ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕ, ಭೀತಿಯಿಂದ ಆತ್ಮಹತ್ಯೆ ಸಂಭವ

Last Updated 16 ಮೇ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಅಲೋಕ್ ರಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ ಹೊರತು ಆತನ ಕೊಲೆಯಾಗಿಲ್ಲ ಎಂಬ ಅಂಶ ಪ್ರಾಥಮಿಕ ಹಂತದ ತನಿಖೆಯಲ್ಲಿ ಬೆಳಕಿಗೆ ಬಂದಿರುವುದಾಗಿ ರೈಲ್ವೆ ಪೊಲೀಸರು ಬುಧವಾರ ಸ್ಪಷ್ಟಪಡಿಸಿದ್ದಾರೆ.

`ಸೂಕ್ಷ್ಮ ವ್ಯಕ್ತಿತ್ವ ಹೊಂದಿದ್ದ ಅಲೋಕ್ ರಂಜನ್ ದುರ್ಬಲ ಮನಸ್ಸಿನವನಾಗಿದ್ದ. ಪೋಷಕರೊಂದಿಗೆ ಗಾಢವಾದ ಭಾವನಾತ್ಮಕ ಸಂಬಂಧ ಹೊಂದಿದ್ದ. ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ಆತ ಇತ್ತೀಚೆಗೆ ಕೊಂಚ ಖಿನ್ನನೂ ಆಗಿದ್ದ. ತನ್ನ ಸ್ನೇಹಿತೆ ಮತ್ತೊಬ್ಬ ಗೆಳೆಯನೊಂದಿಗೆ ಸಲಿಗೆಯಿಂದ ಮಾತನಾಡುತ್ತಿದ್ದುದನ್ನು ಸಹಿಸಿಕೊಳ್ಳದೇ ಹೋಗಿದ್ದ.
 
ಇದರಿಂದ ಅವನು ಮಾನಸಿಕವಾಗಿ ನೊಂದಿದ್ದ. ಅಂತೆಯೇ ಈ ಬಗ್ಗೆ ಅವನ ಮನಸ್ಸಿನೊಳಗೆ ಆಕ್ರೋಶ ಮತ್ತು ಆತಂಕಗಳು ಮಡುಗಟ್ಟಿದ್ದವು. ತನ್ನ ಜೀವನದಲ್ಲಿ ಏನೆಲ್ಲ ಘಟಿಸಿಬಿಟ್ಟಿತಲ್ಲಾ ಎಂಬ ಆಘಾತಕ್ಕೆ ಆತ ಒಳಗಾಗಿದ್ದ. ಬಹುಶಃ ಇದೇ ಕಾರಣದಿಂದ ಅಲೋಕ್ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಣಯಿಸಿರಬಹುದು~ ಎಂದು ಕಾಲೇಜಿನ ಪ್ರಾಧ್ಯಾಪಕರು ವಿಶ್ಲೇಷಿಸಿದ್ದಾರೆ.

 ಅಂದು ನಡೆದಿದ್ದೇನು?: ಮೇ 11ರಂದು ಕಾಲೇಜು ಆವರಣದಲ್ಲಿ ನಡೆದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಷಯದ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎಚ್.ಮಹೇಶಪ್ಪ ಆಗಮಿಸಿದ್ದರು.
 
ಇದೇ ಸಂದರ್ಭದಲ್ಲಿ `ಮ್ಯಾನೇಜ್‌ಮೆಂಟ್ ಫೆಸ್ಟ್~ ಕಾರ್ಯಕ್ರಮ ಕೂಡಾ ನಡೆಯುತಿತ್ತು. `ಅಂದು ಅಲೋಕ್ ತನ್ನ ಸ್ನೇಹಿತೆಯೊಡನೆ ಮಾತನಾಡಲೆತ್ನಿಸಿದ. ಒಂದು ಹಂತದಲ್ಲಿ ಸಹನೆ ಕಳೆದುಕೊಂಡು ಆಕೆಯ ಕಪಾಳಕ್ಕೂ ಹೊಡೆದ. ಈ ವಿಷಯ ತಿಳಿದ ಆಕೆಯ ಇನ್ನೊಬ್ಬ ಸ್ನೇಹಿತ ಅಮೃತ್‌ಕುಮಾರ್ ಘಟನೆ ಕುರಿತು ವಿಚಾರಿಸಲು ಬಂದ.
 
ಆಗ ಅಲೋಕ್ ರಂಜನ್ ಇಬ್ಬರಿಗೂ ಮುಖಕ್ಕೆ ಹೊಡೆದ. ತಕ್ಷಣವೇ ಜಗಳ ವಿಕೋಪಕ್ಕೆ ತಿರುಗದಿರಲಿ ಎಂದು ಅಲೋಕ್ ರಂಜನ್ ಅನ್ನು ಕೋಣೆಯೊಂದರಲ್ಲಿ ಕೂರಿಸಿದೆವು. ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದೆವು~ ಎಂದು ಕಾಲೇಜು ಸಿಬ್ಬಂದಿ ವಿವರಿಸುತ್ತಾರೆ. ಎರಡು ತಿಂಗಳುಗಳಿಂದ ತನ್ನೊಡನೆ ಗೆಳತಿ ಮಾತು ಬಿಟ್ಟ್ದ್ದಿದಾಳೆ ಎಂಬುದು ಅಲೋಕ್‌ಗೆ ಸಹನೆಯ ಕಟ್ಟೆ ಒಡೆಸಿತ್ತು. ಆಕೆ ತನಗೆ ಎಸ್‌ಎಂಎಸ್ ಅಥವಾ ಕರೆ ಮಾಡುತ್ತಿಲ್ಲವೆಂದು ಅಲೋಕ್ ರಂಜನ್ ತುಂಬಾ ಬೇಸರಗೊಂಡಿದ್ದ. ಇದರಿಂದಾಗಿ ಈ ಜಗಳ ಉಂಟಾಗಿತ್ತು~ ಎಂದು ಅವರು ಹೇಳುತ್ತಾರೆ.

 ಆತಂಕ ಏಕೆ?: `ತಂದೆ-ತಾಯಿಯನ್ನು ತುಂಬ ಪ್ರೀತಿಸುತ್ತಿದ್ದ ಅಲೋಕ್ ರಂಜನ್ ಇಬ್ಬರ ಮೇಲೆ ಹಲ್ಲೆ ಮಾಡಿದ ಘಟನೆಯಿಂದ ಆತಂಕಗೊಂಡಿದ್ದ. ಅಮೃತ್ ಕುಮಾರ್ ಮತ್ತು ಸ್ನೇಹಿತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೆ, ತಂದೆ-ತಾಯಿಗೆ ನೋವುಂಟಾಗುತ್ತದೆ. ಹಲ್ಲೆಗೆ ಪ್ರತಿ ಹಲ್ಲೆ ನಡೆಯಬಹುದು ಎಂಬ ಭೀತಿ ಆತನಿಗೆ ಆವರಿಸಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

 `ಹಲ್ಲೆಯ ಪ್ರಕರಣ ಬಹಿರಂಗವಾದರೆ, ಕೆಟ್ಟ ಪರಿಣಾಮಗಳಿಗೆ ಕಾರಣವಾಗುತ್ತದೆ ಎಂದು ಕಲ್ಪಿಸಿಕೊಂಡ ಆತ ತಕ್ಷಣವೇ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರಿಗೆ ದೂರವಾಣಿ ಕರೆ ಮಾಡಿ, ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದ.  ಅಲ್ಲಿಗೆ ಬಂದಿದ್ದ ಪೊಲೀಸ್ ಸಿಬ್ಬಂದಿಯ ಭದ್ರತೆಯಲ್ಲಿ ಕಾಲೇಜು ಗೇಟ್‌ವರೆಗೆ ಬಂದ ಆತ ಅಲ್ಲಿಂದ ದೇವನಹಳ್ಳಿಯಲ್ಲಿರುವ ತನ್ನ ಮನೆಗೆ ಹೋದ. ಮಾರನೇ ದಿನ ಬೆಳಿಗ್ಗೆಯೇ ಆತ ಶವವಾಗಿ ಪತ್ತೆಯಾಗಿದ್ದ~ ಎಂದು ಅವರು ತಿಳಿಸಿದ್ದಾರೆ. 

 ಅಲೋಕ್ ರಂಜನ್ ಮೂಲತಃ ಬಿಹಾರದ ದರ್ಭಾಂಗ್ ಜಿಲ್ಲೆಯ ಕೊಲ್ಹಂತಾ ಗ್ರಾಮದ ನಿವಾಸಿ. ಈತ ಇಲ್ಲಿನ ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ವಿಭಾಗದಲ್ಲಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ.  ಶನಿವಾರ ಈತನ ಶವ ಸಮೀಪದ ಆವತಿ ಗ್ರಾಮದ ಬಳಿಯ ರೈಲ್ವೆ ಹಳಿಗಳ ಮೇಲೆ ಪತ್ತೆಯಾಗಿತ್ತು.

ಎರಡು ಬಾರಿ ಶವಪರೀಕ್ಷೆ!
ಅಲೋಕ್ ರಂಜನ್ ಸಾವಿಗೆ ಆತ್ಮಹತ್ಯೆ ಅಥವಾ ಕೊಲೆ
ಕಾರಣವೇ ಎಂಬುದನ್ನು ಪತ್ತೆ ಮಾಡಲು ಆತನ ಶವಪರೀಕ್ಷೆಯನ್ನು ಎರಡು ಬಾರಿ ಮಾಡಲಾಗಿದೆ. ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಈ ಶವಪರೀಕ್ಷೆ ನಡೆಸಿದ್ದಾರೆ.

`ಮೊದಲ ಬಾರಿ ಶವ ಪರೀಕ್ಷೆ ನಡೆಸಿದಾಗ, ಅಲೋಕ್ ರಂಜನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವರದಿ ಬಂತು. ಇದಕ್ಕೊಪ್ಪದ ಆತನ ಪೋಷಕರು ಮತ್ತೊಮ್ಮೆ ಶವಪರೀಕ್ಷೆ ನಡೆಸಲು ಒತ್ತಾಯಿಸಿದರು. ಆಗಲೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ವರದಿಯೇ ಬಂದಿತು. ಬಾಹ್ಯವಾಗಿ ದೇಹದ ಮೇಲೆ ಯಾವುದೇ ಗಾಯದ ಕಲೆಗಳು ಕಂಡು ಬಂದಿಲ್ಲ ಎಂಬ ಅಂಶ ವರದಿಯಲ್ಲಿದೆ. ಹೀಗಾಗಿ ತನಿಖೆಯ ಪ್ರಾಥಮಿಕ ಹಂತದ ಪ್ರಕಾರ, ಆತ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ~ ಎಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.

ಬೇರೆ ಬೇರೆಯಾಗಿದ್ದ ರುಂಡ- ಮುಂಡ
`ದೇವನಹಳ್ಳಿ ತಾಲ್ಲೂಕಿನ ಅತ್ತಿಬೆಲೆ ಗ್ರಾಮದ ಬಳಿ ರೈಲ್ವೆ ಹಳಿ ಅಸಹಜ ಸ್ಥಿತಿಯಲ್ಲಿ ಪತ್ತೆಯಾದ ಶವವನ್ನು ಪರಿಶೀಲಿಸಿದಾಗ, ಅಲೋಕ್ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯೇ ಹೆಚ್ಚಾಗಿ ಕಂಡು ಬಂತು. ಆತನ ರುಂಡ ಮತ್ತು ಮುಂಡ ಬೇರೆ ಬೇರೆ ಬಿದ್ದಿದ್ದವು.
 
ರೈಲ್ವೆ ಹಳಿಯ 29 ಸಿಮೆಂಟ್ ಕಂಬಿಗಳ (ಸುಮಾರು 35 ಮೀಟರ್) ಅಂತರದಲ್ಲಿ ಎರಡೂ ಭಾಗಗಳು ಛಿದ್ರವಾದ ಸ್ಥಿತಿಯಲ್ಲಿ ಬಿದ್ದಿದ್ದವು. ರೈಲು ರುಂಡದ ಮೇಲೆ ಹಾಯ್ದು ಹೋದ ರಭಸಕ್ಕೆ ದೇಹವು ಸಂಪೂರ್ಣವಾಗಿ ಹೊರಳಿತ್ತು~ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

`ದೇಹದ ಮೇಲೆ ಯಾವುದೇ ಗಾಯಗಳು ಆಗಿರಲಿಲ್ಲ. ಪಾದಗಳಲ್ಲಿ ಸ್ವಲ್ಪ ಗಾಯಗಳಾಗಿದ್ದವು. ಆತನ ಮೇಲೆ ರೈಲು ಹಾಯ್ದ ಹೋದ ರಭಸಕ್ಕೆ ಆತ ಹೊರಳಾಡಿ ಮೃತಪಟ್ಟಿದ್ದಾನೆ. ಒಂದು ವೇಳೆ ದುಷ್ಕರ್ಮಿಗಳು ಆತನನ್ನು ಕೊಲೆ ಮಾಡಿ ಶವವನ್ನು ಎಸೆದಿದ್ದರೆ, ದೇಹ ಹೊರಳಾಡುತ್ತಿರಲಿಲ್ಲ. ರುಂಡ ಮಾತ್ರ ತುಂಡಾಗಿ ದೇಹ ಯಥಾಸ್ಥಿತಿಯಲ್ಲಿ ಇರುತ್ತಿತ್ತು. ಸ್ಥಳದಲ್ಲಿ ರಕ್ತದ ಕಲೆಯೂ ಇರುತ್ತಿರಲಿಲ್ಲ~ ಎಂದು ಅವರು ವ್ಯಾಖ್ಯಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT