ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸ ತಂದ ಭಾರತ ಬಾಂಗ್ಲಾ ಸರಣಿ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಎರಡು ದಿನಗಳ ಹಿಂದೆ ಅಹಮದಾಬಾದ್‌ನಲ್ಲಿ ಮುಗಿದ ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಒಂದು ದಿನದ ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್ ಸರಣಿಯಲ್ಲಿ ಭಾರತ ಎಲ್ಲಾ ಮೂರು ಪಂದ್ಯಗಳಲ್ಲೂ ಗೆದ್ದಿದೆ. ಹತ್ತು ದಿನಗಳ ಹಿಂದೆ ವಡೋದರದಲ್ಲಿ ನಡೆದ ಟ್ವೆಂಟಿ-20 ಕ್ರಿಕೆಟ್ ಸರಣಿಯ ಮೂರೂ ಪಂದ್ಯಗಳಲ್ಲೂ ಬಾಂಗ್ಲಾ ವನಿತೆಯರು ಭಾರತದ ಎದುರು ಸೋಲನುಭವಿಸಿದರು. ಭಾರತೀಯ ಆಟಗಾರ್ತಿಯರ ಈ ವಿಜಯ ಇಡೀ ದೇಶವೇ ಸಂಭ್ರಮ ಪಡುವಂತಹದ್ದಾಗಿದೆ.

ಈಚೆಗೆ ಭಾರತದಲ್ಲೇ ನಡೆದ ವಿಶ್ವಕಪ್‌ನಲ್ಲಿ ನಿರಾಸೆ ಅನುಭವಿಸಿದ್ದ ಭಾರತೀಯ ವನಿತೆಯರಿಗೆ ಈ ಎರಡೂ ಸರಣಿ ಗೆಲುವು ಹೊಸ ಆತ್ಮವಿಶ್ವಾಸ ತುಂಬುವಲ್ಲಿ ಯಶಸ್ವಿಯಾಗಿವೆ ಎನ್ನುವುದಂತೂ ನಿಜ. ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಯಾವತ್ತೂ ತೀರಾ ಎತ್ತರಕ್ಕೇರಲೇ ಇಲ್ಲ. 1982ರಿಂದ 2013ರವರೆಗೆ ಎಂಟು ವಿಶ್ವಕಪ್ ಕೂಟಗಳು ನಡೆದಿದ್ದು ಐದು ಸಲ ಆಸ್ಟ್ರೇಲಿಯ ಪ್ರಶಸ್ತಿ ಗೆದ್ದಿದ್ದರೆ, ಇಂಗ್ಲೆಂಡ್ ಎರಡು ಸಲ ಮತ್ತು ನ್ಯೂಜಿಲೆಂಡ್ ಒಂದು ಸಲ ಟ್ರೋಫಿ  ಎತ್ತಿಕೊಂಡಿವೆ. ಭಾರತ 2005ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಫೈನಲ್ ತಲುಪಿತ್ತು. ಆದರೆ ಅಲ್ಲಿ ಆಸ್ಟ್ರೇಲಿಯಾ ಎದುರು 98ರನ್‌ಗಳಿಂದ ಸೋತಿತ್ತು. ಆದರೆ ಈ ವರ್ಷ ಎರಡು ತಿಂಗಳ ಹಿಂದೆ ಭಾರತದಲ್ಲಿಯೇ ನಡೆದ ವಿಶ್ವಕಪ್‌ನಲ್ಲಿ ಭಾರತ ಅಂತಿಮ ಘಟ್ಟ ತಲುಪಲು ಸಾಧ್ಯವಾಗಲೇ ಇಲ್ಲ.

ನಾನು ಗಮನಿಸಿದಂತೆ ಭಾರತದಲ್ಲಿ ಪ್ರತಿಭಾವಂತ ಆಟಗಾರ್ತಿಯರಿದ್ದಾರೆ. ಆದರೆ ನಿರ್ಣಾಯಕ ಕ್ಷಣಗಳಲ್ಲಿ ಎಡವುದು ಏಕೆಂಬುದೇ ಅರ್ಥವಾಗುತ್ತಿಲ್ಲ. ಈ ಸಲ ನಮ್ಮ ಬ್ಯಾಟಿಂಗ್ ಇನ್ನಷ್ಟೂ ಶಕ್ತಿಯುತವಾಗಬೇಕಿತ್ತೇನೋ ಎನಿಸಿತ್ತು. ಆದರೆ ಈಚೆಗೆ ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಭಾರತದ ಸಾಮರ್ಥ್ಯ ಕಂಡಾಗ ರೋಮಾಂಚನವೆನಿಸಿತು.

ಮಹಿಳಾ ಕ್ರಿಕೆಟ್ ಯೂರೊಪ್‌ನಲ್ಲಿ ಶತಮಾನಗಳ ಹಿಂದಿನಿಂದಲೂ ಜನಪ್ರಿಯತೆ ಪಡೆದಿದೆ. 1934ರಷ್ಟು ಹಿಂದೆಯೇ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ನಡುವಣ ಮೊದಲ ಮಹಿಳಾ ಕ್ರಿಕೆಟ್ ಟೆಸ್ಟ್ ನಡೆದಿತ್ತು. ಆ ನಂತರ ಆ ದೇಶಗಳಲ್ಲಿ ಮಹಿಳಾ ಕ್ರಿಕೆಟ್ ಕ್ರಾಂತಿಯೇ ನಡೆದಿದೆ. ಆದರೆ ಭಾರತದ ವನಿತೆಯರು 1976-77ರಲ್ಲಿ ಮೊದಲ ಸಲ ಟೆಸ್ಟ್ ಕ್ರಿಕೆಟ್ ಆಡಿದರು. ಆಗ ವೆಸ್ಟ್‌ಇಂಡೀಸ್ ವಿರುದ್ಧ ನಡೆದ ಸರಣಿಯನ್ನು ಭಾರತ 3-3ರಿಂದ ಸಮ ಮಾಡಿಕೊಂಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಭಾರತ ಒಟ್ಟು 34 ಟೆಸ್ಟ್‌ಗಳಲ್ಲಿ ಆಡಿದೆ. ಅನೇಕ ಅತ್ಯುತ್ತಮ ಆಟಗಾರ್ತಿಯರು ಅರಳಿದ್ದಾರೆ.

ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ಮತ್ತು ಟಿ-20 ಪಂದ್ಯಗಳಲ್ಲಿ ಗಮನಾರ್ಹ ಸಾಮರ್ಥ್ಯ ತೋರಿದ್ದಾರೆ. 2004ರಲ್ಲಿ ಏಷ್ಯಾಕಪ್ ಗೆದ್ದಿದ್ದಾರೆ. ಆ ನಂತರ ಮೂರು ಸಲ ಏಷ್ಯಾ ಕಪ್ ಭಾರತಕ್ಕೇ ಬಂದಿದೆ. ಭಾರತದ ವನಿತೆಯರು ಈವರೆಗೆ 203 ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ್ದು, 103ರಲ್ಲಿ ಗೆದ್ದು 95ರಲ್ಲಿ ಸೋತಿದ್ದಾರೆ. ಮೊದಲಿಗೆ ಭಾರತ ಮಹಿಳಾ ಕ್ರಿಕೆಟ್ ಸಂಸ್ಥೆ ಎಂದಿತ್ತಲ್ಲಾ, ಅದು 2006ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ವಿಲೀನಗೊಂಡಿತು. ಈಗ ಭಾರತದ ಪುರುಷರ ತಂಡದವರು ಧರಿಸುವಂತಹ ಉಡುಪನ್ನು ಹೋಲುವಂತಹ ಉಡುಪನ್ನೇ ಮಹಿಳಾ ತಂಡದ ಆಟಗಾರ್ತಿಯರೂ ಧರಿಸುವುದನ್ನು ನಾವು ಕಾಣಬಹುದು.

ಈಚೆಗೆ ಜಗತ್ತಿನಾದ್ಯಂತ ಬಹಳಷ್ಟು ದೇಶಗಳಲ್ಲಿ ಮಹಿಳಾ ಕ್ರಿಕೆಟ್ ಜನಪ್ರಿಯತೆ ಕಂಡುಕೊಳ್ಳುತ್ತಿದೆ. ಆಸ್ಟ್ರೇಲಿಯ, ಇಂಗ್ಲೆಂಡ್, ವೆಸ್ಟ್‌ಇಂಡೀಸ್, ದಕ್ಷಿಣ ಆಫ್ರಿಕ, ನ್ಯೂಜಿಲೆಂಡ್, ಭಾರತಗಳಲ್ಲಿ ಈ ಕ್ರೀಡೆ ಹೇಗೂ ಜನ ಮನ್ನಣೆ ಪಡೆದಿದೆ. ಇದಲ್ಲದೆ ಡೆನ್ಮಾರ್ಕ್, ಐರ್ಲೆಂಡ್, ಜಮೈಕಾ, ಹಾಲೆಂಡ್, ಪಾಕಿಸ್ತಾನ, ಶ್ರೀಲಂಕಾಗಳಲ್ಲಿ ಈ ಕ್ರೀಡೆ ಜನಮನದಲ್ಲಿ ಸ್ಥಾನ ಪಡೆಯುತ್ತಿದೆ.

ಭಾರತದಲ್ಲಿ ಈಚೆಗೆ ಮಹಿಳಾ ಕ್ರಿಕೆಟ್ ಎಲ್ಲಾ ವಿಭಾಗಗಳಲ್ಲಿಯೂ ಆಡಲಾಗುತ್ತಿದೆ. 16ವರ್ಷದೊಳಗಿನ, 19 ವರ್ಷದೊಳಗಿನ ವಿಭಾಗದಲ್ಲಿ ಗಮನ ಸೆಳೆದವರು ಆಯಾ ರಾಜ್ಯ ಮಹಿಳಾ ತಂಡಗಳಲ್ಲಿ ಸ್ಥಾನ ಗಿಟ್ಟಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದ ಹಲವು ಕೂಟಗಳು ನಡೆಯುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ನಾನು ಕಂಡ ಹಾಗೆ ರಾಷ್ಟ್ರೀಯ ಮಟ್ಟದಲ್ಲಿ ಆಂಧ್ರ ಮತ್ತು ಹೈದರಾಬಾದ್ ತಂಡಗಳು ಉತ್ತಮ ಸಾಮರ್ಥ್ಯ ತೋರುತ್ತಿವೆ. ಗೋವಾ, ತಮಿಳುನಾಡುಗಳಲ್ಲಿಯೂ ಮಹಿಳಾ ಕ್ರಿಕೆಟ್ ಹೆಚ್ಚಿನ ಪ್ರಾಧಾನ್ಯತೆ ಪಡೆದುಕೊಂಡಿವೆ.

ಇವುಗಳ ನಡುವೆ ಕರ್ನಾಟಕದಲ್ಲಿ ಕ್ರಿಕೆಟ್ ಹೊಸ ಆಯಾಮ ಪಡೆದುಕೊಳ್ಳುತ್ತಿದೆ. ನಮ್ಮ ಕ್ರಿಕೆಟ್ ಶಿಬಿರಗಳು ನಡೆದಾಗ ಶಾಂತಾ         ರಂಗಸ್ವಾಮಿಯವರಂತಹ ಹಿರಿಯರು ಬಂದು ನಮಗೆ ಆಟದ ತಂತ್ರಗಳನ್ನು ಹೇಳಿಕೊಡುತ್ತಾರೆ. ಕಲ್ಪನಾ ವೆಂಕಟಾಚಾರ್ ಅವರಂತಹ ಕೋಚ್ ನಮ್ಮ ಜತೆಗಿದ್ದಾರೆ. ಭಾರತ ಕಂಡ ಉತ್ತಮ ವಿಕೆಟ್ ಕೀಪರ್ ಎಂದೇ ನಾನು ಪರಿಗಣಿಸುವ ಕರುಣಾ ಜೈನ್ ಅವರ ಆಟವನ್ನು ನಾವು ಹತ್ತಿರದಿಂದಲೇ ನೋಡುತ್ತಾ ಬೆಳೆಯುತ್ತಿದ್ದೇವೆ. ಹೀಗಾಗಿ ಕಳೆದ ಸಲ ರಾಷ್ಟ್ರೀಯ ಕೂಟದಲ್ಲಿ ಕರ್ನಾಟಕವೇ ಟಿ-20 ಚಾಂಪಿಯನ್ ಪಟ್ಟಕ್ಕೇರಿತ್ತು. ರಾಜ್ಯದ ವಿಜಾಪುರ, ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಮುಂತಾದ ಕಡೆ ಬಹಳಷ್ಟು ಆಟಗಾರ್ತಿಯರು ಅರಳುತ್ತಿದ್ದಾರೆ.

ಇದೀಗ ಬಾಂಗ್ಲಾದೇಶದ ಎದುರು ಭಾರತ ಎರಡೂ ಸರಣಿಗಳನ್ನು ಗೆದ್ದಿರುವುದು ನಮ್ಮಂತಹ ಕಿರಿಯ ಆಟಗಾರ್ತಿಯರಿಗೆ ಉತ್ಸಾಹ ತರುವಂತಹದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT