ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗೊಂದು ನ್ಯಾಯ; ಸತ್ತವರಿಗೊಂದು ನ್ಯಾಯ

Last Updated 13 ಜನವರಿ 2011, 10:45 IST
ಅಕ್ಷರ ಗಾತ್ರ

ಆಲೂರು/ ಹಾಸನ: ‘ಮೂರು ಆನೆಮರಿಗಳು ಸತ್ತಾಗ ಓಡೋಡಿ ಬಂದು ರೈತರ ಮೇಲೆ ದೂರೂ ದಾಖಲಿಸಿದ್ದೀರಿ. ಆನೆಗಳು ನಮ್ಮ ಮೇಲೆ ದಾಳಿ ನಡೆಸಿ ನಾವು ಗಾಯಗೊಂಡು ಮಲಗಿದ್ದಾಗ ಆರೋಗ್ಯ ವಿಚಾರಿಸಲು ಯಾಕೆ ಬಂದಿಲ್ಲ? ಆನೆ ತುಳಿತಕ್ಕೆ ಒಳಗಾಗಿ ಜನರು ಸತ್ತಾಗ ಯಾರ ವಿರುದ್ದ ದೂರು ದಾಖಲಿಸಿದ್ರಿ? ಈಚೆಗೆ ಮೈಸೂರು ಮೃಗಾಲಯದಲ್ಲೇ ಆನೆ ಸತ್ತಿದೆ, ಯಾರ ವಿರುದ್ಧವಾದರೂ ದೂರು ದಾಖಲಾಯಿತೇ? ...

ಹೀಗೆ ರೈತರಿಂದ ಒಂದರ ಮೇಲೊಂದರಂತೆ ಪ್ರಶ್ನೆಗಳು ತೂರಿ ಬಂದವು. ಕೆಲವು ರೈತರು ಆವೇಶದಿಂದ ‘ರೈತರ ಮೇಲಿನ ದೂರು ಹಿಂತೆಗೆದುಕೊಳ್ಳುವವರೆಗೆ ನಾವಿಲ್ಲಿಂದ ಕದಲುವುದಿಲ್ಲ ಎಂದರು, ಹೂವಯ್ಯ ಅವರನ್ನು ಬಂಧಿಸಿದರೆ ಅವರ ಜತೆಯಲ್ಲಿ ನಾವೆಲ್ಲರೂ ಠಾಣೆಗೆ ಬರುತ್ತೇವೆ ಎಂದು ಕೆಲವು ಮಹಿಳೆಯರು ನುಡಿದರು.
ಇದೆಲ್ಲ ನಡೆದಿದ್ದು ಆಲೂರು ತಾಲ್ಲೂಕು ರಾಯರಕೊಪ್ಪಲಿನ ನೀಲಬಾನು ಕಲ್ಯಾಣಮಂಟಪದಲ್ಲಿ ಬುಧವಾರ ನಡೆದ ರೈತರು ಹಾಗೂ ಅಧಿಕಾರಿಗಳ ಸಭೆಯಲ್ಲಿ.

ತಾಲ್ಲೂಕಿನಲ್ಲಿ ಈಚೆಗೆ ವಿದ್ಯುತ್ ಸ್ಪರ್ಶದಿಂದ ಮೂರು ಆನೆ ಮರಿಗಳು ಸತ್ತಿದ್ದವು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ರೈತರ ವಿರುದ್ಧ ದೂರು ದಾಖಲಿಸಿರುವುದರಿಂದ ರೈತರು ಸಿಟ್ಟಿಗೆದ್ದಿದ್ದರು. ಮಂಗಳವಾರ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರು ಕಟಾತ್ತನೆ ಎದುರಾದ ಆನೆಗೆ ಹೆದರಿ ಭಯಭೀತಗೊಂಡು ಓಡಿದಾಗ ಒಬ್ಬ ಬಾಲಕಿ ಬಿದ್ದು ಗಾಯಗೊಂಡಿರುವ ಘಟನೆ ರೈತರು ರೊಚ್ಚಿಗೇಳುವಂತೆ ಮಾಡಿತ್ತು. ಕೂಡಲೇ ಅವರು ಪ್ರತಿಭಟನೆ ನಡೆಸಿದ್ದರು.
ಇವರನ್ನು ಸಮಾಧಾನಗೊಳಿಸಿದ ಪೊಲೀಸರು ಬುಧವಾರ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯ ಸಭೆ ಆಯೋಜಿಸುತ್ತೇವೆ, ಅವರಲ್ಲಿ ಸಮಸ್ಯೆ ಹೇಳಿಕೊಳ್ಳಬಹು ಎಂದಿದ್ದರು. ಅದರಂತೆ ಬುಧವಾರ ಬೆಳಿಗ್ಗೆ ನೀಲಬಾನು ಕಲ್ಯಾಣಮಂಟಪದಲ್ಲಿ ಸಭೆ ಏರ್ಪಾಟಾಗಿತ್ತು.

ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್, ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ, ಮಾಜಿ ಶಾಸಕ  ಬಿ.ಆರ್. ಗುರುದೇವ್, ಜಿ.ಪಂ. ನೂತನ ಸದಸ್ಯೆ ಜ್ಯೋತಿ ಗುರುದೇವ್, ಹೆಮ್ಮಿಗೆ ಮೋಹನ್, ಕಣಗಾಲ್ ಮೂರ್ತಿ ಸೇರಿದಂತೆ ಹಲವು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ಸೇರಿದ್ದ ಗ್ರಾಮಸ್ಥರು ಹಾಗೂ ರೈತರು ತಾವು ದಶಕಗಳಿಂದ ಅನುಭವಿಸುತ್ತಿರುವ ನೋವನ್ನು ಅಧಿಕಾರಿಗಳ ಮುಂದೆ ತೋಡಿಕೊಂಡರು.

‘ಆನೆಗೆ ಏನಾದರೂ ಆದ್ರೆ ಬಂದು ನಮ್ಮ ವಿರುದ್ಧ ದೂರು ದಾಖಲಿಸಿ ಹೋಗ್ತೀರಿ, ಜನರು ಸತ್ತಾಗ  ಒಮ್ಮೆ ಬಂದು ಪರಿಹಾರ ನೀಡಿ ಹೋದರೆ ಬಳಿಕ ನಮ್ಮತ್ತ ತಿರುಗಿಯೂ ನೋಡುವುದಿಲ್ಲ. ಇಲ್ಲಿ ದೂರು ದಾಖಲಿಸುವುದಿಲ್ಲ ಎಂದು ಭರವಸೆ ನೀಡಿ ಹೋದವರು, ರೈತರ ವಿರುದ್ಧ ದೂರು ದಾಖಲಿಸಿ ಅವರು ಕೋರ್ಟ್ ಕಚೇರಿ ಅಲೆಯುವಂತೆ ಮಾಡುತ್ತಾರೆ’ ಎಂದು ಆರೋಪಿಸಿದ ರೈತರು ಈಚೆಗೆ ನಡೆದ ಆನೆಮರಿಗಳ ಸಾವಿಗೆ ಸಂಬಂಧಿಸಿದಂತೆ ರೈತರ ವಿರುದ್ಧ ದಾಖಲಿಸಿದ ದೂರನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ದೂರು ಹಿಂತೆಗೆದುಕೊಳ್ಳುವವರೆಗೆ ಅಧಿಕಾರಿಗಳನ್ನು ಹೋಗಲು ಬಿಡುವುದಿಲ್ಲ ಎಂದರು. ಜಿಲ್ಲಾಧಿಕಾರಿ ಸಮಾಧಾನ ಹೇಳಲು ಬಂದರೂ ರೈತರು ಒಪ್ಪಲಿಲ್ಲ. ಕೊನೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ, ‘ಆನೆ ಸತ್ತಾಗ ದೂರು ದಾಖಲಿಸುವುದು ಒಂದು ಸಹಜ ಪ್ರಕ್ರಿಯೆ. ಆನೆ ವಿದ್ಯುತ್ ಸ್ಪರ್ಶದಿಂದ ಸತ್ತಿದೆ ಎಂಬುದು ಮಾತ್ರ ಸಾಬೀತಾಗಿದೆ. ರೈತರೇ ಕೊಂದಿದ್ದಾರೆಯೇ ಅಥವಾ ಗ್ರೌಂಡಿಂಗ್‌ನಿಂದ ಆನೆ ಸತ್ತಿದೆಯೇ ಎಂಬುದು ತನಿಖೆಯಿಂದ ತಿಳಿಯಬೇಕು, ಇಲಾಖೆ ರೈತರ ವಿರೋಧಿಯಲ್ಲ, ಅವರ ಪರವಾಗಿಯೇ ಕೆಲಸ ಮಾಡುತ್ತದೆ’ ಎಂದು ಭರವಸೆ ನೀಡಿದರು.

ಜತೆಗೆ ಮಾಜಿ ಶಾಸಕ ಬಿ.ಆರ್. ಗುರುದೇವ್ ಅವರು ‘ಈ ವಿಚಾರದ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಿದ್ದೇವೆ. ಉಸ್ತುವಾರಿ ಸಚಿವ ಸೋಮಣ್ಣ ಜತೆಗೂ ಮಾತನಾಡಿದ್ದೇವೆ, ಮುಖ್ಯಮಂತ್ರಿ ಜತೆ ಮಾತನಾಡಿ ದೂರು ಹಿಂತೆಗೆದುಕೊಳ್ಳಲು ವ್ಯವಸ್ಥೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದ ಬಳಿಕ ರೈತರು ಶಾಂತರಾದರು.ಬೆಂಗಳೂರಿನಿಂದ ಬಂದಿದ್ದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ. ಸಿಂಗ್ , ‘ಆನೆಗಳನ್ನು ಸ್ಥಳಾಂತರಿಸಲು ಅನುಮತಿ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ. ಅನುಮತಿ ಬಂದ ಕೂಡಲೇ ಆ ಕಾರ್ಯ ಕೈಗೊಳ್ಳುತ್ತೇವೆ’ ಎಂದರು.

ರೈತರಿಗೆ ರಕ್ಷಣೆ ಒದಗಿಸುವ ಬಗ್ಗೆ ಭರವಸೆ ನೀಡಿದ ಜಿಲ್ಲಾಧಿಕಾರಿ ನವೀನ್‌ರಾಜ್ ಸಿಂಗ್, ‘ಜಿಲ್ಲಾಡಳಿತ ರೈತರ ಪರವಾಗಿ ಕೆಲಸ ಮಾಡುತ್ತದೆ. ಗೊಬ್ಬರ, ನೀರು, ಬೀಜ ವಿತರಣೆ, ರಕ್ಷಣೆ ಒದಗಿಸುವುದೇ ಮುಂತಾದ ವಿಚಾರಗಳಲ್ಲಿ ಯಾವುದೇ ಒಪ್ಪಂದ ಮಾಡುವುದಿಲ್ಲ. ರೈತರ ವಿರುದ್ಧ ದಾಖಲಾಗಿರುವ ದೂರಿನ ಬಗ್ಗೆ ಏನು ಮಾಡಬೇಕು ಎಂಬ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಶರತ್‌ಚಂದ್ರ ಜತೆ ಮಾತುಕತೆ ನಡೆಸುತ್ತೇನೆ’ ಎಂದರು.

ತಾಲ್ಲೂಕಿನಲ್ಲಿ ಕೆಲವೆಡೆ ವಿದ್ಯುತ್ ತಂತಿಗಳು ಕೈಗೆಟುಕುವಷ್ಟು ಕೆಳಗೆ ನೇತಾಡುತ್ತಿವೆ. ಇಲಾಖೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತಾಳಿದ್ದಾರೆ. ಮೊದಲು ಅವರಿಗೆ ತಂತಿಗಳನ್ನು ಮೇಲೆತ್ತಲು ಸೂಚನೆ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ರೈತರು ಒತ್ತಾಯಿಸಿದರು.

ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಿಲ್ಲ
‘ಬಿಸಿಲೆ ಅರಣ್ಯದಲ್ಲಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೂರು ಜಲವಿದ್ಯುತ್ ಯೋಜನೆಗಳಿಗೆ ಅರಣ್ಯ ಇಲಾಖೆ ನಿರಪೇಕ್ಷಣಾ ಪತ್ರ ನೀಡಿಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ ಸ್ಪಷ್ಟಪಡಿಸಿದರು.

ಸಭೆಯ ಬಳಿಕ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಅರಣ್ಯದಲ್ಲಿ ಗಣಿಕಾರಿಕೆ ನಡೆಸುವುದರಿಂದ ಮತ್ತು ಕೈಗೆತ್ತಿಕೊಂಡಿರುವ ವಿವಿಧ ಯೋಜನೆಗಳಿಂದ ಆನೆಗಳ ಸ್ವಾತಂತ್ರ್ಯ ಹರಣವಾಗುತ್ತಿದೆ, ಆದ್ದರಿಂದ ಅವು ನಾಡಿಗೆ ಬರುತ್ತಿವೆ ಎಂದು ಜನ ಆರೋಪಿಸುತ್ತಿದ್ದಾರೆ. ಆದರೆ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿಲ್ಲ. ಗಣಿಗಾರಿಕೆ ನಡೆಯುತ್ತಿರುವುದು ಸರ್ಕಾರಿ ಜಾಗದಲ್ಲಿ. ಬಿಸಿಲೆಯಲ್ಲಿ ಇನ್ನೂ ಮೂರು ಜಲವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿತ್ತು. ಆದರೆ ಇದಕ್ಕೆ ಅರಣ್ಯ ಇಲಾಖೆ ಅನುಮತಿ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT