ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಪ್ರತಿಮೆಗಳಿಗೆ ಮುಸುಕು: ಪಿಐಎಲ್ ವಜಾ

Last Updated 11 ಜನವರಿ 2012, 19:30 IST
ಅಕ್ಷರ ಗಾತ್ರ

ಅಲಹಾಬಾದ್ (ಪಿಟಿಐ): ಚುನಾವಣೆ ನಡೆಯಲಿರುವ ಉತ್ತರ ಪ್ರದೇಶದಲ್ಲಿ ಜಾರಿ ಮಾಡಲಾಗಿರುವ ನೀತಿ ಸಂಹಿತೆಯ ಅನ್ವಯ ಆನೆ ಪ್ರತಿಮೆಗಳಿಗೆ ಮುಸುಕು ಹಾಕುವಂತೆ  ಚುನಾವಣಾ ಆಯೋಗ ಆದೇಶಿಸಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಧೀರಜ್ ಸಿಂಗ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಾಂತ್ರಿಕ ದೋಷವಿದೆ ಎಂದು ವಿಚಾರಣೆಯ ಆರಂಭದಲ್ಲಿಯೇ ಮುಖ್ಯ ನ್ಯಾಯಮೂರ್ತಿ ಎಸ್. ಆರ್. ಆಲಂ ಮತ್ತು ರಣ್‌ವಿಜಯ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠವು ಅಭಿಪ್ರಾಯಪಟ್ಟಿತು.

ಅರ್ಜಿಯಲ್ಲಿ ಅರ್ಜಿದಾರರ ಪೂರ್ತಿ ವಿವರಗಳಿಲ್ಲ ಮತ್ತು ಚುನಾವಣಾ ಆಯೋಗದ ಆದೇಶದ ಪ್ರತಿಯನ್ನೂ ಲಗತ್ತಿಸಿಲ್ಲ  ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದಾಗ, ಅರ್ಜಿದಾರರ ಪರ ವಕೀಲ ಅನಿಲ್ ಸಿಂಗ್ ಬಿಸೆನ್ ಅವರು ತಿದ್ದುಪಡಿಯನ್ನು ಒಳಗೊಂಡ ಅರ್ಜಿಯನ್ನು ಸಲ್ಲಿಸಲು ಅನುಮತಿ ಕೋರಿದರು.

 ಆದರೆ  ನ್ಯಾಯಪೀಠವು ಅರ್ಜಿಯನ್ನು ವಜಾಗೊಳಿಸಿ ನಿಯಮದ ಪ್ರಕಾರ ಹೊಸ ಅರ್ಜಿಯನ್ನು ಸಲ್ಲಿಸುವಂತೆ  ಸೂಚಿಸಿತು.

ಶೀಘ್ರದಲ್ಲಿಯೇ ಹೊಸ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಬಿಸೆನ್ ತಿಳಿಸಿದರು. ಆನೆ ತಮ್ಮ ಪಕ್ಷದ ಚಿನ್ಹೆಯಾಗಿರುವುದರಿಂದ ಚುನಾವಣಾ ಆಯೋಗದ ಆದೇಶವು ತಮಗೆ ವಿರುದ್ಧವಾಗಿದೆ ಎಂಬ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲು ಬಿಎಸ್‌ಪಿ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೆ ರಾಜ್ಯದಲ್ಲಿ ಆನೆ ಮತ್ತು ಮುಖ್ಯಮಂತ್ರಿ ಮಾಯಾವತಿ ಅವರ ಪ್ರತಿಮೆಗಳಿಗೆ ಮುಸುಕು ಹಾಕುವಂತೆ ಚುನಾವಣಾ ಆಯೋಗವು ಕಳೆದ ವಾರ ಆದೇಶಿಸಿದೆ.

ಪ್ರತಿಮೆ ಮುಚ್ಚುವ ಕಾರ್ಯ ಪೂರ್ಣ
(ಲಖನೌ ವರದಿ): ನೋಯ್ಡಾ ಮತ್ತು ಲಖನೌ ನಗರಗಳ ವಿವಿಧ ಕಡೆ ಉದ್ಯಾನ ಮತ್ತು ಸ್ಮಾರಕಗಳಲ್ಲಿ ಸ್ಥಾಪಿಸಲಾಗಿರುವ ಉತ್ತರ ಪ್ರದೇಶ      ಮುಖ್ಯಮಂತ್ರಿ ಮಾಯಾವತಿ ಮತ್ತು ಬಿಎಸ್‌ಪಿ ಚಿಹ್ನೆಯಾದ ಆನೆಯ ಪ್ರತಿಮೆಗಳನ್ನು ಮುಚ್ಚುವ ಕಾರ್ಯವನ್ನು ಚುನಾವಣಾ ಆಯೋಗ ಬುಧವಾರ ಪೂರ್ಣ ಗೊಳಿಸಿದೆ.

`ಪ್ರತಿಮೆಗಳನ್ನು ಮುಚ್ಚುವ ಕೆಲಸವು ಪೂರ್ಣಗೊಂಡಿರುವ ಬಗ್ಗೆ ಅಧಿಕೃತ ವರದಿ ಇನ್ನೂ ಬಂದಿಲ್ಲ. ಆದರೆ ಎರಡೂ ಜಿಲ್ಲೆಗಳಲ್ಲಿ ನಿಯುಕ್ತರಾಗಿ           ರುವ ಚುನಾವಣಾಧಿಕಾರಿಗಳು ದೂರವಾಣಿ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ~ ಎಂದು ಉತ್ತರ ಪ್ರದೇಶ ಮುಖ್ಯ ಚುನಾವಣಾಧಿಕಾರಿ ಉಮೇಶ್ ಸಿನ್ಹಾ ಬುಧವಾರ ಹೇಳಿದ್ದಾರೆ.

ಮಾಯಾವತಿ ಹಾಗೂ ಬಿಎಸ್‌ಪಿ ಚಿಹ್ನೆಯಾಗಿರುವ ಆನೆಗಳ ಪ್ರತಿಮೆಯನ್ನು ಮುಚ್ಚುವಂತೆ ಚುನಾವಣಾ ಆಯೋಗ ಶನಿವಾರ ಆದೇಶಿಸಿತ್ತು.

ಈ ಮಧ್ಯೆ, ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ತಳ್ಳಿ ಹಾಕಿದೆ.

ಶಾಸಕರ ಕಾರಿನಿಂದ ಹಣ ವಶ
(ಸುಲ್ತಾನ್‌ಪುರ ವರದಿ): ಉತ್ತರ ಪ್ರದೇಶದ ಸುಲ್ತಾನ್‌ಪುರದ ಶಾಸಕ ಭೋಲಾ ಪಾಸ್ವಾನ್ ಅವರ ವಾಹನದಲ್ಲಿದ್ದ ಆರು ಲಕ್ಷ ರೂಪಾಯಿ  ಹಣವನ್ನು ಚುನಾವಣಾ ಆಯೋಗದ ತಂಡ ಸ್ವಾಧೀನಪಡಿಸಿಕೊಂಡಿದೆ.

ಸರೈಮಿರ್ ಎಂಬಲ್ಲಿಗೆ ತೆರಳುತ್ತಿದ್ದ ಶಾಸಕರ ವಾಹನವನ್ನು ಚಂದಾ ಪ್ರದೇಶದ ಬಳಿ ನಿಲ್ಲಿಸಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶ: ಮಹಿಳೆಯರ ಅವಗಣನೆ

(ಲಖನೌ ವರದಿ): ವಿಧಾನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ವಿಚಾರಕ್ಕೆ ಬಂದರೆ ಉತ್ತರ ಪ್ರದೇಶದಲ್ಲಿ ಮಹಿಳೆಯರು ಸಂಪೂರ್ಣವಾಗಿ ಅವಗಣನೆಗೆ ಒಳಗಾಗಿದ್ದಾರೆ. ಚುನಾವಣಾ ಆಯೋಗದಲ್ಲಿ ಲಭ್ಯವಿರುವ ಅಂಕಿ ಅಂಶಗಳೇ ಅದನ್ನು ಹೇಳುತ್ತದೆ.

1952ರಲ್ಲಿ ಮೊದಲ ಬಾರಿ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆದ ನಂತರ ಇದುವರೆಗೆ ಒಟ್ಟು 15 ಬಾರಿ ಚುನಾವಣೆ ನಡೆದಿದೆ.  ಚುನಾವಣಾ ಆಯೋಗ ನೀಡಿರುವ ಮಾಹಿತಿಗಳ ಪ್ರಕಾರ ಇದುವರೆಗೆ ಕೇವಲ ಶೇ 4.4ರಷ್ಟು ಮಹಿಳೆಯರು ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಪಕ್ಷಗಳ ವಿಚಾರಕ್ಕೆ ಬಂದರೆ 1952ರಿಂದ 2007ರವರೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಅತೀ ಹೆಚ್ಚು ಅಂದರೆ 338 ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಿದೆ. ಪ್ರತಿ ಚುನಾವಣೆಯಲ್ಲಿ ಅದು 24 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಉತ್ತರ ಪ್ರದೇಶದಲ್ಲಿರುವ ಸಾಮಾಜಿಕ ನಿರ್ಬಂಧಗಳ ಹೊರತಾಗಿಯೂ ರಾಜಕೀಯದಲ್ಲಿ ತಮ್ಮ ಪಾಲು ಪಡೆಯಲು ಮಹಿಳೆಯರು ಯತ್ನಿಸಿದ್ದಾರೆ.

ಇದುವರೆಗೆ ನಡೆದಿರುವ 15 ಚುನಾವಣೆಗಳಲ್ಲಿ ಒಟ್ಟು 1,985 ಮಹಿಳೆಯರು ಸ್ಪರ್ಧಿಸಿ ತಮ್ಮ ಅದೃಷ್ಟ ಪರೀಕ್ಷಿಸಿದ್ದಾರೆ. ಇವುಗಳಲ್ಲಿ ಶೇ 41.61ರಷ್ಟು ಅಂದರೆ 826 ಮಹಿಳೆಯರು ಪಕ್ಷೇತರರಾಗಿ ಚುನಾವಣಾ ಅಖಾಡಕ್ಕಿಳಿದಿದ್ದರು. ಆದಾಗ್ಯೂ, ಇಷ್ಟು ಪಕ್ಷೇತರ ಅಭ್ಯರ್ಥಿಗಳಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದು ಕೇವಲ ಮೂವರು ಮಾತ್ರ!

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು 1977ರಲ್ಲಿ.

ಚುನಾವಣಾ ಆಯೋಗ ನೀಡಿರುವ ಅಂಕಿ ಅಂಶಗಳ ಪ್ರಕಾರ, 1977ರಲ್ಲಿ ಸಂದಿಲಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕುದುಸಿಯಾ ಬೇಗಂ ಎಂಬುವರು ಶಾಸಕಿಯಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT