ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಕಟ್ಟಡ ನೆಲಸಮಕ್ಕೆ ಶಿಫಾರಸು

Last Updated 16 ಜನವರಿ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಗರಣದ ಸುಳಿಯಲ್ಲಿ ಸಿಲುಕಿರುವ ಆದರ್ಶ ವಸತಿ ಸೊಸೈಟಿಯನ್ನು ಕೇಂದ್ರ ಪರಿಸರ ಸಚಿವಾಲಯ ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದೆ. ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿರುವ 31 ಅಂತಸ್ತುಗಳ ಕಟ್ಟಡ ‘ಅನಧಿಕೃತ’ವಾಗಿದ್ದು, ಅದನ್ನು ಮೂರು ತಿಂಗಳೊಳಗೆ ಸಂಪೂರ್ಣವಾಗಿ ಕೆಡವಲು ಸಚಿವಾಲಯ ಶಿಫಾರಸು ಮಾಡಿದೆ.

ವಿವಾದತ್ಮಕವಾದ ಈ ಕಟ್ಟಡವನ್ನು ಕರವಾಳಿ ಪ್ರದೇಶದ ಪರಿಸರ ನಿಯಮ(ಸಿಆರ್‌ಝೆಡ್)ಗಳನ್ನು ಮೀರಿ ನಿರ್ಮಿಸಲಾಗಿದೆ. ಆದ್ದರಿಂದ ಇದನ್ನು ನೆಲಸಮ ಮಾಡಿ, ಈ ಸ್ಥಳ ಮೊದಲು ಹೇಗೆ ಇತ್ತೋ ಹಾಗೆ ಉಳಿಸಿಕೊಳ್ಳಬೇಕು ಎಂದು ಪರಿಸರ ಸಚಿವಾಲಯವು ಈ ಪ್ರಕರಣಕ್ಕೆ ತನ್ನ ಅಂತಿಮ ಆದೇಶ ನೀಡಿದೆ. ಈ ಆದೇಶವನ್ನು ಆದರ್ಶ ವಸತಿ ಸೊಸೈಟಿಯು ಮೂರು ತಿಂಗಳೊಳಗೆ ಪಾಲಿಸಬೇಕು. ಇಲ್ಲದಿದ್ದರೆ ಪರಿಸರ ಸಂರಕ್ಷಣೆ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು ಎಂದು ಪರಿಸರ ಸಚಿವಾಲಯ ಎಚ್ಚರಿಕೆಯನ್ನೂ ನೀಡಿದೆ.

‘ಆದರ್ಶ ಸಹಕಾರ ವಸತಿ ಸೊಸೈಟಿಯು ಈ ಕಟ್ಟಡ ನಿರ್ಮಿಸುವ ಪೂರ್ವದಲ್ಲಿ 1991ರಲ್ಲಿ ಜಾರಿಗೆ ಬಂದ ಸಿಆರ್‌ಝೆಡ್ ನಿಯಮಗಳ ಅಡಿಯಲ್ಲಿ ಅನುಮತಿ ಪಡೆದಿಲ್ಲ. ಕಾನೂನುಗಳನ್ನು ಉಪೇಕ್ಷಿಸುವುದು ಸಹಿಸಲಾಗದು ಮತ್ತು ಅದು ಕ್ಷಮೆಗೂ ಅರ್ಹವಲ್ಲ’ ಎಂದು ಪರಿಸರ ಖಾತೆ ಸಚಿವ ಜೈರಾಂ ರಮೇಶ್ ಸಚಿವಾಲಯದ ಅಂತರ್ಜಾಲದಲ್ಲಿ ಪ್ರಕಟವಾಗಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ಆದೇಶ ನೀಡುವುದಕ್ಕೂ ಮುಂಚೆ ಮೂರು ಪ್ರಮುಖ ಅಂಶಗಳು ಚರ್ಚೆಗೆ ಬಂದವು. ಇಡೀ ಕಟ್ಟಡವನ್ನು ನೆಲಸಮ ಮಾಡುವುದು, ನಿಯಮ ಮೀರಿ ಕಟ್ಟಲಾಗಿರುವ ಕಟ್ಟಡದ ಭಾಗವನ್ನಷ್ಟೇ ಒಡೆದು ಹಾಕುವುದು ಮತ್ತು ಇಡೀ ಕಟ್ಟಡವನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಂಡು ಅದನ್ನು ಸಾರ್ವಜನಿಕರ ಉಪಯೋಗಕ್ಕೆ ಬಳಸುವುದು. ಇದರಲ್ಲಿ ಮೊದಲನೆಯ ಅಂಶವೇ ಯುಕ್ತ ಎನಿಸಿದ್ದರಿಂದ ಅದನ್ನೆ ಆಯ್ಕೆ ಮಾಡಲಾಯಿತು’ ಎಂದು ಹೇಳಿದ್ದಾರೆ.

‘ಎರಡನೇ ಅಂಶವಾದ ನಿಯಮ ಮೀರಿ ಕಟ್ಟಲಾಗಿರುವ ಕಟ್ಟಡದ ಭಾಗವನ್ನಷ್ಟೇ ಒಡೆದು ಹಾಕುವ ನಿರ್ಧಾರ ಈ ಪ್ರಕರಣದಲ್ಲಿ ಸರಿಯಾದ ತೀರ್ಮಾನ ಎನಿಸುವುದಿಲ್ಲ ಆದ್ದರಿಂದ ಅದನ್ನು ಕೈಬಿಡಲಾಯಿತು. ಹಾಗೆೆಯೇ ಕಟ್ಟಡವನ್ನು ಸರ್ಕಾರ ವಶ ಪಡಿಸಿಕೊಳ್ಳುವ ಅಂಶ ಮೊದಲು ಪರಶೀಲನೆಗೆ ಬಂದರೂ ನಂತರ ಅದನ್ನೂ ಕೈಬಿಡಲಾಯಿತು. ಏನೇ ಆದರೂ ಈ ಕಟ್ಟಡ ಕಡೆಗೆ ಬಳಕೆಯಾಗುವುದು ಸಾರ್ವಜನಿಕರ ಹಿತಾಸಕ್ತಿಗೆ. ಆದ್ದರಿಂದ ಈ ತೀರ್ಮಾನ ಕೂಡ ಸಮಂಜಸವಲ್ಲವೆಂದು ತಳ್ಳಿಹಾಕಲಾಯಿತು’  ಎಂದಿದ್ದಾರೆ.

‘ಸೊಸೈಟಿಯು ಬೇಕಾಬಿಟ್ಟಿಯಾಗಿ ನಿಯಮಗಳನ್ನು ಗಾಳಿಗೆ ತೂರಿದೆ. ಮುಂದೆ ಇಂಥದ್ದೇ ಪ್ರಕರಣಗಳು ನಡೆಯಬಹುದು. ಹಾಗಾಗಿ ದಂಡವಿಧಿಸುವುದು ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಕಟ್ಟಡ ನೆಲಸಮ ಮಾಡುವಂತೆ ನಿಲುವು ತಳೆಯಲಾಯಿತು. ಬೇರೆ ಯಾವುದು ನಿರ್ಧಾರ ಕೈಗೊಂಡಿದ್ದರೆ ಅದು ಸುಪ್ರೀಂ ಕೋರ್ಟ್ ಮತ್ತು ವಿವಿಧ ಹೈ ಕೋರ್ಟ್‌ಗಳು ಪರಿಸರ ಸಂರಕ್ಷಣೆ ಬಗ್ಗೆ ನೀಡಿರುವ ತೀರ್ಪಿಗೆ ಅಗೌರವ ತರುತ್ತಿತ್ತು’ ಎಂದಿದ್ದಾರೆ.

ಈ ಪ್ರಕರಣವನ್ನು ‘ಪರಿಸರದ ಮೇಲೆ ಪರಿಣಾಮ ಬೀರುವ ಅಂಶ ನಿರ್ಧಾರ’(ಇಐಎ) ಮಾಡುವ ತಜ್ಞರ ಸಮಿತಿ ನೀಡಿದ ವರದಿಯ ಮೇಲೆ ಇತ್ಯರ್ಥ ಪಡಿಸಲಾಗಿದೆ.
ಈ ಸಮಿತಿಯನ್ನು ವಿಭಾಗೀಯ ಸಲಹೆಗಾರರಾದ ನಳಿನಿ ಭಟ್. ‘ಆದರ್ಶ ವಸತಿ ಸೊಸೈಟಿಯ ಈ ಕಟ್ಟಡ ನಿಮಾರ್ಣಕ್ಕೆ ಮುಂಚೆ ಅಗತ್ಯವಾದ ಅನುಮತಿಗಳನ್ನು ಪಡೆದುಕೊಂಡಿಲ್ಲ. ಆದ್ದರಿಂದ ಇದು ಅನಧಿಕೃತ ನಿರ್ಮಾಣವಾಗಿದೆ. ಹಾಗಾಗಿ ಇದನ್ನು ಸಂಪೂರ್ಣವಾಗಿ ಕೆಡವಬೇಕೆಂದು’ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಿಯಮ ಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡಿದ್ದರಿಂದ ಪರಿಸರ ಸಚಿವಾಲಯವು ನ. 12, 2010ರಂದು ಆದರ್ಶ ವಸತಿ ಸೊಸೈಟಿಗೆ ಶೋಕಾಸ್ ನೋಟೀಸ್ ಜಾರಿ ಮಾಡಿತ್ತು.

ಹಿನ್ನೆಲೆ: ಕರಾವಳಿಯ ಸೂಕ್ಷ್ಮ ಪ್ರದೇಶವೆಂದು ರಕ್ಷಣಾ ಇಲಾಖೆ ಪರಿಗಣಿಸಿರುವ ಮುಂಬೈನ  ಪ್ರತಿಷ್ಠಿತ ಕೊಲ್ಬಾ ಪ್ರದೇಶದಲ್ಲಿ ಈ ಆದರ್ಶ ವಸತಿ ಸೊಸೈಟಿ ಕಟ್ಟಡ ನಿರ್ಮಿಸಲಾಗಿದೆ.

ಕಾರ್ಗಿಲ್ ಯುದ್ಧದ ಯೋಧರು ಮತ್ತು ಯುದ್ಧದಲ್ಲಿ ಮಡಿದ ಸೈನಿಕರ ಕುಟುಂಬದವರಿಗೆ ವಸತಿ ಕಲ್ಪಿಸುವ ಯೋಜನೆ ಇದಾಗಿದೆ. ಆದರೆ ಈ ವಸತಿ ಸಮುಚ್ಚಯದಲ್ಲಿ ರಾಜಕಾರಣಿಗಳು, ಸೇನೆಯ ಹಿರಿಯ ಅಧಿಕಾರಿಗಳು, ಅಧಿಕಾರಿ ವರ್ಗದವರು ಅಥವಾ ಅವರ ಕುಟುಂಬದವರು ಫಲಾನುಭವಿಗಳಾಗಿದ್ದರಿಂದ ಇದು ಹಗರಣವಾಗಿ ಪರಿಣಮಿಸಿತು. ವಸತಿ ಪಡೆದವರಲ್ಲಿ ಕಾಂಗ್ರೆಸ್‌ನ ಅಶೋಕ್ ಚವಾಣ್ ಅವರ ಸಂಬಂಧಿಕರ ಹೆಸರು ಕೇಳಿಬಂದಿದ್ದರಿಂದ ಅವರು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾಯಿತು.

ಆದರ್ಶ ವಸತಿ ಸೊಸೈಟಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಮಹಾರಾಷ್ಟ್ರದ ಮಾಹಿತಿ ಹಕ್ಕು ಆಯೋಗದ ಅಧ್ಯಕ್ಷ ರಮಾನಂದ ತಿವಾರಿ ಅವರನ್ನು ಅಮಾನತು ಮಾಡುವಂತೆ ರಾಜ್ಯ ಸರ್ಕಾರ ಕಳೆದ ವಾರವಷ್ಟೆ ರಾಜ್ಯಪಾಲರಿಗೆ ಶಿಫಾರಸು ಮಾಡಿದೆ.ಮಹಾರಾಷ್ಟ್ರ ರಾಜ್ಯ ಮಾನವ ಹಕ್ಕು ಆಯೋಗದ ಸದಸ್ಯ ಸುಭಾಷ್ ಲಾಲ ಅವರ ಸಂಬಂಧೀಕರು ವಸತಿ ಪಡೆದವರ ಪಟ್ಟಿಯಲ್ಲಿದ್ದರಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

‘ಹೈಕೋರ್ಟ್‌ಗೆ ಮೊರೆ’: ‘ಪರಿಸರ ಸಚಿವಾಲಯ ಹೊರಡಿಸಿರುವ ಈ ಆದೇಶ ದುರುದ್ದೇಶದಿಂದ ಕೂಡಿದ್ದು, ಇದನ್ನು  ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು’ ಎಂದು ಸೊಸೈಟಿ ಪರ ವಕೀಲ   ಸತೀಶ್‌ಮಾನೆ ಶಿಂಧೆ ಹೇಳಿದ್ದಾರೆ.

ಶೀಘ್ರ ನಿರ್ಧಾರ: ಮುಂಬೈ (ಪಿಟಿಐ):ಆದರ್ಶ ವಸತಿ ಸೊಸೈಟಿಯ 31 ಅಂತಸ್ತುಗಳ ಕಟ್ಟಡವನ್ನು ನೆಲಸಮ ಮಾಡುವಂತೆ ಶಿಫಾರಸು ಮಾಡಿರುವ ಕೇಂದ್ರ ಪರಿಸರ ಸಚಿವಾಲಯದ ಆದೇಶದ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.

‘ಆದೇಶದ ಪ್ರತಿ ಇನ್ನೂ ಬಂದಿಲ್ಲ. ಆ ಪ್ರತಿ ಬಂದ ಮೇಲೆ ಅದನ್ನು ಅಧ್ಯಯನ ಮಾಡಿದ ನಂತರ ಈ ಬಗ್ಗೆ ಶೀಘ್ರವೇ ಒಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರದ ಪರಿಸರ ಖಾತೆ ಸಚಿವ ಸಂಜಯ್ ದೇವ್‌ತಲೆ ಭಾನುವಾರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT