ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್: ಒಟ್ಟು 16 ಮಂದಿ ಕಣದಲ್ಲಿ

Last Updated 18 ಏಪ್ರಿಲ್ 2013, 13:14 IST
ಅಕ್ಷರ ಗಾತ್ರ

ಆನೇಕಲ್: ಆನೇಕಲ್ (ಮೀಸಲು) ವಿಧಾನಸಭಾ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ಬುಧವಾರ 10 ಮಂದಿ ನಾಮಪತ್ರ ಸಲ್ಲಿಸುವ ಮೂಲಕ ಒಟ್ಟು 16 ಮಂದಿ ಕಣದಲ್ಲಿದ್ದಾರೆ.

ಜೆಡಿಎಸ್ ಪಕ್ಷದಿಂದ ಎಂ.ಕೇಶವ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಟಿ.ಶ್ರೀನಾಥ್‌ರೆಡ್ಡಿ, ಮುಖಂಡರಾದ ರಾಮೇಗೌಡ, ಎನ್.ಎಸ್.ಪದ್ಮನಾಭ, ಅಶ್ವತ್ಥ್ ನಾರಾಯಣ, ಆರ್.ದೇವರಾಜು, ಕೆ.ಪಿ.ರಾಜು, ಎಂ.ಟಿ.ನಾರಾಯಣ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಸಿಪಿಎಂ ಪಕ್ಷದಿಂದ ಡಿ.ಮಾದೇಶ್ ತಮ್ಮ ಬೆಂಬಲಿಗರೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ತಾಲ್ಲೂಕು ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಅಶೋಕ್, ಮಂಜುನಾಥ್ ಮತ್ತಿತರರು ಹಾಜರಿದ್ದರು.

ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಮಂಜುನಾಥ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಜಿಗಣಿ ಶಂಕರ್, ಮಂಜುನಾಥ, ನಾರಾಯಣ ಸ್ವಾಮಿ, ಶ್ರೀನಿವಾಸರೆಡ್ಡಿ, ಬಿ.ಟಿ.ನಾಗರಾಜು, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು. ಬಿಎಸ್‌ಪಿ ಪಕ್ಷದಿಂದ ಪಿ.ಶ್ರೀನಿವಾಸ್ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು. ಮುಖಂಡರಾದ ಸಿ.ಕೆ.ರಾಮು, ಕೆ.ಯಲ್ಲಪ್ಪ ಮತ್ತಿತರರು ಹಾಜರಿದ್ದರು.

ಜೆಡಿಯು ಪಕ್ಷದಿಂದ ವಿ.ಚೌಡಪ್ಪ ನಾಮಪತ್ರ ಸಲ್ಲಿಸಿದರು. ಕರ್ನಾಟಕ ರಾಜ್ಯ ರೈತ ಸಂಘದಿಂದ ವಿ.ಸುಕುಂದ ನಾಮಪತ್ರ ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಗಳಾಗಿ ಮುತ್ತಾನಲ್ಲೂರಿನ ಎ.ನಾರಾಯಣಸ್ವಾಮಿ, ಚಿಕ್ಕನಾಗಮಂಗಲದ ಎ.ನಾರಾಯಣಸ್ವಾಮಿ, ವೆಂಕಟೇಶಪ್ಪ ಮತ್ತು ಜೆ.ಗೌರಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಮಂಗಳವಾರ ಭಾರತೀಯ ಪ್ರಜಾ ಪಕ್ಷದಿಂದ ಟಿ.ಚಂದ್ರಪ್ಪ, ಪಕ್ಷೇತರ ಅಭ್ಯರ್ಥಿಯಾಗಿ ಜಿ.ಎಂ.ಗೋಪಿನಾಥ ನಾಮಪತ್ರ ಸಲ್ಲಿಸಿದ್ದಾರೆ.

ಒಬ್ಬ ಮಹಿಳೆ ಸೇರಿದಂತೆ ಏಳು ಮಂದಿ ಪಕ್ಷೇತರರು ನಾಮಪತ್ರ ಸಲ್ಲಿಸಿದ್ದಾರೆ.

ಮಾಗಡಿ ಕ್ಷೇತ್ರದಲ್ಲಿ ಈ ಬಾರಿ ಅತಿ ಹೆಚ್ಚು
ಮಾಗಡಿ: ಮಾಗಡಿ ವಿಧಾನಸಭಾ ಕ್ಷೇತ್ರದಿಂದ ಒಟ್ಟು 21 ಜನರು 31 ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ಎಂ.ಎಲ್ ವೈಶಾಲಿ ತಿಳಿಸಿದ್ದಾರೆ. 

ಶಾಸಕ ಎಚ್.ಸಿ ಬಾಲಕೃಷ್ಣ 4 ನಾಮಪತ್ರ ಸಲ್ಲಿಸಿದ್ದಾರೆ.  ಹಿಂದೆಂದಿಗಿಂತಲೂ ಈ ಬಾರಿ ಮಾಗಡಿಯಿಂದ ಅತಿ ಹೆಚ್ಚಿನ ವ್ಯಕ್ತಿಗಳು ಅರ್ಜಿ ಸಲ್ಲಿಸಿದ್ದಾರೆ ಎಂದು ಚುನಾವಣಾ ಶಾಖೆಯ ಪ್ರಕಟಣೆ ತಿಳಿಸಿದೆ.

ತಡವಾಗಿ ಬಂದ ಅಭ್ಯರ್ಥಿ
ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಕೆ.ಎಂ.ಮುನಿಯಪ್ಪ ಅವರು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಬಂದಾಗ ಸಮಯ ಮೀರಿದೆ ಎಂದು ಅವರಿಗೆ ನಾಮಪತ್ರ ಸಲ್ಲಿಸಲು ಚುನಾವಣಾ ಅಧಿಕಾರಿಗಳು ಅವಕಾಶ ಕಲ್ಪಿಸಿಕೊಡಲಿಲ್ಲ. ತಮ್ಮ ಪ್ರತಿನಿಧಿಗಳನ್ನು 2.45ವೇಳೆಗೆ ಚುನಾವಣಾಧಿಕಾರಿಗಳ ಕಚೇರಿಗೆ ಕಳಿಸಿದ್ದರು. ಆದರೆ ನಾಮಪತ್ರದಲ್ಲಿ ಅಭ್ಯರ್ಥಿಯ ಸಹಿ ಇರಲಿಲ್ಲ. ಅಭ್ಯರ್ಥಿಯು 3.20ರ ವೇಳೆಗೆ ಬಂದಿದ್ದರಿಂದ ನಾಮಪತ್ರ ಸ್ವೀಕರಿಸಲಿಲ್ಲ. ಕಚೇರಿಯಿಂದ ಹೊರಬಂದು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಕಾಂಗ್ರೆಸ್ ಬಿ-ಫಾರಂ ನನಗೆ ಬರುತ್ತದೆ ನಾನೇ ಗೆಲ್ಲುವ ಅಭ್ಯರ್ಥಿ ಎಂದು ಬಡಬಡಿಸುತ್ತಿದ್ದ ದೃಶ್ಯ ಕಂಡುಬಂದಿತು.

ಕುಡಿದು ಬಂದಿದ್ದ ಅಭ್ಯರ್ಥಿ ..!
ಚಿಕ್ಕಮಂಗಲದ ಎ.ನಾರಾಯಣಸ್ವಾಮಿ ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಸಿದ ನಂತರ ಅವರು ತೂರಾಡುತ್ತಿದ್ದುದನ್ನು ಗಮನಿಸಿದ ಚುನಾವಣಾ ಅಧಿಕಾರಿಗಳು ತಕ್ಷಣ ಅವರನ್ನು ಪೊಲೀಸರ ವಶಕ್ಕೆ ಒಪ್ಪಿಸಿ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಂತೆ ಸೂಚಿಸಿದರು. ವೈದ್ಯಕೀಯ ಪರೀಕ್ಷೆಯಲ್ಲಿ ನಾರಾಯಣಸ್ವಾಮಿ ಮದ್ಯಪಾನ ಮಾಡಿರುವುದು ದೃಢಪಟ್ಟಿದೆ. ಈ ಸಂಬಂಧ ಆನೇಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT