ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ ತರುವ ಅನಾಮಿಕ ಕರೆ...

Last Updated 31 ಡಿಸೆಂಬರ್ 2010, 13:40 IST
ಅಕ್ಷರ ಗಾತ್ರ
 
ಜಾರ್ಖಂಡ್ ಮಹಿಳೆಯ ಮೇಲಿನ ಸಾಮೂಹಿಕ ಅತ್ಯಾಚಾರ ಸೇರಿದಂತೆ ಮಹಿಳೆಯ ವಿರುದ್ಧದ ಹಲವು ಬಗೆಯ ಅಪರಾಧಗಳು ಬೆಂಗಳೂರು ನಗರದಲ್ಲಿ ಕಳೆದು ಹೋದ ವರ್ಷದಲ್ಲಿ ವರದಿಯಾಗಿವೆ. ಅಭದ್ರತೆ ಸೃಷ್ಟಿಸುವ, ಆತ್ಮವಿಶ್ವಾಸವನ್ನು ಕುಂದಿಸುವ ಇಂತಹ ಅಪರಾಧಗಳು - ಮಹಿಳೆಯ ಮುನ್ನಡೆಗೆ ಎದುರಾಗುವಂತಹ ತಡೆ. ಈಚಿನ ದಿನಗಳಲ್ಲಿ  ಮತ್ತೊಂದು ಬಗೆಯ ಕಿರುಕುಳ ಹೆಚ್ಚುತ್ತಿದೆ. ಅದು ಅನಾಮಧೇಯ ಫೋನ್ ಕರೆಗಳು. ಭಾವನಾತ್ಮಕ ನೆಲೆಯಲ್ಲಿ ನೀಡುವ ಹಿಂಸೆಯ ಮತ್ತೊಂದು ರೂಪ ಇದು.
ಐಪಿಸಿ ಸೆಕ್ಷನ್ 509
ಮಹಿಳೆಯ ಜತೆ ಅಶ್ಲೀಲವಾಗಿ ಮಾತನಾಡುವುದು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 509ರ ಅನ್ವಯ ಅಪರಾಧ. ಮಹಿಳೆಯ ಗೌರವಕ್ಕೆ ಚ್ಯುತಿ (ಇನ್‌ಸಲ್ಟಿಂಗ್ ಮಾಡೆಸ್ಟಿ ಆಫ್ ವಿಮೆನ್) ತಂದರೆ ಇಂತಹ ತಪ್ಪು ಮಾಡುವ ವ್ಯಕ್ತಿಗೆ ಒಂದು ವರ್ಷ ಜೈಲು ಶಿಕ್ಷೆಯಾಗುತ್ತದೆ.

ಕರೆ ಮಾಡಿ ಭಯ ಮೂಡುವಂತೆ ಮಾತನಾಡುವುದು ಮತ್ತು ತನ್ನ ಗುರುತನ್ನು ಹೇಳಿಕೊಳ್ಳದೆ ಇರುವುದು ಐಪಿಸಿ ಸೆಕ್ಷನ್ 507ರ ಪ್ರಕಾರ ಅನಾಮಧೇಯನೊಬ್ಬ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ ಭಯ ಹುಟ್ಟಿಸುವುದು (ಕ್ರಿಮಿನಲ್ ಇಂಟಿಮಿಡೇಷನ್ ಫ್ರಂ ಅನಾನಿಮಸ್ ಪರ್ಸನ್) ಅಪರಾಧ. ಈ ಕೃತ್ಯ ಸಾಬೀತಾದರೆ ಎರಡು ವರ್ಷ ಜೈಲು ಶಿಕ್ಷೆಯಾಗುತ್ತದೆ. ನಿರ್ದಿಷ್ಟ ಪ್ರಕರಣಕ್ಕೆ ಅನ್ವಯಿಸಿ ಇತರೆ ಕಾನೂನುಗಳನ್ನು ಪ್ರಯೋಗಿಸಿ ತಪ್ಪಿತಸ್ಥನಿಗೆ ಪಾಠ ಕಲಿಸುವ ಎಲ್ಲ ಅವಕಾಶಗಳೂ ಇವೆ.

‘ಫೋನ್ ಮಾಡಿ ಹಿಂಸೆ ನೀಡುವುದು, ಬೆದರಿಕೆ ಹಾಕುವುದು ಅಥವಾ ಅಶ್ಲೀಲವಾಗಿ ಮಾತನಾಡುವ ಪ್ರಸಂಗಗಳು ನಡೆದಾಗ ಕೂಡಲೇ ಸ್ಥಳೀಯ ಪೊಲೀಸರಿಗೆ ದೂರು ನೀಡಿ’ ಎಂದು ಸಲಹೆ ನೀಡುತ್ತಾರೆ ಬೆಂಗಳೂರಿನ ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್ ಕುಮಾರ್. ‘ಅಪರಾಧಿಗಳನ್ನು ಪತ್ತೆ ಮಾಡಿ ಅವರನ್ನು ಶಿಕ್ಷಿಸಲಾಗುತ್ತದೆ’ ಎಂದು ಅವರು ಹೇಳುತ್ತಾರೆ.

‘ಟೆಲಿ ಮಾರ್ಕೆಂಟಿಂಗ್‌ನವರು ಮಾಡುವ ಕರೆಗಳನ್ನು ಸ್ಥಗಿತಗೊಳಿಸಬಹುದು. ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಮಾಡುವ ವೈಯಕ್ತಿಕ ಕರೆಗಳನ್ನು ಬಂದ್ ಮಾಡಲು ಅವಕಾಶವಿಲ್ಲ. ಇದಕ್ಕೆ ಪೊಲೀಸರ ಸಹಾಯ ಪಡೆಯಬೇಕು’ ಎಂದು ಬಿಎಸ್‌ಎನ್‌ಎಲ್‌ನ ಬೆಂಗಳೂರು ಟೆಲಿಕಾಂ ಜಿಲ್ಲೆಯ ಉಪ ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ ಮತ್ತು ಗ್ರಾಹಕರ ಸೇವೆ) ಕೆ.ಆರ್ ಕೃಷ್ಣಮೂರ್ತಿ ಹೇಳುತ್ತಾರೆ.

ಹೀಗೂ ಮಾಡಬಹುದು: ಇಂತಹ ಕರೆಗಳಿಂದ ಪಾರಾಗಲು ಹತ್ತಾರು ಮಾರ್ಗಗಳಿದ್ದು, ಅವುಗಳನ್ನು ಬಳಸಿಕೊಳ್ಳಬಹುದು. ನಮಗೆ ಬೇಡವಾದ ಸಂಖ್ಯೆಯಿಂದ ಕರೆ ಬರುವುದನ್ನು ತಡೆಯಲು ಅವಕಾಶ ಇದೆ. ಮೊಬೈಲ್ ಫೋನ್‌ನಲ್ಲಿರುವ ಈ ‘ಆಪ್ಷನ್’ ಬಳಸಿಕೊಂಡು ಬೇಡವಾದ ಕರೆಗಳನ್ನು ಸ್ವತಃ ನಿಷೇಧಿಸಬಹುದು.

ಒಂದೇ ಸಂಖ್ಯೆಯಿಂದ ಕರೆ ಬರುತ್ತಿದ್ದರೆ ಅದನ್ನು ರಿಸೀವ್ ಮಾಡದೆ ನಿರ್ಲಕ್ಷ್ಯ ತೋರಬಹುದು. ಅಪರಿಚಿತ ಸಂಖ್ಯೆಯಿಂದ ಬರುವ ಕರೆಗಳನ್ನು ಸ್ವೀಕರಿಸದಿರುವುದು ಒಳ್ಳೆಯದು. ಕೊನೆಯದಾಗಿ ಪೊಲೀಸರ ಸಹಾಯ ಕೇಳಬಹುದು. ವಿವಾಹಿತರಿರಲಿ,ಅವಿವಾಹಿತರೇ ಇರಲಿ, ಇಂತಹ ಕರೆಗಳು ಬಂದಾಗ ಅದನ್ನು ಕುಟುಂಬದವರ ಗಮನಕ್ಕೆ ತಂದು ಚರ್ಚಿಸಿ ಮಾನಸಿಕ ಸ್ಥೈರ್ಯ ಪಡೆದುಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT