ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ರದ್ದತಿಗೆ ರಂಗಕರ್ಮಿಗಳ ಆಗ್ರಹ

ರಂಗಾಯಣ ಉಪ ನಿರ್ದೇಶಕರಿಗೆ ನಿರ್ದೇಶಕರ ಜವಾಬ್ದಾರಿ
Last Updated 12 ಜನವರಿ 2013, 19:59 IST
ಅಕ್ಷರ ಗಾತ್ರ

ಮೈಸೂರು: ರಂಗಾಯಣ ನಿರ್ದೇಶಕರ ಜವಾಬ್ದಾರಿಗಳನ್ನು ಉಪ ನಿರ್ದೇಶಕರಿಗೆ ವರ್ಗಾವಣೆ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊರಡಿಸಿರುವ ಆದೇಶವನ್ನು ಖಂಡಿಸಿ ನೂರಾರು ರಂಗಕರ್ಮಿಗಳು ಶನಿವಾರ ಪ್ರತಿಭಟನೆ ನಡೆಸಿದರು.

ಈ ಮೊದಲು ರಂಗಾಯಣದ ಆಡಳಿತಾತ್ಮಕ ಹಾಗೂ ಹಣಕಾಸಿನ ವ್ಯವಹಾರಗಳನ್ನು ರಂಗಾಯಣದ ನಿರ್ದೇಶಕರೇ ನಿರ್ವಹಿಸುತ್ತಿದ್ದರು. ಇದೀಗ ಎಲ್ಲ ಜವಾಬ್ದಾರಿಗಳನ್ನು ಉಪ ನಿರ್ದೇಶಕರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ರಂಗಾಯಣ ನಿರ್ದೇಶಕರು ರಂಗಸಮಾಜದ ಸದಸ್ಯ ಕಾರ್ಯದರ್ಶಿ ಆಗಿರುತ್ತಿದ್ದರು. ಅಧ್ಯಕ್ಷರ ಅನುಪಸ್ಥಿತಿಯಲ್ಲಿ ನಿರ್ದೇಶಕರೇ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಅವರ ಜವಾಬ್ದಾರಿಯನ್ನು ಈಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಿಗೆ ವಹಿಸಿರುವುದು ಖಂಡನೀಯ. ಆದ್ದರಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಇದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಅವರು `ರಂಗಾಯಣದ ದೈನಂದಿನ ಎಲ್ಲ ಆಡಳಿತ ವ್ಯವಹಾರ ನಿರ್ವಹಣೆ, ಸಿಬ್ಬಂದಿ ಹಾಗೂ ಕಲಾವಿದರ ವೇತನ ಮತ್ತು ಇತರೆ ಭತ್ಯೆಗಳನ್ನು ನಿಯಮಾನುಸಾರ ಪಾವತಿಸುವುದು, ರಂಗ ಚಟುವಟಿಕೆಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಯೋಜನೆ, ಆಯ-ವ್ಯಯಗಳನ್ನು ತಯಾರಿಸಿ ನಿರ್ದೇಶಕರಿಗೆ ಸಲ್ಲಿಸುವುದು, ನಗದು, ಹಣಕಾಸು ವ್ಯವಹಾರ, ಸಿಬ್ಬಂದಿ ವೇತನ, ಬಟವಾಡೆ, ಸಿಬ್ಬಂದಿ ಸೇವಾ ವಿವರಗಳ ಪುಸ್ತಕಗಳು, ರಜಾ ವ್ಯವಹಾರಗಳ ಮೇಲ್ವಿಚಾರಣೆ ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಉಪ ನಿರ್ದೇಶಕರಿಗೆ ನೀಡಿರುವುದು ಖಂಡನೀಯ' ಎಂದು ಹೇಳಿದರು.

`ನಾಟಕ ತಯಾರಿಕೆ, ಪ್ರದರ್ಶನ, ತರಬೇತಿ ಹಾಗೂ ತಾಂತ್ರಿಕ ಸೌಲಭ್ಯಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ನಿಯಮಗಳ ರೀತಿ ಪಾವತಿಸುವುದು. ರಂಗಾಯಣ ಆಹ್ವಾನಿಸುವ ತಜ್ಞರು, ನಟ-ನಟಿಯರು ಹಾಗೂ ಅತಿಥಿಗಳ ವಸತಿ ವ್ಯವಸ್ಥೆ, ಪ್ರಯಾಣ ವೆಚ್ಚವನ್ನು ಪಾವತಿಸುವುದು. ರಂಗಾಯಣಕ್ಕೆ ಮಂಜೂರು ಮಾಡುವ ಅನುದಾನ, ನಾಟಕ ಪ್ರದರ್ಶನಗಳಿಂದ ಬರುವ ಹಣ, ಪ್ರಾಯೋಜಕತ್ವ, ಕೊಡುಗೆ ಹಾಗೂ ಇತರೆ ಮೂಲಗಳಿಂದ ಬರುವ ಹಣವನ್ನು ಚಾಲ್ತಿಯಲ್ಲಿರುವ ರಂಗಾಯಣ ನಿರ್ದೇಶಕರ ಹಾಗೂ ಉಪ ನಿರ್ದೇಶಕರ ಹೆಸರಿನಲ್ಲಿರುವ ಜಂಟಿ ಖಾತೆಯನ್ನಯ ರದ್ದು ಪಡಿಸಿ ಉಪ ನಿರ್ದೇಶಕರ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಖಾತೆ ತೆರೆಯುವುದು ಸೇರಿದಂತೆ ಎಲ್ಲ ಜವಾಬ್ದಾರಿಗಳನ್ನು ಉಪ ನಿರ್ದೇಶಕರಿಗೆ ವಹಿಸಿರುವುದು ಸರಿಯಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರಂಗಾಯಣ ಮಾಜಿ ನಿರ್ದೇಶಕ ಪ್ರಸನ್ನ ಮಾತನಾಡಿ, `ಸರ್ಕಾರದ ಧೋರಣೆಯನ್ನು ರಂಗಕರ್ಮಿಗಳು ವಿರೋಧಿಸಬೇಕು. ಪ್ರತಿಭಟನೆಗಳು ನಡೆಯಬೇಕು. ಅದಕ್ಕೆ ನಾನು ಎಲ್ಲ ರೀತಿಯ ಬೆಂಬಲ ನೀಡುತ್ತೇನೆ. ಮೈಸೂರಿನ ರಂಗಕರ್ಮಿಗಳು ರಂಗಾಯಣ ಉಳಿಸಿಕೊಳ್ಳಲು ಮುಂದಾಗಬೇಕು. ಆಗ ಮಾತ್ರ ರಂಗಾಯಣ ಉಳಿಯಲು ಸಾಧ್ಯ. ಶಿವಮೊಗ್ಗ, ಧಾರವಾಡದಲ್ಲೂ ಈ ಹಿಂದೆ ಪ್ರತಿಭಟನೆ ಮಾಡಲಾಗಿತ್ತು. ರಂಗಾಯಣ ನಿರ್ದೇಶಕ ಸ್ಥಾನ ಗೌರವ ಅಧ್ಯಕ್ಷ ಸ್ಥಾನವಲ್ಲ. ಅದು ಕಾರ್ಯ ನಿರ್ವಾಹಕ ಹುದ್ದೆ. ಅದನ್ನು ಬದಲಾಯಿಸಲು ಸರ್ಕಾರಕ್ಕೆ ಯಾವುದೇ ರೀತಿಯ ಅಧಿಕಾರವಿಲ್ಲ. ಇದರಿಂದ ಬಿ.ವಿ.ಕಾರಂತರ ಉದ್ದೇಶವೇ ಹಾಳಾಗಲಿದೆ' ಎಂದು ಎಚ್ಚರಿಕೆ ನೀಡಿದರು.

ಚಿದಂಬರ ರಾವ್ ಜಂಬೆ ಮಾತನಾಡಿ, `ಸರ್ಕಾರದ ನಿರ್ಧಾರ ಸರಿ ಇಲ್ಲ. ರಂಗಾಯಣ ಸ್ಥಾಪನೆಯಾದಾಗಲೇ ಅದರ ಸಂವಿಧಾನ ಸಿದ್ಧವಾಗಿದೆ. ಆ ಪ್ರಕಾರವೇ ಅದು ನಡೆದುಕೊಂಡು ಹೋಗಬೇಕು. ಇಲ್ಲವಾದಲ್ಲಿ ರಂಗಾಯಣ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾಗುತ್ತದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT