ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ಸ್ಥಳಾಂತರಕ್ಕೆ ಇನ್ನೂ ಇಲ್ಲ ಅನುಮತಿ

Last Updated 8 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯದ ಆನೆ ಯೋಜನೆ ನಿರ್ದೇಶನಾಲಯದ ಅನುಮತಿ ಪಡೆಯುವ ಮುನ್ನವೇ ರಾಜ್ಯ ಅರಣ್ಯ ಇಲಾಖೆ ಹಾಸನ ಜಿಲ್ಲೆಯ ಆಲೂರು ಅರಣ್ಯ ವಲಯದಿಂದ 25ಕ್ಕೂ ಹೆಚ್ಚು ಆನೆಗಳನ್ನು ಸ್ಥಳಾಂತರಿಸಲು ಸಿದ್ಧತೆ ಆರಂಭಿಸಿದೆ.

ಆಲೂರು ವಲಯದಿಂದ 25ಕ್ಕೂ ಹೆಚ್ಚು ಆನೆಗಳನ್ನು ಕಾವೇರಿ ವನ್ಯಜೀವಿ ಸಂರಕ್ಷಣಾ ವಲಯಕ್ಕೆ ಸ್ಥಳಾಂತರಿಸುವುದಾಗಿ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಶುಕ್ರವಾರ ಪ್ರಕಟಿಸಿದ್ದಾರೆ. ಈ ಸಂಬಂಧ ಚರ್ಚಿಸಲು ಸೋಮವಾರ ರಾಜ್ಯದ ಎಲ್ಲ ವನ್ಯಜೀವಿ ಅಧಿಕಾರಿಗಳ ಸಭೆಯನ್ನೂ ಕರೆದಿದ್ದಾರೆ.

ಆದರೆ ಈ ಬಗ್ಗೆ `ಪ್ರಜಾವಾಣಿ~, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವನ್ನು (ಎಂಓಇಎಫ್) ಸಂಪರ್ಕಿಸಿದಾಗ, `ಆನೆಗಳ ಸ್ಥಳಾಂತರಕ್ಕೆ ರಾಜ್ಯ ಸರ್ಕಾರಕ್ಕೆ ಇನ್ನೂ ಅನುಮತಿ ನೀಡಿಲ್ಲ~ ಎಂದು ಅಧಿಕಾರಿಗಳು ತಿಳಿಸಿದರು.ಆನೆಗಳನ್ನು ಸ್ಥಳಾಂತರಿಸಿದರೆ ಅವು ಮತ್ತೆ ಆಲೂರಿಗೆ ವಾಪಸಾಗುವ ಅಥವಾ ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುವ ಮೂಲಕ ಪರಿಸ್ಥಿತಿ ತೀರಾ ಹದಗೆಡಬಹುದು ಎಂಬ ಸಂಶಯ ಎಂಓಇಎಫ್ ಅಧಿಕಾರಿಗಳಿಂದ ವ್ಯಕ್ತವಾಗಿದೆ.

`ಮೈಸೂರಿನಲ್ಲಿ ಎರಡು ಆನೆಗಳು ನಗರದೊಳಕ್ಕೆ ನುಗ್ಗಿ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಘಟನೆ ನಮ್ಮನ್ನು ಆತಂಕಕ್ಕೆ ತಳ್ಳಿದೆ. ಈ ಕಾರಣದಿಂದಾಗಿಯೇ ಸಚಿವಾಲಯವು ಆನೆಗಳ ಸ್ಥಳಾಂತರ ಪ್ರಸ್ತಾವವನ್ನು ತಡೆಹಿಡಿದಿದೆ~ ಎನ್ನುತ್ತಾರೆ ಹಿರಿಯ ಅಧಿಕಾರಿಯೊಬ್ಬರು.

ಕೆಲ ತಿಂಗಳ ಹಿಂದೆ ಆಲೂರಿನ ಆನೆಯನ್ನು ಬಂಡೀಪುರ ವಲಯಕ್ಕೆ ಸ್ಥಳಾಂತರಿಸಲು ನಡೆಸಿದ ಪ್ರಯತ್ನ ವಿಫಲವಾಗಿರುವುದು ಕೂಡ ಇಲಾಖೆ ಹಿಂದೇಟು ಹಾಕಲು ಮತ್ತೊಂದು ಕಾರಣ. ಆದರೆ, ರಾಜ್ಯ ಸರ್ಕಾರದ ಒತ್ತಡ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಸ್ತಾವವನ್ನು ಪರಿಷ್ಕರಿಸಿ ಮತ್ತೆ ಸಲ್ಲಿಸುವಂತೆ ಎಂಓಇಎಫ್, ರಾಜ್ಯ ಅರಣ್ಯ ಇಲಾಖೆಗೆ ಸೂಚಿಸಿದೆ.

`ರಾಜ್ಯ ಸರ್ಕಾರ 25 ಆನೆಗಳನ್ನೂ ಒಂದೇ ಬಾರಿ ಸ್ಥಳಾಂತರಿಸಲು ಯೋಚಿಸಿದೆ. ಆದರೆ, ಇಷ್ಟೂ ಆನೆಗಳನ್ನು ಒಂದೇ ಬಾರಿಗೆ ಸ್ಥಳಾಂತರಿಸಲು ಅನುಮತಿ ನೀಡಲು ಸಾಧ್ಯವಿಲ್ಲ. ವಿವಿಧ ಹಂತಗಳಲ್ಲಿ ಆನೆಗಳನ್ನು ಸ್ಥಳಾಂತರಿಸಲು ರಾಜ್ಯ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಈ ಮಧ್ಯೆ ಆನೆಗಳು ವಾಪಸಾದರೆ ಅಥವಾ ಜನವಸತಿ ಪ್ರದೇಶಕ್ಕೆ ನುಗ್ಗಿ ದಾಂದಲೆ ನಡೆಸಿದರೆ ಸಂಪೂರ್ಣ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸುವಂತೆ ಕೋರಲಾಗಿದೆ. ಈ ದಿಸೆಯಲ್ಲೇ ಪ್ರಸ್ತಾವವನ್ನು ಪರಿಷ್ಕರಿಸಿ, ಪುನಃ ಸಲ್ಲಿಸುವಂತೆ ಸೂಚನೆ ನೀಡಲಾಗಿದೆ~ ಎಂದು ಕೇಂದ್ರ ಅರಣ್ಯ ಸಚಿವಾಲಯದ ಮೂಲಗಳು ತಿಳಿಸಿವೆ.

ಖರ್ಚಿನ ಕೆಲಸ:ಆನೆಗಳನ್ನು ಸೆರೆಹಿಡಿದು ಸ್ಥಳಾಂತರಿಸುವ ಪ್ರಕ್ರಿಯೆ ಸಮಯ ಮತ್ತು ಹಣ ವೆಚ್ಚಕ್ಕೆ ಕಾರಣವಾಗುವ ಕೆಲಸ ಎಂಬುದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎನ್.ಎಚ್.ಸ್ವಾಮಿನಾಥ್ ಅವರ ಅಭಿಪ್ರಾಯ. ಇತ್ತೀಚೆಗೆ ಸಾವನದುರ್ಗ ಅರಣ್ಯ ಪ್ರದೇಶದಿಂದ ಆನೆಯೊಂದನ್ನು ಹಿಡಿದು ಸ್ಥಳಾಂತರಿಸಲು ಎಂಟು ಲಕ್ಷ  ವೆಚ್ಚವಾಗಿದ್ದನ್ನು ಅವರು ಉದಾಹರಣೆಯಾಗಿ ನೀಡುತ್ತಾರೆ.

ಒಂದು ಆನೆ ಹಿಡಿಯಲು ಹತ್ತು ದಿನಗಳ ಸಮಯ ತಗುಲಿತ್ತು. ಆನೆಯೊಂದನ್ನು ಹಿಡಿಯಲು ದಿನವೊಂದಕ್ಕೆ ಕನಿಷ್ಠ 3ರಿಂದ 5 ಲಕ್ಷ ರೂಪಾಯಿ ವೆಚ್ಚ ಮಾಡಬೇಕಾಗುತ್ತದೆ. ಆಲೂರಿನಲ್ಲಿರುವ ಎಲ್ಲ ಆನೆಗಳನ್ನು ಹಿಡಿಯಲು ಕನಿಷ್ಠ ರೂ 75 ಲಕ್ಷದಿಂದ 1 ಕೋಟಿ ರೂಪಾಯಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ.

ಯಶಸ್ಸು ಸಾಧಿಸುವ ವಿಶ್ವಾಸ: ಆನೆಗಳ ಸ್ಥಳಾಂತರಕ್ಕೆ ಹಿಂದೆ ನಡೆಸಿರುವ ಪ್ರಯತ್ನಗಳು ವಿಫಲವಾಗಿರಬಹುದು. ಆದರೆ, ಈ ಬಾರಿ ಕೆಲಸದಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವಿದೆ ಎನ್ನುತ್ತಾರೆ ಆನೆ ಯೋಜನೆಯ ರಾಜ್ಯ ಯೋಜನಾ ನಿರ್ದೇಶಕ ಅಜಯ್ ಮಿಶ್ರಾ.

`ಈ ಬಾರಿ ಆನೆಗಳ ಗುಂಪನ್ನೇ ಸ್ಥಳಾಂತರ ಮಾಡಲಾಗುತ್ತಿದೆ. ಆನೆಗಳು ಗುಂಪಿನ ಸದಸ್ಯರನ್ನು ತ್ಯಜಿಸಿ ಬೇರೆಡೆ ಹೋಗಲಾರವು ಎಂದು ಭಾವಿಸಿದ್ದೇವೆ. ಕಾವೇರಿ ವನ್ಯಜೀವಿ ರಕ್ಷಿತಾರಣ್ಯ 260 ಚದರ ಕಿಲೋಮೀಟರ್ ವಿಸ್ತೀರ್ಣ ಹೊಂದಿದ್ದು, 500ಕ್ಕೂ ಹೆಚ್ಚು ಆನೆಗಳು ಅಲ್ಲಿವೆ. ಅವು ಹಾಸನ ಅರಣ್ಯ ಪ್ರದೇಶವನ್ನು ಪ್ರವೇಶಿಸಿದ ಉದಾಹರಣೆಗಳೇ ಇಲ್ಲ~ ಎನ್ನುತ್ತಾರೆ ಅವರು.ಆಲೂರಿನ ಆನೆಗಳ ವಿಷಯದಲ್ಲಿ ಇನ್ನೂ ಒಂದು ಯೋಚನೆ ಅರಣ್ಯ ಇಲಾಖೆಯ ಮುಂದಿದೆ. ಅಂತಿಮವಾಗಿ ಈ ಆನೆಗಳಿಗೆಂದೇ ಶಿಬಿರವೊಂದನ್ನು ಸ್ಥಾಪಿಸಿ, ಪುನರ್ವಸತಿ ಕಲ್ಪಿಸುವ ಚಿಂತನೆಯೂ ನಡೆದಿದೆ ಎನ್ನುತ್ತಾರೆ ಮಿಶ್ರಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT