ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಕಾರ್ಡ್ ವಿತರಣೆ ಚುರುಕುಗೊಳಿಸಲು ಚರ್ಚೆ

Last Updated 14 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಮಡಿಕೇರಿ:  ರಾಜ್ಯ ಸರ್ಕಾರ ಇ- ಆಡಳಿತ ಇಲಾಖೆ ವತಿಯಿಂದ ಜಿಲ್ಲೆ ಯಲ್ಲಿ `ಆಧಾರ್~ ಕಾರ್ಡ್ ವಿತರಿಸುವ ದಿನಾಂಕವನ್ನು ಒಂದೆರಡು ದಿನದಲ್ಲಿ ಪ್ರಕಟಿಸಲಾಗುವುದು ಎಂದು  ಜಿಲ್ಲಾಧಿಕಾರಿ ಡಾ. ಎನ್.ವಿ. ಪ್ರಸಾದ್ ತಿಳಿಸಿದರು.

ಜಿಲ್ಲೆಯಲ್ಲಿ ಆಧಾರ್ ಯೋಜನೆ ಪರಿಣಾಮಕಾರಿ ಅನುಷ್ಠಾನ ಕುರಿತು ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ನಗರಸಭೆ, ಮೂರು ಪಟ್ಟಣ ಪಂಚಾಯಿತಿಗಳಲ್ಲಿ ಆಧಾರ್ ಕೇಂದ್ರಗಳನ್ನು ತೆರೆದು ವ್ಯಾಪಕ ಪ್ರಚಾರ ಕೈಗೊಂಡು ಆಧಾರ್ ಕಾರ್ಡ್ ಸಂಖ್ಯೆಯನ್ನು ನೀಡುವಂತಾಗಬೇಕು ಎಂದು ಸೂಚನೆ ನೀಡಿದರು.

ಜಿಲ್ಲೆಯ 16 ಹೋಬಳಿ ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲೆಯಲ್ಲಿ ಕ್ರಿಯಾಶೀಲರಾಗಿ ಕೆಲಸ ನಿರ್ವಹಿಸುವ ಅಧಿಕಾರಿಗಳನ್ನು ಆಧಾರ್ ಯೋಜನೆಗೆ ನಿಯೋಜಿಸಿಕೊಂಡು ಆಧಾರ ಕಾರ್ಡ್ ನೀಡುವ ಸಂಸ್ಥೆಯವರೊಂದಿಗೆ ಜೊತೆಗೂಡಿ ಕೆಲಸ ನಿರ್ವಹಿಸುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಚಂದ್ರೇಗೌಡ ಮಾತನಾಡಿ, ಆಧಾರ್ ಯೋಜನೆ ಯಾವ ರೀತಿ ಅನುಷ್ಠಾನಗೊಳಿಸಬೇಕೆಂದು ಸರ್ಕಾರ ನೀಡಿರುವ ನಿರ್ದೇಶನವನ್ನು ಸಭೆಯಲ್ಲಿ ತಿಳಿಸಿದರು.

ನಗರಸಭೆ ಆಯುಕ್ತ ಶಶಿಕುಮಾರ್ ಮಾತನಾಡಿ, ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ನಗರಸಭೆ ಕಟ್ಟಡ, ಎ.ವಿ. ಶಾಲೆ, ಪೊಲೀಸ್ ಭವನ (ಮೈತ್ರಿ ಹಾಲ್) ಮತ್ತು ಜನರಲ್ ತಿಮ್ಮಯ್ಯ ಸ್ಮಾರಕ ಭವನದ ಕೊಠಡಿಯಲ್ಲಿ ಆಧಾರ್ ಕೇಂದ್ರವನ್ನು ತೆರೆಯಬಹುದಾಗಿದೆ ಎಂದರು.

ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಹನುಮಂತರಾಯಪ್ಪ ಅವರು ವಿರಾಜಪೇಟೆ ಪಟ್ಟಣದಲ್ಲಿ ಪಟ್ಟಣ ಪಂಚಾಯಿತಿ, ಜೂನಿಯರ್ ಕಾಲೇಜು, ವಿರಾಜಪೇಟೆ ಮತ್ತು ವಿಜಯ ನಗರದಲ್ಲಿ ಅಧಾರ್ ಕೇಂದ್ರ ಸ್ಥಾಪಿಸಬಹುದಾಗಿದೆ ಎಂದರು.

ಸೋಮವಾರಪೇಟೆ ತಾಲ್ಲೂಕಿನಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ, ಅಂಬೇಡ್ಕರ್ ಭವನ, ತಾ.ಪಂ. ಕಚೇರಿ ಮತ್ತು ಪೊಲೀಸ್ ಗೆಸ್ಟ್ ಹೌಸ್‌ನಲ್ಲಿ ಆಧಾರ್ ಕೇಂದ್ರ ತೆರೆಯಬಹುದಾಗಿದೆ
ಎಂದು ಸಂಬಂಧಿಸಿದ ತಾಲ್ಲೂಕು ಕಚೇರಿಯ ಅಧಿಕಾರಿಯವರು ಮಾಹಿತಿ ನೀಡಿದರು.

ಆಧಾರ್ ಸಂಸ್ಥೆಯ ಪ್ರತಿನಿಧಿಗಳು ಮಾತನಾಡಿ ಮೊದಲ ಹಂತದಲ್ಲಿ ಜಿಲ್ಲೆಯ ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ ನಾಲ್ಕು ಕೇಂದ್ರಗಳನ್ನು ಗುರ್ತಿಸಿ, ಆ ಕೇಂದ್ರದಲ್ಲಿ ಆಧಾರ್ ಕಾರ್ಡ್ ನೀಡಲು ವ್ಯವಸ್ಥೆ ಮಾಡಲಾಗುತ್ತದೆ. ನಂತರ ಹೋಬಳಿ ಹಾಗೂ ಗ್ರಾ.ಪಂ. ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಸಂಖ್ಯೆ ನೀಡುವ ಕಾರ್ಯ ಹಮ್ಮಿಕೊಳ್ಳಲಾಗುತ್ತದೆ ಎಂದು ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್. ಕೃಷ್ಣಪ್ಪ, ಜಿ.ಪಂ. ಉಪ ಕಾರ್ಯದರ್ಶಿ ಎಸ್.ವೈ. ಬಸವರಾಜಪ್ಪ, ಪ್ರಾದೇಶಿಕ ಸಾರಿಗೆ ಅಧಿಕಾರಿ ಮಹಮ್ಮದ್ ಹಬೀಬುಲ್ಲಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ರಾಜೇಶ್ ಜಿ. ಗೌಡ, ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಬಾಬು ರವೀಂದ್ರ ನಾಥ್ ಪಟೇಲ್, ವಿವಿಧ ಇಲಾಖೆಯ ಅಧಿಕಾರಿ ಭಾಗವಹಿಸಿ ಆಧಾರ್ ಯೋಜನೆ ಸಂಖ್ಯೆ ಕಾರ್ಡ್ ಜಿಲ್ಲೆಯ ಪ್ರತಿಯೊಬ್ಬರಿಗೂ ತಲುಪುವಂತೆ ಮಾಡಲು ಯಾವ ಮಾರ್ಗೋಪಾಯ ಅನುಸರಿಸಬೇಕು ಎಂಬ ಕುರಿತು ಸುಧೀರ್ಘ ಚರ್ಚೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT