ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದಪುರಂ ಶುಂಠಿ ಕಣ

Last Updated 13 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅ  ರೆಮಲೆನಾಡು ಮತ್ತು ಮಲೆನಾಡು  ಜಿಲ್ಲೆಗಳಲ್ಲಿ ಬಹು ಬೇಡಿಕೆಯ ವಾಣಿಜ್ಯ ಬೆಳೆಯಾಗಿರುವ ಶುಂಠಿ ಧಾರಣೆ ನಿರ್ಧಾರವಾಗುವುದೇ ಒಣ ಶುಂಠಿಯ ಬೇಡಿಕೆ ಮೇಲೆ.
 
ಆದ್ದರಿಂದ ಹಸಿ ಶುಂಠಿಯನ್ನು ಕ್ರಮಬದ್ಧವಾಗಿ ಸಂಸ್ಕರಿಸಿ ಒಣ ಶುಂಠಿಯನ್ನಾಗಿಸುವುದು ಅತಿ ಕೌಶಲ್ಯದ ಕೆಲಸ. ಹಸಿ ಶುಂಠಿಯನ್ನು ತಿಕ್ಕಿ ದೂವಾ ಪ್ರಯೋಗಕ್ಕೆ ಒಳಪಡಿಸುವುದು, ಒಣಗಿಸುವ ನೆಲ, ಸುತ್ತಲಿನ ಪರಿಸರ, ಹವಾಮಾನಗಳು ಗುಣಮಟ್ಟದ ಮೇಲೆ ಪ್ರಭಾವ ಬೀರುತ್ತವೆ.

ಸುತ್ತಮುತ್ತಲ ನೂರಾರು ಕಿಲೊ ಮೀಟರ್ ವ್ಯಾಪ್ತಿಯಲ್ಲಿ  ವ್ಯಾಪಕವಾಗಿ ಶುಂಠಿ ಬೆಳೆಯುವ ಕಾರಣ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂ, ಒಣ ಶುಂಠಿ ಮಾರುಕಟ್ಟೆಗೆ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದೆ.
 
ದೂರದ ರಾಜಸ್ತಾನ, ದೆಹಲಿ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶಗಳ ವರ್ತಕರು ಇಲ್ಲಿ ಬಂದು ಒಣ ಶುಂಠಿ ಖರೀದಿಗೆ ಪೈಪೋಟಿಯಲ್ಲಿ ವ್ಯಾಪಾರ ನಡೆಸುತ್ತಾರೆ. ಸಂಸ್ಕರಣೆಯ ಗುಣಮಟ್ಟ ವೀಕ್ಷಿಸಲು ಡಿಸೆಂಬರ್‌ನಿಂದ ಏಪ್ರಿಲ್ ವರೆಗೆ ಇಲ್ಲಿಯೇ  ಠಿಕಾಣಿ ಹೂಡುತ್ತಾರೆ.

ಬೆಂಗಳೂರು- ಹೊನ್ನಾವರ ರಾಷ್ಟ್ರೀಯ ಹೆದ್ದಾರಿ 206 ಕ್ಕೆ ಹೊಂದಿದ ವಿಶಾಲವಾದ ಬಯಲಿನಲ್ಲಿ ಪ್ರತಿ ವರ್ಷ ಹತ್ತಾರು ಶುಂಠಿ ಖರೀದಿದಾರರು ಒಣ ಶುಂಠಿ ಸಂಸ್ಕರಣಾ ಘಟಕ (ಶುಂಠಿ ಕಣ) ಸ್ಥಾಪಿಸುತ್ತಾರೆ. ಮೆಸ್ಕಾಂ ಕಚೇರಿಯ ಪಕ್ಕದ ಬಯಲು ಪ್ರದೇಶದ ನೆಲ ಜಂಬಿಟ್ಟಿಗೆಯ ಮೇಲ್ಮೈ ಹೊಂದಿದ್ದು ಶುಂಠಿ ಒಣಗಿಸಲು ಯೋಗ್ಯವಾಗಿದೆ.

ಸುತ್ತಲಿನ ದಾಸಕೊಪ್ಪ, ಮಲಂದೂರು, ಸಿದ್ದೇಶ್ವರ ಕಾಲೋನಿ, ಜೇಡಿಸರ, ತಾವರೆಹಳ್ಳಿ, ಮುಂಬಾಳು, ಸುಳಗೋಡು ಮುಂತಾದ ಗ್ರಾಮಗಳಲ್ಲಿ ಶುಂಠಿ ಸಂಸ್ಕರಣೆಗೆ ಸಾಕಷ್ಟು ಕೂಲಿಯಾಳುಗಳು ಸಿಗುವುದು ಇನ್ನೊಂದು ಅನುಕೂಲ.

ಆನಂದಪುರಂ ಮಾತ್ರವಲ್ಲದೆ ಹಾಗೂ ಸುತ್ತಲಿನ ಆಚಾಪುರ, ಮುರುಘಾಮಠ, ಗಿಳಾಲಗುಂಡಿ, ಲಕ್ಕವಳ್ಳಿ, ಅಂದಾಸುರ, ಯಡೇಹಳ್ಳಿ, ಕಣ್ಣೂರು, ಗೌತಮಪುರ, ತ್ಯಾಗರ್ತಿ, ಹಿರೇಹಾರಕ, ಹೊಸೂರು ಮುಂತಾದ ಗ್ರಾಮಗಳಲ್ಲಿಯೂ ಶುಂಠಿ ಸಂಸ್ಕರಣೆ (ಶುಂಠಿ ಕಣ) ನಡೆಯುತ್ತಿದ್ದು ಇವುಗಳ ಸಂಖ್ಯೆ 180 ಕ್ಕೂ ಜಾಸ್ತಿ.  

20 ದಿನದ ಪ್ರಕ್ರಿಯೆ
ಹಸಿ ಶುಂಠಿಯನ್ನು ತಿಕ್ಕಿ ರಾಶಿ ಮಾಡಿ ಗಂಧಕದ ದೂವಾ ಹಾಕಿ ನಂತರ ವಿಶಾಲವಾದ  ಮೈದಾನದಲ್ಲಿ ಬಿಸಿಲಿನಲ್ಲಿ ಹರಡಿ ಒಣಗಿಸಲಾಗುತ್ತದೆ. 7 ದಿನದ ನಂತರ ಜರಡಿ ಹಿಡಿದು ಸಂಸ್ಕರಿಸಿ ನಂತರ ಸಾಬೂನಿನ ಪೌಡರ್‌ನಿಂದ ನೀರಿನಲ್ಲಿ ಚೆನ್ನಾಗಿ ತಿಕ್ಕಿ ತೊಳೆಯಲಾಗುತ್ತದೆ.
 
ನಂತರ ಮತ್ತೆ ಗಂಧಕದ ದೂವಾ ಹಾಕಿ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಹೀಗೆ ಮಾಡುವುದರಿಂದ ಶುಂಠಿ ತೇವಾಂಶ ಕಳೆದುಕೊಳ್ಳುವುದರ ಜೊತೆಗೆ ಅಚ್ಚ ಬಿಳಿ ಬಣ್ಣಕ್ಕೆ ಬದಲಾಗುತ್ತದೆ.

ಹಸಿ ಶುಂಠಿಯನ್ನು ಒಣ ಶುಂಠಿ ಮಾಡಲು 18 ರಿಂದ 20 ದಿನ ಬೇಕು. ಒಂದು ಕ್ವಿಂಟಾಲ್ ಹಸಿ ಶುಂಠಿಯನ್ನು ಸಂಸ್ಕರಿಸಿದರೆ ಸರಾಸರಿ 25 ಕಿಲೊ ಒಣ ಶುಂಠಿ ತಯಾರಾಗುತ್ತದೆ. ಸಂಸ್ಕರಣೆಗೆ ತಗಲುವ ವೆಚ್ಚ ಒಂದು ಕ್ವಿಂಟಾಲ್‌ಗೆ ಸರಾಸರಿ ರೂ.250. ಎಲ್ಲ ಲೆಕ್ಕ ಹಾಕಿದರೆ ಮಾಲಿಕನಿಗೆ ಸಿಗೋದು ಒಂದು ಕ್ವಿಂಟಾಲ್ ಹಸಿ ಶುಂಠಿಯಿಂದ 80 ರಿಂದ 100 ರೂ. ಮಾತ್ರ.

ಹೊರ  ದೇಶಕ್ಕೂ ರಫ್ತು
  ಈಗ ಶುಂಠಿ ಫಸಲು ಬಲಿತು ಕೀಳಲು ಯೋಗ್ಯವಾಗಿದೆ. ದೂರದ ತಾಲ್ಲೂಕು ಮತ್ತು ಜಿಲ್ಲೆಗಳಿಂದ ಲಾರಿಗಟ್ಟಲೆ ಹಸಿ ಶುಂಠಿ ಇಲ್ಲಿನ ಮಾರುಕಟ್ಟೆ ಪ್ರವೇಶಿಸಿ ಒಣ ಶುಂಠಿಯಾಗಿ ಸಿದ್ಧಗೊಳ್ಳುತ್ತದೆ.

ಇಲ್ಲಿಂದ ಪಾಕಿಸ್ತಾನ, ರಷ್ಯ, ಜಾಂಬಿಯಾ, ಶ್ರೀಲಂಕಾ, ಜಪಾನ್, ಡೆನ್ಮಾರ್ಕ್, ಯುರೋಪ್ ದೇಶಗಳು ಹಾಗೂ ಕೊಲ್ಲಿ ರಾಷ್ಟ್ರಗಳಿಗೆ ರಫ್ತಾಗುತ್ತವೆ. ಒಂದು ಅಂದಾಜಿನಂತೆ ಪ್ರತಿ ವರ್ಷ ಇಲ್ಲಿಂದ ರಫ್ತಾಗುವ ಪ್ರಮಾಣ 50 ರಿಂದ 60 ಸಾವಿರ ಕ್ವಿಂಟಾಲ್.

ಇಲ್ಲಿನ  ಶುಂಠಿ ವ್ಯಾಪಾರಿ ನೇದರವಳ್ಳಿ ಮಂಜಪ್ಪ 3 ದಶಕದಿಂದ ಒಣ ಶುಂಠಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. 1981 ರಲ್ಲಿ ಅನ್ಯ ಕಾರ್ಯ ನಿಮಿತ್ತ ಕೇರಳದ ಕೊಚ್ಚಿಗೆ ಹೋಗಿದ್ದಾಗ ಅಲ್ಲಿನ ರೈತರು ಒಣ ಶುಂಠಿ ಸಿದ್ಧಪಡಿಸುವುದನ್ನು ನೋಡಿ ಪ್ರೇರಿತರಾದರು.

ಅಲ್ಲಿಂದ ಆನಂದಪುರಂಗೆ ಮರಳಿದ ಬಳಿಕ ಶುಂಠಿ ಸಂಸ್ಕರಣಾ ಕಾರ್ಯ ಆರಂಭಿಸಿದರು. ಈ ಕಾರಣಕ್ಕಾಗಿ ಇವರಿಗೆ ಶುಂಠಿ ಮಂಜಪ್ಪ ಎಂಬ ಹೆಸರು ಶಾಶ್ವತವಾಗಿ ಅಂಟಿಕೊಂಡಿತು. ಮಾಹಿತಿಗೆ ಅವರ ಮೊಬೈಲ್ ಸಂಖ್ಯೆ 94482 44139, 95357 69561.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT