ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಸಂತೃಪ್ತಿ ತಂದ ಆತ್ಮತೃಷಾ

Last Updated 1 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಕಾಲೇಜುಗಳ ವಿದ್ಯಾರ್ಥಿಗಳಿಗೆ ಈಗ ಬಿಡುವಿಲ್ಲದ ಸಮಯ.ತಮ್ಮ ಕಾಲೇಜಿನ ವಾರ್ಷಿಕ ಸಾಂಸ್ಕೃತಿಕ ಹಬ್ಬ ಅಥವಾ ಫೆಸ್ಟ್‌ಗಳನ್ನು ಆದಷ್ಟು ಬೇಗ ನಡೆಸುವುದರಲ್ಲಿ ಅವರೀಗ ಮಗ್ನರು. ಹೊಸಕೆರೆಹಳ್ಳಿಯ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾರ್ಷಿಕ ಸಾಂಸ್ಕೃತಿಕ ಫೆಸ್ಟ್ ‘ಆತ್ಮತೃಷಾ’ ಇತ್ತೀಚೆಗೆ ನಡೆಯಿತು.

ಎರಡು ದಿನಗಳ ಕಾಲ ನಡೆದ ಈ ಹಬ್ಬದಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು.ಇತರ ಕಾಲೇಜುಗಳ ವಾರ್ಷಿಕ ಫೆಸ್ಟ್‌ಗಳಿಗಿಂತ ವಿಭಿನ್ನವಾಗಿದ್ದ ‘ಆತ್ಮತೃಷಾ’ ಸಭಿಕರು ನಿಬ್ಬೆರಗಾಗುವಂತೆ ಮಾಡಿತು.ವಿದ್ಯಾರ್ಥಿಗಳ ಈ ಹಬ್ಬದಲ್ಲಿ ಎಲ್ಲರಿಗೂ ಮೆಚ್ಚುಗೆಯಾದದ್ದು ಮಾತ್ರ ಹಸಿರಿನ ಮಹತ್ವವನ್ನು ವಿವರಿಸುವ, ಅದನ್ನೇ ಥೀಮ್  ಆಗಿ ಹೊಂದಿರುವ  ‘ಗೋ ಗ್ರೀನ್’  ಕಾರ್ಯಕ್ರಮ.

ದೇಶದಾದ್ಯಂತದ ಸುಮಾರು 80 ಕಾಲೇಜುಗಳು ಈ ಫೆಸ್ಟ್‌ನಲ್ಲಿ ಭಾಗವಹಿಸಿದ್ದವು. ಆರ್‌ವಿಸಿಇ, ಎಂಎಸ್‌ಆರ್‌ಐಟಿ, ಸಿಎಂಆರ್‌ಐಟಿ, ಬಿಎಂಎಸ್, ಕ್ರೈಸ್ಟ್, ಯುವಿಸಿಇ ಮುಂತಾದ ಕಾಲೇಜುಗಳು ಈ ಫೆಸ್ಟ್‌ನಲ್ಲಿ ಭಾಗವಹಿಸುವ ಮೂಲಕ ಇದನ್ನು ಈ ವರ್ಷದ ಒಂದು ಅತ್ಯಪೂರ್ವ ಕಾರ್ಯಕ್ರಮವನ್ನಾಗಿ ಮಾಡಿದವು.ಜೊತೆಗೆ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಸಂದೇಶವನ್ನು ತಮ್ಮೊಡನೆ  ಕೊಂಡೊಯ್ದರು.

‘ಪರಿಸರ ಸಂರಕ್ಷಣೆಯ ಮಹತ್ವವನ್ನು ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತಲುಪಿಸಲು ನಾವು ನಿರ್ಧರಿಸಿದ್ದೇವೆ. ಜೊತೆಗೆ ಆ ಕುರಿತ ಜಾಗೃತಿಯನ್ನು ಮೂಡಿಸುವುದು ನಮ್ಮ ಕರ್ತವ್ಯ. ಅದಕ್ಕೆಂದೇ ನಾವು ಕಾಲೇಜಿನಲ್ಲಿ ‘ಗ್ರೀನ್‌ಹಾಲಿಕ್ಸ್’ ಎಂಬ ಸಂಘವನ್ನು ಆರಂಭಿಸಿದ್ದೇವೆ. ಈ ಕ್ಲಬ್ ವತಿಯಿಂದ ನಾವು ನಗರದಲ್ಲಿ ಹಲವು ಗಿಡಗಳನು ನೆಟ್ಟಿದ್ದೇವೆ. ಈಗ ‘ಆತ್ಮತೃಷಾ’ ಇದಕ್ಕೆ ಸೂಕ್ತ ವೇದಿಕೆ ಒದಗಿಸಿದೆ’ ಎನ್ನುತ್ತಾರೆ ಕಾರ್ಯಕ್ರಮದ  ಸಂಯೋಜಕರಲ್ಲೊಬ್ಬರಾದ ಜವಾಹರ್.

ವಾರ್ಷಿಕ ಫೆಸ್ಟ್ ಹಲವು ಕಾರ್ಯಕ್ರಮಗಳ, ಸ್ಪರ್ಧೆಗಳ ಸಮ್ಮಿಳನವಾಗಿತ್ತು. ಮೊದಲ ದಿನದಂದು ತಾಂತ್ರಿಕ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರೋಗ್ರಾಮಿಂಗ್, ನೆಟ್‌ವರ್ಕಿಂಗ್, ಕಮ್ಯುನಿಕೇಶನ್, ಬಯೋ ಇನ್‌ಫೋಮ್ಯಾಟಿಕ್ಸ್, ರೋಬೋಟಿಕ್ಸ್, ಮತ್ತು ಗಣಿತಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳು ಪ್ರದರ್ಶನಗೊಂಡವು. ‘ಸ್ಕಿಮೋಸ್’ ಹೆಸರಿನ ಮೂಕಾಭಿನಯ   ಸ್ಪರ್ಧೆ ವಿದ್ಯಾರ್ಥಿಗಳ ನಿಜವಾದ ಹೊರಗೆಡಹುವಲ್ಲಿ ಸಹಕಾರಿಯಾಯಿತು.

‘ಪ್ಲೇಬಿಯನ್ ಪ್ಲೇ’ ಬೀದಿ ನಾಟಕ ಭ್ರಷ್ಟಾಚಾರ, ಬಾಲ ಕಾರ್ಮಿಕ ಪದ್ಧತಿ ಮತ್ತು ಭ್ರೂಣಹತ್ಯೆ ಕುರಿತು ದನಿ ಎತ್ತಲು ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸಿತು. ಇನ್ನು ಸಂಗೀತ ಪ್ರಿಯರಿಗಂತೂ ಬೇಕಾದಷ್ಟು ಕಾರ್ಯಕ್ರಮಗಳು ಇಲ್ಲಿದ್ದವು.ಪಾಶ್ಚಿಮಾತ್ಯ ಸಂಗೀತ, ಪಾಶ್ಚಿಮಾತ್ಯ ಸೋಲೋ, ಲಘು ಸಂಗೀತ ಹಾಗೂ ಇತರ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದಲೇ ಭಾಗವಹಿಸಿದರು. ಲಘು ಸಂಗೀತ ಸ್ಪರ್ಧೆಯಂತೂ ಎಲ್ಲರನ್ನೂ ರಂಜಿಸಿತು.

ಸಭಿಕರನ್ನು ರಂಜಿಸಲು ಸಂಗೀತ ಮಾತ್ರ ಸಾಲದು, ನೃತ್ಯವೂ ಬೇಕು.‘ಆತ್ಮತೃಷಾ’ದಲ್ಲಿ ಪ್ರದರ್ಶಿಸಲಾದ ನೃತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಉತ್ತಮ ಕೊರಿಯೊಗ್ರಾಫರ್‌ಗಳು ಎಂಬುದನ್ನು ಸಾಬೀತುಪಡಿಸಿದವು.ಇಷ್ಟೇ ಅಲ್ಲ, ಚರ್ಚಾಸ್ಪರ್ಧೆ, ರಸಪ್ರಶ್ನೆ, ಮುಖಕ್ಕೆ ಬಣ್ಣ ಹಚ್ಚುವುದು, ಸೃಜನಶೀಲ ಬರವಣಿಗೆಯಲ್ಲಿ ವಿದ್ಯಾರ್ಥಿಗಳು ಭಾವಹಿಸಿದರು.

ಎರಡನೇ ದಿನದಲ್ಲಂತೂ ಸಂಗೀತದ ಬ್ಯಾಂಡ್‌ಗಳದ್ದೇ ಕಾರುಬಾರು. ಕೋಲ್ಕೊತ್ತಾದ ‘ಬೀಟ್ ಗುರೂಸ್’ ಮತ್ತು ‘ಔರ್‌ಕೋ’ ಬ್ಯಾಂಡ್‌ಗಳು ತಮ್ಮ ಪವರ್‌ಪ್ಯಾಕ್ಡ್ ಕಾರ್ಯಕ್ರಮಗಳಿಂದಾಗಿ ಸಭಿಕರನ ಮನಸ್ಸನ್ನು ಗೆದ್ದವು. ಇದೇ ವೇಳೆ ಪಿಇಎಸ್ ವಿದ್ಯಾರ್ಥಿಗಳೇ ಆಯೋಜಿಸಿದ್ದ ಫ್ಯಾಷನ್ ಶೋ ಫೆಸ್ಟ್‌ನ ಮುಖ್ಯ ಆಕರ್ಷಣೆಯಾಗಿತ್ತು ಎನ್ನುವುದರಲ್ಲಿ ಸಂದೇಹವೇ ಇಲ್ಲ,
‘ಈ ಫೆಸ್ಟ್ ನಮಗೆ ತುಂಬಾ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ.

ನನಗೆ ಫೋಟೋಗ್ರಫಿಯಲ್ಲಿ ತುಂಬಾ ಆಸಕ್ತಿ. ಹಾಗಾಗಿ ಖ್ಯಾತ ವೈಲ್ಡ್‌ಲೈಫ್ ಫೋಟೋಗ್ರಾಫರ್ ಜಯಂತ್ ಶರ್ಮಾ ಅವರು ಆಯೋಜಿಸಿದ್ದ ಫೋಟೋಗ್ರಫಿ ಕಾರ್ಯಾಗಾರದಲ್ಲಿ ಭಾಗವಹಿಸುವ ಅವಕಾಶ ನನಗೆ ದೊರೆಯಿತು. ಈ ವರ್ಷವಂತೂ ನಾವು ಫೆಸ್ಟ್‌ನ ಚಿತ್ರಗಳನ್ನು ತೆಗೆಯಲು  ಯಾವುದೇ ವೃತ್ತಿಪರ ಛಾಯಾಚಿತ್ರಗಾರರನ್ನು ಕರೆಸಲಿಲ್ಲ. ನಾವು ವಿದ್ಯಾರ್ಥಿಗಳೇ ನಮ್ಮ ಕ್ಯಾಮೆರಾದಿಂದ ಚಿತ್ರಗಳನ್ನು ತೆಗೆದೆವು’ ಎಂದು  ಕಾಲೇಜಿನ ಫೋಟೋಗ್ರಫಿ ಕ್ಲಬ್ ‘ಪಿಕ್ಸೆಲ್’ನ ಸದಸ್ಯ ಆದಿತ್ಯ ಕಾಮತ್ ಹೇಳಿದರು.ಒಟ್ಟಿನಲ್ಲಿ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ   ‘ಆತ್ಮತೃಷಾ’ ವಿದ್ಯಾರ್ಥಿಗಳಿಗೆ ಸಾಕಷ್ಟು ಆತ್ಮಸಂತೃಪ್ತಿಯನ್ನೂ ತಂದುಕೊಟ್ಟಿತು ಎಂದೇ ಹೇಳಬೇಕು.                         

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT