ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ನೋಂದಣಿ: ರಾಜ್ಯ ಪ್ರಥಮ

Last Updated 12 ಏಪ್ರಿಲ್ 2011, 6:40 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸರ್ಕಾರ ವಿಶಿಷ್ಟ ಗುರುತಿನ ಸಂಖ್ಯೆ ‘ಆಧಾರ್’ ಯೋಜನೆಯನ್ನು ದೇಶದ 16 ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿದೆ. ಅವುಗಳಲ್ಲಿ ಕರ್ನಾಟಕ ಆಧಾರ್ ನೋಂದಣಿ ಯಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ಇ- ಆಡಳಿತ ಇಲಾಖೆಯ ಕಾರ್ಯದರ್ಶಿ ಎಂ.ಎನ್.ವಿದ್ಯಾಶಂಕರ್ ತಿಳಿಸಿದರು.

ನಗರದ ಕಲಾಮಂದಿರದಲ್ಲಿ ಇ- ಆಡಳಿತ ಇಲಾಖೆ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒ ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಂಡಿದ್ದ ‘ಆಧಾರ್’ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೆ ಸುಮಾರು 31 ಲಕ್ಷ ಜನ ಆಧಾರ್ ನೋಂದಣಿ ಮಾಡಿಸಿಕೊಂಡಿದ್ದಾರೆ. ಅದರಲ್ಲಿ ಕರ್ನಾಟಕದ ಪಾಲು ದೊಡ್ಡದು. ರಾಜ್ಯದ ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸುಮಾರು 20 ಲಕ್ಷ ಜನ ವಿಶಿಷ್ಟ ಗುರುತಿನ ಸಂಖ್ಯೆ ಪಡೆದಿದ್ದಾರೆ ಎಂದು ಹೇಳಿದರು.

ಮೈಸೂರು ಜಿಲ್ಲೆಯಲ್ಲಿ ಶೇ 50ರಷ್ಟು ಮಂದಿಯನ್ನು ‘ಆಧಾರ್’ ತಲುಪಿದೆ. ನಗರದಲ್ಲಿ ಬಹುಪಾಲು ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ. ಇದುವರೆಗೂ ಹೋಬಳಿ ಮಟ್ಟದಲ್ಲಿ ಆಧಾರ್ ನೋಂದಣಿ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ ಅವನ್ನು ಪ್ರತಿ ಗ್ರಾಮ ಪಂಚಾಯಿತಿಗಳಲ್ಲೂ ಸ್ಥಾಪಿಸುತ್ತೇವೆ. ದೇಶದ ಪ್ರಥಮ ಆಧಾರ್ ನೋಂದಣಿ ಜಿಲ್ಲೆಯನ್ನಾಗಿ ಮಾಡುವುದು ನಮ್ಮ ಉದ್ದೇಶ. ಇದಕ್ಕೆ ಜನಪ್ರತಿನಿಧಿಗಳು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ನರೇಗಾ ಉದ್ಯೋಗ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪಡಿತರ ಚೀಟಿ ಸೇರಿದಂತೆ ಇತರ ಸೌಲಭ್ಯಗಳನ್ನು ಪಡೆಯಲು ಇನ್ನು ಮುಂದೆ ಆಧಾರ್ ಅತ್ಯವಶ್ಯಕ. ಗ್ರಾಮೀಣ ಪ್ರದೇಶದಲ್ಲಿ ಜನರಿಗೆ ಈ ಕುರಿತು ಅರಿವು ಮೂಡಿಸುವ ಜವಾಬ್ದಾರಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲಿದೆ ಎಂದರು.

ಆಧಾರ್ ನೋಂದಣಿಯ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದ ಇ- ಆಡಳಿತ ಇಲಾಖೆಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿಂದ್ರನ್, ದೇಶದ 121 ಕೋಟಿ ಜನರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವುದು ಸಾಮಾನ್ಯ ಕೆಲಸವಲ್ಲ. ಅಮೆರಿಕ, ಯುರೋಪ ರಾಷ್ಟ್ರಗಳಲ್ಲಿ ಗುರುತಿನ ಸಂಖ್ಯೆ ನೀಡಲಾಗಿದೆ. ಆದರೆ ಜನಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ತೊಂದರೆಗಳೇನು ಬರಲಿಲ್ಲ ಎಂದರು.

ವಿಳಾಸ ದೃಡೀಕರಣಕ್ಕಾಗಿ ನಮೂದಿಸಿದ 29 ದಾಖಲೆಗಳಲ್ಲಿ ಗ್ರಾ.ಪಂ. ಅಧ್ಯಕ್ಷರು ನೀಡುವ ವಿಳಾಸ ಪ್ರಮಾಣ ಪತ್ರವೂ ಒಂದು. ಗ್ರಾಮೀಣಾಭಿವೃದ್ಧಿ ಹರಿಕಾರರಿಗೆ ಸರ್ಕಾರ ನೀಡಿದ ಜವಾಬ್ದಾರಿ ಇದು. ಇದನ್ನು ಅತ್ಯಂತ ಜಾಗರೂಕರಾಗಿ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು.

ಮನೋನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ಹಾಗೂ ಸದಸ್ಯ ಬಲರಾಮೇಗೌಡ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಸತ್ಯವತಿ ‘ಆಧಾರ್ ಯೋಜನೆಯಲ್ಲಿ ಚುನಾಯಿತ ಪ್ರತಿನಿಧಿಗಳ ಪಾತ್ರ’ ಕಿರು ಹೊತ್ತಿಗೆ ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಹರ್ಷಗುಪ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಜಹೀರಾ ನಸೀಂ ಉಪಸ್ಥಿತರಿದ್ದರು.

ಹಳಿತಪ್ಪಿದ ಸಂವಾದ

ಡಾ.ರವೀಂದ್ರನ್ ಆಧಾರ್ ಕುರಿತು ಪ್ರಾತ್ಯಕ್ಷಿಕೆ ನೀಡಿದ ಬಳಿಕ ನಡೆದ ಸಂವಾದ ಸ್ವಾರಸ್ಯಕರವಾಗಿತ್ತು. ಆಧಾರ್ ನೋಂದಣಿಯ ಬಗ್ಗೆ ನಡೆಯಬೇಕಿದ್ದ ಸಂವಾದ ಆಗಾಗ ಹಳಿ ತಪ್ಪುತ್ತಿತ್ತು. ‘ಜಿಲ್ಲಾಧಿಕಾರಿಗೆ ಸ್ವಾಗತ, ಸಿಇಒ ಮೆಡಮ್ ಅವರಿಗೆ ಅಭಿನಂದನೆ’ ಎಂದು ಮಾತು ಆರಂಭಿಸಿದ ಬಹುಪಾಲು ಗ್ರಾ.ಪಂ. ಅಧ್ಯಕ್ಷರು ಪಿಡಿಒಗಳ ಮೇಲೆ ಹರಿಹಾಯ್ದರು.

‘ಖಾತೆ ಬದಲಾವಣೆ, ನೋಂದಣಿಗೆ ಪಿಡಿಒಗಳಿಗೆ ಮಾತ್ರ ಅಧಿಕಾರ ನೀಡಲಾಗಿದೆ. ಜಿಲ್ಲಾಧಿಕಾರಿಗಳು ನಮಗೂ ಅಂಥ ಅಧಿಕಾರ ನೀಡದೇ, ಏನೂ ಲಾಭವಿಲ್ಲದ ವಿಳಾಸ ದೃಡೀಕರಿಸುವ ಅಧಿಕಾರ ನೀಡಿದ್ದಾರೆ. ಇದು ನಮಗೆ ಬೇಡ. ಇದನ್ನೂ ಅವರಿಗೆ ನೀಡಿ’ ಎಂದು ಗೊಂದಲ ಸೃಷ್ಟಿಸಿದರು. ಬಳಿಕ ಜಿಲ್ಲಾ ಪಂಚಾಯಿತಿ ಸಿಇಒ ಮಧ್ಯ ಪ್ರವೇಶಿಸಿ ‘ಇಲ್ಲಿ ಆಧಾರ್ ಕುರಿತು ಮಾತ್ರ ಮಾತನಾಡಿ. ಇತರ ವಿಷಯಗಳನ್ನು ಇನ್ನೊಂದು ವೇದಿಕೆಯಲ್ಲಿ ಮಾತನಾಡೋಣ’ ಎಂದು ವಾತಾ ವರಣ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT