ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಿವಾಸಿಗಳ ಸ್ಥಿತಿಗೆ `ಸುಪ್ರೀಂ' ಆತಂಕ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಕ್ಸಲ್‌ಪೀಡಿತ ರಾಜ್ಯಗಳ ಕೇಂದ್ರ ಕಾರಾಗೃಹಗಳಲ್ಲಿ ಇರುವ ವಿಚಾರಾಣಾಧೀನ ಆದಿವಾಸಿ  ಕೈದಿಗಳ ಸ್ಥಿತಿ ತುಂಬಾ ಗಂಭೀರವಾಗಿದೆ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್, ವಾಸ್ತವಿಕ ವರದಿ ಬಂದ ನಂತರ ಆದೇಶ ಹೊರಡಿಸುವುದಾಗಿ ತಿಳಿಸಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರರು ಬರೀ ಮಾಧ್ಯಮಗಳ ವರದಿಯನ್ನು ಆಧರಿಸಿದಂತಿದೆ. ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಿ ವಾಸ್ತವಿಕ ವರದಿಯ ಪ್ರಮಾಣ ಪತ್ರ  ಸಲ್ಲಿಸಿದರೆ ಸೂಕ್ತ ಆದೇಶ ಹೊರಡಿಸಲು ಸಾಧ್ಯ ಎಂದು ನ್ಯಾಯಮೂರ್ತಿ ಆರ್. ಎಂ. ಲೋಧಾ ನೇತೃತ್ವದ ನ್ಯಾಯಪೀಠವು ತಿಳಿಸಿದೆ.

ಮಾನವ ಹಕ್ಕುಗಳ ಹೋರಾಟ ವೇದಿಕೆಯ ಪರವಾಗಿ ಜಿನೇಂದ್ರ ಜೈನ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ನಕ್ಸಲ್‌ಪೀಡಿತ ರಾಜ್ಯಗಳಾದ ಛತ್ತೀಸಗಡ, ಮಧ್ಯಪ್ರದೇಶ, ಜಾರ್ಖಂಡ್ ಮತ್ತು ಪಶ್ಚಿಮಬಂಗಾಳದ ವಿವಿಧ ಜೈಲುಗಳಲ್ಲಿ ಸಾವಿರಾರು ಆದಿವಾಸಿಗಳು ವಿಚಾರಣೆ ಇಲ್ಲದೆ ಕತ್ತಲೆಯಲ್ಲಿ ದಿನ ದೂಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಸಮಾಜದ ಕೆಳಸ್ತರದ ವ್ಯಕ್ತಿಗಳ ಮೂಲಭೂತ ಹಕ್ಕಿನ ಪ್ರಶ್ನೆ ಇದಾಗಿರುವುದರಿಂದ ನಕ್ಸಲ್‌ಪೀಡಿತ ಎಂಟು ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಪಡೆಯಬೇಕು ಎಂದು ಅರ್ಜಿದಾರರ ಪರ ವಕೀಲರಾದ ಕೆ. ಆರ್. ಚಿತ್ರಾ ಅವರು ನ್ಯಾಯಪೀಠವನ್ನು ಒತ್ತಾಯಿಸಿದರು.

ಜೈಲಿನಲ್ಲಿರುವ ಎಷ್ಟೋ ಆದಿವಾಸಿಗಳಿಗೆ ಏಕೆ ಬಂಧನದಲ್ಲಿ ಇಡಲಾಗಿದೆ ಎಂಬುದು ಗೊತ್ತಿಲ್ಲ. ಅನೇಕ ಜನರಿಗೆ ಸರಿಯಾದ ವಕೀಲರ ಸೇವೆ ಸಿಕ್ಕಿಲ್ಲ. ಈ ಆದಿವಾಸಿಗಳು ಗೊಂದಿ ಮತ್ತು ಹಳ್ಬಿ ಭಾಷೆಗಳನ್ನು ಮಾತ್ರ ಮಾತನಾಡುವುದರಿಂದ ಅವರ ಹೇಳಿಕೆಗಳನ್ನು ಭಾಷಾಂತರಿಸುವವರು ಎಲ್ಲಾ ನ್ಯಾಯಾಲಯಗಳಲ್ಲಿ ಇಲ್ಲ ಎಂಬುದನ್ನು ವಕೀಲರು ನ್ಯಾಯಪೀಠದ ಗಮನಕ್ಕೆ ತಂದಿದ್ದಾರೆ.

ಜೈಲಿನಲ್ಲಿ ಕೊಳೆಯುತ್ತಿರುವ ಈ ಆದಿವಾಸಿಗಳ ವಿಚಾರಣೆಯನ್ನು ತ್ವರಿತ ನ್ಯಾಯಾಲಯಗಳಲ್ಲಿ ಸೂಕ್ತ ರೀತಿಯಲ್ಲಿ ನಡೆಸುವುದನ್ನು ಉಸ್ತುವಾರಿ ಮಾಡಲು ಹಿರಿಯ ನ್ಯಾಯವಾದಿಗಳ ಆಯೋಗವನ್ನು ರಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT