ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ-ಮಾನವ ಸಂಘರ್ಷ ತಡೆ: ರೂ. 47 ಕೋಟಿ ಯೋಜನೆ

Last Updated 4 ಅಕ್ಟೋಬರ್ 2012, 9:20 IST
ಅಕ್ಷರ ಗಾತ್ರ

ಕೊಡಗು ಅರಣ್ಯಾಧಿಕಾರಿಗಳ ವರದಿ
ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವ ಆನೆ- ಮಾನವ ಸಂಘರ್ಷವನ್ನು ತಡೆಗಟ್ಟಲು ಕೇವಲ ರೂ 47 ಕೋಟಿ ವೆಚ್ಚದ ಯೋಜನೆಯೊಂದನ್ನು ಕೊಡಗು ವೃತ್ತದ ಅರಣ್ಯ ಇಲಾಖಾಧಿಕಾರಿಗಳು ರೂಪಿಸಿದ್ದಾರೆ.

ಸೋಲಾರ್ ತಂತಿ ಬೇಲಿ ಹಾಗೂ ಕಂದಕಗಳ ನಿರ್ಮಾಣಕ್ಕಾಗಿ ರೂ 25 ಕೋಟಿ ಹಾಗೂ ಇವುಗಳ ನಿರ್ವಹಣೆಗಾಗಿ (ಐದು ವರ್ಷಗಳ ಅವಧಿಗೆ) ರೂ 22 ಕೋಟಿ ಹಣವನ್ನು ವಿನಿಯೋಗಿಸಲು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ. ಮುಖ್ಯವಾಗಿ ನಿರ್ವಹಣೆಗೆ ಹೆಚ್ಚು ಮಹತ್ವ ನೀಡಲಾಗಿದೆ.

ವೈರಿಗಳು ಕೋಟೆಯೊಳಗೆ ಪ್ರವೇಶಿಸುವುದನ್ನು ತಡೆಗಟ್ಟಲು ಕೋಟೆ ಪ್ರವೇಶದ್ವಾರವನ್ನು ಭದ್ರಪಡಿಸುವಂತೆ ಜಿಲ್ಲೆಯೊಳಗೆ ಆನೆ ಪ್ರವೇಶಿಸುವ ಅತ್ಯಂತ ಸೂಕ್ಷ್ಮ ಮಾರ್ಗದಲ್ಲಿ (ದಕ್ಷಿಣ ಕೊಡಗು, ನಾಗರಹೊಳೆ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ) ಸೋಲಾರ್ ತಂತಿ ಬೇಲಿ ಹಾಗೂ ಕಂದಕ ಎರಡನ್ನೂ ನಿರ್ಮಿಸಲು ಪ್ರಮುಖವಾಗಿ ಸಲಹೆ ನೀಡಲಾಗಿದೆ.

ಸಂಘರ್ಷಕ್ಕೆ ಸೂಕ್ಷ್ಮವಾದ ಪ್ರದೇಶಗಳಿಗೆ ಹೊಂದಿಕೊಂಡಿರುವ ವಲಯದ ಉದ್ದ ಸುಮಾರು 677.63 ಕಿ.ಮೀ. ಈ ಪೈಕಿ ಈಗಾಗಲೇ ಅಲ್ಲಲ್ಲಿ ಸುಮಾರು 256.63 ಕಿ.ಮೀ ಸೋಲಾರ್ ತಂತಿ ಬೇಲಿ ಹಾಗೂ 168.64 ಕಿ.ಮೀ ಕಂದಕಗಳನ್ನು ನಿರ್ಮಿಸಲಾಗಿದೆ. ಇನ್ನೂ 421 ಕಿ.ಮೀ ಸೋಲಾರ್ ತಂತಿ ಬೇಲಿ ಹಾಗೂ 78.65 ಕಿ.ಮೀ ಉದ್ದದ ಕಂದಕಗಳನ್ನು ನಿರ್ಮಿಸಬೇಕಾಗಿದೆ. ಇದಕ್ಕಾಗಿ ತಗಲುವ ವೆಚ್ಚ ಕೇವಲ ರೂ 25 ಕೋಟಿ.


ವರದಿಯ ಮುಖ್ಯಾಂಶಗಳು
ಆನೆ ಹಾವಳಿಯನ್ನು ತಡೆಗಟ್ಟಲು ಸೋಲಾರ್ ತಂತಿ ಬೇಲಿ ಹಾಗೂ ಕಂದಕಗಳ ನಿರ್ಮಾಣವೇ ಪರಿಣಾಮಕಾರಿಯಾದುದು ಎಂದು ಅಧಿಕಾರಿಗಳು ಮನಗಂಡಿದ್ದು, ಇವೆರಡೂ ವಿಧಾನಗಳನ್ನು ಇನ್ನಷ್ಟು ಬಲಪಡಿಸುವ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ.

ಹಳೆಯ ಮಾದರಿಯ ಬೇಲಿ ಅಂದರೆ ಪಿ.ಪಿ. ಇನ್ಸುಲೇಟರ್ ಮಾಡೆಲ್ ಬದಲಾಗಿ ಹೊಸ ಮಾದರಿಯ ಲೈವ್‌ಪೋಸ್ಟ್ ಮಾದರಿಯಲ್ಲಿ ಸೋಲಾರ್ ತಂತಿ ಅಳವಡಿಸಬೇಕು. ಹಳೆಯ ಮಾದರಿಗಿಂತ ಇದು ಪರಿಣಾಮಕಾರಿಯಾಗಿದ್ದು, ನಿರ್ವಹಣೆಯಲ್ಲೂ ಸುಲಭವಾಗಿದೆ.

ಹಳೆಯ ಮಾದರಿಯಲ್ಲಿ ಟಿ-ಆ್ಯಂಗಲ್‌ನಲ್ಲಿ ವಿದ್ಯುತ್ ಹರಿಯದ ಕಾರಣ ಆನೆಗಳು ಇದನ್ನು ಹಿಡಿದು ಎಳೆದಾಡಿ, ಕಿತ್ತುಹಾಕಿದ ಹತ್ತಾರು ಪ್ರಸಂಗಗಳು ನಡೆದಿವೆ. ಹೊಸ ಮಾದರಿಯಲ್ಲಿ ಟಿ-ಆ್ಯಂಗಲ್‌ನಲ್ಲಿಯೂ ವಿದ್ಯುತ್ ಹರಿಯುವ ಕಾರಣ ಆನೆಗಳು ಹತ್ತಿರಕ್ಕೂ ಸುಳಿಯಲಾರವು.  ಹಳೆಯ ಬೇಲಿಗಳನ್ನು ಹೊಸ ಮಾದರಿಗೆ ಮೇಲ್ದರ್ಜೆಗೆ ಏರಿಸಲು ಕ್ರಮವಹಿಸಬೇಕು.

ಕಂದಕ ನಿರ್ಮಾಣ
 ನಾಗರಹೊಳೆ ವ್ಯಾಪ್ತಿಯಲ್ಲಿ ರಚಿಸಿರುವಂತೆ 3ಮೀಟರ್ ಅಗಲ, 3 ಮೀಟರ್ ಆಳ ಹಾಗೂ ತಳಪಾಯದಲ್ಲಿ 1.5 ಮೀಟರ್ ಅಗಲವಿರುವಂತೆ ಹೊಸ ಮಾದರಿಯ ದೊಡ್ಡ ಕಂದಕಗಳನ್ನು ನಿರ್ಮಿಸಬೇಕು (ಹಳೆಯ ಕಂದಕವು 3 ಮೀಟರ್ ಅಗಲ, 2 ಮೀಟರ್ ಆಳ ಹಾಗೂ ತಳಪಾಯದಲ್ಲಿ 1 ಮೀಟರ್ ಅಗಲವಿತ್ತು). ಈಗಾಗಲೇ ತೆರೆಯಲಾಗಿರುವ ಹಳೆಯ ಕಂದಕಗಳನ್ನು ಸಹ ಹೊಸ ಮಾದರಿಗೆ ಮೇಲ್ದರ್ಜೆಗೇರಿಸಬೇಕು.


ಆನೆ ಹಿಮ್ಮೆಟ್ಟಿಸುವ ಶಿಬಿರ
ಆನೆ ಹಿಮ್ಮೆಟ್ಟಿಸುವ ಶಿಬಿರಗಳ ನಿಯೋಜನೆಗೆ ಆಯಕಟ್ಟಿನ ಜಾಗಗಳನ್ನು ಗುರುತಿಸುವುದು. ಉದಾಹರಣೆಗೆ- ಕಾವೇರಿ ನದಿಗೆ ಹೊಂದಿಕೊಂಡಿರುವ ದುಬಾರೆ ಮೀಸಲು ಅರಣ್ಯ ಹಾಗೂ ನದಿಯ ಉತ್ತರಕ್ಕಿರುವ ಆನೆಕಾಡು ಅರಣ್ಯ ಪ್ರದೇಶದ ನಡುವೆ ಇರುವ ತೋಟಗಳ ಮೂಲಕ ಆನೆಗಳು ಪಶ್ಚಿಮ ಹಾಗೂ ಪೂರ್ವ ದಿಕ್ಕಿನಡೆ ನುಗ್ಗಿ ಬರಬಹುದು.

ಇಂತಹ ಸ್ಥಳದಲ್ಲಿ  ಕನಿಷ್ಠ 4 ಆನೆ ಹಿಮ್ಮೆಟ್ಟಿಸುವ ಶಿಬಿರಗಳನ್ನು ಸ್ಥಾಪಿಸಬೇಕು. ಅದೇ ರೀತಿ ಹಾರಂಗಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಗಳಿಗೆ ಹೊಂದಿಕೊಂಡಂತೆ ಆಯಕಟ್ಟಿನ ಜಾಗದಲ್ಲಿ ಕನಿಷ್ಠ ಪಕ್ಷ ಕಾಯಂ ಆನೆ ಹಿಮ್ಮೆಟ್ಟಿಸುವ ಶಿಬಿರಗಳನ್ನು ಇರಿಸಬೇಕು.

ಜಾಗೃತಿ ಕಾರ್ಯಕ್ರಮ
ಆನೆಗಳ ಚಲನವಲನ, ಮುಂಜಾಗ್ರತೆ ಬಗ್ಗೆ ಅರಿವು ಮೂಡಿಸಲು ಅರಣ್ಯದಂಚಿನಲ್ಲಿ ವಾಸಿಸುವ ಜನರಿಗೆ, ಕಾಫಿ ತೋಟಗಳ ಕಾರ್ಮಿಕರಿಗೆ ಕಾಲಕಾಲಕ್ಕೆ ಅರಿವು ಮೂಡಿಸಬೇಕು. ತಂತಿ ಬೇಲಿ ಹಾಗೂ ಕಂದಕಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸ್ಥಳೀಯರಿಂದ ನೆರವು ಪಡೆಯಬೇಕು.

ಅನುದಾನ ಬಿಡುಗಡೆ
ಕಂದಕ ಹಾಗು ಸೋಲಾರ್ ಬೇಲಿ ನಿರ್ವಹಣೆಗೆ ಅನುದಾನದ ಲಭ್ಯತೆ ಬಗ್ಗೆ ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿಯೇ ಖಾತರಿ ನೀಡಬೇಕು ಹಾಗೂ ಅವಶ್ಯಕ್ಕೆ ತಕ್ಕಂತೆ ಹಣ ಬಿಡುಗಡೆ ಮಾಡಬೇಕು. ಇದು ಅತ್ಯಂತ ಮುಖ್ಯವಾದುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವರದಿ ಸಲ್ಲಿಕೆ
ಈ ವರದಿಯ ಪ್ರತಿಯೊಂದನ್ನು ಜಿಲ್ಲೆಯ ಜನಪ್ರತಿನಿಧಿಗಳಾದ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಉಸ್ತುವಾರಿ ಸಚಿವ ಅಪ್ಪಚ್ಚು ರಂಜನ್, ವಿಧಾನ               ಪರಿಷತ್ತಿನ ಸದಸ್ಯ ಎಂ.ಸಿ. ನಾಣಯ್ಯ ಹಾಗೂ  ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರಿಗೆ ಕೊಡಗು           ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರು ಸಲ್ಲಿಸಿದ್ದಾರೆ. ಮುಂದಿನ ಕ್ರಮವನ್ನು ಕಾದುನೋಡಬೇಕಾಗಿದೆ. 

67 ಜನ ಸಾವು

ಕೊಡಗು ಅರಣ್ಯ ವೃತ್ತದ ವ್ಯಾಪ್ತಿಯ ಮೂರು ವಿಭಾಗಗಳಲ್ಲಿ ಮಾನವ-ಆನೆ ಸಂಘರ್ಷದಿಂದ ಕಳೆದ 10 ವರ್ಷಗಳ ಅವಧಿಯಲ್ಲಿ 67 ಮಾನವಹಾನಿ ಹಾಗೂ 25 ಕಾಡಾನೆಗಳ ಸಾವು ಸಂಭವಿಸಿದೆ. ಶ್ರೀಮಂಗಲ, ತಿತಿಮತಿ, ಕುಶಾಲನಗರ, ಸೋಮವಾರಪೇಟೆ, ಶನಿವಾರಸಂತೆ ವಲಯಗಳು ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಕೆಲವು ಭಾಗಗಳು ಮಾನವ ಕಾಡಾನೆ ಸಂಘರ್ಷಕ್ಕೆ ಅತಿ ಸೂಕ್ಷ್ಮ ಪ್ರದೇಶಗಳಾಗಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT