ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನೀಕತೆ ಪ್ರಭಾವ: ಪ್ರಕೃತಿಯಿಂದ ದೂರ

Last Updated 15 ಡಿಸೆಂಬರ್ 2012, 19:32 IST
ಅಕ್ಷರ ಗಾತ್ರ

ಬೆಂಗಳೂರು: `ಆಧುನಿಕತೆಯ ಕಾರಣದಿಂದ ಮನುಷ್ಯ ಪ್ರಕೃತಿಯಿಂದ ದೂರಾಗುತ್ತಿದ್ದಾನೆ' ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ.ಸುಭಾಷ್ ಭರಣಿ ಹೇಳಿದರು.ಲಾಲ್ ಬಹದ್ದೂರ್ ಪರ್ವತಾರೋಹಣ ಸಂಸ್ಥೆಯು ನಗರದಲ್ಲಿ ಶನಿವಾರ ಆಯೋಜಿಸಿದ್ದ `ಪರ್ವತಾರೋಹಣ ದಿನ'ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

`ತಂತ್ರಜ್ಞಾನದ ನಾಗಾಲೋಟದ ಇಂದಿನ ದಿನಗಳಲ್ಲಿ ಮನುಷ್ಯ ಪ್ರಕೃತಿಯ ಬಗ್ಗೆ ಯೋಚಿಸುವುದನ್ನೇ ಮರೆತಿದ್ದಾನೆ. ನಗರಗಳಲ್ಲಿ ಬೆಳೆದ ಮಕ್ಕಳಿಗೆ ಪ್ರಕೃತಿಯ ಬಗ್ಗೆ ಪ್ರೇಮವಿಲ್ಲ. ಗಿಡ ಮರಗಳು ಮತ್ತು ತಿನ್ನುವ ಆಹಾರ ಪದಾರ್ಥಗಳು ಹೇಗೆ ಬೆಳೆಯುತ್ತವೆ ಎಂಬ ಬಗ್ಗೆಯೇ ಮಕ್ಕಳಲ್ಲಿ ಜ್ಞಾನವಿಲ್ಲ. ಹೀಗಾಗಿ ಮನುಷ್ಯ ಪ್ರಕೃತಿಗೆ ಹತ್ತಿರವಾಗಲು ಪ್ರಯತ್ನಿಸಬೇಕು. ಇದಕ್ಕೆ ಪರ್ವತಾರೋಹಣ ಸಹಕಾರಿಯಾಗಲಿದೆ' ಎಂದು ಅವರು ಅಭಿಪ್ರಾಯಪಟ್ಟರು.

`ಪರ್ವತಾರೋಹಣ ಒಂದು ಸಾಹಸ ಕಲೆ. ಹಿಂದೆ ಹೆಚ್ಚಿನ ಪರಿಕರಗಳಿಲ್ಲದೇ ಪರ್ವತಾರೋಹಣ ಮಾಡುತ್ತಿದ್ದರು. ಆದರೆ, ಇಂದು ಅತ್ಯಾಧುನಿಕ ಪರಿಕರಗಳು ಪರ್ವತಾರೋಹಣಕ್ಕಾಗಿ ಲಭ್ಯವಿವೆ. ಮಕ್ಕಳು ಪರ್ವತಾರೋಹಣದ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಮಕ್ಕಳು ತಮ್ಮ ಪೋಷಕರನ್ನೂ ಪರ್ವತಾರೋಹಣಕ್ಕೆ ಉತ್ತೇಜಿಸಬೇಕು' ಎಂದರು.

ಅಬಕಾರಿ ಇಲಾಖೆಯ ಆಯುಕ್ತ ಡಾ.ಸಿ.ಸೋಮಶೇಖರ್ ಮಾತನಾಡಿ, `ಮಕ್ಕಳು ಸಾಹಸ ಕ್ರೀಡೆಗಳ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು. ಆದರೆ, ಇದೇ ಕಾರಣಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವುದು ಸರಿಯಲ್ಲ. ಕಡಿಮೆ ಖರ್ಚಿನಲ್ಲಿ ಹೆಚ್ಚು ಪ್ರಯೋಜನ ಪಡೆಯುವ ಕ್ರೀಡೆಗಳಿಗೆ ಮಕ್ಕಳು ಮುಂದಾಗಬೇಕು' ಎಂದರು.

ಸಂಸ್ಥೆಯ ಉಪಾಧ್ಯಕ್ಷ ಎಂ.ಎ.ಖಾಲಿದ್, `ಜಾಗತಿಕ ತಾಪಮಾನ ಏರಿಕೆಯಿಂದ ಹಿಮ ಪರ್ವತಗಳು ಕರಗಿ ಸಮುದ್ರ ತೀರದ ಪ್ರದೇಶಗಳು ನೀರಿನಲ್ಲಿ ಮುಳುಗಡೆಯಾಗುವ ಅಪಾಯವಿದೆ. ಹೀಗಾಗಿ ಪರಿಸರ ಸಂರಕ್ಷಣೆಗೆ ಮಕ್ಕಳು ಮನಸ್ಸು ಮಾಡಬೇಕು. ಮರಗಳನ್ನು ಬೆಳೆಸಲು ಮಕ್ಕಳು ಮುಂದಾಗಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಕ್ಕಳಿಂದ ಆಗಬೇಕು' ಎಂದರು.ಸಂಸ್ಥೆಯ ಅಧ್ಯಕ್ಷ ಕೆ.ವಿ.ಆರ್.ಟ್ಯಾಗೋರ್, ರಮಣಶ್ರೀ ಉದಯ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಷಡಕ್ಷರಿ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT