ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೀತೇ ಮಂಗಳ ಧರೆಯಂಥ ಅಂಗಳ?

Last Updated 15 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

`ಮಂಗಳ~. ಅದು ನಮ್ಮ ಸೌರವ್ಯೆಹದ ಪ್ರಸಿದ್ಧ `ಕೆಂಪು ಗ್ರಹ~ (ಚಿತ್ರ-1). ಸೂರ್ಯನ ಸುತ್ತ ಬುಧ, ಶುಕ್ರ, ಭೂಮಿ ನಂತರದ ಪಥದಲ್ಲಿರುವ (ಚಿತ್ರ-3) ಮಂಗಳ ಧರೆಯ ನೆರೆಯ ಗ್ರಹ. ಸೂರ್ಯನಿಂದ ಸರಾಸರಿ 228 ದಶಲಕ್ಷ ಕಿ.ಮೀ. ದೂರದಲ್ಲಿರುವ ಈ ಗ್ರಹ ಭೂಮಿಯಿಂದ ಸರಾಸರಿ 78 ದಶಲಕ್ಷ ಕಿ.ಮೀ. ಅಂತರದಲ್ಲಿ ನೆಲೆಗೊಂಡಿದೆ; ಧರೆಯಂತೆಯೇ ಸೂರ್ಯನನ್ನು ಪರಿಭ್ರಮಿಸುತ್ತಿದೆ.

ಭೂ ನೆರೆಯ ಗ್ರಹವಾಗಿರುವುದಿರಲಿ, ವಾಸ್ತವವಾಗಿ ಭೂಮಿಯಂಥದೇ ಗ್ರಹವಾಗಬಲ್ಲ ಗುಣಗಳೂ ಮಂಗಳಗ್ರಹಕ್ಕಿದೆ. ಅದೂ ಭೂಮಿಯಂತೆಯೇ ಗಟ್ಟಿ ನೆಲದ ಗ್ರಹ; ಅಲ್ಲೂ ಬೇಕಾದಷ್ಟು ನೀರಿನ ದಾಸ್ತಾನಿದೆ. ವ್ಯೋಮನೌಕೆಗಳು ಮತ್ತು ಮಂಗಳನ ನೆಲದ ಮೇಲೇ ಇಳಿದು ಶೋಧಿಸಿರುವ `ಲ್ಯಾಂಡರ್~ಗಳು (ಚಿತ್ರ 7, 9) ಅದನ್ನು ಪತ್ತೆಹಚ್ಚಿವೆ. ಮಂಗಳ ಗ್ರಹದ ಬಾಲ್ಯದ ಕಾಲದಲ್ಲಿ ಈ ಗ್ರಹದಲ್ಲಿ ನದಿಗಳು ಪ್ರವಹಿಸುತ್ತ ಭಾರೀ ಸರೋವರಗಳೂ ಇದ್ದುದ್ದರ ಸ್ಪಷ್ಟ ಕುರುಹುಗಳು ಸಿಕ್ಕಿವೆ (ಚಿತ್ರ-4).

ಭೂಮಿಯಲ್ಲಿರುವಂತಹವೇ ತಗ್ಗು-ತಿಟ್ಟುಗಳ ಮೇಲ್ಮೈ ಲಕ್ಷಣಗಳ ಮಂಗಳ ಗ್ರಹ (ಚಿತ್ರ-6) ಸೂರ್ಯನ ಸುತ್ತಲಿನ ವಿಹಿತ ತಾಪಮಾನ ಪ್ರದೇಶದ ಸನಿಹದಲ್ಲೇ ನೆಲೆಗೊಂಡಿದೆ ಕೂಡ (ಚಿತ್ರ-3). ಹಾಗೆಲ್ಲ ಇದ್ದೂ ಮಂಗಳಗ್ರಹ ಪೃಥ್ವಿಯಂತಾಗಿಲ್ಲ-ಏಕೆ?
ಅದಕ್ಕೆ ಏಕೈಕ ಕಾರಣ ಈ ಗ್ರಹದ ದುರ್ಬಲ ಗುರುತ್ವ ಶಕ್ತಿ. ಮಂಗಳನ ದ್ರವ್ಯರಾಶಿ ಧರೆಯ ಶೇಕಡ ಹತ್ತರಷ್ಟಿದೆ ಅಷ್ಟೆ! (ಭೂಮಿ-ಮಂಗಳ ಗಾತ್ರಗಳ ಹೋಲಿಕೆ ಚಿತ್ರ-2ರಲ್ಲಿದೆ). ಮಂಗಳ ಗ್ರಹದ್ದು ಭೂಮಿಯ ಶೇಕಡ ನಲವತ್ತರಷ್ಟು ಕ್ಷೀಣ ಗುರುತ್ವ. ಹಾಗಾಗಿ ಜನನ ಕಾಲದಿಂದಲೇ ಮಂಗಳನ ಬಹುಪಾಲು `ವಾಯುಮಂಡಲ~ ನಿಧಾನವಾಗಿ ಬಾಹ್ಯಾಕಾಶಕ್ಕೆ ಸೋರಿಹೋಗಿದೆ. ಒತ್ತಡದ ಅನಿಲ ಕವಚ ಇಲ್ಲದ್ದರಿಂದ ಸೌರತಾಪವನ್ನು ಉಳಿಸಿಕೊಳ್ಳಲಾಗದೆ ಕ್ಷಿಪ್ರವಾಗಿ ತಣಿದು ಶೀತಲ ಗ್ರಹವಾಗಿದೆ. ಅದರ ಈಗಿನ ಸರಾಸರಿ ಉಷ್ಣತೆ ಶೂನ್ಯಕ್ಕಿಂತ 65 ಡಿಗ್ರಿ ಸೆಲ್ಷಿಯಸ್ ಕಡಿಮೆ. ಆದ್ದರಿಂದಲೇ ಮಂಗಳನ ಜನದಾಸ್ತಾನೆಲ್ಲ ಘನರೂಪದಲ್ಲಿ ನೆಲದಡಿಯಲ್ಲೂ ಧ್ರುವಗಳಲ್ಲೂ ಸೇರಿಹೋಗಿದೆ. ಮಂಗಳನ ಮೇಲ್ಮೈಯೆಲ್ಲ ಶೀತದಿಂದ ಕೊರಡಾದ ಬರಡು ನೆಲ. ಎಲ್ಲೆಲ್ಲೂ ಕೆಂಪು ಧೂಳು ಕವಿದ ವಿಲಕ್ಷಣ ಪರಿಸರ.

ಮಂಗಳ ಗ್ರಹದ ಸದ್ಯದ ಸ್ಥಿತಿ ಏನೇ ಇರಲಿ. ಅತ್ಯಾಶ್ಚರ್ಯ ಏನೆಂದರೆ ಭೌಮಿಕ ಗ್ರಹವಾಗಿರವ ಧಾರಾಳ ಜಲ ದಾಸ್ತಾನಿರುವ ಈ ಗ್ರಹವನ್ನು ಭೂಸದೃಶವಾಗುವಂತೆ ಜೀವಲೋಕವಾಗುವಂತೆ ಪರಿವರ್ತಿಸಬಹುದು. ಕೇವಲ ಕಟ್ಟುಕಥೆ ಎನಿಸುವಂತಿರುವ ಆದರೆ ಸಂಪೂರ್ಣ ವಾಸ್ತವಿಕವಾದ ಅಂಥದೊಂದು ವೈಜ್ಞಾನಿಕ ಯೋಜನೆಯ ರೂಪುರೇಷೆಗಳು ಸಿದ್ಧವಾಗಿವೆ ಕೂಡ. ಖಚಿತ ಸಾಧ್ಯತೆಯ ಆ ಯೋಜನೆ ಜಾರಿಗೆ ಬೇಕಾದ ಅಗತ್ಯಗಳು ಎರಡು: `ಆಕಾಶದೆತ್ತರ ಹಣ ಮತ್ತು ಕನಿಷ್ಠ ಒಂದು ಸಾವಿರ ವರ್ಷ ಕಾಲಾವಧಿ~!

ಮಂಗಳ ಗ್ರಹವನ್ನು ಧರೆಯಂತೆ ರೂಪಾಂತರಿಸುವ ಈ ಯೋಜನೆಯ ಅತ್ಯಂತ ಪ್ರಧಾನ ಕೆಲಸ ಮಂಗಳನ ನೆಲದಲ್ಲೇ ಲಭ್ಯವಿರುವ ಇಂಗಾಲದ ಡೈ ಆಕ್ಸೈಡ್ (ಇಂಡೈ) ಅನಿಲವನ್ನು ಬಿಡುಗಡೆಗೊಳಿಸಿ ವಾಯುಮಂಡಲವನ್ನು ದಟ್ಟಗೊಳಿಸುವುದು. ಹಾಗೆ ಒತ್ತಡದ ಸಾಂದ್ರ ಅನಿಲ ಕವಚ ಬಂದೊಡನೆ ಮಂಗಳ ಉಲ್ಕಾ ಹಾವಳಿಯಿಂದ ಮುಕ್ತವಾಗುತ್ತದೆ. ಸೌರತಾಪವೂ ಸಂಗ್ರಹಗೊಂಡು ಈ ಶೀತಲ ಗ್ರಹ ಬೆಚ್ಚಗಾಗುತ್ತದೆ. ಆಗ ಸಹಜವಾಗಿಯೇ ಹಿಮರಾಶಿಗಳೆಲ್ಲ ಕರಗಿ ನೀರು ಹರಿಯತೊಡಗುತ್ತದೆ. ಆಗ ಸಸ್ಯಗಳನ್ನು ನೆಲೆಗೊಳಿಸಿದರೆ ವಾತಾವರಣಕ್ಕೆ ಆಮ್ಲಜನಕವೂ ಬೆರೆಯುತ್ತದೆ. ಮಂಗಳ ಧರೆಯಂಥ ಅಂಗಳವಾಗುತ್ತದೆ (ಚಿತ್ರ-11).

ಹೇಳಲು ಕೇಳಲು ತುಂಬ ಸರಳವಾದ ಈ ಇಡೀ ಕಾರ್ಯಕ್ರಮ ವಾಸ್ತವದಲ್ಲಿ ಬಹಳ ಸಂಕೀರ್ಣ. ಮೊದಲಿಗೆ ತಂತ್ರಜ್ಞರು ಮತ್ತೆ ಮತ್ತೆ ಮಂಗಳನಿಗೆ ಯಾನಮಾಡಿ ಅಲ್ಲಿ ವಾಸಯೋಗ್ಯ ನೆಲೆಯೊಂದನ್ನು ನಿರ್ಮಿಸಬೇಕು (ಚಿತ್ರ-8). ಸದ್ಯದ ವಾಹನಗಳಲ್ಲಿ (ಚಿತ್ರ-5) ಭೂಮಿಯಿಂದ ಮಂಗಳನನ್ನು ತಲುಪಲು ಆರು ತಿಂಗಳ ಅವಧಿ ಬೇಕು. ಆದ್ದರಿಂದ ಇನ್ನೂ ಬಹಳ ಅಧಿಕ ವೇಗದ, ಭಾರೀ ಹೊರೆ ಸಾಗಿಸಬಲ್ಲ ನೌಕೆಗಳನ್ನು ನಿರ್ಮಿಸುವುದು (ಚಿತ್ರ-12) ಬಹುಸೂಕ್ತ.

ಹಾಗೆ ಮಂಗಳನ ಮೇಲೆ ಅಲ್ಲಲ್ಲಿ ವಿಧ ವಿಧ ನೆಲೆಗಳಲ್ಲಿ (ಚಿತ್ರ 8, 10) ಇಳಿವ ತಂತ್ರಜ್ಞರು ವಿಶೇಷ ಕೈಗಾರಿಕೆಗಳನ್ನು ಸ್ಥಾಪಿಸಿ ಮಂಗಳನಲ್ಲಿ ಇಂಡೈನಂಥ ಹಸಿರು ಮನೆ ಅನಿಲವನ್ನೂ, ಪರ್‌ಫೂರೋ ಕಾರ್ಬನ್‌ಗಳು, ಆಲ್‌ಕೈಲ್ ಹಾಲೈಡ್ ಇತ್ಯಾದಿ ಸೂಪರ್ ಹಸಿರು ಮನೆ ಅನಿಲಗಳನ್ನೂ ಬಿಡುಗಡೆಗೊಳಿಸಬೇಕು. ಆಗ ಆ ನಂತರದ ಒಂದು ನೂರು ವರ್ಷಗಳ ಅವಧಿಯಲ್ಲಿ ಮಂಗಳನ ವಾಯುಮಂಡಲ ದಟ್ಟವಾಗಿ ಅಲ್ಲಿನ ಪರಿಸರ ಬೆಚ್ಚಗಾಗಿ ಹಿಮ ಕರಗತೊಡಗಿ ನದಿಗಳೂ ವಿಶಾಲ ಸರೋವರಗಳೂ ಮೈದಳೆಯುತ್ತವೆ.

ಹಾಗಾದೊಡನೆ ಸೂಕ್ತ ಜಲಭರಿತ ತಾಣಗಳಲ್ಲಿ ಸೂಕ್ಷ್ಮ ಸಸ್ಯಗಳನ್ನೂ, ಶೈವಲ ಲೈಕೆನ್‌ಗಳನ್ನೂ ಹರಡಿದರೆ ಅವು ದ್ಯುತಿ ಸಂಶ್ಲೇಷಣೆ ನಡೆಸಿ ವರ್ಧಿಸಿ ಸುಮಾರು ಎರಡು ನೂರು ವರ್ಷಗಳಲ್ಲಿ ವಾಯುಮಂಡಲಕ್ಕೆ ಆಮ್ಲಜನಕ ತುಂಬ ತೊಡಗುತ್ತವೆ; ಅಲ್ಲಲ್ಲಿ ಅಷ್ಟಿಷ್ಟು ಮಳೆಯೂ ಬೀಳತೊಡಗುತ್ತದೆ. ಅಲ್ಲಿಂದಾಚೆ ನಾಲ್ಕುನೂರು ವರ್ಷಗಳಲ್ಲಿ ಮಂಗಳನ ನೆಲದಲ್ಲಿ ಮಣ್ಣು ರೂಪುಗೊಳ್ಳುತ್ತದೆ. ಆಗ ನೆಲ ಸಸ್ಯಗಳನ್ನು ನೆಟ್ಟು ಮುಂದೆ ಮುನ್ನೂರು ವರ್ಷಗಳಲ್ಲಿ ಅಲ್ಲಿ ಅಡವಿಗಳನ್ನೂ ಹುಲ್ಲು ಬಯಲುಗಳನ್ನೂ ರೂಪಿಸಬಹುದು. ಹಾಗೆ ಮಂಗಳನಲ್ಲಿ ಅಲ್ಲಲ್ಲಿ ಭೂಸದೃಶ ಸಸ್ಯಭರಿತ ಪರಿಸರವನ್ನು ಸೃಜಿಸಬಹುದು. ಹಾಗೆಲ್ಲ ಆದರೂ ಮನುಷ್ಯರು ನೇರವಾಗಿ ಉಸಿರಾಡಬಲ್ಲಂತಹ ವಾಯುಮಂಡಲ ಮೈದಾಳಲು ಕನಿಷ್ಟ ಒಂದು ಲಕ್ಷ ವರ್ಷ ಬೇಕು. ಎಂಥ ಕಾರ್ಯಕ್ರಮ!

ಮಂಗಳ ಗ್ರಹವನ್ನು ಧರೆಯಂಥ ಅಂಗಳವನ್ನಾಗಿಸುವ ಈ ಪರಮ ಸೋಜಿಗದ ಕಾರ್ಯಕ್ರಮದಲ್ಲಿ ಒಂದು ವಿಪರ್ಯಾಸ ಇದೆ. ಮಂಗಳನಲ್ಲಿ ಏನೆಲ್ಲ ಬದಲಾವಣೆಗಳನ್ನು ತಂದರೂ ಅದರ ದ್ರವ್ಯರಾಶಿಯನ್ನು ಹೆಚ್ಚಿಸುವುದು ಸಾಧ್ಯವೇ ಇಲ್ಲ. ಹಾಗಾಗಿ ಈಗಿರುವಂತಹದ್ದೇ ಕ್ಷೀಣ ಗುರುತ್ವದಿಂದಾಗಿ ಹೊಸದಾಗಿ ಸೃಜಿಸಿದ ಪ್ರಾಣವಾಯು ಸಹಿತ ದಟ್ಟ ವಾಯುಮಂಡಲ ತಂತಾನೇ ಸೋರಿ ಸೋರಿ ಕಡೆಗೆ ಸುಮಾರು ಒಂದು ನೂರು ದಶಲಕ್ಷ ವರ್ಷಗಳ ಸುಮಾರಿಗೆ ಪೂರ್ಣ ಇಲ್ಲವಾಗಿ ಮಂಗಳ ಗ್ರಹ ಮತ್ತೆ ಶೀತ ಮುಸುಕಿದ ಮೃತ ಗ್ರಹ ಆಗುತ್ತದೆ. ಸದ್ಯದ ಸ್ಥಿತಿಗೇ ಮರಳುತ್ತದೆ. ಎಂಥ ವ್ಯರ್ಥ! ಎಂಥ ದುರಂತ!

ಅದೆಲ್ಲ ಏನೇ ಇರಲಿ, ಈ ಚಿಂತನದಿಂದ ಒಂದು ಪಾಠ ಸ್ಪಷ್ಟ. ನೈಸರ್ಗಿಕವಾಗಿಯೇ ಜೀವಿವಿಹಿತವಾಗಿ, ಶಾಶ್ವತ ಜೀವಧಾರಕ ಸಾಮರ್ಥ್ಯ ಪಡೆದು, ಜೀವಿಭರಿತವಾಗಿರುವ ನಮ್ಮ ಭೂಮಿಯಂತಹ ಗ್ರಹ ಇಡೀ ವಿಶ್ವದಲ್ಲೇ ಇನ್ನೊಂದಿಲ್ಲ; ಮತ್ತೊಂದು ಇಂಥ ನೆಲೆಯ ನಿರ್ಮಾಣ ಸಾಧ್ಯವೂ ಇಲ್ಲ. ಹಾಗಿರುವಾಗ ಪೃಥ್ವಿಯನ್ನು ಕಿಂಚಿತ್ತೂ ಹಾಳು ಮಾಡದಿರುವುದು ಅತ್ಯವಶ್ಯ; ಅದು ನಮ್ಮೆಲ್ಲರ ಆದ್ಯ ಕರ್ತವ್ಯ ಕೂಡ, ಅಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT