ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಕವಿಗೆ ಹೆಚ್ಚಿದ ಸವಾಲು

Last Updated 5 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಹೇಳ ಕೇಳುವ ಪರಂಪರೆಯಿಂದ ಬಂದ ನನ್ನ ಸಂವೇದನೆಗಳು ಗ್ರಾಮೀಣ ಪರಿಸರದಲ್ಲಿ ರೂಪುಗೊಂಡಂಥವು. ಆದ್ದರಿಂದ ಅಕ್ಷರಲೋಕವನ್ನು ಮೌಖಿಕ ಸಂಸ್ಕೃತಿಯ ದೃಷ್ಟಿಕೋನದಿಂದ ವಿಮರ್ಶಾತ್ಮಕವಾಗಿಯೇ ನೋಡುತ್ತ ಬಂದವನು ನಾನು. ಬ್ರಿಟಿಷರು ಬರುವ ಮುನ್ನ ನಮ್ಮಲ್ಲಿದ್ದ ಕರ್ತಾರಶಕ್ತಿಯ ಅಭಿವ್ಯಕ್ತಿಗಳು ಅರ್ಥಪೂರ್ಣವೂ ಮಹತ್ವದವೂ ಆಗಿದ್ದವು. ಮೌಖಿಕ ಪರಂಪರೆಯ ಹಾಡು ಕತೆ ಕಲೆಗಳು ಸಾಮೂಹಿಕ ಜೀವನದೊಂದಿಗೆ ತಳಕು ಹಾಕಿಕೊಂಡಿದ್ದವು.

ಅಂದಿನ ಕಲೆಗಾರನಾಗಲಿ, ಕವಿಯಾಗಲಿ ತನ್ನ ಸಮಾಜದ ಒಟ್ಟು ಸಂದರ್ಭದ ಅಂಗವಾಗಿ ಇಡೀ ಸಮಾಜವನ್ನು ಉದ್ದೇಶಿಸಿ ಮಾತಾಡುತ್ತಿದ್ದ. ಆದರೆ ನಮ್ಮಲ್ಲಿ ವಸಾಹತುಶಾಹಿ ಬಂದೇಟಿಗೇ ಇದೆಲ್ಲಾ ಬುಡಮೇಲಾಗಿ ಹೋಯಿತು. ಸಿ್ಥರವಾದ ನೆಲದ ಮೇಲೆ ನಿಂತು ನಿರ್ದಿಷ್ಟವಾದ ಹೊತ್ತುಗೊತ್ತುಗಳಲ್ಲಿ ದಿವಾರಾತ್ರಿಗಳ, ಸಂವತ್ಸರಗಳ ಹುಟ್ಟುಸಾವಿನ ಜೀವನ ಚಕ್ರಗಳನ್ನು ಅನುಭವಿಸುತ್ತಾ, ಆಸ್ವಾದಿಸುತ್ತಾ ಇದ್ದ ಜಗತ್ತಿಗೆ ಪ್ರಗತಿಯೆಂಬ ದೆವ್ವ ಹಿಡಿದುಕೊಂಡಿತು. ಎಲ್ಲಕ್ಕೂ ಬೆಲೆ ಕಟ್ಟುವ ಅಳತೆಗೋಲುಗಳು, ತೂಕಗಳು ಬಂದವು. ಇಡಿಯಾದುದೆಲ್ಲವೂ ಬಿಡಿಬಿಡಿಯಾಗಿ ಕಾಣತೊಡಗಿತು. ಬದಲಾದ ಸನ್ನಿವೇಶದಲ್ಲಿ ಹೊಸ ಜಗತ್ತಿನ ಅಭಿವ್ಯಕ್ತಿಯಾದ ಸಾಹಿತ್ಯದ ಸ್ವರೂಪವೂ ಮಾರ್ಪಾಡು ಹೊಂದಿತು.

ನಿಸರ್ಗದ ಲಯಗಳಿಂದ, ಬದುಕಿನ ಚಕ್ರೀಯ ಪುನರಾವರ್ತನೆಯಿಂದ, ವ್ಯಷ್ಟಿ–ಸಮಷಿ್ಟಗಳ ಅಂಟುನಂಟುಗಳಿಂದ ಸಾಹಿತ್ಯ ಹೊರಗಾಯಿತು. ಹಾಗೆಯೇ ಆಡುವವನ ನೇರಮಾತಿಗೂ ಎರವಾಗಿ ಆಪ್ತತೆಯನ್ನು ಕಳಚಿಕೊಂಡು ಅದೊಂದು ನಿರ್ಜೀವ ಪ್ರಕ್ರಿಯೆಯಾಗತೊಡಗಿತು.

ಗತದ ನೆನಪುಗಳಿಂದ ಬಿಡಿಸಿಕೊಂಡು ಪ್ರಗತಿಮುಖೀ ಚರಿತ್ರೆಯ ಯಂತ್ರವಾಗತೊಡಗಿತು. ಮೂರು ಲೋಕಗಳನ್ನು ಆವರಿಸಿದ್ದ ಕಥಾಭಿತ್ತಿ ನರಲೋಕವೊಂದನ್ನೇ ಕಚ್ಚಿಕೊಂಡಿತು.

ಕಾಲ್ಪನಿಕ ಲೋಕದ ಅನಿಯಂತ್ರಿತ ಘಟನಾವಳಿಗಳು ಪಶಿ್ಚಮದ ಮಾದರಿಯ ವಸ್ತುನಿಷ್ಠಟವಾದ, ಇಚ್ಛಾಶಕ್ತಿ ಮತ್ತು ಕಲ್ಪನಾಶಕ್ತಿ ವಿಹೀನವಾದ ಇತಿಹಾಸಕ್ಕೆ ಮಾರುಹೋದವು. ದೈವಿಕ ಹಾಗೂ ಪೈಶಾಚಿಕ ಹೊರಚಾಚುಗಳನ್ನು ಹೊಂದಿದ್ದ ಕಥಾ ಪಾತ್ರಗಳು ಕೇವಲ ಮನುಷ್ಯರಾದವು. ಮನೋಲೋಕದ ವಿಸ್ತರಣೆಗಳಾದ ಸ್ವರ್ಗ ಮರ್ತ್ಯ ಪಾತಾಳ ವ್ಯಾಪಕವಾದ ಕಲೆ ಕಾವ್ಯಗಳ ಲೋಕ ಏಕದಂ ಏಕಮುಖಿಯಾಗಿ ಪಂಚೇಂದ್ರಿಯಗಳ, ವಸ್ತುಲೋಕಗಳ ಕಿರುಗಾತ್ರಕ್ಕೆ ಕುಗ್ಗಿಹೋಯಿತು. ವಸಾಹತುಶಾಹಿಯು ಸುರುಮಾಡಿದ ಈ ಪ್ರಕಿ್ರಯೆ ಅದೇ ದಿಕ್ಕಿನಲ್ಲಿ ಮುಂದುವರಿದು ಇವತ್ತು ಸಾಹಿತ್ಯವೂ ಒಂದು ಸರಕಾಗಿ ಸಂತೆಗಳನ್ನು ಹೋಲುವ ಸಾಹಿತ್ಯಮೇಳಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಔದಾರ್ಯದಲ್ಲಿ ಮರುಹುಟು್ಟ ಪಡೆಯುವ ವಿಫಲ ಪ್ರಯತ್ನ ಮಾಡುತ್ತಿದೆ.

ಇದೇ ಕತೆಯನ್ನು ಪಶ್ಚಿಮವನ್ನು ಅನುಕರಿಸುವವರು ಹೇಳುವ ರೀತಿಯೇ ಬೇರೆ: ಅವರ ಪ್ರಕಾರ ಇದು ಪ್ರಗತಿಯ, ಕ್ರಾಂತಿಯ, ಸುಧಾರಣೆಯ, ಬೆಳವಣಿಗೆಯ ಕಥೆ. ಈ ನೆನಪುಗಳಿಲ್ಲದ ನಿಜವನ್ನೂ, ಕನಸುಗಳಿಲ್ಲದ ಸತ್ಯವನ್ನೂ, ಪವಿತ್ರ ಮೌಲ್ಯಗಳಿಲ್ಲದ ತಥ್ಯವನ್ನೂ ನೈಸರ್ಗಿಕ ಗ್ರಾಮೀಣ ಹಿನ್ನೆಲೆಯಿಂದ ಬಂದ ನಾನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಪ್ರಗತಿಯ ನಿಷ್ಕರುಣಿ ಚಕ್ರದ ಅಡಿಯಲ್ಲಿ ನಾಶಗೊಂಡ ಬದುಕಿನ ಸತ್ಯಗಳನ್ನು ನಾನು ನನ್ನ ಕವಿತೆಗಳಲ್ಲಿ ನಾಟಕಗಳಲ್ಲಿ ಕಾದಂಬರಿಗಳಲ್ಲಿ ಚಿತ್ರಿಸಲು ಪ್ರಯತ್ನಿಸಿದೆ. 

ಹೀಗೆ ಮಾತಾಡುವಾಗ ನಮ್ಮಲ್ಲಿ ರೂಢವಾಗಿದ್ದ ಎರವಲು ಮಾದರಿಗಳನ್ನು ಬಿಟ್ಟು ನನಗೆ ರಕ್ತಗತವಾಗಿ ಬಂದಿದ್ದ ಲಯ, ಪ್ರತಿಮೆ ಮತ್ತು ವಿವರಗಳ ಮೂಲಕ ಸರ್ವ ದಮನಕಾರಿಯಾದ ಆಧುನಿಕ ಸಾಹಿತ್ಯಕ್ಕೆ ಪರ್ಯಾಯವಾದ ಸಾಹಿತ್ಯವನ್ನು, ಸಾಹಿತ್ಯ ಪ್ರಜೆ್ಞಯನ್ನು ನಿರ್ಮಿಸಲು ಪ್ರಯತಿ್ನಸುತ್ತಾ ಬಂದಿದ್ದೇನೆ. ಹೊಕ್ಕಳುಬಳ್ಳಿ ಕತ್ತರಿಸಿಕೊಂಡ ಜಗತ್ತನ್ನು ಮತ್ತೆ ತನ್ನ ಕಳೆದುಹೋದ ಬೇರುಗಳ ಜೊತೆಗೂಡಿಸುವ ಪ್ರಯತ್ನ ನನ್ನದು.

ಅಂದರೆ ಇತಿಹಾಸವನ್ನು ಎದುರಿಸಿಯೂ ಕನ್ನಡವಾಗಿ ಉಳಿಯಬಲ್ಲ ನಮ್ಮ ಸಾಹಿತ್ಯ ಪರಂಪರೆಯನ್ನು ಮುಂದುವರಿಸುವ ಪ್ರಯತ್ನ ನನ್ನದು. ಪ್ರಗತಿಯ ವಕ್ತಾರರು ಆಧುನಿಕಪೂರ್ವ ಸಮಾಜದ ಶ್ರೇಣೀಕೃತ ಸ್ವರೂಪವನ್ನು ಮುಂದೊಡ್ಡಿ ತಮ್ಮ ಹಾಗೂ ತಮ್ಮ ಕಾಲವನ್ನು ಮೆಚ್ಚಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ ಅವರು ಆಧುನಿಕ ಪೂರ್ವ ಕಾಲದಲ್ಲಿ ಕೂಡ ಶ್ರೇಣೀಕೃತ ಸಮಾಜವನ್ನು ಶ್ರೇಷ್ಠಕವಿಗಳಾದರೂ ಕೊಂಡಾಡಿಲ್ಲವೆಂಬುದನ್ನು ಮರೆಯುತ್ತಾರೆ. ಅಲ್ಲದೆ ಸೂಕ್ತವಾಗಿ ಅದನ್ನು ಖಂಡಿಸಿದ್ದಾರೆ, ತಿರಸ್ಕರಿಸಿದ್ದಾರೆ.

ಸಂಸ್ಕೃತಿಯ ಇಂಥ ಸೀಮಿತ ಅಸಿ್ತತ್ವದಲ್ಲಿಯೇ ಅಸೀಮತ್ವವನ್ನು ಕಂಡುಕೊಳ್ಳುವ ಶಕಿ್ತ ಹಿಂದಿನ ಕವಿಗಳಿಗೆ ಇತ್ತು ಎಂಬುದನ್ನು ಪ್ರಗತಿವಾದಿಗಳು ಜಾಣತನದಿಂದ ಮರೆವಿಗೆ ತಳ್ಳುತ್ತಾರೆ. ಇರಲಿ, ಸಧ್ಯಕ್ಕಂತೂ ಕನ್ನಡದ ಸಂದರ್ಭದ ಬರಹಗಾರ ಹಿಂದಿನವರಿಗಿಂತ ಭಿನ್ನವಾದ ಸವಾಲುಗಳನ್ನು ಎದುರಿಸುತ್ತಿದ್ದಾನೆ ಎನ್ನುವುದಂತೂ ನಿಜ.

ಈ ಕಾಲದ ಎಲ್ಲ ಲೇಖಕರೂ ಅಕ್ಷರಸ್ಥರೂ ವಿದ್ಯಾವಂತರೂ ಆಗಿರುತ್ತಾರೆ. ಈಗ ಕಾವ್ಯವನ್ನು ಕೇಳುವವರು ಕಡಿಮೆ, ಓದುವವರು ಹೆಚ್ಚು. ಲಿಖಿತ ಪರಂಪರೆಯ ಅತ್ಯಂತ ಮುಖ್ಯವಾದ ಪರಿಣಾಮವನ್ನು ಆಧುನಿಕ ಕಾವ್ಯದ ಛಂದೋರಚನೆಯಲ್ಲಿ ಗುರುತಿಸಬಹುದು. ‘ಕವಿತೆಯನ್ನು ಸೃಷ್ಟಿಸುವುದು ಛಂದೋಬಂಧಗಳಲ್ಲ. ಆದರೆ ಆ ಬಂಧಗಳ ರಚನೆಯ ಹಿಂದಿರುವ ತರ್ಕಗಳು’ ಎಂಬ ಎಮರ್‌ಸನ್‌್ನನ ಮಾತನ್ನು ನಮ್ಮ ಕವಿಗಳು ಅತ್ಯಂತ ವಿಧೇಯತೆಯಿಂದ ಪಾಲಿಸುತ್ತಿದ್ದಾರೆ.

ಆದ್ದರಿಂದ ಕಾವ್ಯ ಇಂದು ತನ್ನ ಛಂದೋಗತಿಯನ್ನು ಕಳೆದುಕೊಂಡಿದೆ. ಅಥವಾ ಸ್ವಚ್ಛಂದ ಛಂದವನ್ನು ಬಳಸಿಕೊಳ್ಳುತ್ತಿದೆ. ಇದು ಗದ್ಯದ ಸ್ವರೂಪವನ್ನು ಪಡೆಯುವ ಹವಣಿಕೆಯಾಗಿಯೂ ಕಾಣುತ್ತದೆ. ನಮ್ಮ ಹಿಂದಿನ ಕಾವ್ಯಗಳು ಕತೆ ಹೇಳುತ್ತಿದ್ದವು. ಕತೆ ಕಾವ್ಯಕ್ಕೆ ಕಾಲದೇಶಗಳ ಸಂದರ್ಭವನ್ನು ಒದಗಿಸಬಲ್ಲುದು. ಕಾವ್ಯದ ಅರ್ಥ ಮೂಲದಲ್ಲಿ ಅಮೂರ್ತವಾಗಿದ್ದರೂ ಕತೆಯ ಪರಿವೇಷದಲ್ಲಿ ಅದು ಮೂರ್ತವಾಗಿ ಅನುಭವವೇದ್ಯವಾಗಬಲ್ಲುದು.

ಹಾಗೆಯೇ ಇನ್ನೂ ಒಂದು ಸಮಸ್ಯೆ ಆಧುನಿಕ ಬರಹಗಾರನಿಗಿದೆ. ಅದೆಂದರೆ ಹಳೆಯ ಕವಿಗಳಿಗೆ ವಸ್ತುವಿನ ಆಯ್ಕೆಯಲ್ಲಿ ಯಾವ ಸಮಸೆ್ಯೆಯೂ ಇರಲಿಲ್ಲ. ಅವರು ಮೊದಲೇ ಇದ್ದ ಕತೆಗಳಲ್ಲಿ ಒಂದನ್ನು ಆಯು್ದಕೊಳ್ಳಬಹುದಾಗಿತ್ತು. ಆಧುನಿಕ ಕವಿಗೆ ವಸ್ತುವಿನ ಆಯ್ಕೆ ಒಂದು ನೈತಿಕ ಸಮಸ್ಯೆಯಾಗಿದೆ.

ಆದ್ದರಿಂದ ಅವನ ಜವಾಬ್ದಾರಿಯೂ ಹೆಚ್ಚಾಗಿದೆ. ಇಂದಿನ ಕವಿ ತನ್ನ ಕಾವ್ಯ ನಿರ್ಮಾಣದ ಜವಾಬ್ದಾರಿಯನ್ನೂ ತಾನೇ ಹೊತ್ತುಕೊಂಡಿರುವುದರಿಂದ ಹಳೆಯ ತಲೆಮಾರಿನ ಕಾವ್ಯ ಅವನಿಗೆ ಒಂದು ಅನವಶ್ಯಕ ಭಾರವಾಗಿ ಪರಿಣಮಿಸಿದೆ. ಇಂದಿನ ಕವಿ ತನ್ನ ಭಾಷೆಯ ಮೂಲಕವೇ ಜಗತ್ತಿನ ಜೊತೆಗೆ ಸಂಬಂಧವನ್ನೂ ಕಟ್ಟಿಕೊಳ್ಳಬೇಕಾಗಿದೆ. ಕಾವ್ಯಾರ್ಥ ನಿರ್ಮಾಣ ಕೂಡ ಅವನ ಜವಾಬ್ದಾರಿಯಾಗಿದೆ. ಈ ಪರಿಸ್ಥಿತಿಯಲ್ಲಿ ಕಾವ್ಯದ ಸಂವಹನ ಕಿ್ರಯೆಯೂ ಒಂದು ಸಮಸ್ಯೆಯಾಗಿದೆ.

ಸಾಹಿತ್ಯದ ನಾಳೆಗಳನ್ನು ಕುರಿತು ಒಂದು ಹೇಳಲೇಬೇಕೆಂದು ಅನ್ನಿಸುತ್ತಿದೆ. ಈವರೆಗಿನ ನನ್ನ ಮಾತುಗಳನ್ನು ಹೇಳಿದ ಉದ್ದೇಶ ಈ ಶತಮಾನದ ಕಾವ್ಯದ ಕೆಲವು ಸಮಸ್ಯೆಗಳನ್ನು ಚರ್ಚೆಗೊಡ್ಡುವುದೇ ಆಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕಾವ್ಯ ಪ್ರಯೋಜನವಾಗಬೇಕಾದ್ದು ಜನರಿಗೆ. ಕವಿ ತನ್ನ ಆತ್ಮಚರಿತ್ರೆಯನ್ನೇ ಬರೆಯಲಿ, ಅಥವಾ ಲೋಕಚರಿತ್ರೆಯನ್ನೇ ಬರೆಯಲಿ ಜನರಿಗೆ ಅದರಲ್ಲಿ ಆಸಕ್ತಿ ಮೂಡಬೇಕಾದು್ದ ಅಗತ್ಯ.

ಕವಿಪ್ರತಿಭೆಗೆ ಇದೊಂದು ದೊಡ್ಡ ಸವಾಲಾಗಿದೆ. ಇದರರ್ಥ ಕಾವ್ಯ ಜನಪ್ರಿಯವಾಗಿ ಅಗ್ಗವಾಗಬೇಕೆಂದೇನೂ ಅಲ್ಲ. ಕಾವ್ಯ ಮನುಷ್ಯನ ಯಾವ ಅಗತ್ಯವನ್ನೂ ಪೂರೈಸಬಹುದೆಂಬುದು ಕವಿಗೆ ಗೊತ್ತಾಗಬೇಕು. ಕಾವ್ಯವೆಂದರೆ ಕವಿಯ ಆತ್ಮಾಭಿವ್ಯಕ್ತಿಯ ಸಿದಿ್ಧಯಲ್ಲ. ಆದರೆ ಅದು ಜನರ ಆಶೋತ್ತರಗಳ ಅಭಿವ್ಯಕ್ತಿಯಾಗಬೇಕು. ಕಾಳಿದಾಸ ಹೇಳುವಂತೆ ಕಲೆ ಮುಖ್ಯವಾಗಿ ಒಂದು ಪ್ರದೇಶದ ಸಾಹಿತ್ಯಿಕ ಅರ್ಥವಂತಿಕೆಯನ್ನು ಪ್ರಸ್ತುತಪಡಿಸಬೇಕೆಂಬುದು ನನ್ನ ಅಭಿಪ್ರಾಯ. ಹಳೆಯ ಕಾವ್ಯಕೃತಿಗಳು ಈಗಲೂ ಉಳಿದು ಬಂದಿದ್ದರೆ ಅದು ಈ ಕಾರಣಕ್ಕಾಗಿ.

ನಾನೂ ಕನ್ನಡ ಪರಂಪರೆಗೆ ಸೇರಿದ ಒಬ್ಬ ಕವಿ. ನನಗೆ ಜನಪದ ಕಾವ್ಯವೇ ಒಂದು ಭಾಷೆ. ಈ ಭಾಷೆಯ ಮೂಲಕ ಜಗತ್ತನ್ನು ಪಡೆಯಲು ಪ್ರಯತಿ್ನಸಿದವನು. ಕವಿಯಾದವನು ತನ್ನ ಜಗತ್ತಿನ ಹುಡುಕಾಟದಲ್ಲಿರುವಾಗ ಅವನಿಗೆ ಸಿಕ್ಕೋದು ಭಾಷೆ. ನಾವೆಲ್ಲ ಭಾಷೆಯನ್ನು ಪಡೆದುಕೊಂಡು ಜಗತ್ತನ್ನು ಕಳೆದುಕೊಳ್ಳುತ್ತೇವೆ. ಜಗತ್ತಿನ ಬದಲಾಗಿ ಸಿಕ್ಕ ಈ ಭಾಷೆ ಒಂದು ಅದು್ಭತವಾದ ಶಕ್ತಿ. ಕವಿಯಾದವನು ಈ ಭಾಷೆಯ ಜೊತೆಗೆ ಪ್ರಣಯಲೀಲೆಯಲ್ಲಿ ತೊಡಗದೆ ಗತಿಯಿಲ್ಲ. ಈ ಭಾಷೆಯನ್ನು ಎಷ್ಟೆಷ್ಟು ಪ್ರೀತಿಸಿದರೆ ಅಷ್ಟಷ್ಟು ಈ ಜಗತ್ತಿನ ತಂತ್ರಗಳೆಲ್ಲ ಬಯಲಿಗೆ ಬರುತ್ತವೆ. ಜಗತ್ತು ಮುಚ್ಚಿಟ್ಟುಕೊಂಡಿದ್ದನ್ನೆಲ್ಲಾ ಭಾಷೆ ಬೆಳಕಿಗೆ ತರುತ್ತದೆ. ಜಗತ್ತಿನಲ್ಲಿ ಅನುಭವವಾಗಿದ್ದದ್ದು ಕವಿಯ ಭಾಷೆಯಲ್ಲಿ ಅರ್ಥವಾಗುತ್ತದೆ. ಈ ಅರ್ಥಕ್ಕೇ ಇಂದಿನ ಕವಿ ತೃಪ್ತನಾಗುವಂತೆ ಕಾಣುತ್ತಿದೆ. ಇದು ಇಂದಿನ ಕವಿಯ ಮಿತಿಯೂ ಇರಬಹುದೇನೋ. ಕಾವ್ಯದಲ್ಲಿ ಬರುವ ಅರ್ಥ ಓದುಗನಲ್ಲಿ ಅನುಭವವಾಗಿ ಪುನರವತರಿಸಿದಾಗಲೇ ಈ ಪ್ರಕಿ್ರಯೆಗೊಂದು ಪರಿಪೂರ್ಣತೆ ಬರುತ್ತದೆಂಬುದು ನಮ್ಮ ಕವಿಗಳಿಗೆ ಖಾತ್ರಿಯಾಗಬೇಕಾಗಿದೆ.

ನನ್ನ ಸಮಕಾಲೀನ ಬರಹಗಾರರಲ್ಲಿ ಹೆಚ್ಚಿನವರು ತರ್ಕ (reason) ಮತ್ತು ವ್ಯಂಗ್ಯದ ಭಾಷೆಯನ್ನು ಬಳಸಿದರೆ ನಾನು ತೀವ್ರ ಭಾವನೆಗಳ ನೋವಿನ ಭಾಷೆಯಲ್ಲಿ ಹಾಡಿದೆ. ಅವರು ಇತಿಹಾಸದೊಂದಿಗೆ ಬೆಸೆದುಕೊಂಡರು. ನಾನು ಮಿಥ್‌ ಬಗೆಗಿನ ಆಕರ್ಷಣೆಯಿಂದ ಹೊರಬರಲಾಗಲಿಲ್ಲ. ಪ್ರೀತಿ ಮತ್ತು ಕಾವ್ಯಾತ್ಮಕತೆ ಅವರ ಪ್ರಪಂಚದಿಂದ ಮರೆಯಾಗಿದ್ದವು. ಆದರೆ ಇವೇ ನನ್ನ ಕಾವ್ಯದ ಉಸಿರಾಗಿದ್ದವು. ಇಲ್ಲಿಯವರೆಗೆ ನಾನು ವಿವರಿಸಲು ಯತ್ನಿಸಿದ್ದು ಇಂದಿನ ಕಾವ್ಯದ ಕೆಲವು ಸಮಸ್ಯೆಗಳನ್ನು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT