ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಹಿಂಪಡೆಯದಿದ್ದರೆ ಪ್ರತಿಭಟನೆ- ಎಚ್ಚರಿಕೆ

Last Updated 13 ಮೇ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು: `ವಾಣಿಜ್ಯ ಉದ್ದೇಶದ ವಾಹನಗಳಿಗೆ ವೇಗ ನಿಯಂತ್ರಕ ಸಾಧನಗಳ ಕಡ್ಡಾಯ ಅಳವಡಿಕೆಯ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯದೇ ಹೋದರೆ ಜೂನ್ ಒಂದರಿಂದ ರಾಜ್ಯವ್ಯಾಪಿ ಲಾರಿ, ಟೆಂಪೊ ಮತ್ತು ಟ್ಯಾಕ್ಸಿಗಳ ಮುಷ್ಕರ ನಡೆಸಲಾಗುವುದು~ ಎಂದು ಕರ್ನಾಟಕ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಜಿ.ಆರ್.ಷಣ್ಮುಖಪ್ಪ ಎಚ್ಚರಿಸಿದರು.

ನಗರದಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ವಾಹನಗಳ ವೇಗವನ್ನು ಕುಗ್ಗಿಸುವ ವೇಗ ನಿಯಂತ್ರಕ ಸಾಧನಗಳಿಂದ ವಾಣಿಜ್ಯ ಉದ್ದೇಶದ ವಾಹನಗಳ ಮಾಲೀಕರಿಗೆ ಅನನುಕೂಲವೇ ಹೆಚ್ಚು. ಹೀಗಾಗಿ ಸರ್ಕಾರ ಈ ಆದೇಶವನ್ನು ಹಿಂಪಡೆಯಬೇಕು~ ಎಂದು ಒತ್ತಾಯಿಸಿದರು.

`ವಾಹನಗಳಿಗೆ ವೇಗ ನಿಯಂತ್ರಕ ಸಾಧನಗಳನ್ನು ಅಳವಡಿಸುವುದರಿಂದ ವಾಹನಗಳ ವೇಗ 60 ಕಿ.ಮೀ ಗಳಿಗೆ ಸೀಮಿತಗೊಳ್ಳಲಿದೆ. ಇದರಿಂದ ಸರಕು ಸಾಗಣೆ ವಾಹನಗಳ ಮಾಲೀಕರಿಗೆ ನಷ್ಟವಾಗಲಿದೆ. ಸದ್ಯ ದೇಶದ ಬಹುಪಾಲು ರಾಜ್ಯಗಳಲ್ಲಿ ಈ ಸಾಧನ ಅಳವಡಿಕೆಯನ್ನು ಕಡ್ಡಾಯ ಮಾಡಿಲ್ಲ. ಆದರೆ ರಾಜ್ಯದಲ್ಲಿ ಸಾಧನದ ಕಡ್ಡಾಯ ಅಳವಡಿಕೆಗೆ ಆದೇಶಿಸಿರುವುದು ಸರಿಯಲ್ಲ. ಇದರಿಂದ ವಾಣಿಜ್ಯ ಉದ್ದೇಶದ ವಾಹನಗಳ ಮಾಲೀಕರಿಗೆ ನಷ್ಟವಾಗಲಿದೆ~ ಎಂದು ಅವರು ಹೇಳಿದರು.

`ಹೊಸದಾದ ವಾಣಿಜ್ಯ ಉದ್ದೇಶದ ವಾಹನಗಳಿಗೆ ಈ ವರ್ಷದ ಜನವರಿಯಿಂದಲೇ ವೇಗ ನಿಯಂತ್ರಕ ಸಾಧನಗಳ ಅಳವಡಿಕೆಯನ್ನು ಕಡ್ಡಾಯ ಮಾಡಲಾಗಿದೆ. ಆದರೆ ಎಲ್ಲಾ ವಾಣಿಜ್ಯ ಉದ್ದೇಶದ ವಾಹನಗಳಿಗೂ ಈ ಸಾಧನಗಳನ್ನು ಅಳವಡಿಸಿಲ್ಲ. ಹೆಚ್ಚಿನ ವಾಹನ ಮಾಲೀಕರು ಕೇವಲ ರಸೀದಿಗಳನ್ನಷ್ಟೇ ಪಡೆದುಕೊಂಡು ಸಾಧನ ಅಳವಡಿಕೆ ಮಾಡಿಸಿರುವುದಾಗಿ ಹೇಳುತ್ತಿದ್ದಾರೆ.

ರಾಜ್ಯದಲ್ಲಿ ಬೆರಳೆಣಿಕೆಯಷ್ಟು ವಾಹನಗಳಿಗೆ ಮಾತ್ರ ವೇಗ ನಿಯಂತ್ರಕ ಸಾಧನಗಳನ್ನು ಅಳವಡಿಸಲಾಗಿದೆ. ಇದರಿಂದ ಸರ್ಕಾರ ಕೇವಲ ಆದೇಶದಲ್ಲಿ ಮಾತ್ರ ನಿಯಮವನ್ನು ಜಾರಿಗೆ ತಂದಿರುವುದು ಸಾಬೀತಾಗಿದೆ~ ಎಂದು ಅವರು ತಿಳಿಸಿದರು.

`ವಾಣಿಜ್ಯ ಉದ್ದೇಶದ ವಾಹನಗಳಿಗೆ ಜೀವಾವಧಿ ತೆರಿಗೆಯನ್ನೂ ಕಡ್ಡಾಯಗೊಳಿಸಿರುವುದರಿಂದ ಟ್ಯಾಕ್ಸಿ ಹಾಗೂ ಕಾರುಗಳ ಚಾಲಕರಿಗೆ ಆರ್ಥಿಕ ಹೊರೆ ಬಿದ್ದಂತಾಗುತ್ತದೆ. ಈ ವಾಹನಗಳಿಗೆ ವಿಧಿಸಿರುವ ಶೇಕಡಾ 16 ರಷ್ಟು ಜೀವಾವಧಿ ತೆರಿಗೆಯ ಆದೇಶವನ್ನೂ ಸರ್ಕಾರ ಹಿಂಪಡೆಯಬೇಕು. ಈ ಎರಡೂ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಹೋದರೆ ಜೂನ್ ಒಂದರಿಂದ ರಾಜ್ಯದಾದ್ಯಂತ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದು. ಇದರಿಂದ ಸುಮಾರು ಹತ್ತು ಲಕ್ಷ ವಾಹನಗಳ ಸಂಚಾರ ಸ್ಥಗಿತಗೊಳ್ಳಲಿದ್ದು, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು~ ಎಂದು ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಆಯೂಬ್ ಖಾನ್, ರವೀಂದ್ರ, ಗಜೇಂದ್ರ, ವಿಜಯ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT