ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಾವಳಿಗೆ ಇಲ್ಲದ ಅಂಕುಶ

Last Updated 10 ಜುಲೈ 2013, 8:42 IST
ಅಕ್ಷರ ಗಾತ್ರ

ಸಿದ್ದಾಪುರ: ಒಂದೆಡೆ ಮಳೆಯ ಅಬ್ಬರ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದರೆ ಮತ್ತೊಂದೆಡೆ ಕಾಡಾನೆಗಳ ಹಾವಳಿ ಈ ವ್ಯಾಪ್ತಿಯ ಜನರ ಬದುಕನ್ನೇ ಹೈರಾಣಾಗಿಸಿದೆ.

ಸಿದ್ದಾಪುರ, ಪಾಲಿಬೆಟ್ಟ, ಆನಂದಪುರ,ಇಂಜಿಲಗೆರೆ, ಕರಡಿಗೋಡು, ಮೇಕೂರು, ಎಮ್ಮೆಗುಂಡಿ, ಮಾಲ್ದಾರೆ, ಚನ್ನಂಗಿ,ಚೆನ್ನಯ್ಯನಕೋಟೆ ಗ್ರಾಮಗಳು ಪ್ರಸ್ತುತ ಕಾಡಾನೆಗಳ ದಬ್ಬಾಳಿಕೆಗೆ ತುತ್ತಾಗುತ್ತಿರುವ ಪ್ರದೇಶಗಳಾಗಿವೆ. ದುಬಾರೆ ರಕ್ಷಿತಾರಣ್ಯ ಮತ್ತು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನದ ಗಡಿ ಭಾಗದಲ್ಲಿ ಈ ಗ್ರಾಮಗಳಿದ್ದು ಎಲ್ಲವೂ ಕಾಫಿ ತೋಟ ಮತ್ತು ಇತರೆ ಕೃಷಿ ಭೂಮಿಗಳಿಂದ ಸುತ್ತುವರೆದಿದೆ. ಅಲ್ಲದೇ ಟಾಟಾ ಸಂಸ್ಥೆ, ಬಿಬಿಟಿಸಿ ಯಂತಹ ಬೃಹತ್ ಸಂಸ್ಥೆಗಳ ಕಾಫಿ ತೋಟಗಳು ಈ ವ್ಯಾಪ್ತಿಯಲ್ಲಿವೆ.

ಇಲ್ಲಿ ನಡೆಯುತ್ತಿರುವ ಆನೆ ಮಾನವ ಸಂಘರ್ಷದಿಂದ ಕೃಷಿ ಹಾಗೂ ದೈನಂದಿನ ಚಟುವಟಿಕೆಗಳು ಹಳಿ ತಪ್ಪಿವೆ. ಕಾಫಿ ತೋಟಗಳ ನಡುವೆ ಹೆಚ್ಚಿನ ಮಕ್ಕಳು ಶಾಲೆಗೆ ತೆರಳ ಬೇಕಾಗಿದೆ. ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು ಉಸಿರು ಬಿಗಿ ಹಿಡಿದು ಸಾಗಬೇಕಾದ ಪರಿಸ್ಥಿತಿಯಿದ್ದರೆ ಪೋಷಕರು ಶಾಲೆಯಿಂದ ಮಕ್ಕಳು ಮನೆಗೆ ಮರಳುವವರೆಗೂ ವಿಚಲಿತರಾಗಿರುತ್ತಾರೆ.

ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಗುಂಡಿ ತೋಟ ಹಾಗೂ ಇತರ ಹಲವು ಪ್ರದೇಶಗಳಿಗೆ ಪಾಲಿಬೆಟ್ಟ ಗ್ರಾಮ ಪಂಚಾಯಿತಿ  ಹಾಗೂ ಟಾಟಾ ಕಾಫಿ ಸಂಸ್ಥೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗೆ ಕಾಡಾನೆಗಳ ಉಪಟಳದಿಂದ ಮುಕ್ತವಾಗಿ ಶಾಲೆಗೆ ತೆರಳಲು ವಾಹನದ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆನಂದಪುರ ಸಮೀಪದ ಪುದುಕೊಳ್ಳಿ ಗ್ರಾಮದ ಕಾಫಿ ತೋಟದ ವ್ಯವಸ್ಥಾಪಕರೊಬ್ಬರು ತಮ್ಮ ಮೇಲ್ವಿಚಾರಣೆಯ ಐವತ್ತು ಏಕ್ರೆ ಜಮೀನು ಸೇರಿದಂತೆ ತೋಟದ ಮನೆಗೆ ಬೀಗ ಹಾಕಿ ಅಮ್ಮತ್ತಿ ಪಟ್ಟಣದಲ್ಲಿ ಬಾಡಿಗೆ ಮನೆಯ ಆಶ್ರಯ ಪಡೆದು ಕಾಡಾನೆಗಳಿಂದ ರಕ್ಷಣೆ ಪಡೆದಿದ್ದಾರೆ.

ಮುಂಗಾರು ಪ್ರಾರಂಭವಾಗಿದ್ದು ಬಿರುಸಿನ ಕೃಷಿ ಚಟುವಟಿಕೆ ಆರಂಭವಾಗಬೇಕಿದ್ದು ಕಾಡಾನೆಗಳ ಉಪಟಳದಿಂದ ಬಹುತೇಕ ಕಾಫಿ ತೋಟ, ಹೊಲ ಗದ್ದೆಗಳಲ್ಲಿ ಕೃಷಿ ಕೆಲಸ ಸ್ಥಗಿತಗೊಂಡಿದೆ.

ಈ ನಡುವೆ ತೋಟ ಮಾಲಿಕರು ಕೃಷಿ ಕಾರ್ಮಿಕರ ಕೊರತೆಯನ್ನು ಎದುರಿಸುವಂತಾಗಿದೆ. ಆನೆಗಳಿಗೆ ಹೆದರಿ ಕಾರ್ಮಿಕರು ತೋಟ ಗದ್ದೆಗಳತ್ತ ಮುಖ ಮಾಡುತ್ತಿಲ್ಲ. ಕಾರ್ಮಿಕರು ಕೃಷಿಯೇತರ ಕೆಲಸಗಳತ್ತ, ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಬಿ. ಕಾನನಕಾಡು ತೋಟದ ಮಾಲಿಕ ಸಿ.ಟಿ.ಪೊನ್ನಪ್ಪ ಸುಮಾರು ಹತ್ತರಿಂದ ಇಪ್ಪತ್ತು ಕಾರ್ಮಿಕರನ್ನು ತೋಟಗಳ ಸುತ್ತಲು ಗಸ್ತು ತಿರುಗಲು ಬಿಟ್ಟು ಉಳಿದ ಬೆರಳೆಣಿಕೆಯ ಕಾರ್ಮಿಕರನ್ನು ತೋಟಗಳಲ್ಲಿ ಕೆಲಸ ಮಾಡಿಸುವ ಅನಿವಾರ್ಯತೆ ಒದಗಿದೆ.

ಕಳೆದ ಒಂದು ವಾರದಿಂದ ಈಚೆಗೆ ಕಾಡಾನೆ ಎಂಟರಿಂದ ಹತ್ತು ಜನರ ಮೇಲೆ ದಾಳಿ ಮಾಡಿದೆ. ಕೋಟ್ಯಂತರ ರೂಪಾಯಿಗಳ ಆಸ್ತಿ ಪಾಸ್ತಿಗೂ, ವಾಹನಗಳಿಗೂ ಹಾನಿಯುಂಟು ಮಾಡಿದೆ. ಮಂಗಳವಾರದಂದು ಪಾಲಿಬೆಟ್ಟ ಸಮೀಪದ ಮೇಕೂರು ಎಂಬಲ್ಲಿನ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕ ಮಹಿಳೆಯರ ಮೇಲೆ ಕಾಡಾನೆ ದಾಳಿ ಮಾಡಿದೆ. ಆನೆ ದಾಳಿಗೆ ತುತ್ತಾದ ಅಕ್ಕಮ್ಮ(55) ಕಾಲು ಮುರಿದಿದ್ದು ಸಿಂಧು (52) ಎಂಬವರ ಎದೆಗೆ ತೀವ್ರ ಪೆಟ್ಟಾಗಿದ್ದು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಗೋಣಿಕೊಪ್ಪಲು ಕಾಲೇಜು ಉಪನ್ಯಾಸಕಿ ಪಾಲಿಬೆಟ್ಟದ ಸಮೀಪ ತೋಟದ ಮಾರ್ಗವಾಗಿ ನೌಕರಿಗೆ ತೆರಳುವಾಗ ಹಠಾತ್ ಒಂಟಿಸಲಗ ದಾಳಿ ಮಾಡಿದೆ. ಚಲಿಸುತ್ತಿದ್ದ ಸ್ಕೂಟಿಯಿಂದ ಅಪ್ಪಳಿಸಿ ಪ್ರಾಣಾಪಾಯದಿಂದ ಪಾರಾದರಾದರೂ ಗಾಯಗೊಂಡು ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ಹಾಗೂ ಗುರುವಾರದಂದು ಆನಂದಪುರದ ಎ.ಕೆ. ಸತ್ಯನಾರಾಯಣನ್ ಕಾಫಿ ತೋಟದಲ್ಲಿ ಮೆರೆದಾಡಿದ ಕಾಡಾನೆಗಳ ಹಿಂಡು ಸುಮಾರು 10ಲಕ್ಷ ರುಪಾಯಿಗಳಿಗಿಂತ ಹೆಚ್ಚು ನಷ್ಟ ಉಂಟುಮಾಡಿದೆ. ಬೆಳೆದು ನಿಂತ  ಅಪಾರ ಪ್ರಮಾಣದ ಕಾಫಿ ಗಿಡಗಳನ್ನು, ಕರಿಮೆಣಸು ಬಳ್ಳಿಗಳನ್ನು ನೆಲಸಮಗೊಳಿಸಿದೆ. ಸಣ್ಣ ಹಾಗೂ ಅತೀ ಸಣ್ಣ ಬೆಳೆಗಾರರು ಆನೆ ಉಪಟಳಕ್ಕೆ ತುತ್ತಾಗಿ ಕೃಷಿ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT