ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ಪದ್ಧತಿಗಳಿಂದ ಕೃಷಿ ಸಂಸ್ಕೃತಿಗೆ ಧಕ್ಕೆ

Last Updated 25 ಡಿಸೆಂಬರ್ 2012, 10:20 IST
ಅಕ್ಷರ ಗಾತ್ರ

ಶಿರಾ: ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಕಂಪೆನಿಗಳು ರೈತನಿಗೆ ಅತ್ಯಂತ ಮಾರಕವಾಗುತ್ತಿದ್ದು, ರೈತರನ್ನು ರೋಗಗ್ರಸ್ತರನ್ನಾಗಿಸುವುದಲ್ಲದೇ ಅವಸರದ ಬೇಸಾಯದಿಂದ ನಮ್ಮ ಕೃಷಿ ಸಂಸ್ಕೃತಿ ನಾಶವಾಗುತ್ತಿದೆ ಎಂದು ಗದಗ ಜಿಲ್ಲೆಯ ಸಾವಯವ ಕೃಷಿಕ ಡಿ.ಡಿ.ಭರಮೇಗೌಡ ಅಭಿಪ್ರಾಯಪಟ್ಟರು.

ನಗರದ ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವ ಅಂಗವಾಗಿ ಮೂರನೇ ದಿನದ ಗ್ರಾಮೀಣ ಕೃಷಿ ಸಬಲೀಕರಣ ಸಮಾವೇಶದಲ್ಲಿ ಕೃಷಿ ಲಾಭದಾಯಕವಾಗಲು ಸಾವಯವ ಕೃಷಿಯನ್ನೇ ಏಕೆ ಮಾಡಬೇಕು ಎನ್ನುವ ಕುರಿತು ವಿಚಾರ ಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ತಂತ್ರಜ್ಞಾನ ಬೆಳದಂತೆಲ್ಲ ನಾವು ಭೂಮಿಯ ಅಂತರದಿಂದ ದೂರ ಸರಿಯುತ್ತಿದ್ದೇವೆ. ಹೊಸ ಹೊಸ ಆವಿಷ್ಕಾರದಲ್ಲಿ ಆಧುನಿಕತೆಯ ಬದುಕು ದಿನೇ ದಿನೇ ಕೃತಕವಾಗತೊಡಗಿದೆ. ಮೊದಲು ನಾವು ಸಾವಯವ ಕೃಷಿಗೆ ಆದ್ಯತೆ ನೀಡುವುದಲ್ಲದೆ, ಸಹಜ ಆಹಾರ ಪದ್ಧತಿಗೆ ಬರುವ ಪ್ರಯತ್ನ ಮಾಡಬೇಕಿದೆ ಎಂದರು.

ಸಾವಯವ ಕೃಷಿಯಿಂದ ಮನೆಯ ಅಡುಗೆ ಮನೆ ಶೇ 80ರಷ್ಟು ಸಾವಯವ ಅಥವಾ ಸ್ವಾವಲಂಬಿಯಾಗಿಸಬಹುದು ಎಂದು ನಂದಿಹಳ್ಳಿಯ ಕೃಷಿಕ ಮೃತ್ಯುಂಜಯಪ್ಪ ನುಡಿದರು. ಬಡತನಕೆ ಉಂಬುವ ಚಿಂತೆ ಎನ್ನುವ 12ನೇ ಶತಮಾನದ ವಚನ ಇಂದಿನ ಕಾಲದಲ್ಲಿ ಉಡಲಾದರೆ ಹೊಲದ ಚಿಂತೆ, ಹೊಲವಾದರೆ ಬೋರಿನಾ ಚಿಂತೆ, ಬೋರಾದರೆ ಮೋಟರಿನ ಚಿಂತೆ, ಮೋಟರಾದರೆ ಕರೆಂಟಿನ ಚಿಂತೆ, ಕರೆಂಟಾದರೆ ನೀರಿನ ಚಿಂತೆ, ನೀರು ನಿಂತರೆ ಸಾಲದ ಚಿಂತೆ, ಸಾಲ ತೀರದಿರೆ ಸಾವಿನ ಚಿಂತೆ ಎಂದು ರೈತರ ಬದುಕು ಮತ್ತು ಆತ್ಮಹತ್ಯೆಯ ಕಾರಣಗಳನ್ನು ಕುರಿತು ವ್ಯಾಖ್ಯಾನಿಸಿದರು.

ಪ್ರೆಸಿಡೆನ್ಸಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಚಿದಾನಂದ್ ಎಂ.ಗೌಡ, ಆಹಾರ ಮತ್ತು ಪೌಷ್ಟಿಕ ತಜ್ಞ ಕೆ.ಸಿ.ರಘು, ಡಾ.ಖಾದರ್, ರಾಯಚೂರು ಕೃಷಿ ವಿವಿ ಸದಸ್ಯೆ ಆಶಾ, ಜೈವಿಕ ಇಂಧನ ಮಂಡಳಿ ಸದಸ್ಯ ಅತ್ತಿಹಳ್ಳಿ ದೇವರಾಜ್ ಹಾಜರಿದ್ದರು.

ಚಿಂತನ ಪ್ರಶಸ್ತಿ ಪ್ರದಾನ
ಪರಿಸರ, ವೈಜ್ಞಾನಿಕ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ವಿಜ್ಞಾನ ವಿಷಯದಲ್ಲಿ 20ಕ್ಕೂ ಹೆಚ್ಚು ಕೃತಿ ರಚಿಸಿರುವ ಕರ್ನಾಟಕ ಸರ್ಕಾರದ ಪರಿಸರ ಪತ್ರಕರ್ತ ಪ್ರಶಸ್ತಿಗೆ ಪಾತ್ರರಾದ, `ಪ್ರಜಾವಾಣಿ'ಯ ವಿಜ್ಞಾನ ವಿಶೇಷ ಅಂಕಣಕಾರ ನಾಗೇಶ ಹೆಗಡೆ ಅವರಿಗೆ ಚಿಂತನ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT