ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸದ ನಿರೂಪಣೆಗಳು

Last Updated 6 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪ್ರದರ್ಶನಕ್ಕಾಗಿ ಆಯ್ದುಕೊಂಡ ಕೃತಿಯ ವಸ್ತುವಿಗೆ ಅನುಕೂಲಕರವಾದ ಅಭಿನಯ. ಭರತನಾಟ್ಯದ ಮರ್ಯಾದೆಗೆ ಒಪ್ಪುವಂತಹ ಶರೀರ ಮತ್ತು ಶರೀರ ಸೌಷ್ಠವ. ಭಾವಕ್ಕೆ ತಕ್ಕಂತೆ ಬಳುಕುವ ದೇಹಾಂಗಗಳು ಮತ್ತು ಮುಖಿಜಗಳು. ಬೇಕೆಂದಾಗ ಹಿಗ್ಗಿದ ನೃತ್ತ ಮತ್ತು ಒಗ್ಗಿದ ನೃತ್ಯ. ಭಾವಗಳ ಸ್ವಚ್ಛಂದ ವಿಹಾರ ಮತ್ತು ಸಹಜ ಚಿತ್ರಣ.
 
ಅನುಪಮ ವರ್ಣನೆ-  ಹೀಗೆ ವಿಶಿಷ್ಟತೆಗಳು ಮೈದುಂಬಿಕೊಂಡು ಜಗಜಗಿಸಿದ ಯುವ ನರ್ತಕಿ ಮಾನಸಾ ರಾವ್ ಅವರ ಭರತನಾಟ್ಯ ನೋಡುಗರಿಗೆ ಸಂತಸವನ್ನುಂಟು ಮಾಡಿತು.
 
ಪ್ರತಿ ಶುಕ್ರವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳಡಿಯಲ್ಲಿ ಯವನಿಕಾ ಸಭಾಂಗಣದಲ್ಲಿ ಶುಕ್ರವಾರ (ಫೆ.3) ನಡೆದ ಅವರ ಮಂಡನೆಗಳು ಮಾನಸಾ ಅವರ ಆತ್ಮವಿಶ್ವಾಸ ಮತ್ತು ಪರಿಶ್ರಮದ ಸಾಧನೆಗೆ ಸಾಕ್ಷಿಯಂತಿದ್ದವು.

ಗುರು ಲಲಿತಾ ಶ್ರೀನಿವಾಸನ್ ಅವರ ಪ್ರತಿಭಾನ್ವಿತ ಶಿಷ್ಯೆಯಾಗಿರುವ ಮಾನಸಾ ತನ್ನ ಗುರು ಹಾಗೂ ತನ್ನ ಮಾಧ್ಯಮದ ಗುಣ ಗರಿಮೆಗಳನ್ನು ಎತ್ತಿಹಿಡಿದರು. ತಮ್ಮ ಗುರುಗಳ ಸಮ್ಮುಖದಲ್ಲಿ ಮತ್ತು ಗುರು ಲಲಿತಾ ಅವರ ಅತ್ಯಂತ ಹಿರಿಯ ಶಿಷ್ಯೆ ಸುಮಾ ಕೃಷ್ಣಮೂರ್ತಿ ಅವರ ನಟುವಾಂಗದ ನೇತೃತ್ವದಲ್ಲಿ ಸೊಗಸಾಗಿ ಸ್ಪಂದಿಸಿದರು.
 
ಅವರೊಟ್ಟಿಗೆ ವಸುಧಾ ಬಾಲಕೃಷ್ಣ (ಗಾಯನ), ಆದಿತ್ಯ (ಪಿಟೀಲು), ನರಸಿಂಹಮೂರ್ತಿ (ಕೊಳಲು) ಮತ್ತು ನಾರಾಯಣಸ್ವಾಮಿ (ಮೃದಂಗ) ಅವರು ಉತ್ಸಾಹದಿಂದ ಸಹಕರಿಸಿ ಮಾನಸಾ ಅವರ ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.

ಹಿರಿಯ ಕವಿ ಪು.ತಿ.ನ ಅವರ ಕೃತಿಯನ್ನು ಆಧರಿಸಿ ವಿಘ್ನರಾಜನನ್ನು ಸ್ತುತಿಸಿದ ನರ್ತಕಿಯು ತಮ್ಮ ನೃತ್ಯವನ್ನು ಆರಂಭಿಸಿದರು. ಅದಕ್ಕೆ ಅಳವಡಿಸಲಾಗಿದ್ದ ನೃತ್ತದಲ್ಲಿ ನಯ ನವಿರಾದ ಲಯ ಮಾದರಿಗಳು ಮತ್ತು ಹೆಜ್ಜೆ, ಅಂಗ ಉಪಾಂಗಗಳ ವಿನ್ಯಾಸಗಳು ಆಕರ್ಷಿಸಿದವು.

ನಂತರ ನೇರವಾಗಿ ಸುಪರಿಚಿತ ಶಂಕರಾಭರಣ (ಮನವೀ ಚೇಕೊನ) ವರ್ಣವನ್ನು ವಿಸ್ತರಿಸಿದರು. ನಾಯಕಿಯು ತನ್ನ ನಾಯಕ ಬೃಹಧೀಶ್ವರನ ವಿರಹವನ್ನು ತಾಳಲಾರದೆ ಅವನನ್ನು ಶೀಘ್ರವಾಗಿ ಕರೆತರುವಂತೆ ತನ್ನ ಸಖಿಯಲ್ಲಿ ಬಿನ್ನವಿಸಿಕೊಳ್ಳುತ್ತಾಳೆ.
 ಆ ವರ್ಣನೆಯನ್ನು ಅಭಿನಯಿಸುವಲ್ಲಿ ಮಾನಸಾ ಅವರ ಅನುಕೃತಿ, ಅನುಕರಣ ಮತ್ತು ನೃತ್ತದ ಸೃಷ್ಟಿಗೆ ಅಭಿನಂದನೆಯ ಮಹಾಪೂರ. ಚರಣ ಮತ್ತು ಎತ್ತುಕಡೆ ಭಾಗಗಳನ್ನು ಚುರುಕಾದ ವೇಗದಲ್ಲಿ ನಿರೂಪಿಸಿ ಕಾರ್ಯಕ್ರಮದ ಓಟವನ್ನು ನಿರ್ವಹಿಸಿದರು.

ಶ್ಲೋಕದ ಮುನ್ನುಡಿಯೊಂದಿಗೆ ಜಯದೇವನ ಅಷ್ಟಪದಿಯ (ರತಿ ಸುಖ ಸಾರೇ, ಯಮುನಾ ಕಲ್ಯಾಣಿ) ಅಭಿನಯದ ಪ್ರೌಢತೆಯ ಸಕಲ ಅಂಶಗಳೂ ಮಿಂಚಿದವು. `ಅಂತಃಪುರ ಗೀತೆ~ಯನ್ನು ಅವರು ವಿಪುಲ ಸಂವೇದನೆಗಳಿಂದ ಆತ್ಮೀಯಗೊಳಿಸಿದರು. `ಬೃಂದಾವನಿ ತಿಲ್ಲಾನ~ದ ಸಮಾಪ್ತಿ ಔಚಿತ್ಯಪೂರ್ಣವಾಗಿತ್ತು.

ಕಲಾಜ್ಯೋತಿ ಪ್ರಶಸ್ತಿ ಪ್ರದಾನ
ನಾದಜ್ಯೋತಿ ಶ್ರೀ ತ್ಯಾಗರಾಜಸ್ವಾಮಿ ಭಜನ ಸಭಾದ 47ನೇಯ `ನಾದಜ್ಯೋತಿ- 2012~ ಸಂಗೀತೋತ್ಸವವು ಮಲ್ಲೇಶ್ವರದ ಶ್ರೀ ಕನ್ನಿಕಾಪರಮೇಶ್ವರಿ ದೇವಾಲಯದಲ್ಲಿ ಒಂಬತ್ತು ದಿನ ಯಶಸ್ವಿಯಾಗಿ ನಡೆಯಿತು.

ಕಳೆದ ಭಾನುವಾರ ಸಂಜೆ ನಡೆದ ಸಮಾರೋಪದಲ್ಲಿ ಖ್ಯಾತ ನರ್ತಕಿ ವೈಜಯಂತಿ ಕಾಶಿ, ಹಿರಿಯ ಸಂಘಟಕ ಕೆ.ಎನ್. ವೆಂಕಟನಾರಾಯಣ, ಬಿಬಿಎಂಪಿಯ ಹಣಕಾಸು ಮತ್ತು ತೆರಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು ಮತ್ತಿತರೆ ಗಣ್ಯರು ಉಪಸ್ಥಿತರಿದ್ದರು.

ಜ್ಯೇಷ್ಠ ಕಲಾವಿದರಾದ ಅರ್ಜುನನ್ (ಮೃದಂಗ), ಜಕರಯ್ಯ (ಪಿಟೀಲು) ಮತ್ತು ಪಂ. ಲಲಿತಾ ಜೆ. ರಾವ್ (ಹಿಂದೂಸ್ತಾನಿ ಗಾಯನ) ಅವರನ್ನು  ಕಲಾಜ್ಯೋತಿ ಬಿರುದುಗಳೊಂದಿಗೆ ಸನ್ಮಾನಿಸಲಾಯಿತು.

ಅನಾರೋಗ್ಯ ಪೀಡಿತ ಕಲಾವಿದರಿಗೆ ಆರ್ಥಿಕ ಸಹಾಯವನ್ನೊದಗಿಸುವ, ಕಳೆದ ವರ್ಷ ಚಾಲಿತಗೊಂಡ ನಾದಜ್ಯೋತಿ `ಆರೋಗ್ಯ ಸಂಪದ~ ಯೋಜನೆಯಡಿ ಹಿರಿಯ ಕೊಳಲು ವಾದಕ ಎಚ್.ಆರ್. ಕೃಷ್ಣನ್‌ಅವರಿಗೆ ಈ ಬಾರಿಯ ಧನ ಸಹಾಯದ ಚೆಕ್ಕನ್ನು ಸಮರ್ಪಿಸಲಾಯಿತು. ಮಧ್ಯ ವಯಸ್ಕ ಕಲಾವಿದರಿಗೆ ಕೊಡಮಾಡುವ ನಾದಜ್ಯೋತಿ ಪುರಸ್ಕಾರವನ್ನು ತಬಲಾ ಪಟು ಪ್ರೊ.ಗುರುಚರಣ್ ಡಿ. ಗರುಡ್‌ಅವರಿಗೆ ನೀಡಲಾಯಿತು.
ಶುದ್ಧ ವಿನಿಕೆಯ ಪಿಟೀಲು ವಾದನ

ಸಮಾರೋಪಕ್ಕೆ ಮೊದಲು ವರಿಷ್ಠ ಪಿಟೀಲು ವಾದಕ ಎ.ಡಿ.ಜಕರಯ್ಯನವರು ತಮ್ಮ ಪಿಟೀಲು ತನಿ ಕಛೇರಿಯ ಮೂಲಕ ಸಂಗೀತ ಪ್ರೇಮಿಗಳನ್ನು ಆಳವಾಗಿ ಪ್ರಭಾವಿಸಿದರು. 85 ವರ್ಷದ ಜಕರಯ್ಯ ಕುರ್ಚಿಯ ಮೇಲೆ ಆಸೀನರಾಗಿ ಪಿಟೀಲನ್ನು ಎತ್ತಿ ಹಿಡಿದುಕೊಂಡು ಬಾಜಿಸಿ ಶುದ್ಧ ವಿನಿಕೆಯನ್ನುಂಟುಮಾಡಿದರು.
 
ಅವರ ನುಡಿಸಾಣಿಕೆಯಲ್ಲಿ ವಯಸ್ಸಿನ ಪ್ರಭಾವವಾಗಲೀ ತಜ್ಜನಿತ ಆಯಾಸವಾಗಲೀ ಇರಲಿಲ್ಲ. ಬದಲಿಗೆ, ಅವರು ಪೂರ್ಣ ಉತ್ಸಾಹಿಗಳಾಗಿ ತಮ್ಮ ಸವಿಶೇಷ ಆಯ್ಕೆಗಳಿಂದ ಅಚ್ಚರಿಗೊಳಿಸಿದರು.

ಮನವಿ ಅಲಗಿಂಚರದ (ನಳಿನಕಾಂತಿ) ನಂತರ ತಮಗೆ ಅತ್ಯಂತ ಪ್ರಿಯಕರವಾದ ಅಪರೂಪವಾಗಿ ಕೇಳಿಬರುವ ಝೇಂಕಾರಧ್ವನಿ ರಾಗದಲ್ಲಿ ತ್ಯಾಗರಾಜರ `ಫಣಿಪತಿಶಾಯಿ~ ರಚನೆಯನ್ನು ನಮೂದಿಸಿದರು. ಮಾಯಾಮಾಳವಗೌಳ ಜನ್ಯ ಮತ್ತೊಂದು ಅಪರೂಪದ ದೇವರಂಜಿನಿ ರಾಗದ ದೀಕ್ಷಿತರ `ನಮಸ್ತೆ ಪರದೇವತೆ~ ಕೃತಿಯನ್ನು ನುಡಿಸಿ ಕೇಳುಗರನ್ನು ರೋಮಾಂಚನಗೊಳಿಸಿದರು.

ಎಂ.ಆರ್. ಸಾಯಿನಾಥ್ (ಮೃದಂಗ),ಎಂ.ಆರ್. ಚಂದ್ರಶೇಖರ್ (ಘಟ) ಮತ್ತು ಭಾಗ್ಯಲಕ್ಷ್ಮಿ ಎಂ. ಕೃಷ್ಣ (ಮೋರ್ಸಿಂಗ್) ಅವರ ಸಫಲ ಸಹಕಾರದ ಸಹಿತ ಕಛೇರಿಯನ್ನು ನಡೆಸಿದ ಜಕರಯ್ಯನವರು ಸರಸ್ವತಿ ರಾಗ, ತಾನ ಮತ್ತು ಪಲ್ಲವಿಯನ್ನು ತಮ್ಮ ಕಛೇರಿಯ ಪ್ರಮುಖ ಭಾಗವನ್ನಾಗಿಸಿದರು.

ಸರಸ್ವತಿಯ ಪ್ರಬುದ್ಧ ರಾಗಾಲಾಪನೆಯ ಹಿನ್ನೆಲೆಯಲ್ಲಿ ಆಹಿರಿ, ನೀಲಾಂಬರಿ, ಭೌಳಿ, ದ್ವಿಜಾವಂತಿ ಇತ್ಯಾದಿ ರಾಗಗಳ ತಾನಮಾಲಿಕೆಯನ್ನು ಅವರು ಹೆಣೆದು ಹೊಸ ಅನುಭವವನ್ನುಂಟು ಮಾಡಿದರು. ಎಂದರೋ ಮಹಾನುಭಾವುಲು (ಮಿಶ್ರ ಛಾಪು) ಪಂಕ್ತಿಯನ್ನು ಪಲ್ಲವಿಯನ್ನಾಗಿ ನಿರ್ವಹಿಸಿ ಸ್ವರವಿನ್ಯಾಸದೊಂದಿಗೆ ಮುಗಿಸಿದರು.

ಕಲಾತ್ಮಕ ದ್ವಿ-ರಾಗ ಪಲ್ಲವಿ
ಶ್ರೀರಾಮ ಲಲಿತ ಕಲಾ ಮಂದಿರದ ಸಂಗೀತೋತ್ಸವವು ಗಾಯನ ಸಮಾಜದಲ್ಲಿ ಗುರುವಾರ ಆರಂಭವಾಯಿತು. ಆರಂಭದ ಕಛೇರಿಯನ್ನು ನಡೆಸಿಕೊಟ್ಟವರು ಬಾಂಬೆ ಜಯಶ್ರೀ. ಅವರ ಗಾಯನವೆಂದರೆ ಅದೊಂದು ಸುಖಾನುಭವ.
 
ಎಚ್.ಎನ್. ಭಾಸ್ಕರ್ (ಪಿಟೀಲು), ಪತ್ರಿ ಸತೀಶ್ (ಮೃದಂಗ) ಮತ್ತು ಉಡುಪಿ ಶ್ರೀಧರ್ (ಖಂಜರಿ)ಅವರ ಸಕುಶಲ ಸಹಕಾರದೊಂದಿಗೆ ಹಾಡಿದ ಅವರು ಶ್ರೀಸರಸ್ವತಿ ನಮೋಸ್ತುತೆ (ಆರಭಿ) ಕೀರ್ತನೆಯನ್ನು ಸ್ವರವಿನ್ಯಾಸದೊಂದಿಗೆ ಸಜ್ಜುಗೊಳಿಸಿದರು.

ಧನ್ಯಾಸಿ (ಸಂಗೀತ ಜ್ಞಾನಮು), ದ್ವಿಜಾವಂತಿ (ಅಖಿಲಾಂಡೇಶ್ವರಿ) ಮತ್ತು ಖರಹರಪ್ರಿಯ (ರಾಮ ನೀ ಸಮಾನಮೆವರು) ರಾಗಗಳ ಆಲಾಪನೆಗಳಲ್ಲಿ ಆಯಾ ರಾಗಗಳ ವೈಶಿಷ್ಟ್ಯ, ಮಹತ್ವ, ವ್ಯಾಪ್ತಿ ಮತ್ತು ವೈಶಾಲ್ಯಗಳನ್ನು ಅವರು ರಸಭರಿತವಾಗಿ ಮನಗಾಣಿಸಿದರು.

ಸುಂದರವಾಗಿ ಹಾಡಿದ ದಾರಿ ನೀ ತೆಲುಸುಕೊಂಟಿ (ಶುದ್ಧಸಾವೇರಿ) ನಂತರ ಬೇಹಾಗ್ ಮತ್ತು ಬಾಗೇಶ್ರೀಗಳನ್ನೊಳಗೊಂಡಿದ್ದ ದ್ವಿರಾಗ ಪಲ್ಲವಿಗೆ (ಶ್ರೀಭಾರ್ಗವೀದೇವಿ ಭಗಮಾಲಿನಿ ಶ್ರೀರಂಗಧಾಮೇಶ್ವರಿ, ಮಹಾಶಕ್ತಿ ಮಹಾಲಕ್ಷ್ಮಿ ದೇವಿ (ಚತುರಶ್ರ ಝಂಪರೆ, ಮಿಶ್ರಗತಿ) ಮಾಯಮಾಳವಗೌಳ, ರಂಜಿನಿ ಮತ್ತು ರೇವತಿ ರಾಗಮಾಲಿಕಾ ಸ್ವರಗಳನ್ನು ಹಾಕಿ ಅದನ್ನು ಕಲಾತ್ಮಕಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT