ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಿಥೇಯರಿಗೆ ಮತ್ತೆ ನಿರಾಸೆ

Last Updated 17 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಬೆಂಗಳೂರು: ತವರು ನೆಲದ ಪ್ರೇಕ್ಷಕರ ಬೆಂಬಲವನ್ನು ಹೊಂದಿದ್ದರೂ ಸಹ ಆತಿಥೇಯ ಹಿಂದೂಸ್ತಾನ್ ಏರೋನಾಟಿಕ್ಸ್ ಸ್ಪೋಟ್ಸ್ ಕ್ಲಬ್ (ಎಚ್‌ಎಎಸ್‌ಸಿ) ತಂಡಕ್ಕೆ ಐ ಲೀಗ್ ಫುಟ್‌ಬಾಲ್ ಟೂರ್ನಿಯ ಏರ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಸೋಲಿನ ಸುಳಿಯಿಂದ ಹೊರ ಬರಲು ಸಾಧ್ಯವಾಗಲಿಲ್ಲ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಏರ್ ಇಂಡಿಯಾ ತಂಡ 3-1ಗೋಲುಗಳಿಂದ ಎಚ್‌ಎಎಲ್ ತಂಡವನ್ನು ಮಣಿಸಿತು. ಆದರೆ ತವರು ನೆಲದ ಪ್ರೇಕ್ಷಕರಿಗೆ ಗೆಲುವಿನ ಉಡುಗೊರೆ ನೀಡುವ ಗುರಿ ಮುಟ್ಟಲು ಮಾತ್ರ ಎಚ್‌ಎಎಲ್‌ಗೆ ಸಾಧ್ಯವಾಗಲಿಲ್ಲ.

ವಿಜಯಿ ತಂಡದ ಒಕರ್ ಒಗರ್ ಪ್ರೈಸ್ 39ನೇ ಹಾಗೂ 69ನೇ  ನಿಮಿಷ ಹಾಗೂ ಸಾಕರ್ ವೊಲ್ಹಾ 63ನೇ ನಿಮಿಷದಲ್ಲಿ ತಲಾ ಒಂದು ಗೋಲು ಗಳಿಸಿ ಏರ್ ಇಂಡಿಯಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಎಚ್‌ಎಎಲ್ ತಂಡದ ಪರ ಆರ್.ಸಿ. ಪ್ರಕಾಶ್ 90ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಒಂದು ಗೋಲು ಗಳಿಸಿದರಾದರೂ ಅದು ವ್ಯರ್ಥವಾಯಿತು.

ಎಚ್‌ಎಎಲ್ ಆಡಿರುವ ಒಟ್ಟು 22 ಪಂದ್ಯಗಳಲ್ಲಿ ಗೆಲುವು ಪಡೆದದ್ದು ಕೇವಲ ಐದರಲ್ಲಿ ಮಾತ್ರ. ಐದು ಪಂದ್ಯಗಳನ್ನು ಡ್ರಾ ಮಾಡಿಕೊಂಡು ಇನ್ನೂಳಿದ 12 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಇದರಿಂದ ಒಟ್ಟು 21 ಪಾಯಿಂಟ್‌ಗಳನ್ನು ಮಾತ್ರ ಗಳಿಸಲು ಎಚ್‌ಎಎಲ್‌ಗೆ ಸಾಧ್ಯವಾಗಿದೆ.ಏರ್ ಇಂಡಿಯಾ ಭಾನುವಾರದ ಗೆಲುವಿನ ನಂತರ ತನ್ನ ಗೆಲುವಿನ ಸಂಖ್ಯೆಯನ್ನು ನಾಲ್ಕಕ್ಕೆ ಏರಿಸಿಕೊಂಡಿತು. ಆಡಿರುವ 21ಪಂದ್ಯಗಳಲ್ಲಿ ನಾಲ್ಕು ಗೆಲುವು ಪಡೆದಿದೆ. ಎಂಟು ಪಂದ್ಯಗಳನ್ನು ಡ್ರಾ ಮಾಡಿಕೊಂಡು, 10 ಪಂದ್ಯಗಳಲ್ಲಿ ಸೋಲು ಕಂಡಿದೆ.

ಐ ಲೀಗ್‌ನಲ್ಲಿ ಒಟ್ಟು 43 ಪಾಯಿಂಟ್‌ಗಳನ್ನು ಗಳಿಸಿರುವ ಸಲಗಾಂವ್‌ಕರ್ ಹಾಗೂ ಚರ್ಚಿಲ್ ಬ್ರದರ್ಸ್ ತಂಡಗಳು ಜಂಟಿಯಾಗಿ ಅಗ್ರಸ್ಥಾನ ಹಂಚಿಕೊಂಡಿವೆ. ಏರ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಎಚ್‌ಎಎಲ್ ಸೋಲು ಅನುಭವಿಸಿದ್ದರಿಂದ ಮುಂದಿನ ಸುತ್ತುಗಳಲ್ಲಿ ಆತಿಥೇಯ ತಂಡದ ಹಾದಿ ಕಠಿಣವಾಗಿದೆ. ಎಚ್‌ಎಎಲ್ ಈ ಟೂರ್ನಿಯಲ್ಲಿ ಇನ್ನು ಪುಣೆ ಫುಟ್‌ಬಾಲ್ ಕ್ಲಬ್, ಚರ್ಚಿಲ್ ಬ್ರದರ್ಸ್‌ ಹಾಗೂ ಈಸ್ಟ್ ಬೆಂಗಾಲ್ ಕ್ಲಬ್ ತಂಡಗಳ ಸವಾಲನ್ನು ಎದುರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT