ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ವಿಮೆ; ಸರಳ ಮತ್ತು ಅಗ್ಗ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆನ್‌ಲೈನ್ ಎಂಬುದು ಅಗ್ಗದ ವಿತರಣಾ ಮಾಧ್ಯಮ. ಹೀಗಾಗಿ ಇಂಟರ್‌ನೆಟ್ ಮೂಲಕ ಕೊಡುಗೆಯಾದ ಉತ್ಪನ್ನಗಳ ಬೆಲೆ ಇತರ ಉತ್ಪನ್ನಗಳಿಗಿಂತ ಅಗ್ಗವಾಗಿರುತ್ತದೆ. ದೇಶದಲ್ಲಿ ಇಂದು ಆನ್‌ಲೈನ್‌ನಲ್ಲಿ ಸೇವೆ ಒದಗಿಸುವ ಏಳು ವಿಮಾ  ಕಂಪೆನಿಗಳಿವೆ.

ದೇಶದಲ್ಲಿ ಇಂದು 10 ಕೋಟಿಗೂ ಅಧಿಕ ಮಂದಿಗೆ ಅಂತರ್ಜಾಲ (ಇಂಟರ್‌ನೆಟ್) ಸಂಪರ್ಕ ಇದೆ. ಟಿವಿ ನೋಡುವುದಕ್ಕಿಂತ ಹೆಚ್ಚಿನ ಸಮಯವನ್ನು ನಾವು ಇಂಟರ್‌ನೆಟ್‌ಗೆ ವಿನಿಯೋಗಿಸುತ್ತಿದ್ದೇವೆ.
 
ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿರುವ ಜಗತ್ತಿನ ಮೂರನೇ ಅತಿ ದೊಡ್ಡ ರಾಷ್ಟ್ರವೂ ನಮ್ಮದು. ಇವೆಲ್ಲ ಕುತೂಹಲದ ಸಂಗತಿಯೇ ನಿಜ. ಆದರೆ, ಇದರಿಂದ ಹಣಕಾಸು ಸೇವೆಗೆ ಏನಿದೆ ಪ್ರಯೋಜನ? ಇದೇ ವ್ಯವಸ್ಥೆಯನ್ನು ಬಳಸಿಕೊಂಡು ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮಾರಾಟ ಮಾಡಬಹುದು ಎಂಬುದಕ್ಕೆ ಇದೇ ಒಂದು ಸಂಕೇತ.

ಶೇ 45ಕ್ಕೂ ಅಧಿಕ ಇಂಟರ್‌ನೆಟ್ ಬಳಕೆದಾರರು ಸೂಕ್ತ ಹಣಕಾಸು ಸೇವೆಗಾಗಿ ಹುಡುಕಾಟ ನಡೆಸುತ್ತ ಇದ್ದಾರೆ. ಅದರಲ್ಲಿ ವಿಮೆ ಕೂಡ ಒಂದು ವಿಭಾಗ.ನಾವೆಲ್ಲ ಇಂದು ಹೆಚ್ಚಾಗಿ ನೆಟ್‌ಬ್ಯಾಂಕಿಂಗ್ ಸೇವೆ ಬಳಸುತ್ತಿದ್ದೇವೆ.

ನಮ್ಮ ಸ್ಥಿರ ಠೇವಣಿಗಳನ್ನು ಮತ್ತು ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ಆನ್‌ಲೈನ್‌ನ್ಲ್ಲಲೇ ಮಾಡುತ್ತಿದ್ದೇವೆ. ಬಿಲ್‌ಗಳನ್ನು ಪಾವತಿಸುವುದನ್ನೂ ನೆಟ್ ಬ್ಯಾಂಕಿಂಗ್ ಮೂಲಕವೇ ಮಾಡುತ್ತಿದ್ದೇವೆ.
 
ಈ ವಿಷಯದಲ್ಲಿ ವಿಮಾ ಕ್ಷೇತ್ರವೂ ಹಿಂದೆ ಬಿದ್ದಿಲ್ಲ. ಅವುಗಳು ಗ್ರಾಹಕರಿಗೆ ಆನ್‌ಲೈನ್ ವ್ಯವಹಾರ ಅವಕಾಶವನ್ನು ಒದಗಿಸಿವೆ. ವಿಮಾ ಕಂಪೆನಿಗಳೂ  ಈಗಾಗಲೇ ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿಯೂ ಮಾರಾಟ ಮಾಡತೊಡಗಿವೆ.

ವಿದ್ಯುನ್ಮಾನ ವಾಣಿಜ್ಯದಲ್ಲಿ (ಇ-ಕಾಮರ್ಸ್) ಭಾರತ ಬಹಳ ವೇಗವಾಗಿ ಮುನ್ನಡೆಯುತ್ತಿದೆ. `ಇ-ಕಾಮರ್ಸ್~ ಮಾರುಕಟ್ಟೆ 2007ರಲ್ಲಿದ್ದ ರೂ 8,146 ಕೋಟಿಗಳಿಂದ 2011ರಲ್ಲಿ ರೂ46,520 ಕೋಟಿಗಳಿಗೆ ಜಿಗಿದಿದೆ.

ಸ್ಪರ್ಧಾತ್ಮಕ ದರ, ಬೇರೆ ಉತ್ಪನ್ನಗಳನ್ನು ಹೋಲಿಸಿ ನೋಡುವ ಅವಕಾಶ, ಮಿತ್ರರು, ಹಿತೈಷಿಗಳ ಅಭಿಪ್ರಾಯ ಸಂಗ್ರಹಗಳಂತಹ ವಿಚಾರಗಳಿಂದಾಗಿ `ಇ-ಕಾಮರ್ಸ್~ ಇಂದು ಇನ್ನಷ್ಟು ಜನಪ್ರಿಯವಾಗುತ್ತಿದೆ.
 
ಈ ಕ್ಷೇತ್ರ ಇಂದು ಸರಳ ಉತ್ಪನ್ನ ಮಾರಾಟ ಕ್ಷೇತ್ರವನ್ನು ದಾಟಿ ಮುಂದಕ್ಕೆ ನಡೆದಿದ್ದು, ಯೂಲಿಪ್ ವೇದಿಕೆಯಲ್ಲಿ ಎಂಡೋವ್‌ಮೆಂಟ್ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ನಿಭಾಯಿಸುವಂತಹ ಸಂಕೀರ್ಣ ಕಾರ್ಯಕ್ಕೆ ಇಳಿದಿದೆ.

ಆನ್‌ಲೈನ್ ಎಂಬುದು ಅಗ್ಗದ ವಿತರಣಾ ಮಾಧ್ಯಮ. ಹೀಗಾಗಿ ಇಂಟರ್‌ನೆಟ್ ಮೂಲಕ ಕೊಡುಗೆಯಾದ ಉತ್ಪನ್ನಗಳ ಬೆಲೆ ಇತರ ಉತ್ಪನ್ನಗಳಿಗಿಂತ ಅಗ್ಗವಾಗಿರುತ್ತದೆ. ದೇಶದಲ್ಲಿ ಇಂದು ಆನ್‌ಲೈನ್‌ನಲ್ಲಿ ಸೇವೆ ಒದಗಿಸುವ ಏಳು ವಿಮಾ ಕಂಪೆನಿಗಳಿವೆ.

ಆನ್‌ಲೈನ್‌ನಲ್ಲಿ ವಿಮಾ ಯೋಜನೆಯೊಂದನ್ನು ಖರೀದಿಸುವುದು ಬಹಳ ಸರಳ ಪ್ರಕ್ರಿಯೆ. ಎಲ್ಲಾ ಕಂಪೆನಿಗಳು ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ತಮ್ಮ ಆಯ್ಕೆಗಳನ್ನು ಗ್ರಾಹಕರಿಗೆ ಒದಗಿಸಿವೆ.

ಗ್ರಾಹಕರು ಇತರ ವಿಮಾ ಕಂಪೆನಿಗಳ ವೆಬ್‌ಸೈಟ್‌ಗಳಿಗೂ ತೆರಳಿ ಅಲ್ಲಿರುವ ಭವಿಷ್ಯದ ಯೋಜನೆಗಳನ್ನು ತಿಳಿದುಕೊಂಡು ತಮ್ಮ ಅನುಕೂಲಕ್ಕೆ ತಕ್ಕಂತೆ ಸೂಕ್ತ ರೀತಿಯಲ್ಲಿ ತುಲನೆ ಮಾಡುವುದು ಸಾಧ್ಯವಿದೆ.
 
ಅಧಿಕ ಮೊತ್ತದ ವಿಮೆ ಮಾಡಿಸುವುದಾದರೆ ಕಂಪೆನಿಯು ವೈದ್ಯಕೀಯ ಪರೀಕ್ಷೆಗೆ ಸಲಹೆ ನೀಡಬಹುದು. ಜತೆಗೆ ಆದಾಯ ದಾಖಲೆ, ರಾಷ್ಟ್ರೀಯತೆಗಳಂತಹ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ. 

ಅನ್‌ಲೈನ್‌ನ ಬಹುದೊಡ್ಡ ಅನುಕೂಲ ಎಂದರೆ ಇದು ಬಹಳ ಅಗ್ಗ ಮತ್ತು ಪ್ರಕ್ರಿಯೆ ಬಹಳ ಸರಳ. ಉದಾಹರಣೆಗೆ 30 ವರ್ಷದ ದೂಮಪಾನ ಚಟ ಇಲ್ಲದ ವ್ಯಕ್ತಿ ರೂ1 ಕೋಟಿ   ಮೊತ್ತದ ವಿಮೆಯನ್ನು ವಾರ್ಷಿಕ ರೂ 8000ಗಳ ಪ್ರೀಮಿಯಂನಲ್ಲಿ ಪಾವತಿಸುವಂತಹ ಯೋಜನೆಯನ್ನು ಮಾಡುವುದೂ ಇಲ್ಲಿ ಸಾಧ್ಯವಿದೆ.
 
ಇಂತಹ ಗ್ರಾಹಕರು ಮಾಡಿಸಬೇಕಿರುವುದು ವೈದ್ಯಕೀಯ ಪರೀಕ್ಷೆ ಮಾತ್ರ. ನಗರ ಪ್ರದೇಶಗಳಲ್ಲಿ ಹೆಚ್ಚಿನ ಗ್ರಾಹಕರು ಇಂಟರ್‌ನೆಟ್ ಆಧಾರಿತ ಸೇವೆಗಳನ್ನು ಪಡೆಯುತ್ತಿರುವುದರಿಂದ ಅವರ ಸಮಯ ಮತ್ತು ಪ್ರಯತ್ನಗಳಲ್ಲಿ ಭಾರಿ ಉಳಿತಾಯ ಆಗಿದೆ.
 
ಹೆಚ್ಚಿನ ಎಲ್ಲಾ ವಿಮಾ ಕಂಪೆನಿಗಳು ಆನ್‌ಲೈನ್‌ನಲ್ಲಿ ಎಲ್ಲಾ ಅಗತ್ಯ ಮಾಹಿತಿಗಳನ್ನೂ ನೀಡುತ್ತವೆ. ಈಗಾಗಲೇ ಪಾಲಿಸಿ ಮಾಡಿಸಿಕೊಂಡಿರುವ ಗ್ರಾಹಕರಿಗೂ ಆನ್‌ಲೈನ್         ಹೆಲ್ಪ್‌ಲೈನ್‌ಗಳ ಮೂಲಕ ಸೂಕ್ತ ಸೇವೆ ಒದಗಿಸುತ್ತಿವೆ.

ಆನ್‌ಲೈನ್ ಬಳಕೆಯಿಂದ ಇನ್ನೊಂದು ಪ್ರಯೋಜನವೂ ಇದೆ, ನೀವು ಸುಶಿಕ್ಷಿತರು, ಸೂಕ್ತ ಮಾಹಿತಿಯ ಅರಿವಿದ್ದೇ ನೀವು ಈ ವಿಮಾ ಪಾಲಿಸಿ ಮಾಡಿಸುತ್ತಿದ್ದೀರಿ ಎಂಬ ಸ್ಪಷ್ಟ ಸಂದೇಶ ರವಾನೆಯಾಗುತ್ತದೆ. ಇದರಿಂದ ಜೀವಕ್ಕೆ ಮಾಡಿಸಿಕೊಂಡ ವಿಮೆ ಕಡಿಮೆ ಅಪಾಯದ್ದು ಆಗಿರುತ್ತದೆ.

ಇಲ್ಲಿ ವಿತರಣಾ ವೆಚ್ಚ ಇಲ್ಲವೇ ಇಲ್ಲ ಎನ್ನಬೇಕು. ಕಂಪೆನಿಯ ವೆಬ್‌ಸೈಟ್‌ನಿಂದಲೇ ಉತ್ಪನ್ನ ನೇರವಾಗಿ ದೊರಕಿರುತ್ತದೆ.
 
ನೀವು ವಿಮಾ ಯೋಜನೆಯನ್ನು ಖರೀದಿಸುವಾಗ ಒದಗಿಸಲಾದ ಮಾಹಿತಿಯ ವಿಶ್ವಾಸಾರ್ಹತೆ ಮತ್ತು ಪರಿಪೂರ್ಣತೆಯ ಆಧಾರದಲ್ಲೇ ವಿಮೆ ಮತ್ತು ಕ್ಲೇಮ್ ಸೆಟ್ಲ್‌ಮೆಂಟ್‌ಗಳು ಇರುತ್ತವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಅಂದರೆ, ಬಹಳ ಎಚ್ಚರಿಕೆಯಿಂದ ಎಲ್ಲಾ ಮಾಹಿತಿಗಳನ್ನು ಅರ್ಥಮಾಡಿಕೊಂಡು ನಿರ್ಧಾರಕ್ಕೆ ಬಂದಿರಬೇಕು.
 
ಆನ್‌ಲೈನ್ ಪಾಲಿಸಿ ಮಾಡಿಸುವಾಗ ಎದುರಾಗಬಹುದಾದ ಒಂದು ಅಪಾಯ ಎಂದರೆ ಉದ್ದೇಶಪೂರ್ವಕವಲ್ಲದೆ ಅಥವಾ ಪ್ರೀಮಿಯಂ ಮೊತ್ತವನ್ನು ತಗ್ಗಿಸುವ ಸಲುವಾಗಿ ವೈದ್ಯಕೀಯ ಪರಿಸ್ಥಿತಿಗಳನ್ನು ಅಥವಾ ಇನ್ನಿತರ ಗಂಭೀರ ವಿಚಾರಗಳನ್ನು ಮುಚ್ಚಿಡುವುದು.

ಅದರಿಂದ ಭವಿಷ್ಯದಲ್ಲಿ ಕ್ಲೇಮ್ ಮಾಡಿಸಿಕೊಳ್ಳುವಾಗ ಗೊಂದಲ ಉಂಟಾಗುವ ಅಥವಾ ಭವಿಷ್ಯದಲ್ಲಿ ಕ್ಲೇಮುಗಳನ್ನು ತಳ್ಳಿಹಾಕುವ ಅಪಾಯ ಇರುತ್ತದೆ.
 
ಹೀಗಾಗಿ ಸದ್ಯ ಇರುವ ಆರೋಗ್ಯ ಸಮಸ್ಯೆ, ವೈದ್ಯಕೀಯ ಸ್ಥಿತಿಗತಿ, ದೂಮಪಾನ, ಮದ್ಯಪಾನದಂತಹ ಚಟಗಳ ಬಗ್ಗೆ ಮೊದಲಾಗಿ ತಿಳಿಸುವುದು ಸೂಕ್ತ. ಇದರಿಂದ ತ್ವರಿತವಾಗಿ ಮತ್ತು ಸುಲಭವಾಗಿ ಪಾಲಿಸಿ ನೀಡಿಕೆ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತವೆ.

ಇಂಟರ್‌ನೆಟ್ ವೇದಿಕೆಯ ಮೂಲಕ ವಿಮಾ ಪಾಲಿಸಿ ಮಾರಾಟ ಮಾಡುವ ಪರಿಕಲ್ಪನೆಯೊಂದಿಗೆ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಾಗ ಅವುಗಳು ನಗರ ಪ್ರದೇಶಗಳಲ್ಲಿ ಗ್ರಾಹಕರಿಗೆ ತಲುಪಿದರೂ, ಗ್ರಾಮೀಣ ಪ್ರದೇಶಗಳಲ್ಲಿ ತಲುಪದೆ ಇರುವ ಸಾಧ್ಯತೆಯೂ ಇರುತ್ತದೆ.

ಒಂದು ಸರಳ ಜೀವ ವಿಮಾ ಪಾಲಿಸಿ ಮಾಡಿಸಿಕೊಳ್ಳುವಲ್ಲಿ ಸಹ ಆನ್‌ಲೈನ್ ವೇದಿಕೆ ಮುಖ್ಯ ಪಾತ್ರ ವಹಿಸತೊಡಗಿದೆ. ಹೀಗಾಗಿ ಇಂಟರ್‌ನೆಟ್ ಜಾಲಾಡುವಾಗ  ಮುಂದಿನ ರಜಾ ದಿನವನ್ನು ಎಲ್ಲಿ ಮಜಾವಾಗಿ ಕಳೆಯೋಣ ಎಂಬ ವಿಚಾರ ಮಾತ್ರ ಮಾಡಬೇಡಿ. ಬದಲಿಗೆ ನಿಮ್ಮ ಜೀವಕ್ಕೂ ವಿಮೆ ಮಾಡಿಸಿಕೊಳ್ಳಿ.
 
ಆನ್‌ಲೈನ್‌ನಲ್ಲಿ ಹೀಗೆ ಮಾಡಿಸಿಕೊಳ್ಳುವ ವಿಮಾ ಪ್ರೀಮಿಯಂ ನಿಮ್ಮ ಮುಂದಿನ ವಿಮಾನ ಟಿಕೆಟ್‌ಗಿಂತಲೂ ಅಗ್ಗವಾಗಿರಬಹುದು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT