ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಕತೆ ಪ್ರಕಾರ: ನಡೆಯದ ಚರ್ಚೆ

Last Updated 11 ಸೆಪ್ಟೆಂಬರ್ 2011, 19:20 IST
ಅಕ್ಷರ ಗಾತ್ರ

ಬೆಂಗಳೂರು: `ಸಾಹಿತ್ಯದಲ್ಲಿ ಆತ್ಮಕತೆಯ ಪ್ರಕಾರ ಹಾಗೂ ಆತ್ಮಕತೆಗಳ ಬಗ್ಗೆ ಹೆಚ್ಚಿನ ಚರ್ಚೆಯೇ ನಡೆಯದಿರುವುದು ದುರದೃಷ್ಟಕರ~ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದರು.

ಅಂಕಿತ ಪುಸ್ತಕವು ನಗರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ `ಅಕ್ಕಚ್ಚುವಿನ ಅರಣ್ಯಪರ್ವ~ ಹಾಗೂ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರ `ಇವತ್ತು- ನಿನ್ನೆ~ ಕಥಾ ಸಂಕಲನ ಕುರಿತು ಮಾತನಾಡಿದರು.

`ಆತ್ಮಕತೆ ಬರೆಯುವುದೆಂದರೆ ಸರಳವಾದ ಕಾರ್ಯವಲ್ಲ, ಅದು ಸವಾಲಿನ ಕೆಲಸ. ಭೂತಕಾಲ ಮತ್ತು ವಾಸ್ತವದೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ. ಜೀವನದಲ್ಲಿ ನಡೆದ ಆಘಾತಕರ ಕ್ಷಣಗಳು, ದಾರುಣ ಘಟನೆಗಳನ್ನು ಸ್ಮರಿಸುತ್ತಾ ಮತ್ತೊಮ್ಮೆ ಬದುಕಿ ಬರೆಯಬೇಕಾಗುತ್ತದೆ~ ಎಂದರು.

`ಪಾಶ್ಚಾತ್ಯ ದೇಶಗಳಲ್ಲಿ ಆತ್ಮಕತೆ ಬರಹವು ಬೌದ್ಧಿಕ ವಾಗ್ವಾದದ ನೆಲೆಯ ಮೇಲೆ ರೂಪುಗೊಳ್ಳುತ್ತದೆ. ಆದರೆ ಭಾರತೀಯ ಆತ್ಮಕತೆಗಳು ಸಾಂಸ್ಕೃತಿಕ ಸಂವಾದದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪಾಶ್ಚಾತ್ಯ ಹಾಗೂ ಭಾರತೀಯ ಆತ್ಮಕತೆಗಳ ಅನುಭವದಲ್ಲಿ ಸಾಕಷ್ಟು ವ್ಯತ್ಯಾಸವಿದೆ~ ಎಂದು ಅಭಿಪ್ರಾಯಪಟ್ಟರು.

`ವೆಂಕಟೇಶಮೂರ್ತಿ ಅವರು ಬಹುಪಾಲು ರೂಪಕ ಭಾಷೆಯ ಮೂಲಕ ಈ ಆತ್ಮಕತೆಯನ್ನು ಬರೆದಿದ್ದಾರೆ. ಇಲ್ಲಿ ಬರುವ ಅನೇಕ ಪಾತ್ರಗಳು ವೈಯಕ್ತಿಕತೆಯನ್ನು ಮೀರಿದ ಪಾತ್ರಗಳಾಗಿವೆ. ಲೋಕಾನುಭವ, ಕಾವ್ಯಾನುಭವ ನೀಡುವ ಪ್ರಯತ್ನ ಹೊಸ ಬಗೆಯ ಅನುಭವ ನೀಡುತ್ತದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

`ನಾಡಿನ ಸಂಸ್ಕೃತಿಯನ್ನು ರೂಪಿಸುವಲ್ಲಿ `ಪ್ರಜಾವಾಣಿ~ ಪತ್ರಿಕೆಯ ಪಾತ್ರ ಮಹತ್ವದ್ದು. ಅನೇಕ ಕತೆಗಾರರು, ಲೇಖಕರು, ವಿಮರ್ಶಕರನ್ನು ರೂಪಿಸಿದ ರಂಗನಾಥರಾವ್ ಅವರನ್ನು ಸಂಸ್ಕೃತಿಯ ಪೋಷಕರು ಎನ್ನಬಹುದು. ನವ್ಯ ಸಾಹಿತ್ಯದ ಬೆಳವಣಿಗೆಯ ಚರಿತ್ರೆಯನ್ನು ಬರೆಯಲು ಅವರು ಸಮರ್ಥರು~ ಎಂದರು.

`ನಿರ್ದಿಷ್ಟ ಪ್ರಕಾರಗಳ ಹಂಗನ್ನು ಮುರಿಯುವುದು 21ನೇ ಶತಮಾನದ ಮುಖ್ಯ ಲಕ್ಷಣ. ರಂಗನಾಥರಾವ್ ಅವರು ಇದೇ ಪ್ರಯತ್ನ ಮಾಡಿದ್ದು, ಈ ಕತೆಗಳು ವಿಮರ್ಶೆಗೆ ಸವಾಲೊಡ್ಡುವ ರೀತಿಯಲ್ಲಿವೆ~ ಎಂದು ಹೇಳಿದರು.

ಲೋಕಾರ್ಪಣೆಗೊಂಡ ಗೀತಾ ವಸಂತ ಅವರ `ಚೌಕಟ್ಟಿನಾಚೆಯವರು~ ಹಾಗೂ ಟಿ.ಆರ್. ಅನಂತರಾಮ್ ಅವರ `ಮರ್ಫಿಲಾ~ ಕೃತಿಗಳ ಕುರಿತು ಮಾತನಾಡಿದ ಎಚ್.ಎಸ್. ವೆಂಕಟೇಶಮೂರ್ತಿ, `ಅನಂತರಾಮ್ ಕೃತಿಯಲ್ಲಿ ಕನ್ನಡದ ಸೊಗಸನ್ನು ತೋರುವ ಚಾರುಕ್ತಿಗಳನ್ನು ಕಾಣಬಹುದು. ಅವರ ಬರಹದಲ್ಲಿ ಮೇಲ್ನೋಟಕ್ಕೆ ವ್ಯಂಗ್ಯ ಕಂಡರೂ ಜೀವನದ ಬಗ್ಗೆ ಗಂಭೀರ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ~ ಎಂದರು.

`ಗೀತಾ ಹೆಣ್ಣು ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಅವರ ನೋವು, ಮಾನಸಿಕ ತೊಳಲಾಟವನ್ನು ಆಳವಾಗಿ ಬಿಟ್ಟಿಡುವ ಪ್ರಯತ್ನ ಮಾಡಿದ್ದಾರೆ. ಸಿದ್ಧ ಚೌಕಟ್ಟನ್ನು ಮೀರಿದ ಅವರ ಬರವಣಿಗೆ ಆಕರ್ಷಕವಾಗಿದೆ~ ಎಂದು ಹೇಳಿದರು. ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಜಿ.ಎನ್. ರಂಗನಾಥರಾವ್, ಟಿ.ಆರ್. ಅನಂತರಾಮ್ ಹಾಗೂ ಗೀತಾ ವಸಂತ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT