ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ-ಮನುಷ್ಯ ಸಂಘರ್ಷ ತಡೆಗೆ ಆರು ಶಿಫಾರಸು

Last Updated 21 ಜನವರಿ 2012, 19:55 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಆನೆ-ಮನುಷ್ಯರ ನಡುವಿನ ಸಂಘರ್ಷ ತಡೆಯಲು ಆನೆ ಕಾರಿಡಾರ್‌ಗಳನ್ನು ಪುನರುಜ್ಜೀವನಗೊಳಿಸುವುದು, ಆನೆ ದಾಳಿಯಿಂದ ಹಾನಿಯಾದ ರೈತರ ಬೆಳೆಗೆ ಎಪಿಎಂಸಿ ದರದಲ್ಲಿ ಪರಿಹಾರ ನೀಡುವುದೂ ಸೇರಿದಂತೆ ಆರು ಶಿಫಾರಸುಗಳನ್ನು ವನ್ಯಜೀವಿ ತಜ್ಞರು ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಇಲ್ಲಿನ `ಅರಣ್ಯ ಭವನ~ದಲ್ಲಿ ಶನಿವಾರ ನಡೆದ `ಆನೆ ಹಾಗೂ ಮಾನವ ಸಂಘರ್ಷ ಮತ್ತು ಪರಿಹಾರೋಪಾಯಗಳು~ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವನ್ಯಜೀವಿ ತಜ್ಞರು ಅರಣ್ಯ ಸಚಿವ ಸಿ.ಪಿ. ಯೋಗೇಶ್ವರ್ ಅವರಿಗೆ ಶಿಫಾರಸುಗಳನ್ನು ಸಲ್ಲಿಸಿದ್ದಾರೆ.

ಕಾರ್ಯಾಗಾರದ ನಂತರ ಸುದ್ದಿಗೋಷ್ಠಿ ನಡೆಸಿದ ಸಚಿವ ಯೋಗೇಶ್ವರ್, `ತಜ್ಞರು ಸಲ್ಲಿಸಿರುವ ಶಿಫಾರಸುಗಳನ್ನು ಸರ್ಕಾರ ಪರಿಶೀಲಿಸಲಿದೆ. ಆನೆ-ಮನುಷ್ಯರ ನಡುವಿನ ಸಂಘರ್ಷಕ್ಕೆ ಶೀಘ್ರ ಅಂತ್ಯ ಹಾಡುವುದು ಸರ್ಕಾರದ ಉದ್ದೇಶ~ ಎಂದರು.

ಪ್ರಮುಖ ಶಿಫಾರಸುಗಳು: ಗುಂಪಿನಿಂದ ಬೇರ್ಪಟ್ಟಿರುವ 2-3 ಆನೆಗಳ ತಂಡಗಳನ್ನು ಕಾಡಿಗೆ ಸ್ಥಳಾಂತರಿಸುವುದು. ಹಾಸನ ಜಿಲ್ಲೆಯ ಆಲೂರು ಅರಣ್ಯ ವಲಯದಲ್ಲಿರುವ ಆನೆಗಳನ್ನು ದೂರದ ಕಾಡಿಗೆ ಸ್ಥಳಾಂತರಿಸುವುದು ಶಿಫಾರಸಿನಲ್ಲಿ ಸೇರಿದೆ ಎಂದು ಸಚಿವರು ತಿಳಿಸಿದರು.

ಆಲೂರು ಅರಣ್ಯ ಪ್ರದೇಶದಲ್ಲಿರುವ ಅಂದಾಜು 25 ಆನೆಗಳನ್ನು ಯಾವ ಕಾಡಿಗೆ ಸ್ಥಳಾಂತರಿಸಬೇಕು ಎಂಬುದನ್ನು ತಜ್ಞರ ಜೊತೆ ಚರ್ಚಿಸಿ ನಿರ್ಧರಿಸಲಾಗುವುದು. ಸ್ಥಳಾಂತರಿಸಿದ ನಂತರವೂ ಆನೆಗಳು ಆಲೂರು ಅರಣ್ಯ ಪ್ರದೇಶಕ್ಕೆ ಮರಳಿದರೆ, ಅವುಗಳನ್ನು `ಆನೆ ಶಿಬಿರ~ಕ್ಕೆ ಸೇರಿಸಲಾಗುವುದು ಎಂದು ಹೇಳಿದರು.

ಕಾರಣಾಂತರಗಳಿಂದ ಕಡಿತಗೊಂಡಿರುವ ಆನೆ ಕಾರಿಡಾರ್‌ಗಳನ್ನು ಪುನರುಜ್ಜೀವನಗೊಳಿಸಬೇಕು. ಬನ್ನೇರುಘಟ್ಟ ರಾಷ್ಟ್ರೀಯ ಜೈವಿಕ ಉದ್ಯಾನದ ವ್ಯಾಪ್ತಿಯಲ್ಲಿ ಕೆಲವೆಡೆ ಸೌರಬೇಲಿ ನಿರ್ಮಿಸಬೇಕು ಎಂಬ ಶಿಫಾರಸು ಬಂದಿದೆ.

ಒಂದು ಕಿಲೋಮೀಟರ್ ಬೇಲಿ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇಂಥ ಸೌರಬೇಲಿಯನ್ನು ದಕ್ಷಿಣ ಆಫ್ರಿಕಾದಲ್ಲಿ ನಿರ್ಮಿಸಿ ಉತ್ತಮ ಫಲಿತಾಂಶ ಪಡೆದಿದ್ದಾರೆ. ಬನ್ನೇರುಘಟ್ಟ ಪ್ರದೇಶದಲ್ಲಿ ಇದರ ನಿರ್ಮಾಣ ಆದ ನಂತರ ಬೆಂಗಳೂರು, ಆನೆಗಳ ಹಾವಳಿಯಿಂದ ಮುಕ್ತವಾಗಲಿದೆ ಎಂದು ವಿವರಿಸಿದರು.

ಆನೆಗಳಿಗೆ ಕಾಡಿನಲ್ಲೇ ಒಳ್ಳೆಯ ಆಹಾರ ದೊರೆಯುವಂತಹ ಸ್ಥಿತಿ ನಿರ್ಮಿಸಬೇಕಿದೆ. ಆನೆಗಳಿಗೆ ಪ್ರಿಯವಾದ ಎಳೆ ಬಿದಿರು ಸಾಕಷ್ಟು ಪ್ರಮಾಣದಲ್ಲಿ ಸಿಗುವಂತೆ ಮಾಡಬೇಕು ಎಂದು ತಜ್ಞರು ಶಿಫಾರಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಲಾಖೆ ಕಾರ್ಯಕ್ರಮ ರೂಪಿಸಲಿದೆ. ಇಲಾಖೆಯ ಕಾರ್ಯಗಳಲ್ಲಿ ಸಾರ್ವಜನಿಕರ ಸಹಭಾಗಿತ್ವ ಪಡೆಯಲಾಗುವುದು ಎಂದು ಅವರು ತಿಳಿಸಿದರು.

ರೈತರು ತಮ್ಮ ಹೊಲ-ಗದ್ದೆ, ತೋಟಗಳ ಸುತ್ತ ನಿರ್ಮಿಸಿಕೊಂಡಿರುವ ನೇರ ವಿದ್ಯುತ್ ಸಂಪರ್ಕದ ಬೇಲಿಗಳನ್ನು ತೆರವುಗೊಳಿಸಬೇಕು. ಆನೆ ದಾಳಿಯಿಂದ ಹಾನಿಗೀಡಾಗುವ ರೈತರ ಬೆಳೆಗೆ ಎಪಿಎಂಸಿ ದರದಲ್ಲಿ ಪರಿಹಾರ ನೀಡಬೇಕು ಎಂದೂ ತಜ್ಞರು ಶಿಫಾರಸು ಮಾಡಿದ್ದಾರೆ.

`ನೈಟ್ ಸಫಾರಿ ಇಲ್ಲ~: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ನೈಟ್ ಸಫಾರಿಗೆ ಅವಕಾಶ ನೀಡುವುದಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು.

`ಮಾಸ್ಟರ್ ಪ್ಲಾನ್ ಸಿದ್ಧ~: ರಾಜ್ಯದಲ್ಲಿ ಅಂದಾಜು ಆರು ಸಾವಿರ ಆನೆಗಳಿವೆ. ಅವುಗಳನ್ನು ಅರಣ್ಯ ಪ್ರದೇಶದಲ್ಲೇ ಉಳಿಸಿಕೊಳ್ಳಲು ಇಲಾಖೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದೆ. ಅದರ ಅನುಷ್ಠಾನಕ್ಕೆ 120 ಕೋಟಿ ರೂಪಾಯಿ ಅವಶ್ಯಕತೆ ಇದೆ ಎಂದು ಸಚಿವರು ಮಾಹಿತಿ ನೀಡಿದರು. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಆನೆ ಸಮಸ್ಯೆ: ಕಾರ್ಯಪಡೆ ರಚನೆ
ರಾಜ್ಯ ಎದುರಿಸುತ್ತಿರುವ ಆನೆ-ಮನುಷ್ಯರ ನಡುವಿನ ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಎಂಟು ಮಂದಿ ಸದಸ್ಯರ ಕಾರ್ಯಪಡೆ ರಚಿಸಿ ಆದೇಶ ಹೊರಡಿಸಿದೆ.
ಆನೆ-ಮನುಷ್ಯರ ನಡುವಿನ ಸಂಘರ್ಷದ ನಿವಾರಸಣೆಗೆ ಕಾರ್ಯಪಡೆ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿತ್ತು. ಈ ಕಾರ್ಯಪಡೆಯಲ್ಲಿ ವನ್ಯಜೀವಿ ತಜ್ಞರು, ಸಮಾಜ ಶಾಸ್ತ್ರಜ್ಞರು ಸದಸ್ಯರಾಗಿದ್ದಾರೆ.

ಸದಸ್ಯರ ಹೆಸರು ಇಲ್ಲಿದೆ: ಆನೆ ಯೋಜನೆ ಚಾಲನಾ ಸಮಿತಿಯ ಸದಸ್ಯ ಡಾ. ಅಜಯ್ ದೇಸಾಯಿ, ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಸರ ವಿಜ್ಞಾನ ಕೇಂದ್ರದ ಅಧ್ಯಕ್ಷ ಡಾ. ರಾಮನ್ ಸುಕುಮಾರನ್, ವನ್ಯಜೀವಿ ತಜ್ಞ ಡಾ.ಎಂ.ಡಿ. ಮಧುಸೂದನ್, ನಿವೃತ್ತ ಅರಣ್ಯ ಅಧಿಕಾರಿ ಡಾ.ಸಿ.ಎಚ್. ಬಸಪ್ಪನವರ್, ಅಶೋಕ ಪರಿಸರ ಮತ್ತು ಶಿಕ್ಷಣ ಸಂಶೋಧನಾ ಸಂಸ್ಥೆಯ ಸಮಾಜ ಶಾಸ್ತ್ರಜ್ಞ ಶರತ್‌ಚಂದ್ರ ಲೆಲೆ, ಆನೆ ಯೋಜನೆಯ ಮಾಜಿ ನಿರ್ದೇಶಕ ಡಾ. ಎಸ್. ಎಸ್. ಬಿಶ್ತ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜಯ್ ಮಿಶ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT