀಡೆಯನ್ನು ಪ್ರಮುಖವಾಗಿ ಒಳಗೊಂಡರೂ ಇಂತಹ ಚಿತ್ರಗಳಲ್ಲಿ ಪ್ರೀತಿ, ಪ್ರೇಮ, ಒಳಜಗಳಗಳು, ಕ್ರೀಡಾಪಟುಗಳ ನಡುವೆ ತಿಕ್ಕಾಟ ಮುಂತಾದವೂ ಕೂಡ ಸೇರ್ಪಡೆಗೊಂಡಿವೆ. ಆಟೋಟಗಳ ಜೊತೆಜೊತೆಗೆ ಬದುಕಿನ ಜಂಜಾಟಗಳನ್ನು, ಸಂತಸದ ಸಮಯಗಳನ್ನು ಹೊತ್ತು ತರುವ ಕ್ರೀಡಾ ಚಿತ್ರಗಳು ಅನೇಕರ ಪಾಲಿಗೆ ಸ್ಫೂರ್ತಿ ತರುವ ಸಂಗತಿಗಳೂ ಇವೆ. 

ಬೇರೆ ದೇಶಗಳಿಗೆ ಹೋಲಿಸಿದರೆ ಭಾರತೀಯ ಚಿತ್ರಪರದೆಯಲ್ಲಿ ಕಾಣಿಸಿಕೊಂಡ ಕ್ರೀಡಾ ಚಿತ್ರಗಳ ಸಂಖ್ಯೆ ಕಡಿಮೆಯೆನ್ನಿಸಿದರೂ ‘ಲಗಾನ್’, ‘ಚಕ್‌ದೇ ಇಂಡಿಯಾ’, ‘ಚಿನ್ನಾರಿ ಮುತ್ತ’, ‘ಭಾಗ್ ಮಿಲ್ಕಾ ಭಾಗ್’ ಮೊದಲಾದ ಚಿತ್ರಗಳು ಮಾಡಿರುವ ಪರಿಣಾಮವನ್ನು ಅಲ್ಲಗೆಳೆಯುವಂತಿಲ್ಲ.
-ನೇಸರ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT