ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಕಾರ್ಡ್ ಪಡೆಯಲು ಹರ ಸಾಹಸ

ಆಗಸ್ಟ್ ಅಂತ್ಯಕ್ಕೆ ಎಲ್‌ಪಿಜಿಗೆ ಆಧಾರ್ ಕಡ್ಡಾಯ
Last Updated 3 ಆಗಸ್ಟ್ 2013, 11:27 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಅನಿಲ ಸಿಲಿಂಡರ್ ಸಹಾಯಧನ ಪಡೆಯಲು ಆ. 31ರೊಳಗೆ ಆಧಾರ್ ಕಾರ್ಡ್ ಸಂಖ್ಯೆ ನೀಡುವುದು ಕಡ್ಡಾಯ. ಆದರೆ ಆಧಾರ್ ಕಾರ್ಡ್ ಪಡೆಯಲು ಸಾರ್ವಜನಿಕರು ಹರಸಾಹಸ ಪಡುವಂತಾಗಿದೆ.

ಜನತೆ ಆಧಾರ್ ಕಾರ್ಡ್‌ಗಾಗಿ ತಮ್ಮ ಕೆಲಸ ಬಿಟ್ಟು ನಾಲ್ಕೈದು ದಿನ ಆಧಾರ್ ಕೇಂದ್ರಗಳಿಗೆ ಸುತ್ತಾಡುವಂತಾಗಿದೆ. ಆದರೂ ಆಧಾರ್ ಕಾರ್ಡ್ ಸುಲಭವಾಗಿ ಸಿಗುತ್ತಿಲ್ಲ. ಪ್ರತಿ ನಿತ್ಯ ಆಧಾರ್ ಕಾರ್ಡ್‌ಗಾಗಿ ಬರುತ್ತಿರುವ ಜನರಿಗೆ ಸಮರ್ಪಕ ಸೇವೆ ನೀಡಲು ಅಗತ್ಯ ಕಂಪ್ಯೂಟರ್, ಸಿಬ್ಬಂದಿ ಆಧಾರ್ ಕೇಂದ್ರಗಳಲ್ಲಿ ಇಲ್ಲ. ಅಲ್ಲದೆ ಆಧಾರ್ ಕೇಂದ್ರಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ.

ಜಿಲ್ಲೆಯಲ್ಲಿ ಒಟ್ಟು 2.58 ಲಕ್ಷ ಮಂದಿ ಎಲ್‌ಪಿಜಿ ಗ್ರಾಹಕರಿದ್ದಾರೆ. ಇದರಲ್ಲಿ ಈಗಾಗಲೇ 1.85 ಲಕ್ಷ ಮಂದಿ ಗ್ರಾಹಕರು ಆಧಾರ್ ಕಾರ್ಡ್‌ನ್ನು ತಮ್ಮ ಗ್ಯಾಸ್ ಏಜೆನ್ಸಿಗಳಿಗೆ ನೀಡಿದ್ದಾರೆ. ಇವರಲ್ಲಿ 1.15 ಲಕ್ಷ ಮಂದಿ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ನೀಡಿದ್ದಾರೆ. ಇನ್ನೂ 73 ಸಾವಿರ ಮಂದಿ ಗ್ಯಾಸ್ ಏಜೆನ್ಸಿಗಳಿಗೆ ಆಧಾರ್ ಸಂಖ್ಯೆ ನೀಡಬೇಕಾಗಿದೆ. ಆ. 31ರೊಳಗೆ ಆಧಾರ್ ಸಂಖ್ಯೆ ನೀಡದಿದ್ದರೆ ಗ್ರಾಹಕರಿಗೆ ಸಹಾಯಧನ ನಿಲುಗಡೆ ಆಗಲಿದ್ದು, ಮಾರಕಟ್ಟೆ ಬೆಲೆ ಪಾವತಿಸಿ ಸಿಲಿಂಡರ್ ಪಡೆಯಬೇಕಿದೆ.

ತುಮಕೂರು ನಗರ ಸೇರಿದಂತೆ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಆಧಾರ್ ನೋಂದಣಿ ಕೇಂದ್ರ ತೆರೆಯಲಾಗಿದೆ. ನಗರದ ಅಂಬೇಡ್ಕರ್ ಭವನದ ಕೊಠಡಿಯೊಂದರಲ್ಲಿ ಆಧಾರ್ ಕೇಂದ್ರವಿದ್ದು, ಕೇವಲ ಮೂರು ಕಂಪ್ಯೂಟರ್ ಸೆಟ್‌ಗಳನ್ನು ನೀಡಲಾಗಿದೆ. ಇಲ್ಲಿ ದಿನವೊಂದಕ್ಕೆ 40ರಿಂದ 50 ಮಂದಿಗೆ ಮಾತ್ರ ಆಧಾರ್ ಕಾರ್ಡ್ ನೋಂದಣಿ ಮಾಡಬಹುದು. ಹೀಗಾಗಿ ಆಧಾರ್ ಕೇಂದ್ರದಲ್ಲಿ ಪ್ರತಿ ನಿತ್ಯ ನೂಕುನುಗ್ಗುಲು ಉಂಟಾಗುತ್ತದೆ. ಅಲ್ಲದೆ ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಸಹ ಆಧಾರ್ ಕಾರ್ಡ್ ಮಾಡಲಾಗುತ್ತದೆ. ಅಲ್ಲಿ ಮೊದಲೇ ಹೋಗಿ ನೋಂದಣಿ ಮಾಡಿದರೆ, ನೋಂದಣಿ ದಿನಾಂಕ ನೀಡಲಾಗುತ್ತದೆ. ಜಿಲ್ಲೆಯಲ್ಲಿ ಕಳೆದ ಮೇನಲ್ಲಿ 12 ಸಾವಿರ ಮತ್ತು ಜೂನ್‌ನಲ್ಲಿ 23 ಸಾವಿರ ಆಧಾರ್ ನೋಂದಣಿ ಮಾಡಲಾಗಿದೆ.

ಇಲ್ಲಿ ಆಧಾರ್ ಕಾರ್ಡ್‌ಗಾಗಿ ಅರ್ಜಿ ಪಡೆಯಲು ಒಮ್ಮೆ ಬರಬೇಕು. ಆನಂತರ ಅರ್ಜಿ ಮತ್ತು ಮೂಲ ದಾಖಲೆಗಳ ಪರಿಶೀಲನೆಗೆ ಇನ್ನೊಮ್ಮೆ ಬರಬೇಕು. ಮತ್ತೆ ಆಧಾರ್ ನೋಂದಣಿಗಾಗಿ ಸಾಲುಗಟ್ಟಿ ನಿಲ್ಲಬೇಕು. ಈ ಎಲ್ಲ ಸಂದರ್ಭ ನೂಕುನುಗ್ಗುಲು ಇರುತ್ತದೆ. ಆದರೆ ಸಾರ್ವಜನಿಕರಿಗೆ ಇಲ್ಲಿ ಕುರ್ಚಿ, ಕುಡಿಯುವ ನೀರು ಮುಂತಾದ ಕನಿಷ್ಠ ಮೂಲಸೌಲಭ್ಯ ಸಹ ಇಲ್ಲ. ಅಂಬೇಡ್ಕರ್ ಭವನದಲ್ಲಿ ಕಸದ ಮೇಲೆಯೇ ಕುಳಿತುಕೊಳ್ಳಬೇಕಾದ ಸ್ಥಿತಿ ಇದೆ.

`ಅಲ್ಲದೆ ಇಲ್ಲಿನ ಸಿಬ್ಬಂದಿ ಅರ್ಜಿ ಕೊಡಲು ಸಹ ಸತಾಯಿಸುತ್ತಾರೆ. ಒಂದು ಕುಟುಂಬಕ್ಕೆ ಒಂದೇ ಅರ್ಜಿ ನೀಡುತ್ತಾರೆ. ಉಳಿದವರು ಜೆರಾಕ್ಸ್ ಮಾಡಿಸಿಕೊಳ್ಳಿ ಎನ್ನುತ್ತಾರೆ. ಕೆಲವರು ಮಧ್ಯವರ್ತಿಗಳಿಗೆ ಹಣಕೊಟ್ಟು, ಸರದಿ ಸಾಲಿನಲ್ಲಿ ನಿಲ್ಲದೆ ನೇರವಾಗಿ ಆಧಾರ್ ಕಾರ್ಡ್ ಪಡೆಯುತ್ತಾರೆ. ಹಣ ಕೊಡದಿದ್ದವರು ಮೂರು ದಿನ ಸುತ್ತಾಡಬೇಕು' ಎಂದು ಇಲ್ಲಿ ಕಾರ್ಡ್‌ಗಾಗಿ ಸಾಲಿನಲ್ಲಿ ನಿಂತಿದ್ದ ಶಿವಕುಮಾರ್ ಆಪಾದಿಸಿದರು.

ಜಿಲ್ಲೆಯ ಎಲ್ಲ 10 ಕೇಂದ್ರಗಳಿಂದ ಒಟ್ಟು 20 ಕಂಪ್ಯೂಟರ್ ಸೆಟ್ ನೀಡಲಾಗಿದೆ. ಆದರೆ ಜಿಲ್ಲೆಗೆ ಕನಿಷ್ಠ 120 ಕಂಪ್ಯೂಟರ್ ಅಗತ್ಯವಿದೆ ಎಂದು ಜಿಲ್ಲಾಡಳಿತವು ಸರ್ಕಾರದ ಇ- ಆಡಳಿತ ಇಲಾಖೆಗೆ ಕೋರಿತ್ತು. ಹೆಚ್ಚುವರಿ ಕನಿಷ್ಠ 90 ಕಂಪ್ಯೂಟರ್ ಸೆಟ್ ಮತ್ತು ಸಿಬ್ಬಂದಿ ನೀಡುವಂತೆ ಕೇಳಲಾಗಿತ್ತು. ಆದರೆ ಇದುವರೆಗೆ ಜಿಲ್ಲಾ ಆಡಳಿತದ ಮನವಿಗೆ ಸರ್ಕಾರದಿಂದ ಯಾವುದೇ ಉತ್ತರ ಬಂದಿಲ್ಲ.

ಜಿಲ್ಲೆಯಲ್ಲಿ ಶೇ 96ರಷ್ಟು ಆಧಾರ್ ನೋಂದಣಿ ಆಗಿದೆ ಎಂದು ಜಿಲ್ಲಾಡಳಿತ ಈ ಹಿಂದೆ ಸರ್ಕಾರಕ್ಕೆ ವರದಿ ನೀಡಿದೆ. ಆದರೆ ಆ ಪ್ರಮಾಣದಲ್ಲಿ ಆಧಾರ್ ನೋಂದಣಿ ಆಗಿಲ್ಲ. ಹೀಗಾಗಿ ಸರ್ಕಾರ ಹೆಚ್ಚುವರಿ ಕಂಪ್ಯೂಟರ್ ಮತ್ತು ಸಿಬ್ಬಂದಿ ಕೋರಿಕೆಗೆ ಉತ್ತರ ನೀಡಿಲ್ಲ. ಈ ಬಗ್ಗೆ ಮತ್ತೊಮ್ಮೆ ಸರ್ಕಾರಕ್ಕೆ ಕೋರಿಕೆ ಸಲ್ಲಿಸಲಾಗುವುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ `ಪ್ರಜಾವಾಣಿ'ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT