ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶವಾದರೂ,ಮಾಸಾಶನದ ಭಾಗ್ಯವಿಲ್ಲ..

Last Updated 15 ಸೆಪ್ಟೆಂಬರ್ 2011, 9:15 IST
ಅಕ್ಷರ ಗಾತ್ರ

ಗಂಗಾವತಿ:  ದೇವರು ವರ ಕೊಟ್ಟರೂ, ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಈ ಅಂಗವಿಕಲ ವ್ಯಕ್ತಿಯ ಕತೆ. ಈ ವ್ಯಕ್ತಿಗೆ ಸರ್ಕಾರ ಮಾಸಾಶನ ಮಂಜೂರು ಮಾಡಿ ಹತ್ತು ತಿಂಗಳು ಕಳೆದಿದೆ. ಆದರೆ ಒಂದೇ ಒಂದು ತಿಂಗಳ ಮಾಸಾಶನ ಈ ವ್ಯಕ್ತಿ ಪಡೆದಿಲ್ಲ.

ಪಂಪಾನಗರದ ನಿವಾಸಿ ರಾಜಶೇಖರ ಎಂಬ ವ್ಯಕ್ತಿ ಕಳೆದ ಎರಡು ವರ್ಷದ ಹಿಂದೆ ಪಾರ್ಶ್ವವಾಯು ಪೀಡಿತರಾದರು. ಅದುವರೆಗೂ ರೈಸ್‌ಮಿಲ್ ಒಂದರಲ್ಲಿ ಗುಮಾಸ್ತರಾಗಿ ಕುಟುಂಬ ನಿರ್ವಹಣೆಯ ಜವಾಬ್ದಾರಿ ಹೊತ್ತು ಆಧಾರ ಸ್ತಂಭವಾಗಿದ್ದ ರಾಜಶೇಖರ ಇದ್ದಕ್ಕಿಂದಂತೆ ನಿಶ್ಚಲರಾದರು. 

ದುಡಿಯುವ ಸಾಮರ್ಥ್ಯ ಉಡುಗಿ ಹೋದ ನಂತರ ಕುಟುಂಬದ ಆದಾಯಕ್ಕೆ ಪರ್ಯಾಯ ಮಾರ್ಗವಿಲ್ಲದ್ದರಿಂದ ಮಾಸಾಶನಕ್ಕೆ ಅರ್ಜಿಸಲ್ಲಿಸಿದರು. ತಹಸೀಲ್ದಾರರು ಕಳೆದ 2010ರ ನವಂಬರ್ 11ರಂದು ಮಾಸಿಕ ಒಂದು ಸಾವಿರ ರೂಪಾಯಿ ಮಾಸಾಶನಕ್ಕೆ ಮಂಜೂರು ಮಾಡಿ ಆದೇಶಿಸಿದ್ದಾರೆ.

ಕಾರಣ ಇಷ್ಟೆ: ಆದರೆ ಕಳೆದ ಹತ್ತು ತಿಂಗಳಿಂದ ಹಣ ಮಾತ್ರ ಮಂಜೂರಾಗುತ್ತಿಲ್ಲ. ಆದೇಶದ ಪ್ರತಿಯೊಂದನ್ನು ತನ್ನ ಬಳಿ ಇರಿಸಿಕೊಂಡು ಫಲಾನುಭವಿ ವಿನಾಕಾರಣಕ್ಕೆ ಅತ್ತ ತಹಸೀಲ್ದಾರ ಕಾರ್ಯಾಲಯ ಇತ್ತ ತಾಲ್ಲೂಕು ಉಪ ಖಜಾನಾ ಇಲಾಖೆಯ ಮಧ್ಯೆ ಅಲೆದಾಡುತ್ತಿದ್ದಾರೆ.

ತಹಸೀಲ್ದಾರರ ಆದೇಶದ ಪ್ರತಿಯಲ್ಲಿ `ವ್ಯಕ್ತಿಯ ಮರಣದವರೆಗೂ ಅಥವಾ ಆರ್ಥಿಕ ಸ್ಥಿತಿ ಸುಧಾರಣೆ ಆಗುವವರೆಗೂ 01/12/2010ರಿಂದಲೇ ಮಾಸಾಶನ~ ನೀಡುವಂತೆ ಆದೇಶ ನೀಡಿದ್ದಾರೆ.
ಆದರೆ ಇದುವರೆಗೂ ಆದೇಶ ಕಾರ್ಯಗತವಾಗಿಲ್ಲ.

ಮಾನವೀಯತೆ: ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದರೂ ಒಬ್ಬ ಪುತ್ರಿ ಎಸ್ಸೆಎಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕದೊಂದಿಗೆ ಉತ್ತೀರ್ಣವಾಗಿದ್ದರಿಂದ ಶ್ರೀರಾಮನಗರದ ಎ.ಕೆ.ಆರ್.ಡಿ ಕಾಲೇಜಿನವರು ವಿಜ್ಞಾನ ವಿಭಾಗಕ್ಕೆ ಉಚಿತ ಪ್ರವೇಶ ಕಲ್ಪಿಸಿ ಮಾನವೀಯತೆ ಮೆರೆದಿದ್ದಾರೆ.

ಮಾಸಾಶನ ಸಮಸ್ಯೆಗೆ ಸಂಬಂಧಿತ ಇಲಾಖೆಯವರು ಪರಿಹಾರ ಕಲ್ಪಿಸುವಂತೆ ಅರ್ಜಿದಾರ ಕೋರಿದ್ದಾರೆ. ಮನೆಗೆಲಸ ಮಾಡುವ ಹೆಂಡತಿಯ ಆದಾಯದಲ್ಲಿ ಸಂಸಾರ ನೀಗಬೇಕಿದ್ದು, ಮಕ್ಕಳ ಓದಿಗೆ ಸಹಾಯ ಮಾಡುವ ಆಸಕ್ತರು (9740285301) ಸಂಪರ್ಕಿಸುವಂತೆ ರಾಜಶೇಖ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT