ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಾವಳಿ ತಡೆಗೆ ಒತ್ತಾಯಿಸಿ ಪ್ರತಿಭಟನೆ

Last Updated 17 ಸೆಪ್ಟೆಂಬರ್ 2011, 8:45 IST
ಅಕ್ಷರ ಗಾತ್ರ

ಮಳವಳ್ಳಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಾಡಾನೆ ದಾಳಿಯನ್ನು ತಡೆಗಟ್ಟಬೇಕು ಎಂದು ಒತ್ತಾಯಿಸಿ ಪಟ್ಟಣದ ಮಿನಿವಿಧಾನಸೌಧದ ಮುಂಭಾಗ ಬಹುಜನ ಸಮಾಜವಾದಿ ಪಕ್ಷದ ನೇತೃತ್ವದಲ್ಲಿ ವಿವಿಧ ಗ್ರಾಮಗಳ ರೈತರು ಶುಕ್ರವಾರ ಧರಣಿ ನಡೆಸಿದರು.

ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾ ಸಂಯೋಜಕ ಎಂ.ಕೃಷ್ಣಮೂರ್ತಿ ಮಾತನಾಡಿ, ತಾಲ್ಲೂಕಿನ ಮಂಚನಹಳ್ಳಿ, ತಾಳೆಹಳ್ಳ, ಬೀರೋಟ, ಕರಲಕಟ್ಟೆ, ಧನಗೂರು, ಕುರಿಫಾರಂ, ಬಸವನಹಳ್ಳಿ, ಸೊಲಬ, ಬಾಣಸಮುದ್ರ,ಕದಂಪುರ, ದಬ್ಬಳ್ಳಿ ಸೇರಿದಂತೆ ಇನ್ನೂ ಹಲವು ಗ್ರಾಮಗಳ ವ್ಯಾಪ್ತಿಯಲ್ಲಿ ಆನೆಗಳು ದಾಳಿ ಮಾಡಿ ರೈತರು ಬೆಳೆದ ಬೆಳೆಗಳು ಹಾನಿಯಾಗಿ ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಇಷ್ಟೆಲ್ಲಾ ಹಾನಿಯಾಗುತ್ತಿದ್ದರೂ ತಾಲ್ಲೂಕಿನ ಜನಪ್ರತಿನಿದಿಗಳು ಹಾಗೂ ಅರಣ್ಯ ಇಲಾಖೆ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ಆರೋಪಿಸಿದರು.

ಆನೆ ದಾಳಿಯಿಂದ ಬೆಳೆ ನಾಶವಾಗಿರುವ ರೈತರಿಗೆ ನೀಡುತ್ತಿರುವ ಪರಿಹಾರ ಅವೈಜ್ಞಾನಿಕವಾಗಿದೆ. ಅಲ್ಲದೆ ಸಮಯಕ್ಕೆ ಸರಿಯಾಗಿಯೂ ಸಿಗದೆ ರೈತರು ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಬೆಳೆ ಹಾನಿಯಾದ ರೈತರಿಗೆ ಅರಣ್ಯ ಇಲಾಖೆಯವರು ಧೈರ್ಯ ತುಂಬುವ ಬದಲು ಆತಂಕ ಸೃಷ್ಟಿಸುತ್ತಿದ್ದಾರೆ ಎಂದು ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಬೆಳೆ ಹಾನಿಗೀಡಬೇಕಾದ ಅರಣ್ಯ ಇಲಾಖೆ ಸಿಬ್ಬಂದಿಯವರು ಅಸಹಾಯಕತೆ ವ್ಯಕ್ತಪಡಿಸುವುದರ ಜೊತೆಗೆ ಊರನ್ನೇ ಖಾಲಿ ಮಾಡಿ ಎನ್ನುತ್ತಿದ್ದಾರೆ ಎಂದು ಆರೋಪಿಸಿದರು.

ಕಾಡಾನೆ ದಾಳಿಯನ್ನು ತಡೆಯಲು ಶಾಶ್ವತ ತಡೆಬೇಲಿಯನ್ನು ಆದಷ್ಟು ಬೇಗ ನಿರ್ಮಿಸಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಗೊಳಿಸಿ ಪರಿಹಾರವನ್ನು ಕಾಲಮಿತಿಯೊಳಗೆ ವಿತರಿಸಬೇಕು. ಈಗಾಗಲೇ ಗುರುತಿಸಿರುವ ಅರಣ್ಯ ಗಡಿಯನ್ನು ಪುನರ್‌ಪರಿಶೀಲಿಸಿ ಕೃಷಿ ಭೂಮಿಯನ್ನು ಹೊರತುಪಡಿಸಿ ಗಡಿಯನ್ನು ಗುರುತಿಸಬೇಕು ಎಂಬ ಬೇಡಿಕೆಗಳ ಮನವಿ ಪತ್ರವನ್ನು ತಹಶೀಲ್ದಾರ್ ಬಿ.ವಾಣಿ ಅವರಿಗೆ ಸಲ್ಲಿಸಿದರು.

ಧರಣಿಯಲ್ಲಿ ಬಿಎಸ್‌ಪಿ ತಾಲ್ಲೂಕು ಅಧ್ಯಕ್ಷ ಮಾಯಪ್ಪ, ಜಿಲ್ಲಾ ಕಾರ್ಯದರ್ಶಿ ವೀರಭದ್ರಯ್ಯ, ರೈತರಾದ ದಬ್ಬಳ್ಳಿ ಜಯರಾಮೇಗೌಡ, ಚಿಕ್ಕಣ್ಣ, ವೀರಣ್ಣ, ನಾರಯಣನಾಯಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT