ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮವಿಶ್ವಾಸಿ ಅಜಿತ್

Last Updated 31 ಮೇ 2012, 19:30 IST
ಅಕ್ಷರ ಗಾತ್ರ

`ಸೆಟ್‌ಗೆ ಹೋಗುವಾಗ ಹುಮ್ಮಸ್ಸಿನಿಂದ ಹೋಗಬೇಕು. ಅಂಥ ಪಾತ್ರಗಳು ನನಗೆ ಬೇಕು~ ಎಂದರು ಅಜಿತ್. `ಪಟ್ರೆ ಲವ್ಸ್ ಪದ್ಮ~ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅಜಿತ್, ಆ ಚಿತ್ರದ ನಿರ್ಮಾಪಕರೂ ಹೌದು. ಮೊದಲ ಚಿತ್ರ ಸೋಲುಂಡರೂ ಆತ್ಮವಿಶ್ವಾಸ ಕಳೆದುಕೊಳ್ಳದ ಅಜಿತ್ ಬರುತ್ತಿರುವ ಅವಕಾಶಗಳತ್ತ ಮುಖ ಮಾಡಿದ್ದಾರೆ. `ಗುಬ್ಬಿ~ ಚಿತ್ರದ ನಂತರ `ಈ ಭೂಮಿ ಆ ಬಾನು~ ಮತ್ತು `ಬೀಟ್~ ಚಿತ್ರಗಳ ಚಿತ್ರೀಕರಣ ಮುಗಿಸಿ ಹೊಸದೊಂದು ಚಿತ್ರದ ಸಿದ್ಧತೆಯಲ್ಲಿ ತೊಡಗಿದ್ದಾರೆ.

“ನನ್ನ ಮೊದಲ `ಪಟ್ರೆ ಲವ್ಸ್ ಪದ್ಮ~ ಚಿತ್ರದಲ್ಲಿ ಕೆಲವು ತಪ್ಪುಗಳಿದ್ದವು. ಅವುಗಳು ಸರಿಯಾಗಿದ್ದಿದ್ದರೆ ಅದೊಂದು ಶ್ರೇಷ್ಠ ಚಿತ್ರವಾಗುತ್ತಿತ್ತು. ಹೊಸಬರು ಬರುತ್ತಿದ್ದ ಕಾಲ ಅದಾಗಿದ್ದರಿಂದ ಬಹಳ ಗಂಭೀರವಾಗಿ ಆ ಸಿನಿಮಾ ಮಾಡಿದ್ದೆವು. ನಮ್ಮ ಕುಟುಂಬದಿಂದಲೇ ನಿರ್ಮಿಸಿದ್ದೆವು. ಅತಿಯಾದ ನಿರೀಕ್ಷೆ ಸಿನಿಮಾದ ಅರ್ಧ ಯಶಸ್ಸನ್ನು ಕಸಿಯುತ್ತದೆ. ನಮ್ಮ `ಪಟ್ರೆ..~ ಚಿತ್ರಕ್ಕೆ ಆಗಿದ್ದು ಅದೇ” ಎಂದು ಹಳೆಯ ನೆನಪಿಗೆ ಜಾರುತ್ತಾರೆ ಅಜಿತ್. ಅದರ ನಂತರ ಅವರು `ಗುಬ್ಬಿ~ ಒಪ್ಪಿಕೊಂಡರು. ಅದು ಕೂಡ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ.

ಅಜಿತ್‌ಗೆ ಚಿಕ್ಕಂದಿನಿಂದಲೂ ನೃತ್ಯ ಮಾಡುವುದೆಂದರೆ ಅಚ್ಚುಮೆಚ್ಚು. ಭರತನಾಟ್ಯವನ್ನು ಶಾಸ್ತ್ರೀಯವಾಗಿ ಕಲಿತಿರುವ ಅವರು ಪಾಶ್ಚಾತ್ಯ, ಫಿಲ್ಮಿ ನೃತ್ಯಗಳ ಕಡೆಗೂ ಕಣ್ಣು ಹಾಯಿಸಿದವರು. ಶಾಲಾ- ಕಾಲೇಜು ದಿನಗಳಲ್ಲಿ ಯಾವ ನೃತ್ಯ ಸ್ಪರ್ಧೆಗೆ ಹೊರಟರೂ ಅಜಿತ್‌ಗೆ ಬಹುಮಾನ ಕಟ್ಟಿಟ್ಟ ಬುತ್ತಿ ಎಂಬಂತಾಗಿತ್ತು. ಕಾನೂನು ಪದವಿ ಗಳಿಸುವ ಗುರಿಯನ್ನು ಮುಟ್ಟಿದ ನಂತರ ಸಿನಿಮಾ ನಟನಾಗಬೇಕೆಂದು ಹೊರಡಲು ಅವರನ್ನು ನೃತ್ಯವೇ ಪ್ರೇರೇಪಿಸಿತ್ತು.

`ಅಭಿನಯವನ್ನು ಯಾರಿಂದಲೂ ಕಲಿಯಲು ಸಾಧ್ಯವಿಲ್ಲ. ಶಾಲೆಯಲ್ಲಿ ನಟನೆ ಕಲಿತವರಲ್ಲಿ ವಿಭಿನ್ನತೆ ಇರುವುದಿಲ್ಲ. ನಾವೇ ಅಭಿನಯ ರೂಢಿಸಿಕೊಂಡಾಗ ಹೊಸತನ ತರುವುದು ಸಾಧ್ಯ~ ಎನ್ನುವ ಅಜಿತ್, ಸಾಮಾನ್ಯ ಜನರನ್ನು ಗಮನಿಸಿ ಅವರ ಶೈಲಿಯನ್ನೇ ಪಾತ್ರದಲ್ಲಿ ಅಳವಡಿಸಿಕೊಳ್ಳುತ್ತಾರಂತೆ. ಸಿನಿಮಾಗಳನ್ನು ತಾಂತ್ರಿಕ ದೃಷ್ಟಿಕೋನದಿಂದ ನೋಡುವ ಅಜಿತ್‌ಗೆ ಇಂದು ನಾಯಕನಾಗಬೇಕೆಂದರೆ ಡಾನ್ಸ್, ಫೈಟ್, ನಟನೆ ಜೊತೆಗೆ ತಾಂತ್ರಿಕ ತಿಳಿವಳಿಕೆಯೂ ಅಗತ್ಯ ಇದೆ ಎನಿಸಿದೆ.

`ಯಾವುದೇ ಹೋಂವರ್ಕ್ ಇಲ್ಲದೇ ಸೆಟ್‌ಗೆ ಹೋಗುತ್ತೇನೆ. ಖಾಲಿ ಮನಸ್ಸಿನಲ್ಲಿ ನಿರ್ದೇಶಕರು ಹೇಳಿದಂತೆ ನಟಿಸುತ್ತೇನೆ. ಯಾವಾಗಲೂ ಅವರು ಕೇಳಿದ್ದಕ್ಕಿಂತ ಹೆಚ್ಚು ಕೊಡಲು ಪ್ರಯತ್ನಿಸುತ್ತೇನೆ. ನಟನಾಗಿ ನನ್ನ ವೃತ್ತಿಯಲ್ಲಿ ನಾನೇ ಡಾಮಿನೇಟ್ ಆಗಿರಬೇಕು ಎಂಬಾಸೆ ನನ್ನದು~ ಎನ್ನುವ ಅಜಿತ್ ಇದುವರೆಗೂ ಲವರ್‌ಬಾಯ್, ಪ್ರಬುದ್ಧ ಹುಡುಗನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರಿಗೆ ಮಾಸ್‌ಗೆ ಇಷ್ಟವಾಗುವಂಥ, ತಮಗೆ ಹೊಂದಿಕೆಯಾಗುವಂಥ ಪಾತ್ರದಲ್ಲಿ ನಟಿಸುವಾಸೆ. ಅದರ ಜೊತೆಗೆ ಕಾಮಿಡಿ ಪಾತ್ರಗಳೂ ಇಷ್ಟ.

`ನನಗೆ ಅವಸರ ಏನಿಲ್ಲ. ಒಂದಿಷ್ಟು ಸಿನಿಮಾ ಮಾಡಿ ಹೋಗಲು ಇಲ್ಲಿಗೆ ನಾನು ಬಂದಿಲ್ಲ. ಕೆಲವೇ ಸಿನಿಮಾಗಳಲ್ಲಿ ನಟಿಸಿದರೂ ಅದು ಜನರ ಮನದಲ್ಲಿ ಉಳಿಯಬೇಕು. ಜನ ನನ್ನನ್ನೇ ಗುರುತಿಸಬೇಕು ಎಂದಿದ್ದರೆ ನಾನು ಪ್ರತೀ ಸಿನಿಮಾಗೂ ನನ್ನ ಗೆಟಪ್ ಬದಲಿಸುತ್ತಿರಲಿಲ್ಲ. ಜನರಿಗೆ ನನಗಿಂತ ಮೊದಲು ನನ್ನ ಸಿನಿಮಾ ಹಿಡಿಸಬೇಕು~ ಎನ್ನುತ್ತಾರೆ.

ಫಿಟ್‌ನೆಸ್ ಕಡೆಗೂ ಗಮನಹರಿಸಿರುವ ಅಜಿತ್, ಬಿಡುವಿನ ವೇಳೆಯಲ್ಲಿ ತಮ್ಮ ತೋಟದಲ್ಲಿ ಕೃಷಿ ಮಾಡುತ್ತಾ ಕಾಲ ಕಳೆಯುತ್ತಾರಂತೆ. ಹಾಗೆಯೇ ಒಂಟಿಯಾಗಿರುವುದನ್ನು ಅವರು ಅತಿಯಾಗಿ `ಎಂಜಾಯ್~ ಮಾಡುತ್ತಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT