ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಪ್ರಶ್ನಿಸಿ ಕೋರ್ಟ್‌ಗೆ `ಕುಸ್ಮಾ'

ಪಾಲಕರ ಸಂದರ್ಶನಕ್ಕೆ ನಿಷೇಧ
Last Updated 2 ಏಪ್ರಿಲ್ 2013, 19:25 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳಿಗೆ ಶಾಲೆಗಳಲ್ಲಿ ಪ್ರವೇಶ ನೀಡುವಾಗ ಪಾಲಕರನ್ನು ಬಗೆಬಗೆಯ ಪರೀಕ್ಷೆ, ಸಂದರ್ಶನಕ್ಕೆ ಒಡ್ಡಬಾರದು ಎನ್ನುವುದೂ ಸೇರಿದಂತೆ ವಿವಿಧ ನಿಯಮಗಳನ್ನು ರೂಪಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ, ಅನುದಾನರಹಿತ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ಕುಸ್ಮಾ) ಹೈಕೋರ್ಟ್ ಮೆಟ್ಟಿಲೇರಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಗೆ ನೋಟಿಸ್ ಜಾರಿಗೆ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

`ಖಾಸಗಿ ಅನುದಾನರಹಿತ ಶಾಲೆಗಳು ವಂತಿಗೆ ಸಂಗ್ರಹಿಸಬಾರದು. ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಪಾರದರ್ಶಕ ವ್ಯವಸ್ಥೆಯೊಂದರ ಮೂಲಕ ಪ್ರವೇಶ ನೀಡಬೇಕು' ಎಂದು ಮಾರ್ಚ್ 13ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ಕಡ್ಡಾಯ ಶಿಕ್ಷಣ ಹಕ್ಕು (ಆರ್‌ಟಿಇ) ಕಾಯ್ದೆಯ ವ್ಯಾಪ್ತಿಗೆ ಒಳಪಡದ ಶೇಕಡ 75ರಷ್ಟು ಸೀಟುಗಳಿಗೆ ಪ್ರವೇಶ ನೀಡುವಾಗ, ಖಾಸಗಿ ಶಾಲೆಗಳು ಯಾವುದೇ ಪಾರದರ್ಶಕ ನಿಯಮ ಅನುಸರಿಸುತ್ತಿಲ್ಲ. ಇದರ ಬದಲಿಗೆ, ಪಾರದರ್ಶಕ ನಿಯಮವೊಂದನ್ನು ಜಾರಿಗೆ ತಂದು, ಅದರ ಅನ್ವಯ ಸೀಟು ಹಂಚಿಕೆ ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಇದನ್ನು ಪ್ರಶ್ನಿಸಿ `ಕುಸ್ಮಾ' ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್. ಪಾಟೀಲ ನಡೆಸಿದರು. `ಸರ್ಕಾರ ಹೊರಡಿಸಿರುವ ಸುತ್ತೋಲೆ ಅಸಾಂವಿಧಾನಿಕ ಮತ್ತು ಅಕ್ರಮ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ಈ ಸುತ್ತೋಲೆಗೆ ತಡೆ ನೀಡದಿದ್ದರೆ, ಮಕ್ಕಳಿಗೆ ಪ್ರವೇಶ ನೀಡುವ ಖಾಸಗಿ ಶಾಲೆಗಳ ಹಕ್ಕನ್ನು ಕಿತ್ತುಕೊಂಡಂತೆ ಆಗುತ್ತದೆ. ಈ ಸುತ್ತೋಲೆಯನ್ನು ರದ್ದು ಮಾಡಬೇಕು' ಎಂದು ಅರ್ಜಿಯಲ್ಲಿ ಕೋರಲಾಗಿದೆ. `ಕುಸ್ಮಾ' ಸಲ್ಲಿಸಿರುವ ಅರ್ಜಿಗೆ ಪ್ರತಿಹೇಳಿಕೆ ಸಲ್ಲಿಸುವಂತೆ ಆಯುಕ್ತರಿಗೆ ನಿರ್ದೇಶನ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಇದೇ 4ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT