ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್ವರಿ ಗ್ರಾಮಕ್ಕೆ ಕುಡಿವ ನೀರಿನ ತತ್ವಾರ

Last Updated 3 ಡಿಸೆಂಬರ್ 2013, 10:58 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಲಿಂಗಸಗೂರು ತಾಲ್ಲೂಕಿನ ಆನ್ವರಿಯಲ್ಲಿ ಚಳಿಗಾಲದಲ್ಲಿಯೇ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಬೇಸಿಗೆ ಆರಂಭಕ್ಕೂ ಮುನ್ನವೇ ಸಮಸ್ಯೆ ಇಷ್ಟೊಂದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯದಿಂದ ವರ್ಷಗಳು  ಕಳೆದರೂ ಈ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಕುಡಿಯುವ ನೀರಿಗೆ ಜನರು ತತ್ವಾರ ಪಡುವಂತ ಸ್ಥಿತಿ ಇದೆ.

ಸುಮಾರು 3 ಸಾವಿರಕ್ಕೂ ಹೆಚ್ಚು ಮತದಾರರು ಇರುವ ಆನ್ವರಿ ದೊಡ್ಡ ಗ್ರಾಮ. 11 ಜನ ಗ್ರಾಮ ಪಂಚಾಯಿತಿ ಸದಸ್ಯರು ಇಲ್ಲಿಂದ ಆಯ್ಕೆಗೊಂಡಿದ್ದಾರೆ.  ಆದರೂ ಇಲ್ಲಿನ  ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಅಸಮರ್ಪಕವಾಗಿಯೇ ಮುಂದುವರೆದಿದೆ.  9 ಕಿ.ಮೀ. ದೂರದ ಕಾಳೇಶ್ವರ ಕೆರೆ ಹತ್ತಿರ ಇರುವ ಬಾವಿಯಿಂದ ಜನರಿಗೆ ನೀರು ಪೂರೈಸಲಾಗುತ್ತದೆ. ಆದರೆ ನೀರು ಪೂರೈಸುವ ಪಂಪ್‌ ನಿರ್ವಹಣೆ ಇಲ್ಲದೇ ತಿಂಗಳಲ್ಲಿ 3ರಿಂದ4 ಸಲ  ಸುಟ್ಟು ಹೋಗುತ್ತದೆ.  ವಿದ್ಯುತ್ ತೊಂದರೆಯಿಂದಾಗಿ 4 ದಿನಕ್ಕೊಂದು ಸಲ ಕುಡಿಯುವ  ನೀರು ಜನರಿಗೆ ಸಿಗುವಂತಾಗಿದೆ. ಸಾರ್ವಜನಿಕ ನಳಗಳ ವ್ಯವಸ್ಥೆ ಇಲ್ಲ. ಗ್ರಾಮ ಪಂಚಾಯಿತಿ ಗ್ರಾಮದಲ್ಲಿರುವ ತೆರೆದ ಬಾವಿಗಳನ್ನು ಸ್ವಚ್ಛಗೊಳಿಸಿಲ್ಲ.  ಜನರು ಕುಡಿಯುವ ನೀರಿಗಾಗಿ ಕೊಡ ಹಿಡಿದು ಪಕ್ಕದ ತೋಟದ ಬಾವಿಗಳಿಗೆ ಅಲೆಯಬೇಕಾದಂತ ಸ್ಥಿತಿ ನಿರ್ಮಾಣವಾಗಿದೆ.  ವಾರದೊಳಗೆ ಸಾರ್ವಜನಿಕ ನಳ ಅಳವಡಿಸುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದ್ದರೂ. ಆದರೆ 6 ತಿಂಗಳಾದರೂ ಕ್ರಮ ಕೈಗೊಂಡಿಲ್ಲ ಎಂಬುದು ಗ್ರಾಮಸ್ಥರ ಆರೋಪ.

ಸುವರ್ಣ ಗ್ರಾಮ ಯೋಜನೆಯಲ್ಲಿ ಕೈಗೊಂಡ ಕಾಮಗಾರಿ ನಾಲ್ಕು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಮೊದಲನೇ ಹಂತದ ಕಾಮಗಾರಿಯೇ ಪೂರ್ಣಗೊಂಡಿಲ್ಲ.  ರಸ್ತೆಗಳಲ್ಲಿ ಎಲ್ಲ ಕಡೆಗಳಲ್ಲಿ  ಕೊಳಚೆ ನೀರು ನಿಂತು ಗಬ್ಬು ನಾರುತ್ತಿದೆ. ರೋಗಗಳು ಹರಡುವ ಭೀತಿಯಲ್ಲಿ ಜನರು ವಾಸಿಸುತ್ತಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ.  ಆರೋಗ್ಯ ಸಹಾಯಕಿಯರೇ ಚಿಕಿತ್ಸೆ ನೀಡುವಂತ ವಾತಾವರಣ ಇಲ್ಲಿನ ಆರೋಗ್ಯ ಕೇಂದ್ರಗಳಲ್ಲಿ ಇದೆ.  ಆಸ್ಪತ್ರೆಯಲ್ಲಿ ನೀರಿಲ್ಲದ ಕಾರಣ ಹೆರಿಗೆ ಪ್ರಕರಣಗಳನ್ನು ಹಟ್ಟಿ ಅಥವಾ ಲಿಂಗಸಗೂರು ಆಸ್ಪತ್ರೆಗೆ ಕಳುಹಿಸಿಕೊಡಲಾಗುತ್ತಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 670 ಜನ ಮಕ್ಕಳಿದ್ದಾರೆ. ಇವರಿಗೆ ಪಾಠ ಮಾಡಲು 20 ಶಿಕ್ಷಕರ ಅಗತ್ಯ ಇದೆ. ಆದರೆ ಕೇವಲ 13 ಜನ ಶಿಕ್ಷಕರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.  ಸಾರಿಗೆ  ಬಸ್‌ ವ್ಯವಸ್ಥೆ  ಇಲ್ಲದೇ ಗ್ರಾಮದ ಜನರು ಅನಿವಾರ್ಯವಾಗಿ ಖಾಸಗಿ ವಾಹನಗಳಿಗೆ ಮೊರೆ ಹೋಗುತ್ತಿದ್ದಾರೆ.

  ಗ್ರಾಮ ಪಂಚಾಯಿತಿ ಆಡಳಿತ ಶುದ್ಧ ಕುಡಿಯುವ ನೀರು ಪೂರೈಸುವ ವ್ಯವಸ್ಥೆ ಮಾಡಬೇಕು. ಚರಂಡಿ, ರಸ್ತೆ ಅಭಿವೃದ್ಧಿ ಪಡಿಸಬೇಕು. ವೈದ್ಯರು ಹಾಗೂ ಶಿಕ್ಷಕರನ್ನು ನೇಮಿಸಬೇಕು. ಗ್ರಂಥಾಲಯಕ್ಕೆ ಹೊಸ ಕಟ್ಟಡ ನಿರ್ಮಿಸಬೇಕು ಎಂದು ಬುಡ್ಡಪ್ಪ ನಾಯಕ, ಹನುಮಂತ, ಲಾಲ್ ಅಹ್ಮದ್‌, ಜಿಲಾನಿ ಪಾಶಾ, ಹುಚ್ಚರೆಡ್ಡಿ, ಗಂಗಾಧರ, ಶಂಕರ ಲಿಂಗ ಹಾಗೂ ಶರಣಪ್ಪ ಒತ್ತಾಯಿಸುತ್ತಾರೆ.

ಕುಡಿವ ನೀರು ಪೂರೈಸಿ
ಪಂಚಾಯಿತಿ ಆಡಳಿತ ವೈಫಲ್ಯದಿಂದ ಕುಡಿಯುವ ನೀರಿಗಾಗಿ ನಿತ್ಯ ಪರದಾಡು ಸ್ಥಿತಿ ಉಂಟಾಗಿದೆ. ಸಂಬಂಧಿ­ಸಿದ ಮೇಲಧಿಕಾರಿ­ಗಳು ನೀರು ಪೂರೈಸಲು ಕೂಡಲೇ ಕ್ರಮ ಜರುಗಿಸಬೇಕು. ಗ್ರಾಮದ ಜನರಿಗೆ ಶುದ್ಧವಾದ ಕುಡಿವ ನೀರನ್ನು ಪೂರೈಕೆ ಮಾಡಬೇಕು.

-ಮುದ್ದನ ಗೌಡ, ಸ್ಥಳೀಯರು

ಯೋಜನೆ ಹಸ್ತಾಂತರಿಸಿ
ಜಿಲ್ಲಾ ಪಂಚಾಯಿತಿ ಇಲಾಖೆಯಿಂದ ಗ್ರಾಮಕ್ಕೆ  ಸರಬರಾಜು ಮಾಡಲು ರೂಪಿಸಿರುವ ನೀರು ಸರಬರಾಜು ಯೋಜನೆ ಆದಷ್ಟು ಬೇಗ ಗ್ರಾಮ ಪಂಚಾಯಿತಿ ಆಡಳಿತಕ್ಕೆ ಹಸ್ತಾಂತರಿಸಿದರೆ  ಎಲ್ಲ ವಾರ್ಡ್‌ಗಳಿಗೆ ನೀರು ಪೂರೈಸಬಹುದು.
-ಅಯ್ಯನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT