ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಸಂಖ್ಯೆ: ಸಂಘರ್ಷ ಅಂತ್ಯ

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸಾರ್ವಜನಿಕರಿಗೆ ಚಿಪ್ ಆಧಾರಿತ ಸ್ಮಾರ್ಟ್ ಕಾರ್ಡ್ ನೀಡುವ ವಿಷಯದಲ್ಲಿ ಯೋಜನಾ ಆಯೋಗ ಹಾಗೂ ಗೃಹ ಸಚಿವಾಲಯದ ನಡುವಿನ ಸಂಘರ್ಷ ಕೊನೆಗೂ ಅಂತ್ಯ ಕಂಡಿದೆ.

ಈ ಕಾರ್ಯಕ್ಕೆ 16 ರಾಜ್ಯಗಳಲ್ಲಿ ಹೆಚ್ಚುವರಿಯಾಗಿ 40 ಕೋಟಿ ಜನರನ್ನು ನೋಂದಣಿ ಮಾಡುವ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ    (ಯುಐಡಿಎಐ) ಪ್ರಸ್ತಾವಕ್ಕೆ ಶುಕ್ರವಾರ ಸಂಪುಟ ಸಮಿತಿಯು ಅನುಮೋದನೆ ನೀಡುವ ಮೂಲಕ ಈ ಕುರಿತಾದ ಭಿನ್ನಾಭಿಪ್ರಾಯ ಶಮನಗೊಂಡಿದೆ.

ಉಳಿದ ರಾಜ್ಯಗಳಲ್ಲಿ ರಾಷ್ಟ್ರೀಯ ಜನಸಂಖ್ಯಾ ನೋಂದಣಿ   (ಎನ್‌ಪಿಆರ್) ಅಡಿ ಈ ಕಾರ್ಯ ನಡೆಯಲಿದೆ.
ಯುಐಡಿಎಐಗೆ ಸರ್ಕಾರವು ರೂ 5,791.74 ಕೋಟಿ ಹೆಚ್ಚುವರಿ ಹಣ ನೀಡಲು ಅನುಮತಿ ನೀಡಿದ ಹೊತ್ತಿನಲ್ಲಿಯೇ, ನಂದನ್ ನಿಲೇಕಣಿ ನೇತೃತ್ವದ ಯುಐಡಿಎಐ, ಭದ್ರತೆಗೆ ಸಂಬಂಧಿಸಿದಂತೆ ಗೃಹ ಸಚಿವಾಲಯ ಎತ್ತಿದ್ದ ಆತಂಕವನ್ನು ನಿವಾರಿಸಲಾಗುತ್ತದೆ ಎಂದು ಆಶ್ವಾಸನೆ ನೀಡಿದೆ.

ಮುಂದಿನ ವರ್ಷದ ಜೂನ್ ಒಳಗಾಗಿ ಎರಡೂ ಸಂಸ್ಥೆಗಳು ಇಡೀ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿವೆ.
`ಮುಂದಿನ 6 ರಿಂದ 8 ವಾರಗಳಲ್ಲಿ ನಾವು ಭದ್ರತೆಗೆ ಸಂಬಂಧಿಸಿದ ಆತಂಕಗಳನ್ನು ಪರಿಶೀಲಿಸುತ್ತೇವೆ. ಅಲ್ಲದೇ ಏಪ್ರಿಲ್‌ನಿಂದ ಜೈವಿಕ ದಾಖಲೆಗಳನ್ನು ಸಂಗ್ರಹಿಸುತ್ತೇವೆ~ ಎಂದು ನಂದನ್ ನಿಲೇಕಣಿ ಸುದ್ದಿಗಾರರಿಗೆ ತಿಳಿಸಿದರು.

ಇನ್ನೊಂದೆಡೆ ಗೃಹ ಸಚಿವ ಪಿ.ಚಿದಂಬರಂ, ಸ್ಮಾರ್ಟ್ ಕಾರ್ಡ್ ನೀಡುವ ವಿಷಯದಲ್ಲಿ ಯೋಜನಾ ಆಯೋಗದ ಜತೆ ಭಿನ್ನಾಭಿಪ್ರಾಯವಿಲ್ಲ. ಆದರೆ ಯುಐಡಿಎಐ ಹಾಗೂ ಎನ್‌ಪಿಆರ್‌ನಲ್ಲಿ ವ್ಯತ್ಯಾಸ  ಕಂಡುಬಂದರೆ ಅಂತಿಮವಾಗಿ ಎನ್‌ಪಿಆರ್ ಮೇಲುಗೈ ಸಾಧಿಸುತ್ತದೆ ಎಂದು ಹೇಳಿದರು.

ಆಧಾರ್ ಕಾರ್ಡ್ ಆಯ್ಕೆಗೆ ಬಿಟ್ಟ ವಿಷಯ. ಆದರೆ ಸರ್ಕಾರದ ಕಾರ್ಯಕ್ರಮವಾದ ಎನ್‌ಪಿಆರ್ ಮಾತ್ರ ಕಡ್ಡಾಯ ಎಂದ ಸಚಿವರು, ಯೋಜನೆಯಲ್ಲಿ ನಕಲಿ ದಾಖಲೆ ಹಾಗೂ ಅನಗತ್ಯ ಖರ್ಚುಗಳನ್ನು ಆದಷ್ಟೂ ನಿಯಂತ್ರಿಸಲಾಗುತ್ತದೆ. ಇದಕ್ಕಾಗಿ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಆದರೆ 1.2 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ಸಣ್ಣಪುಟ್ಟ ಲೋಪಗಳನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.

ಆಧಾರ್ ಸಂಖ್ಯೆ ಪಡೆದುಕೊಂಡವರು ಎನ್‌ಪಿಆರ್‌ಗೆ ಜೈವಿಕ ದಾಖಲೆಗಳನ್ನು ನೀಡುವ ಅಗತ್ಯ ಬರುವುದಿಲ್ಲ. ಆಧಾರ್ ಸಂಖ್ಯೆಯನ್ನೇ ಎನ್‌ಪಿಆರ್‌ನಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಅಲ್ಲದೇ ಯುಐಡಿಎಐನಿಂದಲೇ ಜೈವಿಕ ದಾಖಲೆಗಳನ್ನು ಪಡೆದುಕೊಳ್ಳಲಾಗುತ್ತದೆ ಎಂದು  ಚಿದಂಬರಂ ನುಡಿದರು.

ಶೀಘ್ರವೇ ಎನ್‌ಪಿಆರ್ ಅನ್ನು ಕಾನೂನು ಸಮ್ಮತವನ್ನಾಗಿ ಮಾಡುವ ಮಸೂದೆಯೊಂದನ್ನು ಸರ್ಕಾರ ತರಲಿದೆ ಎಂದೂ ಅವರು ಹೇಳಿದರು.

ಈ ಯೋಜನೆಯನ್ನು ಯಾವುದೇ ಅಡೆತಡೆ ಇಲ್ಲದೆಯೇ ಜಾರಿಗೊಳಿಸಲು ವಿಸ್ತ್ತೃತ ನಿಯಮಾವಳಿಗಳನ್ನು ರೂಪಿಸಲಾಗುತ್ತದೆ. ಈಗಾಗಲೇ ಗೃಹ ವ್ಯವಹಾರಗಳ ಸಚಿವಾಲಯ ರಚಿಸಿರುವ ಅಂತರ್ ಸಚಿವಾಲಯದ ಸಹಕಾರ ಸಮಿತಿಯು (ಐಎಂಸಿಸಿ) ಈ ಕಾರ್ಯ ಮಾಡಲಿದೆ ಎಂದು ಹೇಳಿಕೆಯೊಂದರ‌್ಲಲಿ ಸರ್ಕಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT