ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ಗೆ ಬಂತು ಹಾಲು, ಮೊಸರು...

Last Updated 21 ಮೇ 2015, 19:30 IST
ಅಕ್ಷರ ಗಾತ್ರ

ಗ್ರಾಮೀಣ ಭಾಗದ ಜನರು ಹೇಳುವ ಮಾತೊಂದಿದೆ. ‘ಮಾರುಕಟ್ಟೆಯಲ್ಲಿ ಹಣ ಕೊಟ್ಟರೆ ಅಪ್ಪ ಅಮ್ಮ ಬಿಟ್ಟು ಬೇರೆಲ್ಲವೂ ಸಿಗುತ್ತದೆ’ ಎಂದು. ಈಗ ಅದೇ ಮಾತನ್ನು ಆನ್‌ಲೈನ್‌ ಸೇವೆಗೆ ಹೋಲಿಸಬಹುದು. ‘ಆನ್‌ಲೈನ್‌ನಲ್ಲಿ ಅಪ್ಪ ಅಮ್ಮ ಬಿಟ್ಟು ಬೇರೆಲ್ಲವೂ ಸಿಗುತ್ತದೆ’.

ಆನ್‌ಲೈನ್‌ ಮಾರುಕಟ್ಟೆಗಳು ಬಂದ ಮೇಲೆ ಎಲೆಕ್ಟ್ರಾನಿಕ್‌ ವಸ್ತುಗಳಿಂದ ಹಿಡಿದು ಬಟ್ಟೆ ಬರೆ, ಚಪ್ಪಲಿ, ಬ್ಯಾಗು, ಆಭರಣ, ಚಿನ್ನದ ಒಡವೆಗಳನ್ನೂ ಧೈರ್ಯದಿಂದ ಜನ ಖರೀದಿಸುತ್ತಿದ್ದಾರೆ. ಈ ಮೇನಿಯಾ ನಗರದ ಜನರಿಗೆ ಮಾತ್ರ ಅಂಟಿಕೊಂಡಿದೆ ಎನ್ನುವಂತಿಲ್ಲ. ಸ್ಮಾರ್ಟ್‌ಫೋನ್‌ ಇರುವ ಎಲ್ಲರೂ ಗ್ರಾಮೀಣ, ಪಟ್ಟಣ, ನಗರ ಎಂಬ ಭೇದವಿಲ್ಲದೆ ಆನ್‌ಲೈನ್‌ ಖರೀದಿಯಲ್ಲಿ ತೊಡಗಿದ್ದಾರೆ. ಜನರ ಈ ಸ್ವಭಾವಕ್ಕೆ ಸರಿಯಾಗಿ ಅನೇಕರು ಹೊಸ ಹೊಸ ವಸ್ತುಗಳನ್ನು ಆನ್‌ಲೈನ್‌ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಾರೆ.

‘ಅಗತ್ಯವೇ ಅನ್ವೇಷಣೆಯ ತಾಯಿ’ ಎಂಬುದು ಅರ್ಥಶಾಸ್ತ್ರದಲ್ಲಿ ಜನಜನಿತ. ಮನುಷ್ಯ ತನ್ನ ಅಗತ್ಯಕ್ಕೆ ಸರಿಯಾಗಿ ತನ್ನದೇ ಮಾರ್ಗಗಳನ್ನು ಹುಡುಕುತ್ತಿರುತ್ತಾನೆ. ಅದಕ್ಕೊಂದು ತಾಜಾ ಉದಾಹರಣೆ ಆನ್‌ಲೈನ್‌ನಲ್ಲಿ ಹಾಲು ಮಾರಾಟ ಮಾಡುತ್ತಿರುವ ನಗರದ ಇಬ್ಬರು ಸುಶಿಕ್ಷಿತ ಮಹಿಳೆಯರು. ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದರೆ ಅರ್ಧ ಗಂಟೆಯಲ್ಲಿ ಹಾಲು, ಹಣ್ಣು, ಹಾಲಿನ ಉತ್ಪನ್ನಗಳನ್ನು ಮನೆ ಬಾಗಿಲಿಗೆ ತಲುಪಿಸುವ ಸಾಹಸಕ್ಕೆ ಬಿಟಿಎಂ ಬಡಾವಣೆಯ ನಿವಾಸಿಗಳಾದ ಎಂಎಸ್ಸಿ ಪದವೀಧರರಾದ ಯೋಗಿತಾ ಗೌತಮ್ ಮತ್ತು ಗರಿಮಾ ಸಿಂಗ್‌ ಮುಂದಾಗಿದ್ದಾರೆ.

ಅವರು ಕಳೆದ ಎರಡು ತಿಂಗಳಿಂದ ಬಿಟಿಎಂ ಬಡಾವಣೆಯ ಜನರಿಗೆ ಬೈ  ಮಿಲ್ಕ್‌ ಆನ್‌ಲೈನ್‌  ಡಾಟ್ ಕಾಂ (www.buymilkonline.com) ಮೂಲಕ ಮನೆ ಮನೆಗೆ ಹಾಲು ಪೂರೈಸುತ್ತಿದ್ದಾರೆ. ಇದಕ್ಕೆ ಹೆಚ್ಚುವರಿಯಾಗಿ ಗ್ರಾಹಕರಿಂದ ಇವರು ಪಡೆಯುತ್ತಿರುವುದು ಕೇವಲ ₨1. ‘ಪ್ರತಿದಿನ ಹಾಲು ಖರೀದಿಯಲ್ಲಿ  ತಾವು ಅನುಭವಿಸುತ್ತಿದ್ದ  ಕಿರಿಕಿರಿಯೇ ಆನ್‌ಲೈನ್‌ ಹಾಲು ವ್ಯಾಪಾರಕ್ಕೆ ಪ್ರೇರಣೆಯಾಯಿತು’ ಎನ್ನುತ್ತಾರೆ ಯೋಗಿತಾ ಗೌತಮ್‌.

‘ಕೆಎಂಎಫ್‌ನ ಅಧಿಕೃತ ಅಂಗಡಿಯನ್ನು ಬಿಟ್ಟು ಬೇರೆ ಅಂಗಡಿ, ಬೇಕರಿಗಳಲ್ಲಿ ಅರ್ಧ ಲೀಟರಿನ ಒಂದು ಪ್ಯಾಕ್‌ ಹಾಲು ಕೊಂಡರೆ ₨1  ಹೆಚ್ಚುವರಿ ನೀಡಬೇಕು.  ಬೇಡವೆಂದರೂ, ಚಿಲ್ಲರೆ ಇಲ್ಲ ಎಂಬ ನೆಪದಲ್ಲಿ ವ್ಯಾಪಾರಿ ನೀಡುವ ಚಾಕಲೇಟ್‌ ಪಡೆಯಬೇಕು. ಮನೆ ಬಾಗಿಲಿಗೆ ಹಾಲು ಪೂರೈಸುವವರಿಗೂ ₨1 ಹೆಚ್ಚಿಗೆ ನೀಡಬೇಕು. ಕೆಲವರು ಬಳಕೆಯ ಅವಧಿ ಮೀರಿದ ಹಾಲನ್ನು ನೀಡುತ್ತಾರೆ. ಕೆಲವು ಕಡೆ ಹಾಲು ಮಾರುವ ಅಂಗಡಿಗಳೇ ಇಲ್ಲ. ಇದು  ಪ್ರತಿ ಮನೆಯ ಸಮಸ್ಯೆ ಎಂದು ಮನಗಂಡ ನಾವು ಹಾಲನ್ನು ಆನ್‌ಲೈನ್  ಮೂಲಕ ಪೂರೈಸುವ ಯೋಜನೆ ರೂಪಿಸಿದೆವು. ಮೊದಲು ಬಿಟಿಎಂ ಬಡಾವಣೆಯ ನಮ್ಮ ಅಕ್ಕಪಕ್ಕದ ಮನೆ, ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿದೆವು. ಅವರಿಂದ ಸಿಕ್ಕ ಪ್ರೋತ್ಸಾಹದಿಂದಾಗಿ ಎರಡು ತಿಂಗಳಲ್ಲಿ  ಇಡೀ ಬಡಾವಣೆಗೆ ಈ ಸೇವೆಯನ್ನು ವಿಸ್ತರಿಸಿದ್ದೇವೆ.  ಈಗ ಅಪಾರ್ಟ್‌ಮೆಂಟ್‌, ಗೆಸ್ಟ್‌ಹೌಸ್‌, ರೆಸ್ಟೋರೆಂಟ್‌ನವರೂ   ಆನ್‌ಲೈನ್‌ನಲ್ಲಿ ಆರ್ಡರ್‌ ನೀಡುತ್ತಿದ್ದಾರೆ.  ಆರ್ಡರ್‌ ನೀಡಿದ 30 ನಿಮಿಷದೊಳಗೆ ಮನೆ ಬಾಗಿಲಿಗೆ ತಲುಪಿಸುತ್ತೇವೆ’ ಎನ್ನುತ್ತಾರೆ.

‘ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಪೂರೈಸುವುದಷ್ಟೇ ನಮ್ಮ ಸದ್ಯದ ಗುರಿ. ಪ್ರಾಯೋಗಿಕವಾಗಿರುವುದರಿಂದ ಲಾಭದ ನಿರೀಕ್ಷೆ ಇಲ್ಲ. ವೆಬ್‌ಸೈಟನ್ನು ಇನ್ನಷ್ಟು ಗ್ರಾಹಕ ಸ್ನೇಹಿಯಾಗಿ ರೂಪಿಸುವುದು. ಹಾಲಿನ ಬಳಕೆಯ ಸಮೀಕ್ಷೆ ನಡೆಸಿ ಇನ್ನಷ್ಟು ಪರಿಣಾಮಕಾರಿಯಾಗಿ ನಿಗದಿತ ಸಮಯದಲ್ಲಿ ಗ್ರಾಹಕರನ್ನು ತಲುಪುವ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂದಿದ್ದೇವೆ. ಬೆಂಗಳೂರಿನ ಬೇರೆ ಬೇರೆ ಭಾಗಗಳ ಜನ ಯೋಜನೆಯನ್ನು  ವಿಸ್ತರಿಸುವ ಬಗ್ಗೆ   ಬೇಡಿಕೆ ಇಡುತ್ತಿದ್ದಾರೆ’ ಎನ್ನುತ್ತಾರೆ ಅವರು.

ಏನೇನು ಖರೀದಿಸಬಹುದು?
ನಂದಿನಿಯ ಪಾಶ್ಚರೀಕರಿಸಿದ ಹಾಲು, ಟೋನ್ಡ್‌ ಮಿಲ್ಕ್‌, ಗುಡ್‌ಲೈಫ್‌ ಸ್ಲಿಮ್‌ ಮಿಲ್ಕ್, ಬೆಣ್ಣೆ, ಮೊಸರು, ಪನೀರ್‌, ತುಪ್ಪ, ಕೆನೆ, ಅಮೂಲ್‌–ಮಿಲ್ಕಿ ಮಿಸ್ಟ್– ನೆಸ್ಟ್‌ಲೇ ಉತ್ಪನ್ನಗಳು, ಬಾಳೆಹಣ್ಣು, ಮೊಟ್ಟೆ, ಎಳನೀರು. ಸಮಯ ಬೆಳಿಗ್ಗೆ 6ರಿಂದ10, ಸಂಜೆ 6.30ರಿಂದ 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT