ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿಲ್‌ಶಾಹಿ ಕಾಲದ ಕಾರಂಜಿ ಪತ್ತೆ

Last Updated 3 ಜನವರಿ 2011, 10:40 IST
ಅಕ್ಷರ ಗಾತ್ರ

ಹುಕ್ಕೇರಿ: 15ನೇ ಶತಮಾನದಲ್ಲಿ ಅಲಿ ಆದಿಲ್ ಶಹಾನು ಹುಕ್ಕೇರಿ ಪಟ್ಟಣ ವನ್ನು ಆಳಿದ ಇತಿಹಾಸವಿದೆ. ಜೊತೆಗೆ ಅವನ ಆಡಳಿತದ ಅವಧಿಯಲ್ಲಿ ನಿರ್ಮಿಸಿರುವ ಗೋಲಗುಮ್ಮಟ ಮತ್ತು ನೀರಿನ ಕಾರಂಜಿಗಳು ಪ್ರಸಿದ್ಧವಾದ ಸ್ಮಾರಕಗಳು ಈಗಲೂ ಇಲ್ಲಿ ನೋಡಲು ಸಿಗುತ್ತವೆ. ಆದರೆ ಆಗಿನ ಕಾಲದಲ್ಲಿ ಪಟ್ಟಣದ ವಿವಿಧ ಸ್ಥಳಗಳಲ್ಲಿ ನಿರ್ಮಿಸಿದ್ದ ಮಾಸಾಬಿ ಕಾರಂಜಿ, ಪೇಟೆ ಕಾರಂಜಿ, ಮೊಸಳೆ ಕಾರಂಜಿಗಳು ತಮ್ಮಷ್ಟಕ್ಕೆ ತಾವೇ ಉಕ್ಕಿ ಹರಿಯುತ್ತಿದ್ದವು. ಅದು ಹೇಗೆ ಎಂಬ ಪ್ರಶ್ನೆ ಇಂದಿಗೂ ಜನರಲ್ಲಿ ಕಾಡುತ್ತಿದ್ದವು. ಅದಕ್ಕೆ ಉತ್ತರವೆಂದರೆ ‘ಆಗಿನ ತಂತ್ರಜ್ಞರು ಭೂಮಿಯಲ್ಲಿ ಅಳವಡಿಸಿರುವ ಪೈಪುಗಳು’.

ಬೇರೆಡೆ ಜನರು ಬಾವಿಯಲ್ಲಿ ಇಳಿದು ನೀರು ತುಂಬಿದರೆ, ಹುಕ್ಕೇರಿಯಲ್ಲಿ ಮಾತ್ರ ಕಾರಂಜಿಗಳಿಗೆ ಮೆಟ್ಟಿಲು ಹತ್ತಿ ನೀರು ತುಂಬುವ ವ್ಯವಸ್ಥೆ ಇದೆ. ಆಗಿನ ಕಾಲದಲ್ಲಿ ಈ ಭಾಗದಲ್ಲಿ ಮಳೆಯಾದಾಗ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಕಡೆಯಿಂದ (ಎಲಿಮುನ್ನೋಳಿ, ಗಜಬಾರವಾಡಿ) ನೆಲದಲ್ಲಿ ಅಳವಡಿಸಿದ ಪೈಪುಗಳ ಮೂಲಕ ನೀರು ಹರಿದು ಬಂದು ಕಾರಂಜಿಗಳು ಸದಾ ತುಂಬಿ ಹರಿಯುತ್ತಿದ್ದವು ಎಂದು ಇಲ್ಲಿನ ಹಿರಿಯರು ನೋಡಿ ಆನಂದಿಸಿದ ದಿನಗಳನ್ನು ನೆನೆಯುತ್ತಾರೆ.

ನದಾಫ್ ಮನೆತನಕ್ಕೆ ಸೇರಿದ ಹೊಲವೊಂದರ ಕೆರೆಯಲ್ಲಿ ಬಿಸಿ ನೀರಿನ ಸಂಗ್ರಹವಾಗುತ್ತಿತ್ತು ಎಂದು ಹಿರಿಯರು ಹೇಳುತ್ತಾರೆ. ವೈಜ್ಞಾನಿಕವಾಗಿ ನಿರ್ಮಿಸಿದ ಆಗಿನ ಕಾಲದ ಕಾರಂಜಿಗಳು ಇಂದು ಕೇವಲ ಕುರುಹುಗಳಾಗಿ ಉಳಿದಿವೆ.

ಇತ್ತೀಚೆಗೆ ಪಟ್ಟಣ ಪಂಚಾಯ್ತಿ ವತಿಯಿಂದ ಮೊಸಳೆ ಕಾರಂಜಿ ಬಳಿ ಶೌಚಾಲಯ ನಿರ್ಮಿಸಲು ನೆಲ ಅಗೆಯುವಾಗ ಆಗಿನ ಕಾಲದಲ್ಲಿ ಹಾಕಿದ ಪೈಪುಗಳು ಕಂಡು ಬಂದಿವೆ. ಆ ಜಾಗೆಯಲ್ಲಿ ನೀರು ತುಂಬಿಕೊಂಡಿದೆ. ಅದರ ಪಕ್ಕವೆ ಮೊಸಳೆ ಕಾರಂಜಿ ಒಣಗಿ ನಿಂತಿದೆ. ಈಗ ಕಾರಂಜಿಗೆ ಸುತ್ತಲು ರಕ್ಷಣಾ ಗೋಡೆ ನಿರ್ಮಿಸಲಾಗುತ್ತಿದೆ. ಐತಿಹಾಸಿಕ ಕುರುಹುಗಳು ನಾಶವಾಗುವ ಮೊದಲು ಸದ್ಯದ ಎಂಜಿನಿಯರುಗಳು ಇತ್ತ ಕಡೆಗೆ ಗಮನ ಹರಿಸಿದ್ದಾರೆ.

‘15ನೇ ಶತಮಾನದಲ್ಲಿ ಯಾವ ರೀತಿಯಿಂದ ಪೈಪುಗಳನ್ನು ಅಳವಡಿಸಲಾಗಿತ್ತು ಮತ್ತು ಹೇಗೆ ನೈಸರ್ಗಿಕವಾಗಿ ನೀರು ಕೊಳವೆ ಮೂಲಕ ಹರಿದು ಬಂದು ಕಾರಂಜಿ ಸೇರುತ್ತಿತ್ತು’ ಎಂಬುದರ ಬಗ್ಗೆ ಅಧ್ಯಯನ ಮಾಡಲು ಆದ್ಯತೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT