ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗೆ ಯತ್ನಿಸಿದ್ದ ಮಂಜುನಾಥ್ ಶೆಟ್ಟಿ ಸಾವು

ವಿಚಾರಣೆ ನೆಪದಲ್ಲಿ ಪೊಲೀಸರಿಂದ ಕಿರುಕುಳ ಆರೋಪ
Last Updated 12 ಏಪ್ರಿಲ್ 2013, 20:07 IST
ಅಕ್ಷರ ಗಾತ್ರ

ಬೆಂಗಳೂರು: ವಿಚಾರಣೆ ನೆಪದಲ್ಲಿ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದ ಹನುಮಂತನಗರದ ನಿವಾಸಿ ಮಂಜುನಾಥ್ ಶೆಟ್ಟಿ (53) ಗುರುವಾರ ಸಂಜೆ ಕೊನೆಯುಸಿರೆಳೆದರು.

ಹನುಮಂತನಗರ ಎಂಟನೇ ಅಡ್ಡರಸ್ತೆ ನಿವಾಸಿಯಾದ ಮಂಜುನಾಥ್, ಕೆಂಪೇಗೌಡನಗರ ಸಮೀಪದ ನಂಜಪ್ಪಬ್ಲಾಕ್‌ನಲ್ಲಿ `ಸುಮುಖ ಪ್ರಾವಿಷನ್ ಸ್ಟೋರ್' ಎಂಬ ಹೆಸರಿನ ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಅವರ ಅಂಗಡಿ ಎದುರೇ ಇರುವ ಮನೆಯಲ್ಲಿ ಮಾ.19ರಂದು ಮಾನಸ ಎಂಬಾಕೆಯ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಪೊಲೀಸರು ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.

ಆದರೆ, ಏ.9ರಂದು ಮಂಜುನಾಥ್ ಮನೆಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥಗೊಂಡು ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಗುರುವಾರ ಸಂಜೆ ಸಾವನ್ನಪ್ಪಿದರು.

`ಕೊಲೆ ಪ್ರಕರಣದ ವಿಚಾರಣೆಗಾಗಿ ಪೊಲೀಸರು ಏ.5ರಂದು ನಮ್ಮ ಅಂಗಡಿ ಬಳಿ ಬಂದರು. ಈ ವೇಳೆ ಅಂಗಡಿಯಲ್ಲಿದ್ದ ಪತಿಯೊಂದಿಗೆ ಕೆಲ ಕಾಲ ಮಾತುಕತೆ ನಡೆಸಿದರು. ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಬರಬೇಕೆಂದು ಒತ್ತಾಯಿಸಿದ ಪೊಲೀಸರು, ಪತಿಯನ್ನು ಜೀಪ್‌ನಲ್ಲಿ ಕೂರುವಂತೆ ಹೇಳಿದರು. ಪೊಲೀಸರ ಈ ವರ್ತನೆಯಿಂದ ಬೇಸರಗೊಂಡ ಪತಿ ಜೀಪ್‌ನಲ್ಲಿ ಕೂರಲು ನಿರಾಕರಿಸಿ, ಬೈಕ್‌ನಲ್ಲೇ ಠಾಣೆಗೆ ತೆರಳಿದ್ದರು. ಈ ಪ್ರಕ್ರಿಯೆ ನಾಲ್ಕೈದು ದಿನಗಳ ಕಾಲ ಮುಂದುವರಿಯಿತು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಆ ಸಂದರ್ಭದಲ್ಲಿ ನಾನು ಅಂಗಡಿಯಲ್ಲಿದ್ದೆ' ಎಂದು ಮಂಜುನಾಥ್ ಪತ್ನಿ ಗೀತಾ `ಪ್ರಜಾವಾಣಿ'ಗೆ ತಿಳಿಸಿದರು.

ಮೊದಲು ಗುಟ್ಟಹಳ್ಳಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದ ನಾವು, ಫೆ.25ರಂದು ಮಾನಸ ಅವರ ಮನೆ ಎದುರು ಅಂಗಡಿ ತೆರೆದಿದ್ದೆವು. ಹೀಗಾಗಿ ಮಾನಸ ಅವರ ಸಂಬಂಧಿಕರು ಹಾಗೂ ಪರಿಚಿತರ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಅವರು ಹೇಳಿದರು.

`ಕೊಲೆ ಪ್ರಕರಣದ ವಿಚಾರಣೆಗಾಗಿ ಮಂಜುನಾಥ್ ಅವರನ್ನು ಮಾತ್ರವಲ್ಲದೆ, ಮಾನಸ ಅವರ ಮನೆ ಸಮೀಪವಿರುವ ಹಾಲು ಮಾರಾಟ ಮಳಿಗೆಯ ಮಾಲೀಕ ವೆಂಕಟೇಶ್, ಜ್ಯೂವೆಲರಿ ಅಂಗಡಿ ಮಾಲೀಕ ಪೂಲ್‌ಚಂದ್ ಅವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದೇವೆ. ಈ ವೇಳೆ ಅವರಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಸ್ಥಳೀಯರ ವಿಚಾರಣೆ ಮಾಡದೆ ತನಿಖೆ ನಡೆಸುವುದಾದರೂ ಹೇಗೆ' ಎಂದು ಪೊಲೀಸರು ಪ್ರಶ್ನಿಸಿದ್ದಾರೆ.

ಏ.5ರಂದು ಮಂಜುನಾಥ್ ಅವರನ್ನು ವಿಚಾರಣೆ ನಡೆಸಿದಾಗ, `ಮಾನಸ ಕೊಲೆಯಾದ ದಿನ ಬೆಳಿಗ್ಗೆ 11 ಗಂಟೆ ಸುಮಾರಿಗೆ ಅವರ ಮನೆ ಮುಂದೆ ಆಟೊ ನಿಂತಿತ್ತು. ಅದರಲ್ಲಿ ಸುಮಾರು 40 ವರ್ಷದ ಮಹಿಳೆ ಇದ್ದಳು. ಆ ಮಹಿಳೆಯನ್ನು ನಾನು ಗುರುತಿಸಬಲ್ಲೆ' ಎಂದು ಹೇಳಿದ್ದರು. ಹೀಗಾಗಿ ಅವರನ್ನು ಠಾಣೆಗೆ ಕರೆದೊಯ್ದು ಮಾನಸ ಅವರ ಮದುವೆ ಸಮಾರಂಭದ ಛಾಯಾಚಿತ್ರಗಳು ಹಾಗೂ ಅವರ ಮಗನ ಹುಟ್ಟುಹಬ್ಬ ಸಮಾರಂಭದಲ್ಲಿ ತೆಗೆಯಲಾಗಿದ್ದ ಛಾಯಾಚಿತ್ರಗಳನ್ನು ತೋರಿಸಿದ್ದೆವು. ಆ ಛಾಯಾಚಿತ್ರಗಳನ್ನು ನೋಡಿದ ಮಂಜುನಾಥ್, ಆ ಮಹಿಳೆ ಈ ಛಾಯಾಚಿತ್ರಗಳಲ್ಲಿ ಇಲ್ಲ ಎಂದಿದ್ದರು. ಹೀಗಾಗಿ ಆ ಮಹಿಳೆ ಯಾರು ಎಂದು ಪತ್ತೆ ಹಚ್ಚಲು ಮೂರ‌್ನಾಲ್ಕು ದಿನ ಅವರನ್ನು ವಿಚಾರಣೆಗೆ ಒಳಪಡಿಸಬೇಕಾಯಿತು' ಎಂದು ಪೊಲೀಸರು ಹೇಳಿದ್ದಾರೆ.

ಬನಶಂಕರಿ ವಿದ್ಯುತ್ ಚಿತಾಗಾರದಲ್ಲಿ ಶುಕ್ರವಾರ ಸಂಜೆ ಮೃತರ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT