ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಧುನಿಕ ತಂತ್ರಜ್ಞಾನ ಬಳಕೆ ಹೆಚ್ಚಾಗಲಿ'

Last Updated 6 ಜುಲೈ 2013, 9:38 IST
ಅಕ್ಷರ ಗಾತ್ರ

ರಾಮನಗರ: ಅಪರಾಧ ಪತ್ತೆ ಮತ್ತು ತನಿಖೆಗೆ ಪೂರಕವಾಗಿ ಆಧುನಿಕ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗೃಹ ಸಚಿವ ಕೆ.ಜೆ.ಜಾರ್ಜ್ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಚನ್ನಪಟ್ಟಣದ ರಾಜ್ಯ ಪೊಲೀಸ್ ತರಬೇತಿ ಶಾಲೆಯಲ್ಲಿ ಶುಕ್ರವಾರ ನಡೆದ 2ನೇ ತಂಡದ ಸಶಸ್ತ್ರ ಪೊಲೀಸ್ ಕಾನ್‌ಸ್ಟೇಬಲ್‌ಗಳ ನಿರ್ಗಮನ ಪಥಸಂಚಲ ಪರಿವೀಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ತನಿಖೆಯಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲು ವಿಧಿವಿಜ್ಞಾನ ಪ್ರಯೋಗಾಲಯಗಳನ್ನು ಮೇಲ್ದೇರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗಿದೆ. ಅದರ ಜೊತೆಗೆ ಬೆಂಗಳೂರಿನ ಕೇಂದ್ರ ಘಟಕದಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯ ಸ್ಥಾಪಿಸಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಖಾಲಿ ಹುದ್ದೆಗಳ ಭರ್ತಿಗೆ ಕ್ರಮ : ಇಲಾಖೆಯಲ್ಲಿ 18 ಸಾವಿರ ಸಿಬ್ಬಂದಿ ಕೊರತೆಯಿದ್ದು, ಇದರಲ್ಲಿ 8 ಸಾವಿರ ಸಿಬ್ಬಂದಿ ಭರ್ತಿಗೆ ಮುಖ್ಯಮಂತ್ರಿ ಒಪ್ಪಿಗೆ ನೀಡಿದ್ದಾರೆ. ನೇಮಕಾತಿಯಲ್ಲಿ ಮಹಿಳೆಯರಿಗೆ ಶೇ 20ರಷ್ಟು ಹುದ್ದೆಗಳನ್ನು ಮೀಸಲಿಡಲಾಗುವುದು. ಅಲ್ಲದೆ ಬುಡಕಟ್ಟು ಜನಾಂಗದವರಿಗೆ ನೇಮಕಾತಿ ನಿಯಮಗಳಲ್ಲಿ ವಿನಾಯಿತಿ ನೀಡುವ ಚಿಂತನೆ ಇದೆ. ಪೊಲೀಸ್‌ರ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಪ್ರತ್ಯೇಕ ಶಾಲೆ ಹಾಗೂ ಪೊಲೀಸರಿಗೆ ಪ್ರತ್ಯೇಕ ಕ್ಯಾಂಟೀನ್ ವ್ಯವಸ್ಥೆ ಜಾರಿಗೆ ಕ್ರಮ ತೆಗೆದುಕೊಳ್ಳಲಾಗುವುದು.

ತರಬೇತಿ ವಿಭಾಗದ ಡಿಜಿಪಿ ಸುಶಾಂತ ಮಹಾಪಾತ್ರ ಮಾತನಾಡಿ, ಹೊಸ ಪೊಲೀಸ್ ತರಬೇತಿ ಕೇಂದ್ರಗಳಿಗೆ ಹಾಗೂ ಇರುವ ಕೇಂದ್ರಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ ಸರ್ಕಾರ 150 ಕೋಟಿ ರೂಪಾಯಿ ಒದಗಿಸಿದ್ದು, ಅದರಲ್ಲಿ ವಿವಿಧ ಹಂತದಲ್ಲಿ ಕಾಮಗಾರಿಗಳು ನಡೆಯುತ್ತಿವೆ. ಕಡೂರಿನಲ್ಲಿ ಹೊಸ ತರಬೇತಿ ಶಾಲೆ ನಿರ್ಮಾಣ ಕಾರ್ಯ ನಡೆದಿದೆ. ಬೆಳಗಾವಿ, ಥಣಿಸಂದ್ರ (ಬೆಂಗಳೂರು ಉತ್ತರ), ಐಮಂಗಲ (ಚಿತ್ರದುರ್ಗ), ಮೈಸೂರು ಕೇಂದ್ರಗಳಲ್ಲಿ ಮೂಲ ಸೌಕರ್ಯ ವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗಿದೆ. ಧಾರವಾಡ, ಮೈಸೂರು ಮತ್ತು ತುಮಕೂರು ಕೇಂದ್ರಗಳಲ್ಲಿ ಮಹಿಳೆ ಸಿಬ್ಬಂದಿಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

591 ಪ್ರಶಿಕ್ಷಿಣಾರ್ಥಿಗಳ ನಿರ್ಗಮನ: ಪ್ರಾಸ್ತಾವಿಕವಾಗಿ ಮಾತನಾಡಿದ ತರಬೇತಿ ಶಾಲೆಯ ಪ್ರಾಂಶುಪಾಲ ಎಂ.ಎಸ್. ಇಂದುಶೇಖರ್, ನಿರ್ಗಮಿಸುತ್ತಿರುವ ತಂಡದಲ್ಲಿ 591 ಪ್ರಶಿಕ್ಷಣಾರ್ಥಿಗಳು ತರಬೇತಿ ಮುಗಿಸಿದ್ದು, 9 ತಿಂಗಳ ತರಬೇತಿ ಪಡೆದಿದ್ದಾರೆ. 13 ಜಿಲ್ಲೆಗಳಿಂದ ತರಬೇತಿಗೆ ಆಗಮಿಸಿರುವ ಇವರುಗಳಲ್ಲಿ ಸ್ನಾತಕೋತ್ತರ ಪದವೀಧರರು, ಬಿ.ಎಡ್ ಪದವೀಧರರು, ಮಾಜಿ ಸೈನಿಕರು, ಕಂಪ್ಯೂಟರ್ ತರಬೇತಿ ಶಿಕ್ಷಣ ಹೊಂದಿದವರು ಇದ್ದಾರೆ ಎಂದರು.

ಇಲ್ಲಿಯವರೆಗೆ ಈ ಶಾಲೆಯಲ್ಲಿ  60 ತಂಡಗಳಲ್ಲಿ 27,623 ನಾಗರಿಕ ಕಾನ್‌ಸ್ಟೇಬಲ್‌ಗಳು, 208 ಅಬಕಾರಿ ಎಸ್‌ಐಗಳಿಗೆ 1958 ಎಎಸ್‌ಐಗಳಿಗೆ ತರಬೇತಿ ನೀಡಲಾಗಿದೆ ಎಂದರು.

ಆಂತರಿಕ ಭದ್ರತಾ ವಿಭಾಗ ಹಾಗೂ ತರಬೇತಿ ಪೊಲೀಸ್ ಮಹಾನಿರೀಕ್ಷಕ ಭಾಸ್ಕರ್ ರಾವ್ ಸ್ವಾಗತಿಸಿದರು. ಇನ್‌ಸ್ಪೆಕ್ಟರ್ ರಮೇಶ್ ವಂದಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ನಿರೀಕ್ಷಕ ಲಾಲ್ ರುಕುಮಾ ಪಚಾವೊ, ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಮೊದಲಾದವರು ಉಪಸ್ಥಿತರಿದ್ದರು.

ಆಕರ್ಷಕ ಪಥಸಂಚಲನ
16 ತಂಡಗಳ 591 ಪ್ರಶಿಕ್ಷಾಣಾರ್ಥಿಗಳು ನಿರ್ಗಮನ ಪಥಸಂಚಲನದಲ್ಲಿ ಪಾಲ್ಗೊಂಡು ಅತಿಥಿಗಳಿಗೆ ಗೌರವ ವಂದನೆ ಸಲ್ಲಿಸಿದರು. ಉತ್ತಮ ಪ್ರಶಿಕ್ಷಾಣಾರ್ಥಿಯಾಗಿ `ಸರ್ವೋತ್ತಮ ಪ್ರಶಸ್ತಿ'ಯನ್ನು ಬೆಳಗಾವಿಯ ಅಜಿತ್ ಕೆ ಬೆಂಡವಾಡೆ ಹಾಗೂ ಡಿಜಿಪಿ ಟ್ರೋಫಿಯನ್ನು ಉಡುಪಿಯ ನಿತ್ಯಾನಂದಗೌಡ ಅವರಿಗೆ ನೀಡಲಾಯಿತು. ತರಬೇತಿಯ ಪ್ರಧಾನ ದಂಡನಾಯಕ ಶಿವರಾಜ್ ಹಾಗೂ ಸಹಾಯಕ ದಂಡನಾಯಕ ಕುಮಾರ್‌ಗೌಡ ಅವರ ನೇತೃತ್ವದಲ್ಲಿ ಪಥಸಂಚಲನ ಆಕರ್ಷವಾಗಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT