ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಯ ಕಾಲಿನ ಸರಪಳಿ

Last Updated 16 ಜೂನ್ 2018, 9:20 IST
ಅಕ್ಷರ ಗಾತ್ರ

ತಂದೆ ಮಕ್ಕಳನ್ನು ಕರೆದುಕೊಂಡು ಊರಿನ ಹೊರಗೆ ಬೀಡುಬಿಟ್ಟಿದ್ದ ಸರ್ಕಸ್‌ಗೆ ಕರೆದುಕೊಂಡು ಹೋದರು. ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಅವರು ಕಣ್ಣರಳಿಸಿ ನೋಡುತ್ತಿದ್ದರು. ಅದೆಷ್ಟು ದೊಡ್ಡದಾದ ಡೇರೆ ಅದು! ಬಣ್ಣಬಣ್ಣದ ಧ್ವಜಗಳು ಎಲ್ಲೆಡೆ ಹಾರಾಡುತ್ತಿದ್ದವು. ಡೇರೆಯ ಹೊರಗೆಲ್ಲ ದೊಡ್ಡ ದೊಡ್ಡ ಚಿತ್ರಗಳು. ಒಳಗೆ ಹೋಗಿ ನೋಡಿದರೆ ಅದೊಂದು ಬೇರೆ ಪ್ರಪಂಚವೇ ಆಗಿತ್ತು.

ಮಧ್ಯದಲ್ಲಿ ವೃತ್ತಾಕಾರದ ಮೈದಾನ. ಅದರ ಸುತ್ತಲೂ ಜನರಿಗೆ ಕೂಡ್ರಲು ವ್ಯವಸ್ಥೆ, ಮುಂದೆ ಇರುವುದು ವಿಶೇಷ ಆಸನಗಳು. ಹಿಂದೆ ಎಲ್ಲ ಗ್ಯಾಲರಿಗಳು. ಜನರಿಂದ ಪೂರ್ತಿಯಾಗಿ ತುಂಬಿಕೊಂಡಿದ್ದುವು. ಅದೊಂದು ತರಹದ ರಣಕೋಲಾಹಲ. ಮಕ್ಕಳು ಕಿರಿಚುತ್ತಿದ್ದಾರೆ. ಹಿರಿಯರು ಅವರನ್ನು ನಿಯಂತ್ರಿಸಲು ಇನ್ನೂ ಜೋರಾಗಿ ಕೂಗುತ್ತಿದ್ದಾರೆ. ಹಿಂದೆ ಅಬ್ಬರವಾದ ವಾದ್ಯಸಂಗೀತ.

ಜೋರಾಗಿ ಕಹಳೆಯ ಸದ್ದು ಮೊಳಗಿತು. ಕಾರ್ಯಕ್ರಮ ಪ್ರಾರಂಭವಾಯಿತು. ಒಂದಾದ ಮೇಲೆ ಒಂದರಂತೆ ಅದ್ಭುತ ಪ್ರದರ್ಶನಗಳು. ಮಕ್ಕಳು ಬಾಯಿ ತೆರೆದುಕೊಂಡೇ ನೋಡಿದರು. ಸೈಕಲ್ ಹೊಡೆಯುವ ಮಂಗಗಳು, ನೃತ್ಯ ಮಾಡುವ ಆನೆಗಳು, ಒಂದು ಜೋಕಾಲಿಯಿಂದ ಮತ್ತೊಂದು ಜೋಕಾಲಿಗೆ ಹಾರುವ ತರುಣರು, ತೆಳುವಾದ ತಂತಿಯ ಮೇಲೆ ಬಳುಕುವ ದೇಹವನ್ನು ಮತ್ತಷ್ಟು ಬಳುಕಿಸುತ್ತ ನಡೆಯುವ ತರುಣಿಯರು. ಇವರ ಕಸರತ್ತುಗಳ ನಡುವೆ ತಮ್ಮ ಚಿತ್ರವಿಚಿತ್ರವಾದ ಆಟ, ನಡೆಗಳಿಂದ ಹೊಟ್ಟೆ ಹುಣ್ಣಾಗುವಂತೆ ನಗಿಸುವ ವಿದೂಷಕರು.

ಹಿರಿಯರೆಲ್ಲ ಮಕ್ಕಳಾದರು, ಮಕ್ಕಳು ತಾವೇ ಕಲಾವಿದರಾದಂತೆ, ಪ್ರಾಣಿಗಳಾದಂತೆ, ವಿದೂಷಕರಾದಂತೆ ಭ್ರಮಿಸಿ ಸಂಭ್ರಮಿಸಿದರು. ಆಟ ಮುಗಿಯಿತು. ಮಕ್ಕಳು ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ತಂದೆಯೊಂದಿಗೆ ನಡೆದರು. ಡೇರೆಯಿಂದ ಬೇರೆ ಬಾಗಿಲಿನಿಂದ ಹೊರಗೆ ಬರುವಾಗ ಅಲ್ಲಿದ್ದ ಪ್ರಾಣಿಗಳ ಬೋನುಗಳನ್ನು ಕಂಡರು. ಒಳಗೆ ಹಾರಾಡುತ್ತಿದ್ದ ಪ್ರಾಣಿಗಳು ಇಲ್ಲಿ ಇಕ್ಕಟ್ಟಾದ ಪಂಜರಗಳಲ್ಲಿ ಕುಳಿತದ್ದನ್ನು ಕಂಡು ದುಃಖವಾಯಿತು. ಇನ್ನು ಮುಂದೆ ಬಂದಾಗ ಅಲ್ಲಿ ನಾಲ್ಕೈದು ಆನೆಗಳು ಹುಲ್ಲು ತಿನ್ನುತ್ತಾ ನಿಂತಿದ್ದವು. ಒಬ್ಬ ಹುಡುಗ ಗಮನಿಸಿದ. ಪ್ರತಿಯೊಂದು ಆನೆಯ ಹಿಂದಿನ ಒಂದು ಕಾಲಿಗೆ ಒಂದು ಸರಪಳಿ ಕಟ್ಟಿದ್ದಾರೆ. ಅದರ ಇನ್ನೊಂದು ತುದಿಯನ್ನು ನೆಲಕ್ಕೆ ಬಡಿದ ಗೂಟಕ್ಕೆ ಬಿಗಿದಿದ್ದಾರೆ.

ಹುಡುಗ ಆಶ್ಚರ್ಯದಿಂದ ತಂದೆಯನ್ನು ಕೇಳಿದ, ‘ಅಪ್ಪಾ, ಇಷ್ಟು ದೊಡ್ಡ ಆನೆಯನ್ನು ಒಂದು ಸಣ್ಣ ಗೂಟಕ್ಕೆ ಬಿಗಿದಿದ್ದಾರೆ. ಆ ಗೂಟ ಅಷ್ಟು ಗಟ್ಟಿಯಾಗಿದೆಯೇ? ಅಂಥ ದೊಡ್ಡ ಆನೆ ಅದನ್ನು ಕಿತ್ತಲಾಗದೇ?’

ತಂದೆ ಹೇಳಿದರು, ‘ಆ ಸಣ್ಣ ಗೂಟ ಆನೆಯನ್ನು ಹೇಗೆ ತಡೆದೀತು? ಆನೆ ತನ್ನ ಶಕ್ತಿಯಿಂದ ಎಳೆದು ಇಡೀ ಡೇರೆಯನ್ನೇ ಕೆಳಗೆ ಎಳೆದುಬಿಡಬಹುದು.’ ‘ಹಾಗಾದರೆ ಅದನ್ನು ಕಿತ್ತಿಕೊಂಡು ಯಾಕೆ ಆನೆ ಹೋಗಿಬಿಡುವುದಿಲ್ಲ?’ ಮಗ ಕೇಳಿದ. ತಂದೆ ನಕ್ಕು ಹೇಳಿದರು, ‘ಮಗೂ ಆನೆಗೆ ತನ್ನ ಶಕ್ತಿ ಗೊತ್ತಿಲ್ಲ ಅಷ್ಟೇ. ಅದು ಸಣ್ಣ ಮರಿಯಿದ್ದಾಗ ಹಾಗೆ ಸರಪಳಿ ಕಟ್ಟಿ ಒಂದು ಗೂಟಕ್ಕೆ ಬಿಗಿದಿಟ್ಟುಬಿಡುತ್ತಿದ್ದರು. ಅದು ಎಳೆಎಳೆದು ಬಿಡಿಸಿಕೊಳ್ಳಲು ಪ್ರಯತ್ನಿಸಿತು. ಆಗ ಅದಕ್ಕೆ ಸಾಧ್ಯವಾಗಲಿಲ್ಲ. ಕ್ರಮೇಣ ಕಾಲಿಗೆ ಸರಪಳಿ ಕಟ್ಟಿದರೆ ಅದನ್ನು ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ ಎಂಬುದು ಅದರ ಮನಸ್ಸಿನಲ್ಲಿ ಸ್ಥಿರವಾಯಿತು.  ಹೀಗಾಗಿ ಅದರ ಶಕ್ತಿ ವೃದ್ಧಿಯಾದರೂ ಮನಸ್ಸಿನಿಂದ ಸೋತು ಹೋಗಿದೆ.

ನಮ್ಮಲ್ಲಿಯೂ ಮಕ್ಕಳಿಗೆ ಬಾಲ್ಯದಿಂದಲೇ ನಿನ್ನ ಕೈಯಿಂದ ಮಾಡಲಾಗುವುದಿಲ್ಲ, ನೀನು ಆಶಕ್ತ, ನಿನಗೆ ಆ ಶಕ್ತಿಯಿಲ್ಲ ಎಂದು ಹೇಳುತ್ತಾ ಮಾನಸಿಕ ಸರಪಳಿಗಳನ್ನು ಅವರ ಕಾಲುಗಳಿಗೆ ಬಿಗಿಯುತ್ತಾ ಬಂದರೆ ಮುಂದೆ ಅವರು ದೊಡ್ಡವರಾದಾಗಲೂ, ಶಕ್ತಿಶಾಲಿಗಳಾದಾಗಲೂ, ಅವರ ಕಾಲಿನಲ್ಲಿದ್ದ ಮಾನಸಿಕ ಸರಪಳಿ ಅವರನ್ನು ಮುಂದೆ ಹೋಗಲು ಬಿಡುವುದಿಲ್ಲ. ಅದಕ್ಕೆ ಎರಡೇ ಉಪಾಯಗಳು. ಹಿರಿಯರು ಮಕ್ಕಳಿಗೆ ಬಾಲ್ಯದಲ್ಲಿ ಈ ಸರಪಳಿಗಳನ್ನು ಹಾಕದಿರುವುದು ಮತ್ತು ಈಗಾಗಲೇ ಹಾಕಿದ್ದಾಗಿದ್ದರೆ ಆ ಸರಪಳಿ ಕೇವಲ ಮಾನಸಿಕ, ಅದನ್ನು ಕಿತ್ತೆಸೆದು ಮುನ್ನುಗ್ಗುವ ಶಕ್ತಿ ನಿನಗಿದೆ ಎಂದು ಹೇಳಿ ಉತ್ತೇಜನವಿತ್ತು ಪ್ರೋತ್ಸಾಹಿಸುವುದು. ಹಾಗಾದಾಗ ಮಾತ್ರ ನಮ್ಮ ತರುಣರು ಬಲಿತ ಸರ್ಕಸ್ ಆನೆಗಳಂತೆ ತಮ್ಮ ಶಕ್ತಿಯನ್ನು ಮರೆತು ದಾಸ್ಯಕ್ಕೆ ಈಡಾಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT