ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೇಕಲ್‌ಗೆ ಪರಾರಿ

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ತೆರೆಯ ಮೇಲೆ ನಡೆಯುವ ನಾಟಕ ಎಂದು `ಪರಾರಿ~ ಕುರಿತು ನಿಸ್ಸಂಶಯವಾಗಿ ಹೇಳಬಹುದು. ಕಾರಣ ಚಿತ್ರದ ಬಹುತೇಕ ಮಂದಿ ರಂಗಭೂಮಿಯ ನಂಟು ಹೊಂದಿದವರು.

ನಟನಾ ವರ್ಗದಲ್ಲಿ ಉಮಾಶ್ರೀ, ರಂಗಾಯಣ ರಘು, ಸಾಧು ಕೋಕಿಲ, ಶರತ್ ಲೋಹಿತಾಶ್ವ, ಅರುಣ್ ಸಾಗರ್, ಬಿರಾದಾರ್, ಶೃಂಗ, ಜಾಹ್ನವಿ ಕಾಮತ್ ಹೀಗೆ ರಂಗ ಜಂಗಮರ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ತಾಂತ್ರಿಕ ವರ್ಗದಲ್ಲಿ ಕೂಡ ಇದೇ ಕತೆ. ನಿರ್ದೇಶಕ ಕೆ.ಎಂ. ಚೈತನ್ಯ, ನಟ, ಸಂಭಾಷಣೆಕಾರ ಎಸ್. ಮೋಹನ್ ರಂಗದ ಗೆಳೆಯರು.

ಚೈತನ್ಯ ಮತ್ತೆ ನಿರ್ದೇಶಿಸುತ್ತಾರೆ ಎಂಬ ಸುದ್ದಿ ನಿಜವಾಗಿದ್ದೇ ಕಳೆದ ಒಂದೆರಡು ವಾರಗಳಿಂದೀಚೆಗೆ. ಆನೇಕಲ್‌ನಲ್ಲಿ ಚಿತ್ರೀಕರಣ ಆರಂಭ ಎಂದು ತಿಳಿಸಲು ಕರೆಯಲಾಗಿದ್ದ ಪತ್ರಿಕಾಗೋಷ್ಠಿ ಆ ಸುದ್ದಿಗೆ ಅಧಿಕೃತ ಮುದ್ರೆಯೊತ್ತಿತ್ತು. ಮಿತ್ರರೊಬ್ಬರು ಹೇಳಿದ ಕತೆಯನ್ನು ಹಾಸ್ಯದ ಒಗ್ಗರಣೆ ಬೆರೆಸಿ ಪ್ರೇಕ್ಷಕರ ಮುಂದಿಡುತ್ತಿದ್ದಾರೆ ಚೈತನ್ಯ.
 
ಸೂಪರ್ ಸ್ಟಾರ್‌ಗಳು ಇಲ್ಲದಿದ್ದರೇನಂತೆ ಗಟ್ಟಿ ಕಲಾವಿದರಿದ್ದಾರೆ ಎಂಬ ದೃಢ ನಂಬಿಕೆ ಅವರನ್ನು ಮುನ್ನಡೆಸುತ್ತಿದೆ. ಗಂಭೀರ ನಾಟಕಗಳನ್ನು ನಿರ್ದೇಶಿಸಿದ್ದ ಚೈತನ್ಯರ `ಪರಾರಿ~ ನಿರ್ಧಾರ ಕಂಡು ಸಂಭಾಷಣೆಕಾರ ಮೋಹನ್ ದಿಗಿಲುಗೊಂಡಿದ್ದರಂತೆ. ಕಾರಣ ಅವರು ಮಾಡಲು ಹೊರಟಿದ್ದು ಅಪ್ಪಟ ಹಾಸ್ಯ ಚಿತ್ರವೊಂದನ್ನು. ಆ ನಿರ್ಣಯವನ್ನು ಮೆಚ್ಚಿಕೊಳ್ಳುತ್ತಲೇ ಗೆಳೆಯ ಹೊರಿಸಿದ ಹೊಣೆ ಕುರಿತು ಸಂತಸಗೊಂಡರು.

ಚಿತ್ರಕ್ಕೆ ಸಂಗೀತದ ಎರಕ ಹುಯ್ಯುತ್ತಿರುವುದು ಅನೂಪ್ ಸೀಳಿನ್. `ಸಿದ್ಲಿಂಗು~ ಚಿತ್ರದ ಹಿನ್ನೆಲೆ ಸಂಗೀತಕ್ಕೆ ಮನಸೋತು ಇವರನ್ನು ಆಯ್ಕೆ ಮಾಡಿದ್ದಾರೆ ಚೈತನ್ಯ. ಯುವ ಸಿನಿಮಾಕ್ಕೆ ಯುವ ಸಂಗೀತ ನಿರ್ದೇಶಕ ಎಂಬುದು ನಿರ್ದೇಶಕರ ಒಕ್ಕಣೆ. ಶುಭಾ ಪೂಂಜಾ ಅವರಿಗೆ ಇಲ್ಲಿ ಸ್ಥಾನ ದೊರೆತಿರುವುದು `ಸ್ಲಂ ಬಾಲ~ದ ಮುಗ್ಧ ಅಭಿನಯದಿಂದಾಗಿ.

ಆಕೆ ಟೀವಿ ನಿರೂಪಕಿ ಊರ್ಮಿಳೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕತೆ ಬರೆಯುವಾಗಲೇ ಓಬಯ್ಯ ಪಾತ್ರಕ್ಕೆ ಬುಲೆಟ್ ಪ್ರಕಾಶ್ ಸೂಕ್ತ ಎಂದುಕೊಳ್ಳಲಾಗಿತ್ತಂತೆ.

`ನಾವಿಕ~ದ ಶ್ರವಂತ್ ರಾವ್ ತಮಾಷೆ ಹುಡುಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜಾಹ್ನವಿ ಕಾಮತ್‌ಗೆ ಕೂಡ ನಗಿಸುವ ಜವಾಬ್ದಾರಿ.

ಭರವಸೆಯ ನಟ ಶೃಂಗ ಎಂಬುದನ್ನು ಚಿತ್ರದ ಫೋಟೊಶೂಟ್ ದೃಶ್ಯಗಳು ಹೇಳುತ್ತಿದ್ದವು. ನಾಟಕ ಎಂದು ಓಡಾಡಿಕೊಂಡಿದ್ದ ಶೃಂಗ ಅವರಿಗೆ ತೆರೆ ಮೇಲೆ ಬರುವಂತೆ `ಆಜ್ಞಾಪಿಸಿದ್ದು~ ನಿರ್ದೇಶಕರು. `ಆಡಿಸುವಾತನ ಕೈಚಳಕ~ವನ್ನು ನೆಚ್ಚಿ ಅವರು ಸಿನಿಮಾಕ್ಕೆ ಜಿಗಿದಿದ್ದಾರೆ.

ಚಿತ್ರದಲ್ಲಿ ಹಳೆ ಬೇರು ಹೊಸ ಚಿಗುರು ಎರಡೂ ಇವೆ. ಇದು ಸ್ಪಷ್ಟವಾಗಿ ಕಂಡಿರುವುದು ಯುವ ನಿರ್ಮಾಪಕ ಸುಮಿತ್ ಕೊಂಬ್ರ ಅವರಿಗೆ. ಕಾರ್ಪೊರೇಟ್ ಜಗತ್ತಿನಿಂದ ಬಂದ ಅವರಿಗೆ ವ್ಯವಹಾರ ಹೊಸತಲ್ಲ, ಸಿನಿಮಾ ಮಾತ್ರ ಹೊಸತಂತೆ. ನೈಜ ಬದುಕಿಗೆ ಹತ್ತಿರವಾದ ಸಿನಿಮಾಗಳನ್ನು ನಿರ್ಮಿಸು ಎಂಬ ತಮ್ಮ ತಂದೆಯ ಅಣತಿಯಂತೆ ಅವರು ನಡೆದುಕೊಳ್ಳುತ್ತಿದ್ದಾರೆ. 

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಬರೆದಿದ್ದಾರೆ. ಅನುಭವಿ ಛಾಯಾಗ್ರಾಹಕ ಎಚ್.ಸಿ. ವೇಣು ಚಿತ್ರದ ಕ್ಯಾಮೆರಾ ಕಣ್ಣು. ಕಲೆ ಅರುಣ್ ಸಾಗರ್ ಅವರದ್ದು.

ಸಂಕಲನಕಾರ ಹಾಗೂ ಕಾರ್ಯಕಾರಿ ನಿರ್ಮಾಪಕರಾಗಿ ದ್ವಿಪಾತ್ರಾಭಿನಯದಲ್ಲಿ ತೊಡಗಿರುವುದು ಪಿ. ಹರಿದಾಸ್. ಚಲನಚಿತ್ರ ಅಕಾಡೆಮಿ ಅಧ್ಯಕ್ಷೆ ತಾರಾ ಮತ್ತಿತರರು `ಪರಾರಿ~ ಸಂಭ್ರಮದಲ್ಲಿ ಪಾಲ್ಗೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT