ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸದೊಂದಿಗೆ ಕಣಕ್ಕೆ

Last Updated 31 ಮಾರ್ಚ್ 2011, 19:00 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಶ್ರೀಲಂಕಾ ತಂಡ ಶನಿವಾರ ನಡೆಯುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ ಎಂದು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಮಾಹೇಲ ಜಯವರ್ಧನೆ ಹೇಳಿದ್ದಾರೆ.ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುವ ಅಂತಿಮ ‘ಸಮರ’ದಲ್ಲಿ ಕುಮಾರ ಸಂಗಕ್ಕಾರ ನೇತೃತ್ವದ ಲಂಕಾ ತಂಡ ಭಾರತದ ವಿರುದ್ಧ ಪೈಪೋಟಿ ನಡೆಸಲಿದೆ. ಭಾರತ ತಂಡ 1983ರ ಸಾಧನೆಯನ್ನು ಪುನರಾವರ್ತಿಸುವುದೇ ಅಥವಾ ಲಂಕಾ ತಂಡ 1996ರ ಸಾಧನೆಯನ್ನು ಮರುಕಳಿಸುವಂತೆ ಮಾಡುವುದೇ ಎಂಬ ಕುತೂಹಲದಲ್ಲಿ ಕ್ರಿಕೆಟ್ ಪ್ರೇಮಿಗಳು ಇದ್ದಾರೆ.

‘ತಂಡದ ಎಲ್ಲ ಆಟಗಾರರು ನಿರಾಳರಾಗಿದ್ದು, ಫೈನಲ್ ಪಂದ್ಯವನ್ನು ಎದುರುನೋಡುತ್ತಿದ್ದಾರೆ. ಶನಿವಾರ ತಂಡ ಆತ್ಮವಿಶ್ವಾಸದೊಂದಿಗೆ ಕಣಕ್ಕಿಳಿಯಲಿದೆ. ಸೆಮಿಫೈನಲ್ ಪಂದ್ಯದಲ್ಲಿ ನಾವು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದೆವು. ಎಲ್ಲರೂ ಧನಾತ್ಮಕ ಮನೋಭಾವದೊಂದಿಗೆ ಆಡಿದರು. ಒಂದು ಹಂತದಲ್ಲಿ ಎದುರಾಳಿಗಳು ನಮ್ಮ ಮೇಲೆ ಅಲ್ಪ ಒತ್ತಡ ಹೇಳಿದ್ದರು. ಆದರೆ ತಂಡದ ಯುವ ಆಟಗಾರರು ಅದನ್ನು ಸಮರ್ಥವಾಗಿ ಮೆಟ್ಟಿನಿಂತರು’ ಎಂದು ಅವರು ಗುರುವಾರ ಇಲ್ಲಿ ತಿಳಿಸಿದರು.

‘ಫೈನಲ್ ಪಂದ್ಯದಲ್ಲಿ ಯಾವ ರೀತಿಯ ಮನೋಭಾವ ಪ್ರದರ್ಶಿಸಬೇಕು ಎಂಬುದರ ಬಗ್ಗೆ ತಂಡದ ಎಲ್ಲ ಆಟಗಾರರು ಒಟ್ಟಾಗಿ ಚರ್ಚೆ ನಡೆಸಿದ್ದಾರೆ. ಹೆಚ್ಚಿನ ಆಟಗಾರರಿಗೆ ಲಂಕಾ ತಂಡವನ್ನು ಪ್ರತಿನಿಧಿಸುವುದು ಕನಸಾಗಿತ್ತು. ಇದೀಗ ಅವರು ವಿಶ್ವಕಪ್ ಗೆಲ್ಲುವ ಹೊಸ್ತಿಲಲ್ಲಿ ಬಂದು ನಿಂತಿದ್ದಾರೆ’ ಎಂದರು.‘ಟೂರ್ನಿಯಲ್ಲಿ ನೀಡಿದ ಒಟ್ಟಾರೆ ಪ್ರದರ್ಶನ ನಮಗೆ ತೃಪ್ತಿ ತಂದಿತ್ತಿದೆ. ಈ ಹಾದಿಯಲ್ಲಿ ಎದುರಾದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇವೆ. ಬೌಲರ್‌ಗಳು, ಬ್ಯಾಟ್ಸ್‌ಮನ್‌ಗಳು ಒಳಗೊಂಡಂತೆ ಎಲ್ಲರೂ ಅಗತ್ಯಕ್ಕೆ ತಕ್ಕಂತೆ ಸ್ಪಂದಿಸಿದ್ದಾರೆ’ ಎಂದು 33ರ ಹರೆಯದ ಮಾಹೇಲ ತಿಳಿಸಿದರು.

ಜಯವರ್ಧನೆ ಅವರ ನೇತೃತ್ವದಲ್ಲಿ ಶ್ರೀಲಂಕಾ ತಂಡ ಕಳೆದ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್ ಪ್ರವೇಶಿಸಿತ್ತು. ಆದರೆ ಅಂತಿಮ ಹೋರಾಟದಲ್ಲಿ ಆಸ್ಟ್ರೇಲಿಯಾ ಕೈಯಲ್ಲಿ ಪರಾಭವಗೊಂಡಿತ್ತು. ಫೈನಲ್ ಪಂದ್ಯದ ಬಳಿಕ ಲಂಕಾ ತಂಡದ ಡ್ರೆಸಿಂಗ್ ಕೊಠಡಿಯು ಅನುಭವಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ‘ಮಿಸ್’ ಮಾಡಿಕೊಳ್ಳಲಿದೆ ಎಂದು ಮಾಹೇಲ ಹೇಳಿದರು. ವಿಶ್ವಕಪ್ ಬಳಿಕ ನಿವೃತ್ತಿ ಹೊಂದುವುದಾಗಿ ಮುರಳಿ ಈಗಾಗಲೇ ಪ್ರಕಟಿಸಿದ್ದಾರೆ.

‘ಮುರಳಿ ಅವರದ್ದು ಅದ್ಭುತ ವ್ಯಕ್ತಿತ್ವ. ಡ್ರೆಸಿಂಗ್ ಕೊಠಡಿಯಲ್ಲಿ ಆಟಗಾರರು ಸದಾ ಸಂತಸದಲ್ಲಿರುವಂತೆ ಮಾಡುವ ವ್ಯಕ್ತಿ ಅವರು. ಲಂಕಾ ತಂಡದ ಡ್ರೆಸಿಂಗ್ ಕೊಠಡಿ ಅಂತಹ ಮಹಾನ್ ಆಟಗಾರನನ್ನು ಕಳೆದುಕೊಳ್ಳಲಿದೆ’ ಎಂದು ಮಾಹೇಲ ನುಡಿದರು.ಆದರೆ ‘ಮುರಳಿ ಅವರಿಗಾಗಿ ಕಪ್ ಗೆದ್ದುಕೊಡಬೇಕು’ ಎಂಬ ಉದ್ದೇಶದೊಂದಿಗೆ ತಂಡದ ಆಟಗಾರರು ಫೈನಲ್ ಪಂದ್ಯಕ್ಕಾಗಿ ಕಣಕ್ಕಿಳಿಯುವುದಿಲ್ಲ ಎಂಬುದನ್ನು ಮಾಹೇಲ ಸ್ಪಷ್ಟಪಡಿಸಿದರು. ‘ಶ್ರೀಲಂಕಾಕ್ಕೆ ಕಪ್ ತಂದುಕೊಡುವ ಉದ್ದೇಶದೊಂದಿಗೆ ನಾವು ಟೂರ್ನಿಯನ್ನು ಅರಂಭಿಸಿದ್ದೆವು. ಈ ಉದ್ದೇಶವನ್ನು ಬದಲಿಸುವ ಬಯಕೆಯಿಲ್ಲ. ಮುರಳಿ ಅವರ ಮನಸ್ಸಿನಲ್ಲೂ ಇದೇ ಗುರಿ ಇದೆ. ಲಂಕಾಕ್ಕೆ ಟ್ರೋಫಿ ಗೆದ್ದುಕೊಡಬೇಕು ಎಂದು ಅವರು ಬಯಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT