ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಸೇವೆ ಹದಗೆಡಿಸುವ ವ್ಯವಸ್ಥಿತ ಕುತಂತ್ರ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯಲ್ಲಿ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತಂದು ಇನ್ನಷ್ಟು ಜನಸ್ನೇಹಿಗೊಳಿಸುವ ನಿಟ್ಟಿನಲ್ಲಿ ಬಿಬಿಎಂಪಿ ಆನ್‌ಲೈನ್ ವ್ಯವಸ್ಥೆ ಜಾರಿಗೆ ತಂದಿದೆ. ಆದರೆ, ಈ ವಿಧಾನ ಮುಂದುವರಿಕೆಗೆ ಕೆಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ತೋರದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ನಗರದಲ್ಲಿ ನಿವೇಶನದಾರರು ಕಟ್ಟಡ ನಿರ್ಮಾಣಕ್ಕಾಗಿ ನಕ್ಷೆ ಮಂಜೂರಾತಿ ಪಡೆಯಲು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಅಲ್ಲದೇ ನಿಯಮ ಪಾಲಿಸಿದರೂ ಅಧಿಕಾರಿಗಳು ಲಂಚ ವಸೂಲಿ ಮಾಡುವ ಮೂಲಕ ಶೋಷಿಸುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.

ಆ ಹಿನ್ನೆಲೆಯಲ್ಲಿ ಆಯುಕ್ತ ಸಿದ್ದಯ್ಯ ಅವರು ನಕ್ಷೆ ಮಂಜೂರಾತಿ ಪ್ರಕ್ರಿಯೆಯನ್ನು ಆನ್‌ಲೈನ್ ಮೂಲಕ ನಡೆಸುವಂತೆ ಸೂಚನೆ ನೀಡಿದರು. ಅದರಂತೆ 4,000 ಚದರ ಅಡಿಗಿಂತ ಹೆಚ್ಚು ವಿಸ್ತೀರ್ಣದ ನಿವೇಶನಗಳಿಗೆ ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆಯನ್ನು 2010ರ ನವೆಂಬರ್ 1ರಿಂದ ಜಾರಿಗೆ ತರಲಾಯಿತು. ಆದರೆ, ಅಧಿಕಾರಿಗಳು ಇದನ್ನು ಉತ್ಸಾಹದಿಂದ ಜಾರಿಗೊಳಿಸಲು ಆಸಕ್ತಿ ತೋರಲಿಲ್ಲ. ಹಾಗಾಗಿ ಇದು ಹೆಚ್ಚಿನ ಯಶಸ್ಸು ಕಾಣಲಿಲ್ಲ.

ಆದರೂ ಪಟ್ಟುಬಿಡದ ಆಯುಕ್ತರು, ಇದೇ ಜುಲೈ 1ರಿಂದ ಎಲ್ಲ ವಿಸ್ತೀರ್ಣದ ನಿವೇಶಗಳಲ್ಲಿನ ಕಟ್ಟಡ ನಿರ್ಮಾಣಕ್ಕೆ ಆನ್‌ಲೈನ್ ಮೂಲಕವೇ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸುವ ಹಾಗೂ ಮಂಜೂರಾತಿ ನೀಡುವ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಆದೇಶ ಹೊರಡಿಸಿದ್ದಾರೆ. ಅದರಂತೆ ಸದ್ಯ ಆನ್‌ಲೈನ್ ಮೂಲಕವೇ ನಕ್ಷೆ ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿದೆ.

ಸರಳ ವಿಧಾನ:
ಪಾಲಿಕೆಯ ವೆಬ್‌ಸೈಟ್‌ನಲ್ಲಿ ಆಟೊಮ್ಯಾಟಿಕ್ ಬಿಲ್ಡಿಂಗ್ ಪ್ಲಾನ್ ಸ್ಕ್ರೂಟನಿ ಸಿಸ್ಟಮ್ ವಿಭಾಗದ ಮೇಲೆ ಕ್ಲಿಕ್ ಮಾಡಿದರೆ ಪಾಲಿಕೆ ವ್ಯಾಪ್ತಿಯಲ್ಲಿ ನೋಂದಣಿಯಾದ ವಾಸ್ತುಶಿಲ್ಪಿಗಳ ಹೆಸರು, ವಿಳಾಸ, ನೋಂದಣಿ ಸಂಖ್ಯೆ ಹಾಗೂ ನವೀಕರಿಸುವ ದಿನಾಂಕವನ್ನು ನಮೂದಿಸಲಾಗಿದೆ.

ನಕ್ಷೆ ಮಂಜೂರಾತಿಗೆ ಸಂಬಂಧಪಟ್ಟಂತೆ ಪಾಲಿಕೆ ಸಿದ್ಧಪಡಿಸಿರುವ ಸಾಫ್ಟ್‌ವೇರ್‌ಗಳನ್ನು ಈ ವಾಸ್ತುಶಿಲ್ಪಿಗಳು ಖರೀದಿಸಿರುತ್ತಾರೆ. ಹಾಗಾಗಿ ನಕ್ಷೆಯನ್ನು ಉಪವಿಧಿಗಳ ಅನುಸಾರವಾಗಿಯೇ ರೂಪಿಸಬೇಕಾದ ಅನಿವಾರ್ಯತೆ ಇದೆ.

ಆರ್ಕಿಟೆಕ್ಟ್‌ಗಳೇ ಮುಖ್ಯ:
ಉದಾಹರಣೆಗೆ 1,200 ಚದರ ಅಡಿ ವಿಸ್ತೀರ್ಣದ ನಿವೇಶನ ಮಾಲೀಕರು ವಾಸದ ಮನೆ ನಿರ್ಮಾಣ ಮಾಡಬೇಕಾದರೆ ಅದಕ್ಕೆ ಪೂರಕವಾದ ನಕ್ಷೆಯನ್ನು ಈ ಆರ್ಕಿಟೆಕ್ಟ್‌ಗಳು ಸಿದ್ಧಪಡಿಸುತ್ತಾರೆ. ರಸ್ತೆಯ ಅಗಲಕ್ಕೆ ಅನುಗುಣವಾಗಿ ಉಪವಿಧಿಗಳನ್ವಯ ನಕ್ಷೆ ಸಿದ್ಧಪಡಿಸಿ ಆನ್‌ಲೈನ್ ಮೂಲಕವೇ ಸಲ್ಲಿಸುತ್ತಾರೆ.

ಈ ನಕ್ಷೆಯಲ್ಲೇನಾದರೂ ಲೋಪವಿರುವುದು ಕಂಡು ಬಂದರೆ ಸಂಬಂಧಪಟ್ಟ ಆರ್ಕಿಟೆಕ್ಟ್‌ಗೆ ಸ್ಪಷ್ಟವಾದ ಮಾಹಿತಿ ರವಾನೆಯಾಗುತ್ತದೆ. ಬಳಿಕ ಅವರೇ ಆ ಲೋಪಗಳನ್ನು ಸರಿಪಡಿಸಿ ಮತ್ತೆ ಸಲ್ಲಿಸಬೇಕು.

ನಕ್ಷೆಯನ್ನು ಸಮರ್ಪಕವಾಗಿ ಸಲ್ಲಿಸಿದರೆ ಉಳಿದ ಪ್ರಕ್ರಿಯೆಗಳು ಸರಾಗವಾಗಿ ನಡೆಯುತ್ತವೆ. ಆರ್ಕಿಟೆಕ್ಟ್‌ಗಳ ಸೇವೆಗೆ ನಿವೇಶನದಾರರೇ ಇಂತಿಷ್ಟು ಹಣ ನೀಡಬೇಕು. ಅದಕ್ಕೆ ಪಾಲಿಕೆಯಿಂದ ಯಾವುದೇ ಶುಲ್ಕ ನಿಗದಿಪಡಿಸಿಲ್ಲ.

ಆನ್‌ಲೈನ್‌ನಲ್ಲಿ ನಕ್ಷೆ ಮಂಜೂರಾತಿಗೆ ಅರ್ಜಿ ಸಲ್ಲಿಸಿದ ಬಳಿಕ ದಾಖಲೆಗಳ ನಕಲು ಪ್ರತಿಯನ್ನು ಸಂಬಂಧಪಟ್ಟ ಅಧಿಕಾರಿಗೆ ಸಲ್ಲಿಸಬೇಕು. ಇದರಿಂದ ಆನ್‌ಲೈನ್‌ನಲ್ಲಿ ನೀಡಿರುವ ಮಾಹಿತಿ ಹಾಗೂ ದಾಖಲೆಯಲ್ಲಿರುವ ಮಾಹಿತಿ ಸರಿಯಾಗಿದೆಯೇ ಎಂಬುದನ್ನು ಅಧಿಕಾರಿಗಳು ತಾಳೆ ಹಾಕುತ್ತಾರೆ.

ಆನ್‌ಲೈನ್ ಮೂಲಕವೇ ಸಂಬಂಧಪಟ್ಟ ವಿವಿಧ ಶ್ರೇಣಿಯ ಅಧಿಕಾರಿಗಳು ಅನುಮೋದನೆ ನೀಡಬೇಕಾಗಿರುವುದರಿಂದ ವಿಳಂಬ ಮಾಡಲು ಅವಕಾಶವೇ ಇಲ್ಲ. ಏಕೆಂದರೆ ಕಡತವು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ಹೋದಾಗಲೂ ಸಮಯ ದಾಖಲಾಗುತ್ತದೆ.

ಇದರಿಂದ ಯಾವ ಅಧಿಕಾರಿ, ಯಾವ ಕಡತವನ್ನು ಎಷ್ಟು ಕಾಲ ತಮ್ಮ ಬಳಿ ಇಟ್ಟುಕೊಂಡಿದ್ದರು ಎಂಬುದು ಮೇಲ್ನೋಟಕ್ಕೆ ಕಾಣುತ್ತದೆ. ಹಾಗಾಗಿ ಅಧಿಕಾರಿಗಳು ವಿಳಂಬ ಮಾಡುವಂತಿಲ್ಲ. ಸಂಬಂಧಪಟ್ಟ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಿದ ಬಳಿಕ ಎಲ್ಲವೂ ಸಮರ್ಪಕವಾಗಿದ್ದರೆ ಶುಲ್ಕ ಪಾವತಿಸಿ ನಕ್ಷೆ ಮಂಜೂರಾತಿ ಪಡೆಯಬಹುದಾಗಿದೆ.

ಸುವರ್ಣ ಪರವಾನಗಿ:
ಮಧ್ಯಮ ಮತ್ತು ಕೆಳ ವರ್ಗದ ಜನರು ಮನೆ ನಿರ್ಮಿಸಲು ಅನುಕೂಲವಾಗುವಂತೆ `ಸುವರ್ಣ ಪರವಾನಗಿ~ ವ್ಯವಸ್ಥೆ ಕೂಡ ಜಾರಿಯಲ್ಲಿದೆ. ಇದರಲ್ಲಿ 4,000 ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದಲ್ಲಿ ಮನೆ ನಿರ್ಮಾಣಕ್ಕೆ 72 ಗಂಟೆಗಳಲ್ಲಿ ನಕ್ಷೆ ಮಂಜೂರಾತಿ ದೊರೆಯಲಿದೆ.

ನಿವೇಶನದಾರರು ತಾವು ಸಲ್ಲಿಸಿದ ಅರ್ಜಿ ಹಾಗೂ ಇತರೆ ಮಾಹಿತಿ ಸರಿಯಾಗಿದ್ದು, ಯಾವುದೇ ತಪ್ಪು ಮಾಹಿತಿ ನೀಡಿಲ್ಲ. ಒಂದೊಮ್ಮೆ ತಪ್ಪು ವಿವರ ಇದ್ದರೆ ಅದಕ್ಕೆ ತಾವೇ ಹೊಣೆಗಾರರು ಎಂಬುದಾಗಿ ಮುಚ್ಚಳಿಕೆ ನೀಡಿ ಅರ್ಜಿ ಸಲ್ಲಿಸಿದರೆ 72 ಗಂಟೆಯೊಳಗೆ ನಕ್ಷೆ ಮಂಜೂರಾತಿ ಪಡೆಯಬಹುದು.

ಜನರಿಗೆ ಅನುಕೂಲವಾಗುವ ಹಾಗೂ ಲಂಚದ ಹಾವಳಿಯನ್ನು ತಪ್ಪಿಸುವ ಸಲುವಾಗಿ ಪಾಲಿಕೆ ಈ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಆದರೆ ಈ ವಿಧಾನದ ಯಶಸ್ಸಿಗೆ ಅಧಿಕಾರಿಗಳು ಒಲವು ತೋರುತ್ತಿಲ್ಲ.

ನಕ್ಷೆ ಮಂಜೂರಾತಿ ಅರ್ಜಿ ಕಡತ ಪರಿಶೀಲನೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸೃಷ್ಟಿಸಿ ಗೊಂದಲ ಮೂಡಿಸುವುದು. ಉದ್ದೇಶಪೂರ್ವಕವಾಗಿ ಕೆಲವು ಲೋಪಗಳನ್ನು ನಡೆಸಿ ವ್ಯವಸ್ಥೆಯೇ ಸರಿಯಿಲ್ಲ ಎಂದು ದೂರುವುದು. ತಾಂತ್ರಿಕ ದೋಷದ ಕಾರಣವೊಡ್ಡಿ ವಿಳಂಬ ಮಾಡುವ `ತಂತ್ರ~ಗಳನ್ನು ಕೆಲವು ಅಧಿಕಾರಿಗಳು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

2400 ಚದರ ಅಡಿ ನಿವೇಶನಕ್ಕಿಂತ ಕಡಿಮೆ ವಿಸ್ತೀರ್ಣದಲ್ಲಿಯೇ ಸೆಟ್‌ಬ್ಯಾಕ್ ಬಿಡುವುದು ಹಾಗೂ ಹೆಚ್ಚುವರಿ ಅಂತಸ್ತು ಕಟ್ಟುವಂತಹ ಕಾನೂನು ಉಲ್ಲಂಘನೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ವಸೂಲಿ ಮಾಡುವ ಉದ್ದೇಶದಿಂದಲೇ ಪಾರದರ್ಶಕವಾದ ಆನ್‌ಲೈನ್ ವ್ಯವಸ್ಥೆಗೆ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.

ಆನ್‌ಲೈನ್‌ನಲ್ಲಿ 159 ನಕ್ಷೆ ಮಂಜೂರಾತಿ:
`ಆನ್‌ಲೈನ್‌ನಲ್ಲಿ ನಕ್ಷೆ ಮಂಜೂರಾತಿ ವ್ಯವಸ್ಥೆ ಅತ್ಯುತ್ತಮವಾಗಿದೆ. ಲಂಚ ಕೇಳಲು ಅವಕಾಶವೇ ಇಲ್ಲದಂತೆ ಈ ವ್ಯವಸ್ಥೆ ರೂಪಿಸಲಾಗಿದೆ. ಇದರಿಂದ ನಿವೇಶನದಾರರು ಸರಳವಾಗಿ ಮಧ್ಯವರ್ತಿಗಳ ಹಾವಳಿಯಿಲ್ಲದೆ ನಕ್ಷೆ ಮಂಜೂರಾತಿ ಪಡೆಯಬಹುದು. ಇದೇ ಜುಲೈ 1ರಿಂದ ಆರಂಭವಾದ ಈ ವ್ಯವಸ್ಥೆಯಡಿ ಈವರೆಗೆ 159 ಕಟ್ಟಡಗಳಿಗೆ ನಕ್ಷೆ ಮಂಜೂರಾತಿ ನೀಡಲಾಗಿದೆ~ ಎಂದು ಪಾಲಿಕೆಯ ಉನ್ನತ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

 `ಈ ವ್ಯವಸ್ಥೆ ಯಶಸ್ವಿಯಾಗದಂತೆ ಮಾಡಲು ಕೆಲವು ಅಧಿಕಾರಿಗಳು ತೀವ್ರ ಕಸರತ್ತು ನಡೆಸಿದ್ದಾರೆ. ಅವರ ಮೇಲೆ ನಿಗಾ ಇಡಲಾಗಿದೆ. ಇದೇ ರೀತಿಯ ಮನೋಭಾವ ಮುಂದುವರಿಸಿದರೆ ಶಿಸ್ತುಕ್ರಮ ಜರುಗಿಸಲಾಗುವುದು~ ಎಂದು  ಎಚ್ಚರಿಸಿದರು.
 

ಪ್ರತಿಕ್ರಿಯೆ- ಸಲಹೆ ನೀಡಿ:
ನಿಯಮಗಳ ಉಲ್ಲಂಘನೆ ಹಾಗೂ ಕಟ್ಟಡ ನಿರ್ಮಾಣದಲ್ಲಿ ನಡೆಯುವ ಅಕ್ರಮಗಳ ಕುರಿತು `ಪ್ರಜಾವಾಣಿ~ ಸರಣಿ ಲೇಖನಗಳನ್ನು ಪ್ರಕಟಿಸಿದೆ. ಈ ಕುರಿತು ಓದುಗರು ತಮ್ಮ ಪ್ರತಿಕ್ರಿಯೆ, ಸಲಹೆ ನೀಡಬಹುದು. ಅಲ್ಲದೇ ಕಟ್ಟಡ ನಿರ್ಮಾಣ ವೇಳೆ ಅಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದರೆ ಈ ಕುರಿತು ಮಾಹಿತಿ ನೀಡಬಹುದು. ಅದನ್ನು ಓದುಗರ ಹೆಸರಿನಲ್ಲಿಯೇ ಪ್ರಕಟಿಸಲಾಗುವುದು. ಹಾಗೆಯೇ ನಿಯಮ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ಬಹುಮಹಡಿ ಕಟ್ಟಡಗಳ ಬಗ್ಗೆ ದಾಖಲೆ ಸಹಿತ ಮಾಹಿತಿಯನ್ನು ಕೆಳಕಂಡ ಇ-ಮೇಲ್ ವಿಳಾಸಕ್ಕೆ ಕಳುಹಿಸಬಹುದು. ಇ-ಮೇಲ್ ವಿಳಾಸ: civicpv@gmail.com
ಸ್ಥಾಯಿ ಸಮಿತಿ ಅಧ್ಯಕ್ಷರ ವಿರೋಧ!:
ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿ ನೀಡುವ ವಿಧಾನಕ್ಕೆ ಸಾಕಷ್ಟು ಪಾಲಿಕೆ ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಹಲವು ಸ್ಥಾಯಿ ಸಮಿತಿಗಳ ಅಧ್ಯಕ್ಷರು 2,400 ಚದರ ಅಡಿ ವಿಸ್ತೀರ್ಣದವರೆಗಿನ ನಿವೇಶನಗಳಿಗೆ ಆನ್‌ಲೈನ್ ವ್ಯವಸ್ಥೆಯಿಂದ ರಿಯಾಯ್ತಿ ನೀಡಬೇಕು ಎಂದು ಮೇಯರ್ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಬಿಬಿಎಂಪಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಆನ್‌ಲೈನ್ ಮೂಲಕ ನಕ್ಷೆ ಮಂಜೂರಾತಿ ನೀಡುವ ವಿಷಯ ಕೂಡ ಚರ್ಚೆಗೆ ಬಂತು. ಆಗ ಹಲವು ಸ್ಥಾಯಿ ಸಮಿತಿಗಳ ಅಧ್ಯಕ್ಷರು ಈ ವ್ಯವಸ್ಥೆಗೆ ವಿರೋಧ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. ರಿಯಾಯ್ತಿ ಕೋರಿ ಸ್ಥಾಯಿ ಸಮಿತಿಯು ಈಗಾಗಲೇ ಆಯುಕ್ತರಿಗೆ ಮನವಿಯನ್ನು ಸಹ ಸಲ್ಲಿಸಿದೆ.
ಈ ವ್ಯವಸ್ಥೆಯಿಂದ ಬಡ ಮತ್ತು ಮಧ್ಯಮ ವರ್ಗದವರಿಗೆ ತೊಂದರೆಯಾಗುತ್ತದೆ. ಆರ್ಕಿಟೆಕ್ಟ್‌ಗಳು ಹೆಚ್ಚು ಹಣ ವಸೂಲಿ ಮಾಡುತ್ತಾರೆ. ಹಾಗಾಗಿ 2,400 ಚದರ ಅಡಿ ವಿಸ್ತೀರ್ಣದವರೆಗಿನ ಕಟ್ಟಡಗಳಿಗೆ ಹಳೇ ವಿಧಾನದ ಮೂಲಕವೇ ನಕ್ಷೆ ಮಂಜೂರಾತಿ ನೀಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಒತ್ತಡ ಹೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮುಂದುವರೆಯಲಿದೆ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT