ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಯ ಮೇಲೆ ಬಸವ ಮಹಾದರ್ಶನ ಮೆರವಣಿಗೆ

Last Updated 7 ಮಾರ್ಚ್ 2011, 8:05 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಭಾನುವಾರ ಹಬ್ಬದ ಸಂಭ್ರಮ. ನಂದಿಧ್ವಜ, ವೀರಗಾಸೆ, ಕಂಸಾಳೆ, ಜಾನಪದ ಕಲಾತಂಡಗಳ ಸಡಗರ. ದಸರಾ ಮಹೋತ್ಸವ ನೆನಪಿಸಿದ ಅಲಂಕೃತ ಆನೆ. ಆನೆಯ ಮೇಲೆ, ಬಸವಣ್ಣನವರ  ಭಾವಚಿತ್ರ ಹಾಗೂ ‘ಬಸವ ಮಹಾದರ್ಶನ’ ಮಹಾಕಾವ್ಯ.-ಇವು, ಶಿವರಾತ್ರಿ ರಾಜೇಂದ್ರ ವೃತ್ತದಲ್ಲಿ ಕಂಡು ಬಂದ ದೃಶ್ಯ. ಕವಯತ್ರಿ ಡಾ.ಲತಾ ರಾಜಶೇಖರ್  ಅವರ ‘ಬಸವ ಮಹಾದರ್ಶನ’ ಮಹಾಕಾವ್ಯವನ್ನು ನಂದಿಧ್ವಜ ಪೂಜೆಯೊಂದಿಗೆ ಆನೆಯ ಮೇಲೆ ಇಟ್ಟು  ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಜಾನಪದ ಕಲಾತಂಡಗಳು ಮತ್ತು ಮಂಗಳ ವಾದ್ಯದೊಂದಿಗೆ  ಶಿವರಾತ್ರಿ ರಾಜೇಂದ್ರ ವೃತ್ತದಿಂದ ಹೊರಟು, ಬಸವೇಶ್ವರ ವೃತ್ತ, ನ್ಯೂ ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ, ದೇವರಾಜ ಅರಸ್ ರಸ್ತೆ ಮೂಲಕ ಕಲಾಮಂದಿರಕ್ಕೆ ತರಲಾಯಿತು.

ಗೊ.ರು.ಚ ಅವರಿಂದ ಲೋಕಾರ್ಪಣೆ: ‘ಬಸವ ಮಹಾದರ್ಶನ’ ಮಹಾಕಾವ್ಯವನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಕಲಾಮಂದಿರದಲ್ಲಿ ಲೋಕಾರ್ಪಣೆ ಮಾಡಿದರು.ಬಳಿಕ ಮಾತನಾಡಿದ ಅವರು, ‘ಶಾಲಾ- ಕಾಲೇಜು ಗ್ರಂಥಾಲಯಗಳಲ್ಲಿ ಬಸವ ಮಹಾದರ್ಶನದಂತಹ  ಕೃತಿಗಳನ್ನು ವಿದ್ಯಾರ್ಥಿಗಳಿಗೆ ಓದಲು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ ಚಿಂತನೆ ಮಾಡಬೇಕು. ಮಕ್ಕಳಿಗೆ ನೈತಿಕ ಮತ್ತು ಮೌಲ್ಯಯುತ ಶಿಕ್ಷಣ ನೀಡುವಲ್ಲಿ ಇಂತಹ ಕೃತಿಗಳು ಮಹತ್ತರ ಪಾತ್ರ ವಹಿ ಸುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಬಸವಣ್ಣನವರ ಕುರಿತು ಇಷ್ಟು ದೊಡ್ಡ ಕಾವ್ಯ ಇರಲಿಲ್ಲ. ನಾ ಹಿಡಿದ ಛಲವ ಬಿಡದೇ ನಡೆಸಯ್ಯ ಎಂಬಂತೆ ನಿರಂತರವಾಗಿ ಕೆಲಸ ಮಾಡುವ ಮೂಲಕ ಡಾ.ಲತಾ ರಾಜಶೇಖರ್ ಅವರು ಕನ್ನಡ ಸಾಹಿತ್ಯ ಲೋಕಕ್ಕೆ ಮೌಲಿಕ ಕೊಡುಗೆ ನೀಡಿದ್ದಾರೆ. ಪುಸ್ತಕ ರಚನೆಯ ವಸ್ತು, ಭಾಷೆ, ಶೈಲಿ, ತಂತ್ರ, ಕಥಾ ವಿನ್ಯಾಸದ ನಿಯಮಗಳನ್ನು ಲೇಖಕಿ ಅತ್ಯುತ್ತಮವಾಗಿ ಬಳಸಿದ್ದಾರೆ’ ಎಂದು ಶ್ಲಾಘಿಸಿದರು.

‘ಬಸವ ಮಹಾದರ್ಶನ ಕೃತಿಯಲ್ಲಿ ಲೇಖಕಿ ಬಸವಣ್ಣನವರ ವ್ಯಕ್ತಿತ್ವ, ಮಾನವೀಯತೆ, ಅನುಭವ ಪ್ರಜ್ಞೆಯ ಕುರಿತು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. 6, 7 ವರ್ಷಗಳಲ್ಲಿ ಮೂರು ಕಾವ್ಯ ಬರೆದಿರುವುದು  ದಾಖಲೆಯೇ ಸರಿ. ಬಸವಣ್ಣನವರ ಕುರಿತು ನೂರಾರು ಗೊಂದಲಮಯ ಪ್ರಶ್ನೆಗಳ ನಡುವೆ 900 ವರ್ಷಗಳು ಗತಿಸಿ ಹೋಗಿವೆ. ಆದರೆ, ಬಸ ವಣ್ಣನವರ ತತ್ವ, ಸಿದ್ಧಾಂತಗಳನ್ನು ವಾಸ್ತವದಲ್ಲಿ ಅಳವಡಿಸಿಕೊಳ್ಳುವ ಮತ್ತು ಅನುಸರಿಸುವ ಕೆಲಸ ಮಾತ್ರವಾಗಿಲ್ಲ’ ಎಂದರು.

ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಮಾತನಾಡಿ, ‘ಬಸವಣ್ಣನವರು ಮನುಕುಲದ ಒಳಿತಿಗಾಗಿ ಬದುಕಿದವರು. ಜಾತಿ, ವರ್ಣ, ವರ್ಗ ರಹಿತ ಕಲ್ಯಾಣ ರಾಜ್ಯ ನಿರ್ಮಾಣಕ್ಕೆ ಶ್ರಮಿಸಿದ್ದರು. 12ನೇ ಶತಮಾನದಲ್ಲಿ ಆಚರಣೆ ಯಲ್ಲಿದ್ದ ಲಿಂಗಭೇದವನ್ನು ತೀವ್ರವಾಗಿ ಖಂಡಿಸಿದ್ದರು. ಅಂತಹ ಮಹಾನ್ ವ್ಯಕ್ತಿಯ ಕುರಿತು ಮಹಾ ಕಾವ್ಯ ರಚಿಸಿರುವುದು ಶ್ಲಾಘನೀಯ’ ಎಂದು ಹೇಳಿದರು.

ಆದಿಚುಂಚನಗಿರಿ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ  ದೇಶಿಕೇಂದ್ರ ಸ್ವಾಮೀಜಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ಡಾ.ಎಚ್.ಬಿ.ರಾಜಶೇಖರ್, ಬಸವ ಸೇವಾ  ಪ್ರತಿಷ್ಠಾನದ ನಿರ್ದೇಶಕ ರಂಜಾನ್ ದರ್ಗಾ, ಕವಿ ಡಾ.ಅರವಿಂದ ಯಾಳಗಿ, ಸಂಗೀತ ವಿ.ವಿ ಕುಲಪತಿ ಡಾ.ಹ ನುಮಣ್ಣ ನಾಯಕ ದೊರೆ, ಸಾಹಿತಿ ಡಾ.ಸಾ.ಶಿ.ಮರುಳಯ್ಯ, ನಾಡೋಜ ಪ್ರೊ.ದೇ.ಜವರೇಗೌಡ, ಕರ್ನಾಟಕ  ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ನಗರ  ಘಟಕದ ಅಧ್ಯಕ್ಷ ಗೊ.ರು.ಪರಮೇಶ್ವರಪ್ಪ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಡ್ಡೀಕೆರೆ  ಗೋಪಾಲ್, ಶಾಸಕ ಎಂ.ಸತ್ಯನಾರಾಯಣ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT