ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲೂ ಹಂಸಧ್ವನಿ

Last Updated 9 ಜನವರಿ 2013, 19:59 IST
ಅಕ್ಷರ ಗಾತ್ರ

ಸಮಯ ಸರಿಸುಮಾರು ಮಧ್ಯರಾತ್ರಿ ಒಂದೂವರೆ. ಕರ್ನಾಟಕ ಸಂಗೀತದ ಹಿರಿಯ ಕಲಾವಿದೆ ವಿದುಷಿ ಎಂ.ಎಸ್. ಶೀಲಾ ಅವರ ಸಂಗೀತ ಕಛೇರಿ. ಮೇಳಕರ್ತ ರಾಗ ಧೀರ ಶಂಕರಾಭರಣದಲ್ಲಿ ಜನ್ಯರಾಗ `ಹಂಸ ವಿನೋದಿನಿ' (ಮಿಶ್ರ ಜಂಪೆ ತಾಳ) ಸುದೀರ್ಘ ಆಲಾಪದೊಂದಿಗೆ ಅದ್ಭುತವಾಗಿ ಪ್ರಸ್ತುತಪಡಿಸಿದರು. ಇತ್ತೀಚೆಗೆ ಚೌಡಯ್ಯ ಹಾಲ್‌ನಲ್ಲಿ ನಡೆದ ಅಹೋರಾತ್ರಿ ಸಂಗೀತೋತ್ಸವದಲ್ಲಿ ಶೀಲಾ ಗಾಯನ ಗಮನ ಸೆಳೆದಿದ್ದು ಅವರ ಸುಮಧುರ ಶಾರೀರದಿಂದ. ದಿನದ ಯಾವುದೇ ಸಮಯದಲ್ಲಿ ಹಾಡಿದರೂ ಅದೇ ಮಾಧುರ್ಯ ಉಳಿಸಿಕೊಳ್ಳುವ ಸಾಮರ್ಥ್ಯ ಅವರ ಶಾರೀರಕ್ಕೆ ಇದ್ದು, ಕೇಳುಗರಲ್ಲಿ ಅಚ್ಚರಿ ಮೂಡಿಸಿತು.

ಅವರ ಪ್ರತಿ ಕಛೇರಿಯಲ್ಲೂ ಹೊಸತನ ಇರುತ್ತದೆ, ಅಪರೂಪದ ರಾಗಗಳಿರುತ್ತವೆ, ಕಷ್ಟಕರವಾದ ತಾಳಗಳಿರುತ್ತವೆ, ನೆರವಲ್ ವಿಭಿನ್ನವಾಗಿರುತ್ತವೆ, ಮನೋಧರ್ಮ (ಕಲ್ಪನಾಸ್ವರ) ಅಚ್ಚರಿ ತರುವಷ್ಟು ಖುಷಿ ಕೊಡುತ್ತದೆ. ಇದಕ್ಕಾಗಿಯೇ ಇವರ ಗಾಯನಕ್ಕೆ ಎಲ್ಲಿಲ್ಲದ ಬೇಡಿಕೆ. ಈ ಹಿರಿಯ ಕಲಾವಿದೆ ಮಕ್ಕಳಲ್ಲಿ ಸದಭಿರುಚಿ ಮೂಡಿಸಲು, ಸದ್ಭಾವನೆ ಬೆಳೆಸಲು ನಗರದ ದೇವಯ್ಯ ಪಾರ್ಕ್ ಸಮೀಪ `ಹಂಸಧ್ವನಿ ಕ್ರಿಯೇಷನ್ಸ್' ಎಂಬ ಸಂಗೀತ ಶಾಲೆ ನಡೆಸುತ್ತಿದ್ದಾರೆ.

ಹಂಸಧ್ವನಿ ಕ್ರಿಯೇಷನ್ಸ್ ಸಂಗೀತ ಸಂಸ್ಥೆ 1991ರಲ್ಲಿ ಎಂ.ಎಸ್. ಶೀಲಾ ಮತ್ತು ಅವರ ಪತಿ ಪ್ರೊ.ಬಿ.ಕೆ. ರಾಮಸ್ವಾಮಿ ಅವರು ಹುಟ್ಟುಹಾಕಿದ ಸಂಸ್ಥೆ. ಸುಮಾರು 30 ಶಿಷ್ಯರು ಇಲ್ಲಿ ಸಂಗೀತ ಕಲಿಯುತ್ತಾರೆ. ಹೆಚ್ಚಿನವರು ವೃತ್ತಿಪರರು ಮತ್ತು ಈಗಾಗಲೇ ಸಂಗೀತದ ಆರಂಭಿಕ ಹಂತ ಮುಗಿಸಿದವರು.

`ಇಲ್ಲಿ ಪ್ರತಿಯೊಬ್ಬರಿಗೂ ಪ್ರತ್ಯೇಕ ಪಾಠ ಇರುವುದರಿಂದ ಹೆಚ್ಚು ಶಿಷ್ಯರನ್ನು ತೆಗೆದುಕೊಳ್ಳುವುದಿಲ್ಲ. ಉನ್ನತ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಹೆಚ್ಚು ಸಮಯ ಬೇಕಾಗುತ್ತದೆ. ಹೀಗಾಗಿ ಸಂಗೀತದ ಬಾಲ ಪಾಠವನ್ನು ಇಲ್ಲಿ ಹೇಳಿಕೊಡುವುದಿಲ್ಲ. ಆದರೆ ತಮ್ಮ ಶಿಷ್ಯರು ಪುಟ್ಟ ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುವ ವ್ಯವಸ್ಥೆ ಇದೆ' ಎನ್ನುತ್ತಾರೆ ವಿದುಷಿ ಶೀಲಾ.

`ವೃತ್ತಿ- ಪ್ರವೃತ್ತಿ ಎರಡರಲ್ಲೂ ಸಂಗೀತವನ್ನೇ ಆಯ್ದುಕೊಂಡಿರುವವರು ಇದ್ದಾರೆ. ಆದರೆ ಈಗ ಬರೀ ಸಂಗೀತವನ್ನೇ ನೆಚ್ಚಿಕೊಂಡು ಜೀವನ ಸಾಗಿಸುವುದು ಕಷ್ಟ. ಒಳ್ಳೆಯ ಸಂಬಳ ಇರುವ ಉದ್ಯೋಗಾವಕಾಶ ಸಂಗೀತ ಕ್ಷೇತ್ರದಲ್ಲಿ ಸಿಗದು. ಹೀಗಾಗಿ ಬೇರೆ ವೃತ್ತಿ ಆಯ್ದುಕೊಂಡು ಸಂಗೀತವನ್ನು ಉಪವೃತ್ತಿಯಾಗಿ ತೆಗೆದುಕೊಳ್ಳುವ ವಿದ್ಯಾರ್ಥಿಗಳು ಇಲ್ಲಿ ಹೆಚ್ಚು' ಎಂದು ವಿವರ ನೀಡುತ್ತಾರೆ ಅವರು.

ಎಂ.ಎಸ್. ಶೀಲಾ ಅವರಲ್ಲಿ ಸಂಗೀತ ಕಲಿತ ಶ್ರೀಮಾತಾ, ಅಂಜಲಿ ಶ್ರೀರಾಮ್, ಅಪೇಕ್ಷಾ, ಶಿಖಾ ಉಪಾಧ್ಯ, ಯೋಗೀಶ್ ಮುಂತಾದವರು ಈಗಾಗಲೇ ಅನೇಕ ಕಛೇರಿಗಳನ್ನು ಕೊಟ್ಟು ಸಂಗೀತದಲ್ಲಿ ಭರವಸೆಯ ಕಲಾವಿದರಾಗಿ ರೂಪುಗೊಂಡಿದ್ದಾರೆ. ಲಂಡನ್‌ನ ಅಜಯ್ ರಂಗಾಚಾರ್, ಸುಬ್ಬಲಕ್ಷ್ಮಿ ಕೃಷ್ಣಮೂರ್ತಿ ಅವರೂ ಸಂಗೀತದಲ್ಲಿ ಉನ್ನತ ಸಾಧನೆ ಮಾಡುತ್ತಿದ್ದಾರೆ.

ವಿದೇಶದಲ್ಲೂ ಶಿಷ್ಯಂದಿರು
ಹಂಸಧ್ವನಿ ಕ್ರಿಯೇಷನ್ಸ್ ಸಂಸ್ಥೆಯಿಂದ ಆನ್‌ಲೈನ್‌ನಲ್ಲೂ ಕ್ಲಾಸ್ ಇದೆ. ಶೀಲಾ ಅವರಿಗೆ ಅಮೆರಿಕ, ಲಂಡನ್, ಆಸ್ಟ್ರೇಲಿಯಾಗಳಲ್ಲಿ ಉದ್ಯೋಗದಲ್ಲಿರುವ ಶಿಷ್ಯಂದಿರು ಇದ್ದಾರೆ. ವರ್ಷಕ್ಕೊಮ್ಮೆ ಬೆಂಗಳೂರಿಗೆ ಬಂದಾಗ ರಿಹರ್ಸಲ್, ಸಂಶಯ ನಿವಾರಣೆ, ಕೋಚಿಂಗ್ ಪಡೆದುಕೊಂಡು ಹೋಗುತ್ತಾರೆ. ಇದು ವೀಡಿಯೊ ಕ್ಲಾಸ್ ಆಗಿರುವುದರಿಂದ ಅನುಭವಿ ವಿದ್ಯಾರ್ಥಿಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ.

`ಪ್ರತಿವರ್ಷ ವಾರ್ಷಿಕ ಸಂಗೀತ ಕಾರ್ಯಕ್ರಮ ಆಯೋಜಿಸಿ ತಮ್ಮ ಶಿಷ್ಯರಿಗೆ, ಯುವ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ಒದಗಿಸಲಾಗುತ್ತದೆ. ಪ್ರತಿವರ್ಷ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಈ ಸಂಗೀತ ಹಬ್ಬ ನಡೆಯುತ್ತದೆ. ವಾರ್ಷಿಕ ಸಂಗೀತ ಸ್ಪರ್ಧೆಯೂ ಇದೆ. ಇದುವರೆಗೆ ಗಾಯನ ಸಮಾಜ, ಮಲ್ಲೇಶ್ವರ ಸೇವಾ ಸದನ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದೇವೆ.

ಹರಿದಾಸ ನಮನ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ಎಲ್ಲ ದಾಸರ ಸ್ಮರಣೆ ಮಾಡಿ ದಾಸರ ದೇವರನಾಮ ಹಾಡುತ್ತೇವೆ. ಶ್ರೀಪಾದರಾಯರಿಂದ ಹಿಡಿದು ಎಲ್ಲ ದಾಸರನ್ನೂ ಸ್ಮರಿಸಲಾಗುತ್ತದೆ. ದಾಸರ ಪದಗಳನ್ನು ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ತಂದು ಕಛೇರಿ ನೀಡಿದರೆ ಚೆನ್ನಾಗಿರುತ್ತದೆ. ಅದೇ ರೀತಿ ವಾದ್ಯ ವೈಭವ ಎಂಬ ವಿಶೇಷ ಕಾರ್ಯಕ್ರಮದಲ್ಲಿ ಪಿಟೀಲು, ವೀಣೆ, ಕೊಳಲು ಮುಂತಾದ ವಾದ್ಯ ಸಂಗೀತವನ್ನು ಕೇಳುವ ಸುಯೋಗ ಸಹೃದಯರಿಗೆ ಸಿಗುತ್ತದೆ' ಎಂದು ವಿವರ ನೀಡುತ್ತಾರೆ ವಿದುಷಿ ಶೀಲಾ.

ಅಪರೂಪದ ಕೃತಿಗಳು
ಹಿರಿಯ ವಾಗ್ಗೇಯಕಾರರ ಅಪರೂಪದ ಕೃತಿಗಳನ್ನು ಜತನವಾಗಿ ಕಾಪಾಡಿಕೊಂಡು ಹೋಗಲು ಹಲವಾರು ಸೀಡಿ, ಎಂಪಿ3ಗಳನ್ನು ಕೂಡ ಹಂಸಧ್ವನಿ ಕ್ರಿಯೇಷನ್ಸ್ ಹೊರತಂದಿದೆ. ವಿದ್ವಾನ್ ಸದಾಶಿವರಾಯರ ಕೃತಿಗಳಿಂದ ಹಿಡಿದು ಚೌಡಯ್ಯನವರ ಕೃತಿಗಳವರೆಗೆ ಎಲ್ಲವನ್ನೂ ಸೀಡಿ ರೂಪದಲ್ಲಿ ಹೊರತಂದಿದ್ದು, ದಾಖಲೆಯಾಗಿ ಉಳಿದಿದೆ. ಇದರ ಜತೆಗೆ `ಚಾಮುಂಡೇಶ್ವರಿ ವೈಭವ'ದ ಅಷ್ಟೋತ್ತರ ಕೃತಿಗಳ ಎಂಪಿ3 ಕೂಡ ಬಂದಿದ್ದು, ಬಹಳ ಮೌಲಿಕವಾಗಿದೆ.

ದೇವಾನುದೇವತೆಗಳ ಬಗ್ಗೆ ರಚಿಸಿರುವ ಕೃತಿಗಳನ್ನು ಇಟ್ಟುಕೊಂಡು ಹಾಡುವ ಮತ್ತೊಂದು ವಿಶೇಷ ಕಾರ್ಯಕ್ರಮವೂ ಇವರ ವಿಶೇಷತೆಗಳಲ್ಲಿ ಒಂದು. ಒಂದೊಂದು ಥೀಮ್ ಇಟ್ಟುಕೊಂಡು ಮಾಡುವ ಇದು ವಿಶೇಷ ಕಾರ್ಯಕ್ರಮ. ಗಿರಿಜಾ ಕಲ್ಯಾಣ, ಈಶ್ವರ, ಸರಸ್ವತಿ, ದೇವಿ ಮೇಲಿನ ವಿವಿಧ ರಚನೆಗಳನ್ನು ಹಾಡುವುದು ವೈಶಿಷ್ಟ್ಯಪೂರ್ಣವಾದದ್ದು. ಇದು ವಾರ್ಷಿಕ ಸಂಗೀತ ಕಾರ್ಯಕ್ರಮದ ಕೊನೆಯ ದಿನ ನಡೆಯುತ್ತದೆ.

ಹಂಸಧ್ವನಿ ಪ್ರಶಸ್ತಿ
ಸಂಗೀತ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಇಬ್ಬರು ಕಲಾವಿದರಿಗೆ ಪ್ರತಿವರ್ಷ `ಹಂಸಧ್ವನಿ ಪ್ರಶಸ್ತಿ' ನೀಡಿ ಗೌರವಿಸಲಾಗುವುದು. ಇದುವರೆಗೆ ವಿದ್ವಾನ್ ಆರ್.ಕೆ. ಶ್ರೀಕಂಠನ್, ಆರ್.ಆರ್. ಕೇಶವಮೂರ್ತಿ, ಆರ್. ವಿಶ್ವೇಶ್ವರನ್, ಎಸ್. ಕೃಷ್ಣಮೂರ್ತಿ, ರಾಜನಾರಾಯಣ್, ಎಚ್.ವಿ. ಕೃಷ್ಣಮೂರ್ತಿ, ಎಂ.ವಿ. ಆನಂದ್, ವಿದ್ಯಾಭೂಷಣ, ತಿರುಮಲ ಸಹೋದರಿಯರು, ಎಚ್.ಎಸ್. ಅನಸೂಯ, ನೀಲಾ ರಾಂಗೋಪಾಲ್, ರಾ. ಸತ್ಯನಾರಾಯಣ, ಟಿ.ಎಸ್. ಮಣಿ, ಉಷಾಚಾರ್, ಎನ್.ಎ. ಕೃಷ್ಣಮೂರ್ತಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಹಂಸಧ್ವನಿ ಕ್ರಿಯೇಷನ್ಸ್‌ನ ಮತ್ತೊಂದು ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಕ್ಷೇತ್ರದರ್ಶನ. ಬೇರೆ ಬೇರೆ ಕ್ಷೇತ್ರಗಳ ಕುರಿತಾದ ಕೃತಿಗಳನ್ನು ಹಾಡುವ ವಿಶಿಷ್ಟ ಕಾರ್ಯಕ್ರಮವಿದು. ಇದುವರೆಗೆ ತ್ಯಾಗರಾಜರ ಕೋವೂರು, ಲಾಲ್‌ಗುಡಿ ಕ್ಷೇತ್ರ, ಶೃಂಗೇರಿ ಕ್ಷೇತ್ರಗಳ ಸ್ಥಳ, ಪುರಾಣ, ದೇವರು, ದೇವತೆಗಳ ಕುರಿತು ಸಂಗೀತ ಕೃತಿಗಳನ್ನು ಹಾಡುವುದಲ್ಲದೆ, ಅವನ್ನು ಸೀಡಿಗಳಲ್ಲಿ ದಾಖಲಿಸುವ ಕೆಲಸವನ್ನೂ ಈ ಸಂಗೀತ ಸಂಸ್ಥೆ ಮಾಡುತ್ತಿದೆ.

ವಿಳಾಸ: ವಿದುಷಿ ಎಂ.ಎಸ್. ಶೀಲಾ, ಹಂಸಧ್ವನಿ ಕ್ರಿಯೇಷನ್ಸ್, ನಂ. 5, 3ನೇ ಕ್ರಾಸ್, ಒಂದನೇ ಮುಖ್ಯರಸ್ತೆ, ಮಾರುತಿ ಎಕ್ಸ್‌ಟೆನ್ಶನ್, ಬೆಂಗಳೂರು-21. ಫೋನ್: 080-23325302/ 98807 28271.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT