ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಬ್ಯಾಕ್‌ಅಪ್ ಹೊಸ ಸಾಧ್ಯತೆ

Last Updated 21 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನೀವು `ಬ್ಯಾಕ್‌ಅಪ್‌ಫೀ~ https: //www. backupify. com) ಎನ್ನುವ ವೆಬ್ ತಾಣದ ಕುರಿತು ಕೇಳಿರಬಹುದು.  ಈ ತಾಣ ಅಸ್ತಿತ್ವಕ್ಕೆ ಬಂದಿದ್ದು 2008ರಲ್ಲಿ. ಆಗ ಯಾಹೂ ಕಂಪೆನಿಯ `ಫ್ಲಿಕರ್~ (http:// www.flickr. com/) ಎನ್ನುವ ಆನ್‌ಲೈನ್ ಫೋಟೊ ಷೇರಿಂಗ್ ತಾಣ ಜನಪ್ರಿಯತೆಯ ಉತ್ತುಂಗ ದಲ್ಲಿತ್ತು.
 
`ಫ್ಲಿಕರ್~ಗೆ ಅಪ್‌ಲೋಡ್ ಮಾಡುವ ಚಿತ್ರಗಳಿಗೆ `ಬ್ಯಾಕ್‌ಅಪ್~ ಟೂಲ್ ಅಭಿವೃದ್ಧಿಪಡಿಸಿದರೆ ಹೇಗೆ ಎನ್ನುವ ಆಲೋಚನೆಯೊಂದು ಕಂಪ್ಯೂಟರ್ ಎಂಜಿನಿಯರ್ ಒಬ್ಬರ ತಲೆಯಲ್ಲಿ ಮೂಡಿತು. ಇದುವೇ ಈ ವಿಶೇಷ ವೆಬ್ ತಾಣದ ಹುಟ್ಟಿಗೆ ಕಾರಣವಾಯಿತು.
`ಬ್ಯಾಕ್‌ಅಪ್‌ಫೀ~ ಈಗ ಎಲ್ಲ ರೀತಿಯ ಡಿಜಿಟಲ್ ದತ್ತಾಂಶಗಳಿಗೆ `ಆನ್‌ಲೈನ್ ಬ್ಯಾಕ್ ಅಪ್~ ಸೇವೆ ಒದಗಿಸುತ್ತದೆ.

ಎರಡು ವರ್ಷಗಳ ಹಿಂದಿನವರೆಗೆ ಆನ್‌ಲೈನ್ ಬಳಕೆದಾರರು ತಮ್ಮ ಕಡತಗಳನ್ನು ಸಂಗ್ರಹಿಸಿಟ್ಟುಕೊಳ್ಳಲು ಈ ತಾಣದ ಮೊರೆ ಹೋಗುತ್ತಿದ್ದರು.  ಅತ್ಯಂತ ಗೌಪ್ಯತೆಯ ವಾಣಿಜ್ಯ ಮಾಹಿತಿ, ಪಾಸ್‌ವರ್ಡ್‌ಗಳು, ಬ್ಯಾಂಕಿಂಗ್, ತೆರಿಗೆ ಮಾಹಿತಿ, ಜಿ ಮೇಲ್ ವಿಳಾಸ, ಗೂಗಲ್‌ದಿನದರ್ಶಿಕೆಯಲ್ಲಿ ಗುರುತು ಹಾಕಿಕೊಂಡ ವಿವರಗಳು ಸೇರಿದಂತೆ ಫೇಸ್‌ಬುಕ್, ಫ್ಲಿಕರ್, ಲಿಂಕ್ಡ್‌ಇನ್, ಆರ್ಕುಟ್ ಮುಂತಾದ ಸಾಮಾಜಿಕ ಸಂವಹನ ತಾಣಗಳಲ್ಲಿ ಹಂಚಿಕೊಂಡ ಮಾಹಿತಿಗಳನ್ನೂ ಇಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ ಇಡುತ್ತಿದ್ದರು. ವರ್ಷಕ್ಕೆ ಇಂತಿಷ್ಟು ಹಣ ನೀಡಿದರೆ ಈ ತಾಣ ನಿಮ್ಮ `ಡಿಜಿಟಲ್~ ಆಸ್ತಿಗಳನ್ನು ಭದ್ರವಾಗಿ ಸಂಗ್ರಹಿಸಿಟ್ಟು, ಕೇಳಿದಾಗ ಮರಳಿಸುತ್ತಿತ್ತು.

ನಮಗೆ ಬೇಕಾದ `ಬ್ಯಾಕ್‌ಅಪ್~ಗಳನ್ನು ನಮ್ಮ ಗಣಕಯಂತ್ರದಲ್ಲೇ ಸಂಗ್ರಹಿಸಿಟ್ಟುಕೊಳ್ಳಲು ಸಾಧ್ಯವಾಗುವಷ್ಟು ಮೆಮೊರಿ ಇರಬೇಕು ಎನ್ನುವುದು ಹಲವರ ವಾದ. ಆದರೆ, ಸಾಮಾನ್ಯವಾಗಿ ದತ್ತಾಂಶಗಳನ್ನು ನಕಲಿಸಿ `ಬ್ಯಾಕ್‌ಅಪ್~ಮಾಡಿ ಇಟ್ಟುಕೊಳ್ಳಲಾಗುತ್ತದೆ.

ಆನ್‌ಲೈನ್ ಇರಲಿ, ಕಂಪ್ಯೂಟರ್ ಹಾರ್ಡ್‌ಡಿಸ್ಕ್ ಇರಲಿ ಇದಕ್ಕೆ  ಸಾಕಷ್ಟು ಸ್ಥಳಾವಕಾಶ ಬೇಕು ಮತ್ತು ಸುರಕ್ಷತೆಯ ಪ್ರಶ್ನೆ. ಹಾಗಾಗಿ ಬ್ಯಾಕ್‌ಅಪ್ ನಿರ್ವಹಣೆ ಎಂದ ಕೂಡಲೇ ಸಮಸ್ಯೆ ಪ್ರಾರಂಭವಾಗುತ್ತದೆ. ಆನ್‌ಲೈನ್ ಸೇವೆ ಒದಗಿಸುವ ಹಲವು ಕಂಪೆನಿಗಳು ಈ ಕಿರಿಕಿರಿಯಿಂದಲೇ ಬ್ಯಾಕ್‌ಅಪ್ ಸೇವೆ ಒದಗಿಸುವುದಿಲ್ಲ.

ಆದರೆ ಗೂಗಲ್ ಹಾಗಲ್ಲ. ಜಿ-ಮೇಲ್ ಇನ್ ಬಾಕ್ಸ್‌ಗೆ ಬರುವ ಎಲ್ಲ ಮೇಲ್‌ಗಳು ಗೂಗಲ್‌ನ ಸರ್ವರ್‌ನಲ್ಲೇ ಇರುತ್ತವೆ. ಎರಡು-ಮೂರು ವರ್ಷಗಳ ವರೆಗೂ ಇ-ಮೇಲ್ ತೆರೆದುನೋಡದಿದ್ದರೂ ಸಹ ಇ-ಮೇಲ್‌ಗಳು ಸುರಕ್ಷಿತವಾಗಿರುತ್ತವೆ. ಅಷ್ಟೇ ಅಲ್ಲ, ನೀವು ಡಿಲಿಟ್ ಮಾಡಿದ ಮೇಲ್‌ಗಳು ಸಹ ಗೂಗಲ್‌ನ ಆನ್‌ಲೈನ್ ಬ್ಯಾಕ್‌ಅಪ್‌ನಲ್ಲಿ  ಸಿಗುತ್ತವೆ.

ಇತ್ತೀಚೆಗಷ್ಟೇ ಜಿ-ಮೇಲ್‌ನ  ಮೇಲ್‌ಬಾಕ್ಸ್ ಸಂಗ್ರಹ ಸಾಮರ್ಥ್ಯ ವನ್ನು ಹೆಚ್ಚಿಸಲಾಗಿದೆ. ಗ್ರಾಹಕರಿಗೆ 10 ಜಿ.ಬಿ.ವರೆಗೂ ಉಚಿತ ಸ್ಥಳಾವಕಾಶವನ್ನು ಗೂಗಲ್ ನೀಡುತ್ತಿದೆ.
ಗಣಕಯಂತ್ರದಲ್ಲಿ ಪಡೆಯುವ ಎಲ್ಲ ಸೌಲಭ್ಯಗಳನ್ನೂ ವೆಬ್ ಬ್ರೌಸರ್ ಮೂಲಕವೇ ಪಡೆಯಬಹುದಾದ `ಕ್ಲೌಡ್ ಕಂಪ್ಯೂಟಿಂಗ್~ ವ್ಯವಸ್ಥೆ ಬಂದ ನಂತರ ಗೂಗಲ್, ಟ್ವಿಟ್ಟರ್, ಫೇಸ್‌ಬುಕ್ ಸೇರಿದಂತೆ ಹಲವು ಕಂಪೆನಿಗಳು ತಮ್ಮ `ಬ್ಯಾಕ್‌ಅಪ್~ ಸಂಗ್ರಹ ಸಾಮರ್ಥ್ಯ ಹೆಚ್ಚಿಸಿವೆ.
 
ಉದಾಹರಣೆಗೆ ನೀವು 10 ವರ್ಷಗಳ ಹಿಂದೆ ನಿಮ್ಮ ಸ್ನೇಹಿತನಿಗೆ ಹುಟ್ಟುಹಬ್ಬದ ದಿನ ಕಳುಹಿಸಿದ ಇ-ಮೇಲ್ ಮತ್ತೆ ಬೇಕು ಎಂದಿಟ್ಟುಕೊಳ್ಳಿ. ಅದನ್ನು ಈಗ `ಗೂಗಲ್ ಡಾಟಾ ಸೆಂಟರ್~ನಿಂದ ಪಡೆದುಕೊಳ್ಳಬಹುದಾಗಿದೆ. ಆದರೆ, ಇದಕ್ಕೆ ಇಂತಿಷ್ಟು  ಹಣ ಎಂದು ನಿಗದಿತ ಮೊತ್ತವನ್ನು ತೆರಬೇಕಿದೆ.

ಕ್ಲೌಡ್ ತಂತ್ರಜ್ಞಾನವು ಇಂತಹ ಬ್ಯಾಕ್‌ಅಪ್ ಸೇವೆಗಳಿಗೆ ಬೃಹತ್ ವೇದಿಕೆಯನ್ನೇ  ಸೃಷ್ಟಿಸಿದೆ. ದತ್ತಾಂಶಗಳ ಮಹಾಸಾಗರವನ್ನೇ ಇಲ್ಲಿ ಸಂಗ್ರಹಿಸಿಡಬಹುದು.
ನಿಮ್ಮ ಬಾಲ್ಯ ಕಾಲದ ಚಿತ್ರಗಳನ್ನು ಬಹಳ ಮುತುವರ್ಜಿ ವಹಿಸಿ ಮೂರು ಪ್ರತ್ಯೇಕ ಹಾರ್ಡ್ ಡ್ರೈವ್‌ಗಳಲ್ಲಿ ತುಂಬಿಸಿ ಇಟ್ಟುಕೊಂಡಿದ್ದೀರಿ ಎಂದಿಟ್ಟುಕೊಳ್ಳಿ. ಎಷ್ಟೇ ಕಾಳಜಿ ವಹಿಸಿದರೂ ಅವು ಒಂದೆರಡು ವರ್ಷದಲ್ಲಿ ವೈರಸ್ ದಾಳಿಗೆ ತುತ್ತಾಗಬಹುದು ಅಥವಾ ಕಡತಗಳು ತೆರೆದುಕೊಳ್ಳದೇ ಇರಬಹುದು. ಆದರೆ, ಆನ್‌ಲೈನ್ ಬ್ಯಾಕ್‌ಅಪ್‌ನಲ್ಲಿ ಈ ಸಮಸ್ಯೆ ಇರುವುದಿಲ್ಲ.

`ಬ್ಯಾಕ್‌ಅಪ್‌ಫೀ~ ವೆಬ್ ತಾಣ ಮಾಡುತ್ತಿದ್ದ ಕೆಲಸವನ್ನೇ ಈಗ ಗೂಗಲ್, ಫೇಸ್‌ಬುಕ್ ಸೇರಿದಂತೆ ಹಲವು ಸಂಸ್ಥೆಗಳು ಕ್ಲೌಡ್ ತಂತ್ರಜ್ಞಾನ ಬಳಸಿಕೊಂಡು ಮಾಡುತ್ತಿವೆ. ಕೆಲವು ತಾಣಗಳು ಇದಕ್ಕೆ ಯಾವುದೇ ಹೆಚ್ಚುವರಿ ಶುಲ್ಕ ವಿಧಿಸುವುದಿಲ್ಲ. 1ಜಿ.ಬಿ.ವರೆಗೆ ಉಚಿತ ದತ್ತಾಂಶ ಸಂಗ್ರಹ  ಸೇವೆ ನೀಡುತ್ತವೆ. ಹೆಚ್ಚುವರಿಯಾಗಿ ಬೇಕಿದ್ದರೆ ನಿಗದಿತ ಶುಲ್ಕ ಪಾವತಿಸಬೇಕು.

 ಸದ್ಯ `ಬ್ಯಾಕ್‌ಅಪ್‌ಫೀ~  ತಾಣದಲ್ಲಿ ನೀವು 1ಜಿ.ಬಿ.ಯಿಂದ 10 ಜಿ.ಬಿ.ವರೆಗೂ ದತ್ತಾಂಶವನ್ನು ಒಂದು ತಿಂಗಳ ಅವಧಿಗೆ ಸಂಗ್ರಹಿಸಿ ಇಡಬೇಕಾದರೆ 5ರಿಂದ 20 ಡಾಲರ್ ಶುಲ್ಕ ಪಾವತಿಸಬೇಕು.  ಆದರೆ, ಇದೇ ಸೇವೆಯನ್ನು ಗೂಗಲ್ ಮತ್ತು ಫೇಸ್‌ಬುಕ್ ಉಚಿತವಾಗಿ ನೀಡುತ್ತಿವೆ. `ಬ್ಯಾಕ್‌ಅಪ್‌ಫೀ~  ಮಾಸಿಕ ಯೋಜನೆಗೆ ಚಂದಾದಾರರಾಗುವ ಬದಲು ಗೂಗಲ್ ಡೇಟಾ ಸೆಂಟರ್ ನಂಬುವುದೇ ಉತ್ತಮ ಎನ್ನುತ್ತಾರೆ ಕ್ಯಾಲಿಫೋರ್ನಿಯಾ ಮೂಲದ ಉದ್ಯಮಿ ನ್ಯಾಸ್ಸಿ ಮಾರ್ಟಿನ್.

ಆದರೆ, `ಬ್ಯಾಕ್‌ಅಪ್‌ಫೀ~ ತಂಡ ಇದನ್ನು ಅಲ್ಲಗಳೆಯುತ್ತದೆ. ಜಿ-ಮೇಲ್ ಖಾತೆ ಬೇಕಾದರೆ ಹ್ಯಾಕ್ ಆಗಬಹುದು. ಅಥವಾ ಇ-ಮೇಲ್‌ಗಳು ಡಿಲಿಟ್ ಆಗಬಹುದು. ಆದರೆ, ನಾವು ಸಂಪೂರ್ಣ ಸುರಕ್ಷಿತ ಸೇವೆ ಒದಗಿಸುತ್ತೇವೆ ಎನ್ನುತ್ತಾರೆ ಕಂಪೆನಿಯ ಸಹ ಸ್ಥಾಪಕ ಮತ್ತು ಸಿಇಒ ರೋಬ್ ಮೇ.

ಒಮ್ಮೆ ಕ್ಲೌಡ್ ತಂತ್ರಜ್ಞಾನದ ವ್ಯಾಪ್ತಿಗೆ ನಿಮ್ಮ ದತ್ತಾಂಶಗಳು ಬಂದರೆ ಅದು ಇಡೀ ಜಗತ್ತಿನೆದುರು ಬೆತ್ತಲಾಗುತ್ತವೆ. ಎಲ್ಲಿ ಯಾವಾಗ, ಯಾರು ಬೇಕಾದರೂ ಈ ಮಾಹಿತಿಗಳನ್ನು ಕದಿಯಬಹುದು. ಆದ್ದರಿಂದ ಕ್ಲೌಡ್ ಕಂಪ್ಯೂಟಿಂಗ್ ಅಷ್ಟೊಂದು ಸುರಕ್ಷಿತವಲ್ಲ ಎನ್ನುತ್ತಾರೆ.

ಗೂಗಲ್ ಸರ್ವರ್  ಮೇಲೆ ಪ್ರತಿನಿತ್ಯ ಸಾವಿರಾರು ಹ್ಯಾಕಿಂಗ್ ದಾಳಿಗಳು ನಡೆಯುತ್ತವೆ. ನೀವು ವರ್ಷಗಟ್ಟಲೆ ಕುಳಿತು ಅಧ್ಯಯನ ನಡೆಸಿ, ಸಂಗ್ರಹಿಸಿದ ಮಾಹಿತಿಗಳು, ಬರೆದಿಟ್ಟುಕೊಂಡ ಟಿಪ್ಪಣಿಗಳು, ನಡೆಸಿದ ಸಂದರ್ಶನಗಳು, ಗುರುತು ಹಾಕಿಕೊಂಡ ಚಿತ್ರಗಳು, ಕೊನೆಗೆ ಆದಾಯ ತೆರಿಗೆ ಮಾಹಿತಿ... ಇವೆಲ್ಲವೂ ಕ್ಷಣಾರ್ಥದಲ್ಲಿ ಕಳೆದುಹೋದರೆ ನಿಮ್ಮ ಪರಿಸ್ಥಿತಿ ಹೇಗಾಗಬೇಡ? ಇಂಥ  ಕಳಕಳಿಯ ಹಿಂದೆ `ಬ್ಯಾಕ್‌ಅಪ್‌ಫೀ~ನ ಮಾರುಕಟ್ಟೆ ಅಸ್ತಿತ್ವದ ಪ್ರಶ್ನೆಯೂ ಅಡಗಿದೆ ಎನ್ನುತ್ತಾರೆ ತಜ್ಞರು.

ಇನ್ನೊಂದೆಡೆ, `ಮಾನವ ದೋಷದಿಂದಲೇ ದತ್ತಾಂಶ ನಷ್ಟವಾಗುವ ಸಾಧ್ಯತೆ ಹೆಚ್ಚು. ಕ್ಲೌಡ್ ತಂತ್ರಜ್ಞಾನದಲ್ಲಿ ಸಾಮಾನ್ಯ ವೈರಸ್ ದಾಳಿಗೆ ಡಿಜಿಟಲ್ ದತ್ತಾಂಶಗಳಿಗೆ ಏನೂ ಆಗುವುದಿಲ್ಲ~ ಎನ್ನುತ್ತಾರೆ ವೆಬ್ ಪರಿಣಿತರು.

ಆ್ಯಪಲ್ ಕೂಡ ತನ್ನ ಹೊಸ ಕಾರ್ಯನಿರ್ವಹಣಾ ತಂತ್ರಾಂಶ `ಮ್ಯಾಕ್ ಒಸ್~ನಲ್ಲಿ ಹೆಚ್ಚುವರಿ ಬ್ಯಾಕ್‌ಅಪ್ ಸೌಲಭ್ಯ ಅಳವಡಿಸಿದೆ.ಸುರಕ್ಷತೆ ಮತ್ತು ಖಾಸಗಿತನ ವಿಷಯಕ್ಕಾಗಿ ಗೂಗಲ್ ಮತ್ತು ಫೇಸ್‌ಬುಕ್ ಬಳಕೆದಾರರಿಗೆ ದತ್ತಾಂಶಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಹಾಗೆ ಡಿಲಿಟ್ ಮಾಡಿಕೊಳ್ಳುವ ಆಯ್ಕೆಯನ್ನೂ ನೀಡಿವೆ.

ಆದರೆ, ಹೀಗೆ ಸಂಪೂರ್ಣವಾಗಿ ಡಿಲಿಟ್ ಆದ ದತ್ತಾಂಶಗಳನ್ನು ಕಂಪೆನಿ ಸರ್ವರ್‌ನಿಂದ ತೆಗೆದುಹಾಕಲು ಕನಿಷ್ಠ 30 ದಿನ ತೆಗೆದುಕೊಳ್ಳುತ್ತದೆ. ಹಾಗಾಗಿ ಡಿಲಿಟ್ ಮಾಡಿದ ನಂತರವೂ ಶೋಧ ಫಲಿತಾಂಶದಲ್ಲಿ ಇಂತಹ ಚಿತ್ರ, ಮಾಹಿತಿಗಳು ಕೆಲವು ದಿನಗಳವರೆಗೆ ಸಿಗುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT