ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಂಚನೆ ಬೇಡ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಗುಜರಾತ್ ರಾಜ್ಯಕ್ಕೆ ಲೋಕಾಯುಕ್ತರನ್ನು ನೇಮಿಸಿರುವ ರಾಜ್ಯಪಾಲರಾದ ಕಮಲಾ ಬೇನಿವಾಲ ನಿರ್ಧಾರವನ್ನು ಹೈಕೋರ್ಟ್ ಎತ್ತಿ ಹಿಡಿಯುವ ಮೂಲಕ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಮುಜುಗರದ ಪರಿಸ್ಥಿತಿಗೆ ತಳ್ಳಿದೆ.
 
`ರಾಜ್ಯ ಸರ್ಕಾರದ ಜತೆ ಸಮಾಲೋಚನೆ ನಡೆಸದೆ ರಾಜ್ಯಪಾಲರು ಲೋಕಾಯುಕ್ತರನ್ನು ನೇಮಿಸಿರುವುದು ಸಂವಿಧಾನ ವಿರೋಧಿ ಕ್ರಮ~ ಎಂದು ನರೇಂದ್ರಮೋದಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ ಭಿನ್ನ ಅಭಿಪ್ರಾಯ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಕೈಗೆತ್ತಿಕೊಂಡ ಮೂರನೇ ಸದಸ್ಯರ ಪೀಠ ಬಹುಮತದ ಆಧಾರದಲ್ಲಿ ಲೋಕಾಯುಕ್ತರ ನೇಮಕಾತಿಯನ್ನು ಎತ್ತಿಹಿಡಿದಿದೆ.
 
ಇದೊಂದು ಅನಗತ್ಯ ವಿವಾದ. ಗುಜರಾತ್ ಲೋಕಾಯುಕ್ತ ಕಾಯಿದೆಯ ಸೆಕ್ಷನ್ ಮೂರು `ರಾಜ್ಯಸರ್ಕಾರದ ಜತೆ ಸಮಾಲೋಚನೆ ನಡೆಸದೆ ಲೋಕಾಯುಕ್ತರನ್ನು ನೇಮಿಸುವ ಅಧಿಕಾರ ರಾಜ್ಯಪಾಲರಿಗೆ ಇದೆ~ ಎಂದು ಹೇಳಿದೆ.
 
ಆದರೆ ಈ ಕಾಯಿದೆಯನ್ನು ಕೂಡಾ `ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ ರಾಜ್ಯಪಾಲರು ಸಚಿವಸಂಪುಟದ ಸಲಹೆಯಂತೆ ನಿರ್ಧಾರ ಕೈಗೊಳ್ಳಬೇಕು~ಎಂಬ ಸಂವಿಧಾನದ 154ನೇ ಪರಿಚ್ಛೇದದ ಜತೆಯಲ್ಲಿಯೇ ಓದಬೇಕು ಎನ್ನುವುದು ನರೇಂದ್ರಮೋದಿ ಅವರ ವಾದವಾಗಿತ್ತು.

ಇದನ್ನು ರಾಜ್ಯಪಾಲರು ಒಪ್ಪಿಕೊಳ್ಳದೆ ತಮಗೆ ಇರುವ `ಸಂವಿಧಾನದತ್ತ ಅಧಿಕಾರದ ಮೂಲಕವೇ ಲೋಕಾಯುಕ್ತರನ್ನು ನೇಮಕ ಮಾಡಿದ್ದೇನೆ~ ಎಂದು ಹೇಳಿದ್ದರು. ಈಗ ಹೈಕೋರ್ಟ್ ರಾಜ್ಯಪಾಲರ ನಿಲುವನ್ನು ಸಮರ್ಥಿಸಿ ತೀರ್ಪು ನೀಡಿದೆ.

 ಲೋಕಪಾಲರ ನೇಮಕಕ್ಕೆ ಒತ್ತಾಯಿಸಿ ಅಣ್ಣಾಹಜಾರೆ ನೇತೃತ್ವದ ಚಳವಳಿ ನಡೆದ ನಂತರ ಎಲ್ಲ ರಾಜಕೀಯ ಪಕ್ಷಗಳೂ ಈ ಬಗ್ಗೆ ತಮ್ಮ  ನಿಲುವನ್ನು ಸ್ಪಷ್ಟಪಡಿಸಲೇಬೇಕಾದ ಒತ್ತಡಕ್ಕೆ ಸಿಕ್ಕಿವೆ. ಅದರಂತೆ ಭಾರತೀಯ ಜನತಾ ಪಕ್ಷ ಆ ಚಳವಳಿಗೆ ತನ್ನ ಬೆಂಬಲವನ್ನು ವ್ಯಕ್ತಪಡಿಸಿತ್ತು.

ಆದರೆ ಅದೇ ಪಕ್ಷದ ಆಡಳಿತ ಇರುವ ಗುಜರಾತ್‌ನಲ್ಲಿ 2003ರಿಂದ ಲೋಕಾಯುಕ್ತರ ಹುದ್ದೆ ಖಾಲಿ ಇದೆ ಎನ್ನುವುದು ಆ ಪಕ್ಷದ ರಾಜಕೀಯ ಆತ್ಮವಂಚನೆಯನ್ನಷ್ಟೇ ತೋರಿಸುತ್ತದೆ. ಆ ರಾಜ್ಯದ ಅನೇಕ ಸಮಾಜಸೇವಕರು ಈ ಲೋಪವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.

ಅಂತಹ ಪ್ರಕರಣವೊಂದರ ವಿಚಾರಣೆ ಸಂದರ್ಭದಲ್ಲಿ ಹೈಕೋರ್ಟ್ ಲೋಕಾಯುಕ್ತರ ನೇಮಕಾತಿಯಲ್ಲಿನ ವಿಳಂಬಕ್ಕೆ ಕಾರಣ ಕೇಳಿ ರಾಜ್ಯಸರ್ಕಾರಕ್ಕೆ ನೋಟೀಸ್ ನೀಡಿತ್ತು. ಆ ಸಂದರ್ಭವನ್ನೆ ಬಳಸಿಕೊಂಡು ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಂಡು ಲೋಕಾಯುಕ್ತರನ್ನು ನೇಮಕ ಮಾಡಿದ್ದಾರೆ.
 
ಈ ನೇಮಕಾತಿಯಲ್ಲಿ ರಾಜಕೀಯವನ್ನು ಕಾಣುತ್ತಿರುವ ನರೇಂದ್ರಮೋದಿ ಅವರು ರಾಜ್ಯಪಾಲರ ನಿರ್ಧಾರ ಸಂವಿಧಾನ ವಿರೋಧಿ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಭಂಗಗೊಳಿಸುವಂತಹ ಕ್ರಮ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇಲ್ಲಿರುವ ಪ್ರಶ್ನೆ ಕಾನೂನು ಇಲ್ಲವೇ ನಿಯಮಗಳದ್ದಲ್ಲ, ಅದು ನೀತಿಯದ್ದು.

ರಾಜ್ಯಪಾಲರು ಏಕಪಕ್ಷೀಯವಾಗಿ ನಿರ್ಧಾರ ಕೈಗೊಳ್ಳುವಂತಹ ಪರಿಸ್ಥಿತಿಗೆ ಅವರನ್ನು ತಳ್ಳಿದವರು ಯಾರು? ನರೇಂದ್ರಮೋದಿ ಅವರು ಈ ವಿವಾದವನ್ನು ಕಾನೂನಿನ ಹೋರಾಟವಾಗಿ ಪರಿವರ್ತಿಸುವ ಕುಹಕತನವನ್ನು ಕೈಬಿಟ್ಟು ಮೊದಲು ರಾಜ್ಯಕ್ಕೊಬ್ಬ ಲೋಕಾಯುಕ್ತರು ನೇಮಕಗೊಳ್ಳುವಂತೆ ನೋಡಿಕೊಳ್ಳಬೇಕು. ಈ ಮೂಲಕ ಅವರ ಪಕ್ಷದ ಮರ್ಯಾದೆಯನ್ನೂ ಉಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT