ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಾಹುತಿ ದಾಳಿ ಸಾಧ್ಯತೆ: ಕಟ್ಟೆಚ್ಚರ

Last Updated 6 ಜೂನ್ 2011, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ಅಮೆರಿಕದ ಡ್ರೋಣ್ ದಾಳಿಗೆ ಕುಖ್ಯಾತ ಉಗ್ರ ಇಲ್ಯಾಸ್ ಕಾಶ್ಮೀರಿ ಬಲಿಯಾದ ಹಿನ್ನೆಲೆಯಲ್ಲಿ ಸೇಡು ತೀರಿಸಿಕೊಳ್ಳುವ ಸಲುವಾಗಿ ಅಲ್ ಖೈದಾ ಆತ್ಮಾಹುತಿ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳಿರುವುದರಿಂದ ಪಾಕ್ ರಾಜಧಾನಿ ಇಸ್ಲಾಮಾಬಾದ್ ಮತ್ತು ದೇಶದ ಉತ್ತರ ಭಾಗಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.

ಇಸ್ಲಾಮಾಬಾದ್, ಪಂಜಾಬ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳಲ್ಲಿ ತಾಲಿಬಾನ್ ಮತ್ತು ಅಲ್ ಖೈದಾ ಉಗ್ರರು ದಾಳಿ ನಡೆಸುವ ಸಾಧ್ಯತೆಗಳಿವೆ ಎಂದು ಬೇಹುಗಾರಿಕಾ ವರದಿಗಳು ಎಚ್ಚರಿಕೆ ನೀಡಿರುವುದರಿಂದ ಒಳಾಡಳಿತ ಸಚಿವಾಲಯದ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಘಟಕವು (ಎನ್‌ಸಿಎಂಸಿ) ಈ ಭಾಗಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಕಾನೂನು ಜಾರಿ ಸಂಸ್ಥೆಗಳಿಗೆ ಸೂಚಿಸಿದೆ.

ಭಯೋತ್ಪಾದಕರು ಆಯ್ದ ಸ್ಥಳಗಳಲ್ಲಿ ಮೋಟಾರ್ ಸೈಕಲ್ ಆತ್ಮಾಹುತಿ ಬಾಂಬ್ ದಾಳಿ ನಡೆಸಲು ಸಂಚು ರೂಪಿಸಿವೆ. ಈ ಹಿನ್ನೆಲೆಯಲ್ಲಿ ಮಿಲಿಟರಿ ಘಟಕಗಳು ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸುವಂತೆ ಎನ್‌ಸಿಎಂಸಿ ನಿರ್ದೇಶಿಸಿದೆ ಎಂದು ದಿ ಡಾನ್ ಪತ್ರಿಕೆ ವರದಿ ಮಾಡಿದೆ.

ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿಗಳಲ್ಲಿ ದಾಳಿ ನಡೆಸಲು ಐದರಿಂದ ಹತ್ತು ತಾಲಿಬಾನ್ ಉಗ್ರರು ಸಿದ್ಧತೆ ನಡೆಸಿದ್ದಾರೆ. ಪಾಕ್‌ನ ಮದ್ದುಗುಂಡು ತಯಾರಿಕಾ ಕೇಂದ್ರ ಮತ್ತು ಸಂಜ್ವಾಲ್‌ನಲ್ಲಿನ  ಶಸ್ತ್ರಾಸ್ತ್ರ ಕಾರ್ಖಾನೆ ಮೇಲೆ ದಾಳಿ ನಡೆಸಲು ತೆಹ್ರೀಕ್-ಎ-ತಾಲಿಬಾನ್ ಸಂಘಟನೆಯ ಉಗ್ರ ಇಹ್ಸಾನ್ ಚೋಟಾ ಉಸ್ತಾದ್ ಸಂಚು ರೂಪಿಸಿದ್ದಾನೆ ಎಂದು ಬೇಹುಗಾರಿಕಾ ಪಡೆಗಳು ಮಾಹಿತಿ ನೀಡಿವೆ ಎಂಬುದಾಗಿ ವರದಿ ತಿಳಿಸಿದೆ.

`ಕಾಶ್ಮೀರಿ ಹತ್ಯೆಗೆ ಪಾಕ್ ಸಹಕಾರ~
ಉಗ್ರ ಇಲ್ಯಾಸ್ ಕಾಶ್ಮೀರಿ ಹತ್ಯೆಗೆ ಅಮೆರಿಕಕ್ಕೆ ಪಾಕಿಸ್ತಾನ ಸಹಕಾರ ನೀಡಿತ್ತು ಎಂದು ಹೇಳಲಾಗಿದೆ.
`ಕಾಶ್ಮೀರಿ ವಿರುದ್ಧ ಅಮೆರಿಕ ನಡೆಸಿದ ಡ್ರೋಣ್ ದಾಳಿಯಲ್ಲಿ ಐಎಸ್‌ಐ ಪ್ರಮುಖ ಪಾತ್ರವಹಿಸಿರುವುದು ಖಚಿತ~ ಎಂದು ಪಾಕ್‌ನ ಮಾಜಿ ಹಿರಿಯ ಸೇನಾಧಿಕಾರಿ ಶೌಕತ್ ಖಾದಿರ್ ಖಾಸಗಿ ಟಿವಿ ವಾಹಿನಿಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

`ಅಮೆರಿಕ ತನಗೆ ಬೇಕಾದ ಉಗ್ರರ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದೆ. ಆ ಪಟ್ಟಿಯಲ್ಲಿ ಯಾವ ಉಗ್ರನ ಬೇಟೆಗೆ ಹೆಚ್ಚು ಆದ್ಯತೆ ಕೊಟ್ಟಿರಬಹುದು ಎಂಬುದು ಗೊತ್ತಿಲ್ಲ. ಆದರೆ ಪಾಕಿಸ್ತಾನದ ದೃಷ್ಟಿಯಲ್ಲಿ ಇಲ್ಯಾಸ್ ಕಾಶ್ಮೀರಿ ಮೊದಲಿಗನಾಗಿದ್ದ~ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT