ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ವಧುವಿಗೆ...

Last Updated 9 ನವೆಂಬರ್ 2011, 19:30 IST
ಅಕ್ಷರ ಗಾತ್ರ

ದೀಪಿಕಾ ಗೋವಿಂದ್ ಬೆಂಗಳೂರು ಮೂಲದ ಪ್ರಖ್ಯಾತ ವಸ್ತ್ರ ವಿನ್ಯಾಸಕಿ. ಕಲೆ, ತಂತ್ರಜ್ಞಾನ, ಮಾನವ ಕೌಶಲ್ಯ ಎಲ್ಲವನ್ನೂ ಬೆರೆಸಿ ವಸ್ತ್ರವಿನ್ಯಾಸ ಮಾಡುತ್ತಾರೆ. ಪ್ರತಿಯೊಬ್ಬರಲ್ಲೂ ಇರುವ ದ್ವಂದ್ವ, ವೈರುಧ್ಯಗಳನ್ನು ತಮ್ಮ ವಸ್ತ್ರಗಳಲ್ಲಿ ಬಿಂಬಿಸುತ್ತಾರೆ.

ಒರಟು ವಸ್ತ್ರ, ಮೃದುವಾದ ವಸ್ತ್ರ, ತೆಳು ಬಣ್ಣ ಮತ್ತು ಗಾಢ ವರ್ಣ, ಪಾರದರ್ಶಕ ಮತ್ತು ಅಪಾರದರ್ಶಕ ಎಲ್ಲವೂ ಅವರ ವಿನ್ಯಾಸಗಳಲ್ಲಿ ಕಾಣುತ್ತದೆ.

ಬನಾರಸ್‌ನ ಜನಜಂಗುಳಿಯ ಬಜಾರ, ಭಾಗಲ್ಪುರದ ನೇಯ್ಗೆ, ಗುಜರಾತ್, ರಾಜಸ್ತಾನದ ಟೈ ಆ್ಯಂಡ್ ಡೈ ಬಟ್ಟೆ, ಒಡಿಶಾದ ಇಕ್ಕತ್, ಭುಜ್‌ನ ವಸ್ತ್ರ, ಕೈಮಗ್ಗದ ಖಾದಿ ಅವರಿಗೆ ಸ್ಫೂರ್ತಿ. ಎರಡು ವರ್ಷ `ಮೈಸೂರು ರೇಷ್ಮೆ~ ಖ್ಯಾತಿಯ ಕೆಎಸ್‌ಐಸಿಗೆ ವಿನ್ಯಾಸಕಿಯಾಗಿದ್ದ ದೀಪಿಕಾ ಅವರು ಹಂಪಿ, ಬೇಲೂರು, ಹಳೇಬೀಡಿನಿಂದ ಪ್ರೇರಣೆ ಪಡೆದು ಆ ವಿನ್ಯಾಸಗಳನ್ನು  ಕೆಎಸ್‌ಐಸಿ ಸೀರೆಗಳಲ್ಲಿ ಅಳವಡಿಸಿದ್ದಷ್ಟೇ ಅಲ್ಲದೇ ರೇಷ್ಮೆ ಸೀರೆಗಳಿಗೆ ಹೊಸ ರೂಪು ನೀಡಿದರು.

ಸಾವಯವ, ನೈಸರ್ಗಿಕ ಎಳೆಗಳನ್ನೇ ಇಷ್ಟಪಡುವ ದೀಪಿಕಾ ತಮ್ಮ ವಸ್ತ್ರಗಳಲ್ಲಿ ಇವುಗಳನ್ನೇ ಬಳಸುತ್ತಾರೆ. ರೇಷ್ಮೆ, ಕಾಟನ್, ಖಾದಿ, ಲಿನನ್ ಈ ನಾಲ್ಕು ವಸ್ತ್ರಗಳ ಕಾಂಬಿನೇಷನ್ ಮಾತ್ರ ಉಪಯೋಗಿಸುತ್ತಾರೆ. ಸತತ ಸಂಶೋಧನೆ ನಂತರ `ಅರೋಮಾಥೆರಪಿ~ಯನ್ನು ಮೊದಲ ಬಾರಿ ರೇಷ್ಮೆ ವಸ್ತ್ರಗಳಲ್ಲಿ ಅಳವಡಿಸಿದ ಹೆಗ್ಗಳಿಕೆಯೂ ಇವರಿಗೆ ಸಲ್ಲುತ್ತದೆ. ಲಕ್ಮೆ ಫ್ಯಾಷನ್ ವೀಕ್, ವೀಲ್ಸ್ ಇಂಡಿಯಾ ಫ್ಯಾಷನ್ ವೀಕ್ ಸೇರಿದಂತೆ ಪ್ರಖ್ಯಾತ ಫ್ಯಾಷನ್ ಶೋಗಳಲ್ಲಿ ಪಾಲ್ಗೊಂಡಿದ್ದಾರೆ.

ವಸ್ತ್ರ ವಿನ್ಯಾಸ ಅಂದರೆ, `ಸಂಶೋಧನೆ, ಪಯಣ ಮತ್ತು ಕಥೆ ಹೇಳುವುದು~ ಎನ್ನುತ್ತಾರೆ ದೀಪಿಕಾ. 

`ಎ ಡಾಲ್ಸ್ ಹೌಸ್- ಬ್ರೈಡಲ್ ಕಲೆಕ್ಷನ್~ ಇವರ ಇತ್ತೀಚಿನ ವಿನ್ಯಾಸ. ನಾರ್ವೆಯ ನಾಟಕಕಾರ ಹೆನ್ರಿಕ್ ಇಬ್ಸನ್‌ನ ವಿಶ್ವವಿಖ್ಯಾತ ನಾಟಕ  `ಡಾಲ್ಸ್ ಹೌಸ್~ನಿಂದ ಸ್ಫೂರ್ತಿ ಪಡೆದು ದೀಪಿಕಾ ಈ ವಧುವಿನ ಉಡುಪುಗಳನ್ನು ವಿನ್ಯಾಸಗೊಳಿಸಿದ್ದಾರೆ. ಪುರುಷರು ಮಹಿಳೆಯರನ್ನು ಹೇಗೆ ಗೊಂಬೆಗಳಂತೆ ನಡೆಸಿಕೊಳ್ಳುತ್ತಾರೆ, ಅರಿವು ಮೂಡಿದ ಮಹಿಳೆ ಹೇಗೆ ಈ ಬಂಧನದಿಂದ ಪಾರಾಗುತ್ತಾಳೆ ಎಂಬುದನ್ನು `ಡಾಲ್ಸ್ ಹೌಸ್~ನಲ್ಲಿ ಮೂರು ಅಂಕಗಳ ನಾಟಕದ ಮೂಲಕ ಪ್ರಸ್ತುತಪಡಿಸಲಾಗಿದೆ.

ಸ್ವತಂತ್ರ ಮನೋಭಾವದ, ಯಾರ ಆಣತಿಗೂ ಕಾಯದ ಆಧುನಿಕ ಮಹಿಳೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಆಕರ್ಷಕ ವಿನ್ಯಾಸ ರೂಪಿಸಿದ್ದಾಗಿ ದೀಪಿಕಾ ಹೇಳುತ್ತಾರೆ. ದಿ ವಾರಿಯರ್ ಡಾಲ್, ದಿ ಆರ್ಟಿಸ್ಟ್ ಡಾಲ್ ಮತ್ತು ದಿ ಅಡ್ವೆಂಚರ್ ಡಾಲ್ - ಹೀಗೆ ಮೂರು ಬಗೆಯ ವೈವಿಧ್ಯಗಳಲ್ಲಿ ಇವರ ಬ್ರೈಡಲ್ ಕಲೆಕ್ಷನ್ ಲಭ್ಯ.

ವಸ್ತ್ರ ಧರಿಸುವ ಯುವತಿಯ ವ್ಯಕ್ತಿತ್ವ ಎದ್ದು ಕಾಣುವಂತೆ `ವಾರಿಯರ್ ಡಾಲ್~ ಕಲೆಕ್ಷನ್ ವಿನ್ಯಾಸಗೊಳಿಸಲಾಗಿದೆ. ಭಯವಿಲ್ಲದ, ದಿಟ್ಟ ಆಧುನಿಕ ಯುವತಿ ಇದಕ್ಕೆ ಪ್ರೇರಣೆ. ಲೆಹಂಗಾ, ಸೀರೆ ಮತ್ತು ಕುರ್ತಾ ಮೂರು ಬಗೆಯಲ್ಲಿ ಇವು ಲಭ್ಯ. ಮುತ್ತಿನ ಬಣ್ಣ, ಅದಕ್ಕೆ ಹೊಂದುವ ಕೆಂಪು ಬಣ್ಣ, ಚಿನ್ನದ ಬಣ್ಣದ ಕಸೂತಿ ಕೆಲಸ ಈ ವಸ್ತ್ರಗಳಲ್ಲಿ ಕಾಣುತ್ತದೆ. ಕಿಂಕಾಬ್, ಜಮಾವರ್, ಜಕಾರ್ಡ್, ಇಕ್ಕತ್ ಎಲ್ಲ ಬಗೆಯ ವಸ್ತ್ರಗಳನ್ನು ಬಳಸಿದ್ದಾರೆ.

 ತನ್ನ ಕನಸಿನಲ್ಲಿ ಕಳೆದುಹೋಗುವ ಯುವತಿಯ ಮನೋಭಾವ `ದಿ ಆರ್ಟಿಸ್ಟ್ ಡಾಲ್~ಗೆ ಪ್ರೇರಣೆ. ಸಾಯವಯ ಮೃದು ರೇಷ್ಮೆಯ ಮೇಲೆ ಪುರಾತನ ವಿನ್ಯಾಸಗಳನ್ನು ಮೂಡಿಸಲಾಗಿದೆ. ಹವಳ, ಹಸಿರು, ಗುಲಾಬಿ, ಮಾವಿನ ಹಣ್ಣಿನ ಬಣ್ಣ, ಕೆನೆ ಬಣ್ಣಗಳನ್ನು ಬಳಸಲಾಗಿದೆ.

ಮುಕ್ತ ಮನಸ್ಸಿನ, ವೈವಿಧ್ಯಮಯ ಸಂಸ್ಕೃತಿಯನ್ನು ತನ್ನದಾಗಿಸಿಕೊಳ್ಳುವ ಯುವತಿಯನ್ನು ಮನದಲ್ಲಿಟ್ಟುಕೊಂಡು `ದಿ ಅಡ್ವೆಂಚರ್ ಡಾಲ್~ ಕಲೆಕ್ಷನ್ ರೂಪಿಸಲಾಗಿದೆ. ಉದ್ದನೆಯ ಸ್ಕರ್ಟ್, ಜಾಕೆಟ್, ಜಿಪ್ಸಿಗಳ ಉಡುಪು ನೆನಪಿಸುವ ವಿನ್ಯಾಸ ಇಲ್ಲಿದೆ. 

  ಈ ಎಲ್ಲ ವಿನ್ಯಾಸಗಳಲ್ಲೂ ದೀಪಿಕಾ ದಕ್ಷಿಣ ಭಾರತೀಯರ ಮನೋಭಾವಕ್ಕೆ ಒಗ್ಗುವಂತೆ ಕಡಿಮೆ ಕಸೂತಿ ಬಳಸಿದ್ದಾರೆ. ಬ್ರೈಡಲ್ ಕಲೆಕ್ಷನ್ ಅಂದರೆ ಸಾಮಾನ್ಯವಾಗಿ ಭಾರಿ ಕಸೂತಿ, ಗಾಢ ವರ್ಣ ಇರುತ್ತದೆ. ವಸ್ತ್ರದ ತುಂಬ ಕಸೂತಿ ಮಾಡಿದರೆ ಡ್ರೆಸ್ ವಿನ್ಯಾಸ, ಬಟ್ಟೆಯ ಅಂದ ಎರಡೂ ಮರೆಯಾಗಿ ಕಸೂತಿಯಷ್ಟೇ ಕಾಣುತ್ತದೆ. ಅದು ತಮಗೆ ಇಷ್ಟವಾಗದು ಎನ್ನುತ್ತಾರೆ ದೀಪಿಕಾ.

ಅಂದ ಹಾಗೆ ಈ ಸಂಗ್ರಹದ ಬೆಲೆ 80 ಸಾವಿರದಿಂದ 1.5 ಲಕ್ಷ ರೂಪಾಯಿ ದಾಟುತ್ತದೆ.  ಬೆಂಗಳೂರಿನ ಎಂ.ಜಿ. ರಸ್ತೆ, ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೆಹಲಿಯ ಖಾನ್ ಮಾರ್ಕೆಟ್‌ನಲ್ಲಿ ಅವರ ವಸ್ತ್ರಗಳ ಮಳಿಗೆಗಳಿವೆ.
ವಿವರಗಳಿಗೆ: ಡಿಡಿಡಿ.ಛಿಛಿಜಿಜಟಜ್ಞಿ.್ಚಟಞ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT