ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕತೆಯಿಂದ ಜಾತಿ ವ್ಯವಸ್ಥೆ ಗಟ್ಟಿ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸಾಗರ: ಆಧುನಿಕತೆಯಿಂದ ಭಾರತದಲ್ಲಿ ಜಾತಿ ವ್ಯವಸ್ಥೆ ನಾಶವಾಗುತ್ತಿದೆ ಎಂಬುದು ಸಂಪೂರ್ಣ ಸುಳ್ಳು. ಬದಲಾಗಿ ಆಧುನಿಕತೆ ಜಾತಿ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ ಎಂದು ನವದೆಹಲಿಯ ಜವಾಹಾರ್‌ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಗೋಪಾಲ್ ಗುರು ಹೇಳಿದರು.

ಇಲ್ಲಿಗೆ ಸಮೀಪದ ಹೆಗ್ಗೋಡಿನಲ್ಲಿ ನಡೆಯುತ್ತಿರುವ ನೀನಾಸಂ ಸಂಸ್ಕೃತಿ ಶಿಬಿರದಲ್ಲಿ ಸೋಮವಾರ `ಜಾತಿ ಹಾಗೂ ಅದರ ಗಡಿ ರೇಖೆಗಳು~ ವಿಷಯದ ಕುರಿತು ಅವರು ಮಾತನಾಡಿದರು. ಜಾಗತೀಕರಣದಿಂದ ಏಕರೂಪಿ ಸಂಸ್ಕೃತಿ ನಿರ್ಮಾಣ ಆಗುತ್ತಿದೆ ಎನ್ನಲಾಗುತ್ತಿದ್ದರೂ ಆಧುನಿಕ ಸಮಾಜದ ಒಳಗೆ ಜಾತಿ ವ್ಯವಸ್ಥೆ ಹೊಸ ರೂಪು ತಳೆದು ನುಸುಳಿದೆ. `ಶಾಪಿಂಗ್ ಮಾಲ್~ ಒಳಗೆ ಒಂದು ಬಗೆಯ ಜಾತಿ ಸೃಷ್ಟಿಯಾಗಿರುವ ವಿರೋಧಾಭಾಸವನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು ಎಂದರು.

ಭಾರತದಲ್ಲಿ ಜಾತಿ ಎಂಬುದು ಹುಟ್ಟಿನಿಂದ ಬರುತ್ತದೆ ವಿನಾ ಆಯ್ಕೆಯಿಂದಲ್ಲ. ಜಾತಿಗೆ ಅಗ್ರಹಾರ, ಹೊಲಗೇರಿ ಎಂಬ ಭೌತಿಕ ಆವರಣ ಇರುವ ರೀತಿಯ್ಲ್ಲಲೇ ಮಾನಸಿಕ ಆವರಣವೂ ಇದೆ. ಜಾತಿಗೆ ಸಂಬಂಧಿಸಿದಂತೆ ಒಂದು ವೇಳೆ ಭೌತಿಕ ಆವರಣ ಮೀರಿದರೂ ಮಾನಸಿಕ ಆವರಣದ ಗಡಿಯನ್ನು ದಾಟುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು.

ಜಾತಿ ವ್ಯವಸ್ಥೆಯನ್ನು ಮುರಿಯುವ ಪ್ರಯತ್ನ ನಡೆಯುತ್ತಿರುವ ಹೊತ್ತಿನಲ್ಲೆ ಅದನ್ನು ಸಮರ್ಥಿಸುವ ಮತ್ತು ಉಳಿಸಿಕೊಳ್ಳುವ ಪ್ರಯತ್ನ ಕೂಡ ಅಷ್ಟೇ ಪ್ರಬಲವಾಗಿ ನಡೆಯುತ್ತಿದೆ. ಜಾತಿ ವ್ಯವಸ್ಥೆ ಉಳಿಸಿಕೊಳ್ಳಬಯಸುವವರು ಹಿಂಸೆಯ ಮಾರ್ಗ ಅನುಸರಿಸಲು ಹಿಂಜರಿಯುವುದಿಲ್ಲ ಎನ್ನುವುದಕ್ಕೆ ಅಂತರ್ಜಾತಿ ವಿವಾಹ ವಿರೋಧಿಸಿ ನಡೆಯುತ್ತಿರುವ `ಖಾಫ್ ಪಂಚಾಯ್ತಿ~ಗಳೇ ಉದಾಹರಣೆಯಾಗಿದೆ ಎಂದರು.

ಭಾರತದಲ್ಲಿ ಮನುಷ್ಯ ಸತ್ತ ಮೇಲೂ ಜಾತಿ ಅವನನ್ನು ಹಿಂಬಾಲಿಸುತ್ತದೆ ಎನ್ನುವುದಕ್ಕೆ ಜಾತಿ ಆಧಾರಿತ ಸ್ಮಶಾನಗಳು ಇರುವುದೇ ಸಾಕ್ಷಿಯಾಗಿದೆ. ಪ್ರತಿಯೊಂದು ಮನೆಗಳ ಅಡುಗೆ ಮನೆ ಕೂಡ ಜಾತಿಯನ್ನು ಸಂಕೇತಿಸುವ ಕೇಂದ್ರಗಳೇ ಆಗಿವೆ. ಜಾತಿಯನ್ನು ಮೀರಬೇಕೆಂಬ ಪ್ರಯತ್ನಕ್ಕೆ ನಾಗರಿಕ ಸಮಾಜವೇ ಅಡ್ಡಿಯಾಗಿದೆ ಎಂದು ವಿಶ್ಲೇಷಿಸಿದರು.

ದಲಿತ ಲೇಖಕರಲ್ಲಿ ಹೆಚ್ಚಿನವರು ಆತ್ಮಕತೆಯ ಮೂಲಕ ಅಭಿವ್ಯಕ್ತಿಸುತ್ತಿರುವುದರ ಹಿಂದೆ ಜಾತಿಯನ್ನು ಮೀರುವ ಅಂತಃಪ್ರಜ್ಞೆ ಅಡಗಿದೆ. ಇನ್ನೊಂದೆಡೆ ಸಂಪ್ರದಾಯವಾದಿಗಳು ದಲಿತರು ಎಲ್ಲಿ ನಮ್ಮನ್ನು ಮೀರಿಸುತ್ತಾರೋ ಎನ್ನುವ ಆತಂಕದಲ್ಲಿ ಆಧುನಿಕತೆಯನ್ನು ಒಪ್ಪಿಕೊಳ್ಳುತ್ತಲೇ ಜಾತಿ ವ್ಯವಸ್ಥೆಯನ್ನು ಪೋಷಿಸುವ ವಿದ್ಯಮಾನ ಜಾಗತೀಕರಣದ ಈ ಸಂದರ್ಭದಲ್ಲಿ ಅತ್ಯಂತ ವಿರೋಧಾಭಾಸದ್ದು ಎಂದರು.

ಲೇಖಕ ಡಾ.ಸುಂದರ್ ಸಾರುಕೈ ಮಾತನಾಡಿ, ಭಾರತದಲ್ಲಿ ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜಾತಿಯೇ ಪ್ರಮುಖ ಸಾಧನ ಎಂದು ಭಾವಿಸಿರುವುದೇ ಜಾತಿಗೆ ಹೆಚ್ಚಿನ ಮಹತ್ವ ದೊರಕಲು ಕಾರಣವಾಗಿದೆ. ಜಾತಿ ನಾಶವಾದರೆ ನಮ್ಮ ಅಸ್ತಿತ್ವಕ್ಕೆ ಅಪಾಯವಿದೆ ಎಂಬ ಒಂದು ವರ್ಗದವರ ಅವ್ಯಕ್ತ ಭಯ ಜಾತಿ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT