ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ ಐಚ್ಛಿಕ

ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಪ್ರಮಾಣಪತ್ರ
Last Updated 23 ಸೆಪ್ಟೆಂಬರ್ 2013, 20:14 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ  ನೀಡುವ ‘ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ. ಅದು ಐಚ್ಛಿಕ’ ಎಂದು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂ ಕೋರ್ಟ್‌‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

  ಸಾಮಾಜಿಕ ಭದ್ರತಾ ಯೋಜನೆಯಡಿ ಮಾಸಿಕ ವೇತನ, ಭವಿಷ್ಯ ನಿಧಿ, ಮದುವೆ ಹಾಗೂ ಆಸ್ತಿ ನೋಂದಣಿ ಸೇರಿದಂತೆ ಹಲವು ಉದ್ದೇಶಗಳಿಗೆ ಕೆಲ ರಾಜ್ಯಗಳು ಆಧಾರ್‌ ಕಾರ್ಡ್‌ ಕಡ್ಡಾಯ ಮಾಡಿರುವುದರ ವಿರುದ್ಧ ಸಲ್ಲಿಸಿರುವ  ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ಸರ್ಕಾರ ಈ ಸ್ಪಷ್ಟನೆ ನೀಡಿದೆ.

ಆಧಾರ್‌ ಕಾರ್ಡ್ ಕಡ್ಡಾಯ ವಿರುದ್ಧ ಕರ್ನಾಟಕ  ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಕೆ. ಎಸ್‌. ಪುಟ್ಟಸ್ವಾಮಿ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಆಧಾರ್‌ ಯೋಜನೆಯನ್ನೇ ಸ್ಥಗಿತಗೊಳಿ­ಸು­ವಂತೆಯೂ ಕೋರಿದ್ದರು.

   ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಹಾಗೂ ಕೇಂದ್ರ ಸರ್ಕಾರದ ಪರ ಹಾಜರಾದ ವಕೀಲರು, ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ ಎಂಬ ವಿಚಾರವನ್ನು ನ್ಯಾಯಮೂರ್ತಿ ಬಿ.ಎಸ್‌.ಚೌಹಾಣ್‌ ಮತ್ತು ಎಸ್‌.ಎ.ಬಾಬ್ಡೆ ಅವರಿದ್ದ ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು.

  ಪುಟ್ಟಸ್ವಾಮಿ ಪರ ವಾದಿಸಿದ ಹಿರಿಯ ವಕೀಲ ಅನಿಲ್‌ ದಿವಾನ್‌, ‘ವಿವಾಹ ನೋಂದಣಿ ಸೇರಿದಂತೆ ಇತರ ಉದ್ದೇಶಗಳಿಗೆ ಆಧಾರ್‌ ಕಾರ್ಡ್‌ ಕಡ್ಡಾಯ. ಆಧಾರ್‌ ಕಾರ್ಡ್‌ ಇಲ್ಲದೇ ವಿವಾಹ ನೋಂದಣಿ ಮಾಡಲಾಗದು ಎಂದು ಮಹಾರಾಷ್ಟ್ರ ಸರ್ಕಾರ ಇತ್ತೀಚೆಗೆ ಹೇಳಿತ್ತು’  ಎಂಬ ಅಂಶವನ್ನು ಕೋರ್ಟ್‌ ಗಮನಕ್ಕೆ ತಂದರು.

   ‘ಸಂವಿಧಾನದ 14 (ಸಮಾನತೆಯ ಹಕ್ಕು) ಮತ್ತು 21ನೇ (ಜೀವನ ಮತ್ತು ಸ್ವಾತಂತ್ರ್ಯದ ಹಕ್ಕು) ವಿಧಿಯಂತೆ ಈ ಯೋಜನೆ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ. ಸರ್ಕಾರ ಇದು ಐಚ್ಛಿಕ ಎಂದು ಹೇಳುತ್ತಿದೆ. ಆದರೆ, ವಸ್ತುಸ್ಥಿತಿ ಹೀಗಿಲ್ಲ’ ಎಂದೂ ಅವರು ಹೇಳಿದರು.

ಇದನ್ನು ಆಲಿಸಿದ  ಪೀಠ, ಆಧಾರ್‌ ಕಾರ್ಡ್‌ನ್ನು ಅಕ್ರಮ ವಲಸಿಗರಿಗೆ ವಿತರಿಸದಂತೆ  ಸರ್ಕಾರಕ್ಕೆ ಸೂಚಿಸಿತು.

ನಿರಾಕರಣೆ ಸಲ್ಲದು
ಆಧಾರ್‌ ಕಾರ್ಡ್‌ ಇಲ್ಲ ಎಂಬ ನೆಪ ಹೇಳಿ ಫಲಾನುಭವಿಗಳಿಗೆ ಮತ್ತು ನಾಗರಿಕರಿಗೆ ಯಾವುದೇ ಸೌಲಭ್ಯ ನಿರಾಕರಿಸುವಂತಿಲ್ಲ.
ಸುಪ್ರೀಂ ಕೋರ್ಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT